More

    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    | ಅರುಣಾ ಎಂ.ಜಿ.

    ಇಂತಿಂಥಾ ಕಾಲಕ್ಕೆ ಇಂಥದ್ದೇ ಆಹಾರ ಸೇವನೆ ಸೂಕ್ತ ಎಂದು ಹಿರಿಯರು ಹೇಳುತ್ತಿದ್ದುದನ್ನೇ ಈಗ ವೈದ್ಯರೂ ಹೇಳುತ್ತಿದ್ದಾರೆ. ಮಳೆಗಾಲ, ಚಳಿಗಾಲದಲ್ಲಿ ಪ್ರದೇಶವಾರು ವಿಭಿನ್ನ ಅಡುಗೆಯ ಪರಿಮಳ ಸೂಸತೊಡಗುತ್ತದೆ. ಆ ವಿಶೇಷ ತಿನಿಸುಗಳು ಯಾವುವು, ಅವುಗಳಿಗೆ ಬಳಸುವ ಪದಾರ್ಥಗಳೇನು? ಹೇಗೆ ತಯಾರಿಸಲಾಗುತ್ತೆ? ಅವುಗಳಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು… ಇತ್ಯಾದಿ ವಿವರಗಳೊಂದಿಗೆ, ಬಾಯಲ್ಲಿ ನೀರೂರಿಸುವ ಕೆಲವು ಖಾದ್ಯಗಳ ಮಾಹಿತಿ ಇಲ್ಲಿದೆ.

    ಬಿಸಿಬಿಸಿ ಮಿರ್ಚಿ:
    ಬಯಲುಸೀಮೆ ತಿಂಡಿಗಳಲ್ಲಿ ಮಿರ್ಚಿ ಕೂಡ ಪ್ರಮುಖ ಸ್ಥಾನ ಪಡೆದಿದೆ. ಚಿಕ್ಕವರಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರ ನೆಚ್ಚಿನ ತಿನಿಸುಗಳಲ್ಲಿ ಇದೂ ಒಂದು. ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರು, ಧಾರವಾಡ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮಿರ್ಚಿ ಸಖತ್ ಫೇಮಸ್. ಕೆಲವರು ಇದಕ್ಕೆ ಮೆಣಸಿನಕಾಯಿ ಬಜ್ಜಿ ಅಂತ ಕೂಡ ಕರೆಯುತ್ತಾರೆ. ಮಳೆಗಾಲ-ಚಳಿಗಾಲದಲ್ಲಿ ಖಾರದ ಮಂಡಕ್ಕಿ ಜತೆ ಬಿಸಿಬಿಸಿ ಮಿರ್ಚಿ ಸವಿಯುತ್ತಿದ್ದರೆ… ಆಹಾ! ಏನ್ ಮಜಾ ಅಂತೀರಾ…!


    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    * ಬೇಕಾಗುವ ಸಾಮಗ್ರಿ: ಅಡುಗೆ ಎಣ್ಣೆ, ಹಸಿ ಕಡಲೆ ಹಿಟ್ಟು, ಉಪ್ಪು ಮಿಶ್ರಿತ ಜೀರಿಗೆ ತುಂಬಿದ ಹಸಿ ಮೆಣಸಿನ ಕಾಯಿ, ಉಪ್ಪು, ಅಡುಗೆ ಸೋಡಾ, ಜೀರಿಗೆ, ಅಜವಾನ.
    * ಮಾಡುವ ವಿಧಾನ: ಬಾಣಲೆಯಲ್ಲಿ ಅಡುಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಬೇಕು. ಅಗತ್ಯಕ್ಕೆ ತಕ್ಕಷ್ಟು ಹಸಿ ಕಡಲೆ ಹಿಟ್ಟು ತೆಗೆದುಕೊಂಡು ನೀರು ಹಾಕಿ ಕಲಸಬೇಕು. ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ ಬೆರೆಸಬೇಕು. ಅಜೀರ್ಣ ತಡೆಗೆ ಅಜವಾನ ಬಳಸಬಹುದು. ಹಿಟ್ಟನ್ನು ಹದವಾಗಿ ಕಲಸಿಟ್ಟುಕೊಳ್ಳಬೇಕು. ಎಣ್ಣೆ ಕಾದ ಬಳಿಕ ಹಸಿಮೆಣಸಿನ ಕಾಯಿಯನ್ನು (ಖಾರ ಹೆಚ್ಚು ಬೇಕಿದ್ದಲ್ಲಿ ಖಾರ ಇರುವ ಮೆಣಸಿನ ಕಾಯಿ ತೆಗೆದುಕೊಳ್ಳಬಹುದು) ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಗೆ ಹಾಕಿ ಕೆಂಪಗಾಗುವರೆಗೆ ಕರಿದು ಹೊರತೆಗೆಯಬೇಕು. ಎಣ್ಣೆ ಬಸಿದ ನಂತರ, ಬಿಸಿ ಬಿಸಿ ಮಿರ್ಚಿ ತಿನ್ನಲು ರೆಡಿ. ಬೇಕಿದ್ದಲ್ಲಿ ಕರಿದ ನಂತರ ರುಚಿ ಹೆಚ್ಚಲು ಮಸಾಲೆ ಹಾಕಿಕೊಳ್ಳಬಹುದು. ಚಳಿಯಲ್ಲಿ ಮೈ ಬೆಚ್ಚಗಿಟ್ಟುಕೊಳ್ಳಲು ಮಂಡಕ್ಕಿ ಜತೆಗೆ ಬಿಸಿ ಮಿರ್ಚಿ ಸವಿಯಬಹುದು.

    ಕಳಲೆ ಸಾರು:
    ‘‘ವರ್ಷಕ್ಕೊಮ್ಮೆಯಾದರೂ ಬಿದಿರು ಕಳಲೆ ತಿಂದು ಹೊಟ್ಟೆಯಲ್ಲಿರುವ ಕೊಳೆಯನ್ನ ಆಚೆ ಹಾಕಬೇಕು’’ ಎನ್ನುತ್ತಾರೆ ಹಿರಿಯರು. ಮಳೆಗಾಲ ಆರಂಭವಾಗುತ್ತಿದ್ದಂತೆ ಬಿದಿರು ಕಳಲೆ (ಮೊಳಕೆಯೊಡೆದ ಚಿಕ್ಕಚಿಕ್ಕ ಸಸಿಗಳು) ಚಿಗುರೊಡೆಯುತ್ತವೆ. ಪೌಷ್ಟಿಕಾಂಶಗಳ ಆಗರ ಈ ಕಳಲೆ. ಇದರಿಂದ ಪಲ್ಯ, ಸಾಂಬರ್ ಸೇರಿದಂತೆ ತರಹೇವಾರಿ ಖಾದ್ಯ ತಯಾರಿಸುತ್ತಾರೆ. ಮಳೆಗಾಲದಲ್ಲಿ ಬಿದಿರು ಕಳಲೆ ಸಾರಿನದ್ದೇ ಕಾರುಬಾರು. ನ್ಯೂಟ್ರಾಸ್ಯುಟಿಕಲ್ ಎಂಬ ದೊಡ್ಡ ನಾರಿನಂಶ ಇದರಲ್ಲಿ ಅತ್ಯಧಿಕವಾಗಿದ್ದು, ಕರುಳಿನ ಸಮಸ್ಯೆಗೂ ರಾಮಬಾಣ. ಪ್ರತಿಜೀವಕ-ಆ್ಯಂಟಿ ವೈರಲ್ ಗುಣಲಕ್ಷಣ ಒಳಗೊಂಡಿದ್ದು, ಕ್ಯಾನ್ಸರ್ ಕಣಗಳನ್ನು ನಾಶ ಮಾಡುವ ಗುಣ ಇದಕ್ಕಿದೆ. ಉಷ್ಣಕಾರಕವಾದ್ದರಿಂದ ಗರ್ಭಿಣಿಯರಿಗೆ ಬೇಡ.

    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    ಮಾಡುವ ವಿಧಾನ: ಬಿದಿರು ಕಳಲೆ ಸಾಂಬರ್ ಮಾಡಲು ಒಣಕಾಳುಗಳಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಮೊದಲು ಕಳಲೆಯ ಸುತ್ತ ಮೂರ‌್ನಾಲ್ಕು ಎಲೆಗಳನ್ನು ಬಿಡಿಸಿ, ಎಳೆಯ ಚಿಗುರುಳ್ಳ ದಿಂಡನ್ನು ಸಣ್ಣಗೆ ಹೆಚ್ಚಿ ನೀರಲ್ಲಿ ಒಂದೆರಡು ದಿನ ನೆನಸಿಡುತ್ತಾರೆ. ಕಳಲೆಯನ್ನು ಚೆನ್ನಾಗಿ ಬಸಿದುಕೊಂಡು ನೀರನ್ನು ಚೆಲ್ಲಬೇಕು. ಒಂದು ಬಾರಿ ಕುದಿಯುತ್ತಿರುವ ನೀರಿಗೆ ಕಳಲೆಯನ್ನ ಹಾಕಿ ಹದವಾಗಿ ಬೇಯಿಸಿ ಆ ನೀರನ್ನೂ ಚೆಲ್ಲಬೇಕು. ನಂತರ ಬದನೆಕಾಯಿ, ಹುರಳಿಕಾಯಿ, ನುಗ್ಗೆಕಾಯಿ, ಮೂಲಂಗಿ, ಆಲೂಗೆಡ್ಡೆ, ಸೀಮೆಬದನೆಕಾಯಿ, ಮೊದಲೇ ನೆನೆಸಿಟ್ಟಿದ್ದ ಬಟಾಣಿ, ಅಲಸಂದೆಕಾಳು, ಅವರೆಕಾಳು, ಹುರುಳಿಕಾಳಿನ ಜತೆಗೆ ಕಳಲೆ ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಬೇಕು. ನಂತರ ಸಾಂಬರ್‌ಗೆ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ ಒಗ್ಗರಣೆ ಕೊಟ್ಟು ಬೇಯಿಸಿದರೆ ಕಳಲೆ ಸಾರು ರೆಡಿ. ತರಕಾರಿ ಮತ್ತು ಕಾಳುಗಳನ್ನು ಎಷ್ಟು ಬೇಕೋ ಅಷ್ಟು ಹಾಕಿಕೊಳ್ಳಬೇಕು.

    ಕೆಸುವಿನ ಸೊಪ್ಪಿನ ಕರಕಲಿ (ಗೊಜ್ಜು):
    ಮಲೆನಾಡಿನ ಹಿರಿಯರು ಮಳೆಗಾಲದಲ್ಲಿ ಒಮ್ಮೆಯಾದರೂ ಕೆಸುವಿನ ಸೊಪ್ಪನ್ನು ಸೇವಿಸಬೇಕೆಂದು ಹೇಳುತ್ತಾರೆ. ತಂಪನ್ನು ನಿವಾರಿಸುವ ಗುಣದ ತೆಗೆ ಹಲವು ರೀತಿಯ ಪೋಷಕಾಂಶ ಹೊಂದಿದೆ ಕೆಸುವಿನ ಸೊಪ್ಪು. ಫೈಬರ್ ಅಂಶ ಹೆಚ್ಚಿದ್ದು, ಜೀರ್ಣಕ್ರಿಯೆಗೂ ಅನುಕೂಲ. ಕೊಬ್ಬಿನಾಂಶ ಇಲ್ಲ. ಹಾಗಾಗಿ ಮಧುಮೇಹ- ರಕ್ತದೊತ್ತಡ ಇರುವವರಿಗೆ ಉತ್ತಮ ಆಹಾರ. ವರ್ಷಕ್ಕೊಮ್ಮೆಯಾದರೂ ಕೆಸುವಿನ ಸೇವನೆ ಮಾಡಿದರೆ ಹೊಟ್ಟೆಯೊಳಗಿನ ಕಲ್ಮಶ ನಾಶವಾಗುತ್ತೆ ಎಂಬ ಮಾತು ಮಲೆನಾಡಿನಲ್ಲಿ ಚಾಲ್ತಿಯಲ್ಲಿದೆ. ಹಾಗಾಗಿ ಮಳೆಗಾಲ, ಚಳಿಗಾಲ ಬಂತೆಂದರೆ ಈ ಭಾಗದಲ್ಲಿ ಕೆಸುವಿನ ಸೊಪ್ಪಿನ ಕರಕಲಿ (ಗೊಜ್ಜು) ಪರಿಮಳ ಸೂಸತೊಡಗುತ್ತದೆ.

    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    *ಮಾಡುವ ವಿಧಾನ: ಐದಾರು ಕೆಸುವಿನ ಎಲೆಗಳನ್ನು ತಂದು ಹೆಚ್ಚಿ ಅದರ ತೆಗೆ ಎರಡು ಎಸಳು ಬೆಳ್ಳುಳ್ಳಿ, ಒಂದೆರಡು ಹಸಿಮೆಣಸಿನಕಾಯಿ ಅಥವಾ ಸೂಜಿ ಮೆಣಸು, ಉಪ್ಪು ಮತ್ತು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹುಣಸೆ ಹಣ್ಣನ್ನು ಹಾಕಿ ಬೇಯಿಸಬೇಕು. ಚೆನ್ನಾಗಿ ಬೆಂದು ಕರಗಿ ಚಟ್ನಿಯಾದ ನಂತರ ಸ್ವಲ್ಪ ಕಾಯಿತುರಿ ಮತ್ತು ಬೆಲ್ಲವನ್ನು ಹಾಕಬಹುದು. ಇದನ್ನು ಅನ್ನದ ತೆ ಚಟ್ನಿಯ ರೀತಿಯಲ್ಲಿ ಮಳೆಗಾಲ-ಚಳಿಗಾಲದಲ್ಲಿ ಸೇವಿಸಲು ಬಲು ರುಚಿಯಾಗಿರುತ್ತದೆ.

    ಮಲೆನಾಡಿನ ಕಟ್ನೆ:
    ಯಾರಿಗಾದರೂ ಶೀತ ಅಥವಾ ತಂಪಿನ ಕಾರಣದಿಂದಾಗಿ ಅಗ್ನಿಮಾಂದ್ಯವಾಗಿದ್ದರೆ ತಕ್ಷಣ ಹೊಳೆಯುವ ಔಷಧ ಮಲೆನಾಡಿನ ಕಟ್ನೆ! ಮಳೆ-ಚಳಿ ಇರುವಾಗ ಕಟ್ನೆ (ಖಟ್ನೆ) ಎಂಬ ವಿಶೇಷ ಪಾನೀಯವನ್ನು ತಯಾರಿಸಿ ಊಟದ ನಂತರ ಸೇವಿಸುವುದು ಸಾಮಾನ್ಯ.

    *ಮಾಡುವ ವಿಧಾನ: ಸಣ್ಣನಿಂಬೆ ಗಾತ್ರದ ಹುಣಸೆ ಹಣ್ಣನ್ನು ಅರ್ಧ ಲೀಟರ್ ನೀರಿನಲ್ಲಿ ಸ್ವಲ್ಪ ಉಪ್ಪಿನ ಜತೆ ನೆನೆಸಿಡಬೇಕು. ಚೆನ್ನಾಗಿ ನೆನೆದ ನಂತರ ಹುಣಸೆ ಹಣ್ಣನ್ನು ಕಿವುಚಿ ಹುಳಿಯೆಲ್ಲಾ ನೀರಿನಲ್ಲಿ ಬಿಟ್ಟ ನಂತರ ಅದನ್ನು ಬಿಸಾಡಬೇಕು. ಒಂದು ಚಮಚ ಜೀರಿಗೆ, ಐದಾರು ಕಾಳುಮೆಣಸು ಪುಡಿ ಮಾಡಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲದ ಜತೆ ಹುಣಸೆ ರಸವುಳ್ಳ ನೀರಿಗೆ ಹಾಕಿ ಕುದಿಸಬೇಕು. ಚೆನ್ನಾಗಿ ಕುದಿಸಿದ ನಂತರ ಬೆಳ್ಳುಳ್ಳಿ ಒಗ್ಗರಣೆ ನೀಡಿದರೆ ತಂಪನ್ನು ದೂರವಿರಿಸುವ, ಜೀರ್ಣಕಾರಿಯಾದ ಕಟ್ನೆ ತಯಾರು. ನೆಗಡಿ, ಜ್ವರ, ಕಫದಿಂದ ಬಳಲುತ್ತಿರುವವರು ಅನ್ನದ ಜತೆ ಅಥವಾ ಖಾರವಾದ ಪಾನೀಯವಾಗಿ ಇದನ್ನು ಬಳಸಬಹುದು.

    ಮೆಂತ್ಯ ಸ್ಪೆಷಲ್:
    ಚಳಿಗಾಲದಲ್ಲಿ ಕಾಲಿನ ಪಾದ ಒಡೆಯುವುದು ಸಾಮಾನ್ಯ. ಇಂತಹ ಸಮಸ್ಯೆ ಬಗೆಹರಿಸಿಕೊಳ್ಳಲು ವಿಶಿಷ್ಟ ರೀತಿಯ ಮೆಂತ್ಯ ಮಿಶ್ರಣವನ್ನು ಕರಾವಳಿ ಗ್ರಾಮೀಣ ಭಾಗದ ಜನರು ತಮ್ಮ ಮನೆಗಳಲ್ಲೇ ತಯಾರಿಸಿಕೊಳ್ಳುತ್ತಾರೆ. ಇದು ತಿನ್ನಲು ರುಚಿಯಾಗಿರುತ್ತೆ. ಆರೋಗ್ಯದ ದೃಷ್ಟಿಯಿಂದಲೂ ಉಪಕಾರಿ. ಕೆಲವು ವಾರ ಶೇಖರಣೆ ಕೂಡ ಮಾಡಬಹುದು. ಹಿತಮಿತವಾಗಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಹಿರಿಯರು. ಇತ್ತೀಚಿನ ದಿನಗಳಲ್ಲಿ ಇದೇ ಉತ್ಪನ್ನ ಮಾರುಕಟ್ಟೆಯಲ್ಲೂ ಬೇರೆ ಬೇರೆ ಹೆಸರಿನಲ್ಲಿ ಸಿಗುತ್ತಿದೆ.

     

    * ಬೇಕಾಗುವ ವಸ್ತುಗಳು: ಕಾಲು ಕೆಜಿ ಮೆಂತ್ಯ ಕಾಳು, ಕಾಲು ಕೆಜಿ ಕೊತ್ತಂಬರಿ ಬೀಜ, 100 ಗ್ರಾಂ ಜೀರಿಗೆ, 100 ಗ್ರಾಂ ಕಾಳುಮೆಣಸು, ಒಂದು ಕೆಜಿ ಬೆಲ್ಲ, ಒಂದು ತೆಂಗಿನಕಾಯಿ, ಒಂದು ಲೀಟರ್ ತುಪ್ಪ (ತುಪ್ಪವನ್ನು ಅರ್ಧ ಲೀಟರ್ ಬಳಸುವುದಾದರೆ ಎರಡು ಕೊಂಡೆಯಷ್ಟು ತೆಂಗಿನ ಎಣ್ಣೆ ಮಿಶ್ರಣ ಮಾಡಬೇಕು).
    * ತಯಾರಿಸುವ ವಿಧಾನ: ಕೊತ್ತಂಬರಿ, ಜೀರಿಗೆ, ಕಾಳುಮೆಣಸನ್ನು ಒಣಗಿಸಿ ಹುಡಿ ಮಾಡಿ ಇಟ್ಟುಕೊಳ್ಳಬೇಕು. ಮೆಂತ್ಯ ಹುಡಿ ಮಾಡಿ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ತೆಂಗಿನಕಾಯಿ ಹುರಿದು ಒಣಗಿಸಿ ಬಾಣಲೆಯಲ್ಲಿ ಬಿಸಿ ಮಾಡಿ ಇಟ್ಟುಕೊಳ್ಳಬೇಕು. ಬಳಿಕ ತುಪ್ಪದಲ್ಲಿ ಕೊತ್ತಂಬರಿ, ಜೀರಿಗೆ, ಕಾಳುಮೆಣಸು ಹುಡಿಗಳ ಮಿಶ್ರಣ ಮಾಡಿ ಒಲೆಯಲ್ಲಿ ಕುದಿಸಬೇಕು. ಈ ಮಿಶ್ರಣ ಕುದಿದ ಬಳಿಕ ತುರಿದ ಬೆಲ್ಲದ ಹುಡಿ ಮತ್ತು ತುರಿದು ಒಣಗಿಸಿದ ತೆಂಗಿನಕಾಯಿಯ ಮಿಶ್ರಣ ಸೇರಿಸಿ ಒಲೆಯಿಂದ ಪಾತ್ರೆಯನ್ನು ತೆಗೆಯಬೇಕು. ಪಾಕದ ಬಿಸಿ ಆರಿದ ಬಳಿಕ ಪ್ರತ್ಯೇಕ ಇಟ್ಟಿರುವ ಮೆಂತ್ಯ ಹುಡಿ ಮಿಶ್ರಣ ಮಾಡಬೇಕು. ಅಲ್ಲಿಗೆ ಮೆಂತ್ಯ ಮಿಶ್ರಣ ಸಿದ್ಧ. ಬಿಸಿ ಆರಿದ ನಂತರ ಸೇವಿಸಬಹುದು.

    ಓಂಕಾಳು-ಕಾಳುಮೆಣಸಿನ ಸಾರು;
    ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಓಂಕಾಳು- ಕಾಳುಮೆಣಸಿನ ಸಾರು ಅತ್ಯಂತ ಉಪಯುಕ್ತ. ಬಾಣಂತಿಯರ ಆರೋಗ್ಯ ರಕ್ಷಣೆಗೂ ಇದು ಪೂರಕ.

    *ಬೇಕಾಗುವ ಸಾಮಗ್ರಿ: 4 ಚಮಚ ಬಿಳಿ ಕಾಳುಮೆಣಸು, 1 ಚಮಚ ಓಂಕಾಳು, ಕಾಲು ಚಮಚ ಜೀರಿಗೆ, ಒಂದು ಚಮಚ ಅರಿಶಿನ ಪುಡಿ, 2-3 ಗುಂಟೂರು ಒಣ ಮೆಣಸು, ಲಿಂಬೆ ಗಾತ್ರದಲ್ಲಿ ಹುಣಸೆ ಹಣ್ಣು, ಒಂದು ಕಪ್ ತೆಂಗಿನ ತುರಿ, ಒಂದು ದೊಡ್ಡ ಈರುಳ್ಳಿ, 1 ಚಮಚ ಕೊತ್ತಂಬರಿ ಬೀಜ, 20 ಎಸಳು ಬಿಡಿಸಿದ ಬೆಳ್ಳುಳ್ಳಿ, 7 ಚಮಚ ತುಪ್ಪ.
    *ಮಾಡುವ ವಿಧಾನ: ಬಾಣಲೆಗೆ 3 ಚಮಚ ತುಪ್ಪವನ್ನು ಹಾಕಿ ಸ್ವಲ್ಪ ಬಿಸಿಯಾದ ನಂತರ ಬಿಳಿ ಕಾಳುಮೆಣಸು, ಓಂಕಾಳು, ಜೀರಿಗೆ, ಕೊತ್ತುಂಬರಿ ಬೀಜ ಹಾಗೂ ಒಣಮೆಣಸನ್ನು ಹಾಕಿ ಮಧ್ಯಮ ಉರಿಯಲ್ಲಿ ಹುರಿಯಬೇಕು. ನಂತರ ಅದರಲ್ಲಿ ತೆಂಗಿನ ತುರಿಯನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಬಾಣಲೆ ತಣ್ಣಗಾಗುವ ತನಕ ಬಿಟ್ಟು, ಹುಣಸೆ ಹಣ್ಣು ಮತ್ತು ಅರಿಶಿನ ಪುಡಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಉದ್ದವಾಗಿ ಕತ್ತರಿಸಿದ ಈರುಳ್ಳಿ ಹಾಗೂ ಬಿಡಿಸಿದ ಬೆಳ್ಳುಳ್ಳಿಯನ್ನು 4 ಚಮಚ ತುಪ್ಪದಲ್ಲಿ ಚೆನ್ನಾಗಿ ಬೇಯಿಸಬೇಕು. ಘಮಘಮ ಪರಿಮಳ ಬರುವ ಸಮಯದಲ್ಲಿ ನುಣ್ಣಗೆ ರುಬ್ಬಿದ ಮಸಾಲೆ ಹಾಗೂ ಬೇಕಾದಷ್ಟು ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಬೇಕು. ಊಟಕ್ಕೆ ಆರೋಗ್ಯಕರ ಸಾಂಬಾರು ರೆಡಿ.


    ಹುರುಳಿಕಟ್ಟು ಬೆಳ್ಳುಳ್ಳಿ ಸಾರು:
    ಹುರುಳಿಕಾಳು ಉತ್ಕೃಷ್ಟ ಆಹಾರ. ಅದರ ಗುಣಮಟ್ಟವು ನಿರ್ವಿವಾದವಾಗಿ ಅದ್ಭುತ. ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಪ್ರೊಟೀನ್‌ನಿಂದ ಕೂಡಿದೆ. ಕಡಿಮೆ ಕೊಬ್ಬು ಹಾಗೂ ಹೆಚ್ಚು ಶರ್ಕರ ಪಿಷ್ಟದಿಂದ ಕೂಡಿದ್ದು, ಮಧುಮೇಹ ಮತ್ತು ಸ್ಥೂಲಕಾಯರಿಗೆ ಸೂಕ್ತ ಆಹಾರ. ಚಳಿಗಾಲ ಸೇರಿದಂತೆ ಎಲ್ಲ ಕಾಲಕ್ಕೂ ಉತ್ತಮ.
    ಬೇಕಾಗುವ ಪದಾರ್ಥಗಳು: ಅಗತ್ಯ ಇರುವಷ್ಟು ಹುರುಳಿ ಕಾಳು, 5-6 ಎಸಳು ಬೆಳ್ಳುಳ್ಳಿ, ಒಂದು ಚಮಚ ಕಾಳುಮೆಣಸು, ಒಂದು ಚಮಚ ಜೀರಿಗೆ, ಅರ್ಧ ಇಂಚಿನಷ್ಟು ಹಸಿಶುಂಠಿ, ಕರಿಬೇವು, ತುಪ್ಪ, ಜೀರಿಗೆ, ಉಪ್ಪು, ಕೆಂಪು ಮೆಣಸಿನಕಾಯಿ.

    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    * ಮಾಡುವ ವಿಧಾನ: ಹುರುಳಿ ಕಾಳನ್ನು ಇಡೀ ರಾತ್ರಿ ನೀರಲ್ಲಿ ನೆನೆಸಿಡಿ. ಮರುದಿನ ನೀರಲ್ಲಿ ಚೆನ್ನಾಗಿ ಬೇಯಿಸಿ ಹುರುಳಿ ಕಟ್ಟು ಬಸಿದು ಇಟ್ಟುಕೊಳ್ಳಿ. ಬೆಳ್ಳುಳ್ಳಿ, ಹಸಿಶುಂಠಿ, ಕಾಳುಮೆಣಸು ಮತ್ತು ಜೀರಿಗೆಯನ್ನು ಜಜ್ಜಿಕೊಳ್ಳಿ. ಜಜ್ಜಿದ ಮಿಶ್ರಣವನ್ನು ಬಸಿದ ಹುರುಳಿ ಕಟ್ಟಿಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ನಂತರ ಇದಕ್ಕೆ ತುಪ್ಪದಲ್ಲಿ ಜೀರಿಗೆ, ಕರಿಬೇವು, ಕೆಂಪು ಮೆಣಸಿನಕಾಯಿ ಒಗ್ಗರಣೆ ಕೊಟ್ಟು ಬಿಸಿ ಬಿಸಿಯಾಗಿ ಸವಿಯಬಹುದು.

    ಮೊಳಕೆ ಕಟ್ಟಿದ ಹುರುಳಿಕಾಳು ಸಾರು-ಉಸುಳಿ:
    ಮಳೆಗಾಲದಿಂದ ಆರಂಭವಾಗಿ ಚಳಿಗಾಲ ಮುಗಿಯುವವರೆಗೆ ಶೀತ ವಾತಾವರಣ ಇರುವುದರಿಂದ ಹುರುಳಿಯನ್ನು ಹೆಚ್ಚು ಬಳಸಲಾಗುತ್ತದೆ. ಹುರುಳಿ ಉಷ್ಣ ಇರುವುದರಿಂದ ಮಳೆಗಾಲ-ಚಳಿಗಾಲದಲ್ಲಿ ದೇಹದಲ್ಲಿನ ಶೀತ ಹೋಗಲಾಡಿಸಿ ದೇಹವನ್ನು ಸಮತೋಲನದಲ್ಲಿ ಇರಿಸುತ್ತದೆ. ರುಚಿ ಮತ್ತು ಆರೋಗ್ಯಕ್ಕೂ ಹಿತಕರ.

    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    *ಮಾಡುವ ವಿಧಾನ: ಎರಡು ಕಪ್ಪು ಹುರುಳಿ ಕಾಳನ್ನು ನೀರಿನಲ್ಲಿ 8 ತಾಸು ನೆನೆಸಬೇಕು. ನಂತರ ನೀರನ್ನು ಬಸಿದು ಒಂದರಿಂದ ಎರಡು ದಿನಗಳವರೆಗೆ ಬಟ್ಟೆಯಲ್ಲಿ ಕಟ್ಟಿಡಬೇಕು ಅಥವಾ ಪಾತ್ರೆಯಲ್ಲಿ ಇಡಬೇಕು. ಅದು ಮೊಳಕೆ ಬರುತ್ತೆ. ಸಾರಿಗೆ ಎಷ್ಟು ಬೇಕೋ ಅಷ್ಟು ನೀರಿನ ಜತೆಗೆ ಮೊಳಕೆ ಕಾಳನ್ನು ಕುಕ್ಕರ್‌ಗೆ ಹಾಕಿ 2-3 ವಿಷಲ್ ಕೂಗಿಸಬೇಕು. ಕಾಳು ಮತ್ತು ಕಟ್ಟು (ಕಾಳು ಬೇಯಿಸಿದ ನೀರು) ಬೇರೆ ಬೇರೆ ಮಾಡಿಕೊಳ್ಳಬೇಕು. ಪಾತ್ರೆಗೆ 2 ಚಮಚ ಅಡುಗೆ ಎಣ್ಣೆ, ಸಾಸಿವೆ, ಕರಿಬೇವು, ಒಣಮೆಣಸು, ಈರುಳ್ಳಿಯ ಒಗ್ಗರಣೆ ಸಿದ್ಧ ಮಾಡಿಕೊಂಡು ಅದಕ್ಕೆ ಬೇಯಿಸಿದ ಕಾಳುಗಳನ್ನು ಹಾಕಬೇಕು. ಕಾಯಿ ತುರಿ, ಉಪ್ಪು ಹಾಕಿ ಎರಡು ನಿಮಿಷ ಫ್ರೈ ಮಾಡಬೇಕು. ಇಳಿಸಿದ ಮೇಲೆ ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಬೇಕು.
    *ಕಟ್ಟು (ಸಾರು): ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ, ಕಾಳುಮೆಣಸು, ಲವಂಗ, ಚಕ್ಕೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ ಜತೆಗೆ ತುರಿದ ಕಾಯಿ, ಚಮಚದಷ್ಟು ಬೇಯಿಸಿದ ಹುರುಳಿಕಾಳನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ದೊಡ್ಡ ಪಾತ್ರೆಯಲ್ಲಿ ಬೇಕಾದಷ್ಟು ಅಡುಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಒಗ್ಗರಣೆ ಕೊಟ್ಟು ಮೊದಲೇ ತೆಗೆದಿಟ್ಟುಕೊಂಡ ಕಟ್ಟನ್ನು (ಹುರುಳಿ ಬೇಯಿಸಿದ ನೀರು) ಹಾಕಬೇಕು. ರುಬ್ಬಿದ ಖಾರದ ಮಿಶ್ರಣವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು- ಹುಳಿ ಹಾಕಿ ಕುದಿಸಿದರೆ ಮೂರ್ನಾಲ್ಕು ದಿನ ಇಟ್ಟುಕೊಂಡು ಬಳಸಬಹುದಾದ ಹುರುಳಿ ಕಟ್ಟು ರೆಡಿ.

    ಹಿಸುಕಿದ ಅವರೆಕಾಳು ವಡೆ:
    ನಾಲಗೆಗೆ ರುಚಿಕರ, ಆರೋಗ್ಯಕ್ಕೂ ಹಿತಕರ ಅವರೆಕಾಯಿ. ಇದರಿಂದ ತರೇಹವಾರಿ ತಿನಿಸುಗಳನ್ನು ಮಾಡಬಹುದು. ಚಳಿಗಾಲ-ಮಳೆಗಾಲದಲ್ಲಿ ಹಿಸುಕಿದ ಅವರೆಕಾಳಿನ ವಡಾ ಮಾಡುವುದು ವಿಶೇಷ. ಇದು ರುಚಿಯಷ್ಟೆ ಅಲ್ಲ ವಿವಿಧ ರೋಗಗಳ ಹತೋಟಿಗೆ ರಾಮಬಾಣ. ಆಂಟಿ ಆಕ್ಸಿಜನ್, ಪ್ರೋಟಿನ್, ವಿಟಮಿನ್ ಬಿ ಸಿ, ಗ್ಲೂಕೋಸ್ ಅಂಶ ಇದರಲ್ಲಿದೆ. ನಿಯಮಿತ ಋತುಚಕ್ರ, ದೇಹದಲ್ಲಿನ ಸಕ್ಕರೆ ಸಮತೋಲನಕ್ಕೆ ಸಹಕಾರಿ.

    *ಮಾಡುವ ವಿಧಾನ :10-12 ಬೆಳ್ಳುಳ್ಳಿ ಎಸಳು, ಖಾರಕ್ಕೆ ಬೇಕಾದಷ್ಟು ಹಸಿಮೆಣಸಿನಕಾಯಿ, ಅರ್ಧ ಇಂಚು ಶುಂಠಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಬಳಿಕ 2 ಕಪ್‌ನಷ್ಟು ಹಿಸುಕಿದ ಅವರೆಕಾಳನ್ನು ಅದಕ್ಕೆ ಹಾಕಿ ತರಿತರಿಯಾಗಿ ರುಬ್ಬಿಕೊಂಡು ಅದನ್ನು ಒಂದು ಪಾತ್ರೆಯೊಳಗೆ ಹಾಕಿಕೊಳ್ಳಬೇಕು. ಸಣ್ಣದಾಗಿ ಕತ್ತರಿಸಿಟ್ಟಿಕೊಂಡಿದ್ದ 2-3 ಗಡ್ಡೆ ಈರುಳ್ಳಿ, ಕೊತ್ತಂಬರಿ ಸೊಪ್ಪು-ಕರಿಬೇವು, ಸ್ವಲ್ಪ ಗರಂ ಮಸಾಲ ಪುಡಿ, ಚಿಟಕಿ ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಸಿಕೊಳ್ಳಬೇಕು. ಬಳಿಕ ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಂಡು ವಡೆಯಾಕರದಲ್ಲಿ ತಟ್ಟಿಕೊಂಡು ಎಣ್ಣೆಯಲ್ಲಿ ಕರಿಯಬೇಕು. ವಡಾ ಎಣ್ಣೆಗೆಂಪು ಬಣ್ಣಕ್ಕೆ ಬರುತ್ತಿದ್ದಂತೆ ಎಣ್ಣೆಯಿಂದ ತೆಗೆದುಬಿಡಬೇಕು. (ಮಾಹಿತಿ: ಪದ್ಮಲತಾ ಶಿವರಾಜ್, ಬೆಂಗಳೂರು)

    ಚಗಳಿ ಚಟ್ನಿ / ಸತ್ವಭರಿತ ಆಹಾರ ಚಗಳಿ ಚಟ್ನಿ:
    ಮಲೆನಾಡಿನಲ್ಲಿ ಚಗಳಿ ಚಟ್ನಿ (ಕೆಂಜಿಗ) ಇಂದಿಗೂ ಜನಪ್ರಿಯ. ಮಳೆಗಾಲ ಮತ್ತು ಚಳಿಗಾಲದಲ್ಲಿ ಚಗಳಿ ಚಟ್ನಿಯ ಮಹತ್ವ ಬಹಳ. ಸಾಮಾನ್ಯವಾಗಿ ತೋಟ-ಗಿಡಗಳಲ್ಲಿ ಗೂಡು ಕಟ್ಟುವ ಚಗಳಿಯನ್ನು ಆಯಾ ಭಾಗಕ್ಕೆ ತಕ್ಕಂತೆ ಕೆಂಜಿರುವೆ, ಕೆಂಪಿರುವೆ, ಕೆಂಜಿಗ ಎಂದು ಕರೆಯುತ್ತಾರೆ. ಇವು ಕಡಿದ ಜಾಗದಲ್ಲಿ ಉರಿ ಉರಿ. ಆದರೆ ಈ ಇರುವೆಗಳನ್ನೇ ಬಳಸಿ ಚಟ್ನಿ ಮಾಡಿ ತಿನ್ನುತ್ತಾರೆ ಅಂದ್ರೆ? ಕೆಲವರು ಮುಖ ಕಿವುಚಿಕೊಳ್ಳಬಹುದು. ಆದರೆ ಮಲೆನಾಡಿನ ಕೆಲವು ಮಂದಿಗೆ ಈ ಚಟ್ನಿ ಅನಾದಿ ಕಾಲದಿಂದಲೂ ಆಹಾರ ಪದ್ಧತಿ. ಮಳೆಗಾಲ, ಚಳಿಗಾಲದಲ್ಲಿ ಕಾಡುವ ಜ್ವರ, ಕೆಮ್ಮು, ಶೀತದಿಂದ ಪಾರಾಗಲು ಹಿರಿಯರು ಚಗಳಿ ಚಟ್ನಿ ಬಳಸುತ್ತಾರೆ. ಅದನ್ನು ತಿಂದರೆ ಯಾವ ಕಾಯಿಲೆಯೂ ಹತ್ತಿರ ಸುಳಿಯುವುದಿಲ್ಲ ಎಂಬ ನಂಬಿಕೆ ಅವರಲ್ಲಿದೆ.
    ಚಳಿಗಾಲದಲ್ಲಿ ಕಾಡು, ತೋಟಗಳಲ್ಲಿ ಕೆಂಪಿರುವೆಗಳು ಶಿಸ್ತಿನಿಂದ ಗೂಡು ಕಟ್ಟುತ್ತವೆ. ಮರಗಳ ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕಟ್ಟುವ ಗೂಡನ್ನು ಕೊಟ್ಟೆ ಎಂದು ಕರೆಯುತ್ತಾರೆ. ಈ ಗೂಡು ಎಂಥದ್ದೇ ಮಳೆ, ಗಾಳಿ ಬಂದರೂ ಹಾನಿ ಆಗುವುದಿಲ್ಲ.

    ಮಳೆ-ಚಳಿಯಲ್ಲಿ ಮೈಬೆಚ್ಚಗಿರಿಸುವ ಖಾದ್ಯವೈವಿಧ್ಯ

    *ಮಾಡುವ ವಿಧಾನ: ಇರುವೆಗಳನ್ನು ಪಾತ್ರೆಗೆ ಹಾಕಿ ಕೊಂಚ ಬಿಸಿ ಮಾಡಿ ಸೊಪ್ಪುಗಳನ್ನು ಬೇರ್ಪಡಿಸುತ್ತಾರೆ. ಜೀರಿಗೆ ಮೆಣಸು (ಸೂಜಿ ಮೆಣಸು), ಬೆಳ್ಳುಳ್ಳಿ, ಈರುಳ್ಳಿ, ಶುಂಠಿಯನ್ನು ಹುರಿದು ಕೊಬ್ಬರಿ ಜತೆ ರುಬ್ಬುತ್ತಾರೆ. ಮಾಂಸಾಹಾರಿಗಳಿಗೆ ಚಗಳಿ ಚಟ್ನಿ ಅಂದರೆ ಅಚ್ಚುಮೆಚ್ಚು. ಜ್ವರ, ಶೀತ ಕಾಣಿಸಿಕೊಂಡಾಗ ನಮ್ಮ ಹಿರಿಯರು ಖಾರವಾದ ಚಟ್ನಿ ತಿನ್ನುತ್ತಿದ್ದರು ಎನ್ನುತ್ತಾರೆ ಕೃಷಿಕ ಆಗುಂಬೆ ಗಣೇಶ್ ಹೆಗ್ಡೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts