ನಿಷೇಧ ಮುಗಿದರೂ ಸಮುದ್ರಕ್ಕೆ ಇಳಿಯಲಾಗದ ಸ್ಥಿತಿ | ಮೀನುಗಾರರಿಗೆ ಫಜೀತಿ
ಪ್ರಶಾಂತ ಭಾಗ್ವತ, ಉಡುಪಿ ಮೀನುಗಾರಿಕಾ ನಿಷೇಧದ ಅವಧಿ ಮುಗಿದಿದ್ದರೂ ಸಹ ಭಾರಿ ಮಳೆ ಹಾಗೂ ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮೀನುಗಾರರಿಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಲು ತೊಡಕುಂಟಾಗಿದೆ.
ಪ್ರತಿವರ್ಷವೂ ಸಹ ಜೂನ್ 1ರಿಂದ ಜುಲೈ 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಿ ಸರ್ಕಾರ ಆದೇಶ ಹೊರಡಿಸುತ್ತದೆ. ಇದು ಪ್ರತಿ ಮಳೆಗಾಲದ ಸಂಪ್ರದಾಯವೂ ಆಗಿದೆ. ಇದೀಗ ನಿಷೇಧದ ಅವಧಿ ಮುಗಿದು ನಾಲ್ಕು ದಿನ ಕಳೆದಿದ್ದರೂ ಸಹ ಕಡಲ ಮಕ್ಕಳಿಗೆ ಮೀನುಗಾರಿಕೆಗೆ ತೆರಳಲು ಆಗುತ್ತಿಲ್ಲ.
ಪ್ರತಿವರ್ಷವೂ ಆಗಸ್ಟ್ 1ರಿಂದ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ ಮತ್ತೆ ಆರಂಭಗೊಳ್ಳುತ್ತದೆ. ಹೀಗಾಗಿ ನಿಷೇಧದ ಸುಮಾರು 61 ದಿನಗಳ ಕಾಲ ಮೀನುಗಾರರು ತಮ್ಮ ಯಾಂತ್ರೀಕೃತ ಬೋಟ್ಗಳನ್ನು ದಡಕ್ಕೆ ತಂದು ರಿಪೇರಿ, ಪೇಂಟಿಂಗ್ ಇನ್ನಿತರ ಕೆಲಸ, ಕಾರ್ಯ ಮಾಡಿಕೊಳ್ಳುತ್ತಾರೆ. ಬಲೆಗಳನ್ನು ಸಜ್ಜುಗೊಳಿಸಿ, ಅಗತ್ಯ ತಯಾರಿ ಮಾಡಿಕೊಳ್ಳುತ್ತಾರೆ. ಈ ಎಲ್ಲ ಸಿದ್ಧತೆಯೂ ಮುಗಿದಿದ್ದು, ಮಲ್ಪೆಯ ಆಳ ಕಡಲಿನಲ್ಲಿ ಮೀನು ಬೇಟೆಗೆ ಸಜ್ಜಾಗಿದ್ದಾರೆ. ಆದರೆ, ಪ್ರತಿದಿನವೂ ಗಾಳಿ-ಮಳೆ ಅಬ್ಬರಿಸುತ್ತಲೇ ಇದ್ದು, ಕಡಲಿಗೆ ಬೋಟ್ ಇಳಿಸಲು ತೊಡಕಾಗಿದೆ.
ನದಿಗಳಲ್ಲೂ ಅಬ್ಬರ
ಮಳೆಗಾಲದಲ್ಲಿ 10 ಎಚ್ಪಿ ವರೆಗಿನ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಿಕ, ನಾಡದೋಣಿಗಳಿಗೆ ಮೀನುಗಾರಿಕೆ ನಡೆಸಲು ಅನುಮತಿ ಇದೆ. ಆದರೆ, ನದಿಗಳೆಲ್ಲ ಉಕ್ಕಿ ಹರಿಯುತ್ತಿದ್ದು ದೋಣಿಯನ್ನೂ ಇಳಿಸಲಾಗದ ಪರಿಸ್ಥಿತಿ ಇದೆ. ಅಲ್ಲದೆ, ಕಡಲಿನಲ್ಲೂ ಸಹ ದೈತ್ಯಾಕಾರದ ಅಲೆಗಳು ಏಳುತ್ತಿದ್ದು ಸಮರ್ಪಕವಾಗಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲೂ ಈ ಬಾರಿ ಸಾಧ್ಯವಾಗಿಲ್ಲ.
ಕಡಲಿಗೆ ಇಳಿಯದಂತೆ ಎಚ್ಚರಿಕೆ
ಕಳೆದ ಹತ್ತು ದಿನಗಳಿಂದ ಪ್ರತಿದಿನವೂ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಮೀನುಗಾರಿಗೆ ನಡೆಸಲು ಸಾಧ್ಯವೇ ಇಲ್ಲದ ವಾತಾವರಣ ಇದೆ. ಎಲ್ಲ ಬೋಟ್ಗಳ ಮಾಲೀಕರು ಮೀನುಗಾರಿಕೆಗೆ ಸಜ್ಜಾಗಿದ್ದರೂ ಪೂರಕವಾದ ವಾತಾವರಣವಿಲ್ಲ. ಹವಾಮಾನ ಇಲಾಖೆಯೂ ಸಹ ಮೀನುಗಾರಿಕೆಗೆ ತೆರಳದಂತೆ ಮುನ್ಸೂಚನೆ ನೀಡಿದೆ. ಹೀಗಾಗಿ ಜೀವಕ್ಕೆ ಅಪಾಯ ಮಾಡಿಕೊಳ್ಳದೆ, ಸೂಕ್ತ ವಾತಾವರಣ ನೋಡಿಕೊಂಡು ಮೀನುಗಾರರು ಕಡಲಿಗೆ ತೆರಳಲಿದ್ದಾರೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಮೀನುಗಾರಿಕೆಗೆ ತೆರಳಲು ಸಜ್ಜುಗೊಂಡಿರುವ ಬೋಟ್ ಗಳು.
ಕಡಲ ಮಕ್ಕಳ ಸಾಮೂಹಿಕ ಪ್ರಾರ್ಥನೆ
ಪ್ರಸಕ್ತ ವರ್ಷದ ಮೀನುಗಾರಿಕೆಗೆ ಯಾವುದೇ ತೊಡಕು ಎದುರಾಗದಂತೆ ಹಾಗೂ ಅಪಾರ ಮತ್ಸ್ಯ ಸಂಪತ್ತು ಲಭಿಸಲಿ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ನೇತೃತ್ವದಲ್ಲಿ ಮೀನುಗಾರರು ಮಲ್ಪೆ ಬಂದರಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಗಂಗಾದೇವಿಗೆ ಸಾಮೂಹಿಕವಾಗಿ ಪ್ರಾರ್ಥಿಸಿ, ಸಮುದ್ರಕ್ಕೆ ಫಲಪುಷ್ಪ ಅರ್ಪಿಸಿ ಪೂಜಿಸಿದ್ದಾರೆ. ಅದೇ ರೀತಿಯಲ್ಲಿ ಸಮಸ್ತ ಮೀನುಗಾರರು ಗ್ರಾಮದ ಒಡೆಯ ಶಂಕರ ನಾರಾಯಣ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ, ಗಣಹೋಮ, ಲಕ್ಷ್ಮೀ ಪೂಜೆಯ ಮೂಲಕ ವರುಣಾರ್ಭಟ ಮತ್ತು ಕಡಲಿನ ಅಬ್ಬರ ಎರಡೂ ಇಳಿಕೆಯಾಗುವಂತೆ ದೇವರ ಮೊರೆ ಹೋಗಿದ್ದಾರೆ.
ನಾಡದೋಣಿ ಬಿಟ್ಟರೆ ಬೇರಾವುದೇ ಮೀನುಗಾರಿಕೆ ನಡೆಯುತ್ತಿಲ್ಲ. ಆ.4ರ ಅಮವಾಸ್ಯೆ ಬಳಿಕ ಕೆಲವು ಯಾಂತ್ರೀಕೃತ ಬೋಟ್ಗಳು ತೆರಳಲಿದೆ. ಆ.9ರ ನಾಗರಪಂಚಮಿ ಬಳಿಕ ಬಹುತೇಕ ಎಲ್ಲ ಬೋಟ್ಗಳೂ ಕಡಲಿಗೆ ಇಳಿಯಲಿವೆ. ನಾವು ಸಮುದ್ರವನ್ನೇ ನಂಬಿ ಬದುಕಿದವರು. ಮೀನುಗಾರಿಕೆ ಸರಿಯಾಗಿ ನಡೆದಲ್ಲಿ ಜಿಲ್ಲೆ, ರಾಜ್ಯ, ದೇಶಕ್ಕೆ ಆಹಾರ ಮೂಲವಾದ ಮೀನು ಒದಗಿಸುವ ಮಹತ್ವದ ಕಾರ್ಯ ಯಶ ಕಾಣುತ್ತದೆ. ದೇವರ ಕೃಪೆಯಿಂದ ಎಲ್ಲ ಪ್ರಕಾರದ ಮೀನುಗಾರಿಕೆಗೂ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ.
| ಕೃಷ್ಣ ಎಸ್. ಸುವರ್ಣ. ಮಾಜಿ ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ.
ಉಡುಪಿ ಜಿಲ್ಲೆಯಲ್ಲಿ ಸುಮಾರು 2,112 ಯಾಂತ್ರೀಕೃತ ದೋಣಿಗಳಿವೆ. ಮೀನುಗಾರಿಕಾ ನಿಷೇಧದ ಅವಧಿ ಮುಗಿದಿದ್ದು, ಅರ್ಹ ಮೀನುಗಾರರಿಗೆ ಕರ್ನಾಟಕ ರಾಜ್ಯದ ಕರ ರಹಿತ ಡೀಸಲ್ ನೀಡಲು ಆಯಾ ಪಾಯಿಂಟ್ನಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆ ಅನುಸರಿಸಿ ಮೀನುಗಾರಿಕೆಗೆ ತೆರಳಬೇಕು.
| ವಿವೇಕ್ ಆರ್. ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಉಡುಪಿ ಜಿಲ್ಲೆ