ಸಾಂಪ್ರದಾಯಿಕ ಮೀನುಗಾರಿಕೆ ಸ್ತಬ್ಧ

ಪ್ರಕಾಶ್ ಮಂಜೇಶ್ವರ ಮಂಗಳೂರು/ರಾಘವೇಂದ್ರ ಪೈ ಗಂಗೊಳ್ಳಿ
ಸಾಂಪ್ರದಾಯಿಕ ಮೀನುಗಾರಿಕೆಯೇ ಇಲ್ಲದೆ ಈ ವರ್ಷ ದಕ್ಷಿಣ ಕನ್ನಡ, ಉಡುಪಿ ಕರಾವಳಿಯಲ್ಲಿ ಮಳೆಗಾಲದ ಯಾಂತ್ರೀಕೃತ ಮೀನುಗಾರಿಕೆ ರಜಾ ಅವಧಿ ಮುಗಿಯುವ ಲಕ್ಷಣ ಗೋಚರಿಸಿದೆ.
ಕಳೆದ ಒಂದು ವಾರದಿಂದ ಮಳೆ ಬಿರುಸುಗೊಂಡಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಸಮುದ್ರ ಶಾಂತವಾಗುವವರೆಗೆ ಮೀನುಗಾರರು ಕಡಲಿಗಿಳಿಯಬಾರದು ಎಂಬ ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕಡಲಲ್ಲಿ ಏಳದ ತೂಫಾನ್, ನದಿ, ತೋಡು, ಹಳ್ಳಕೊಳ್ಳಗಳು ತುಂಬಿ ದೊಡ್ಡ ಪ್ರಮಾಣದಲ್ಲಿ ಭೂಭಾಗದಿಂದ ಸಮುದ್ರಕ್ಕೆ ಹರಿದುಬರದ ನೀರು, ಪ್ರತಿಕೂಲ ಹವಾಮಾನ ಮತ್ತಿತರ ಕಾರಣಗಳು ಸಾಂಪ್ರದಾಯಿಕ ಮೀನುಗಾರರ ಮತ್ಸೃ ಬೇಟೆಗೆ ಅಡ್ಡಿಯಾಗಿವೆ.

ಮೇ 31ರಂದು ಆರಂಭಗೊಂಡ ಯಾಂತ್ರೀಕೃತ ಮೀನುಗಾರಿಕೆ ರಜೆ ಜುಲೈ 31ರಂದು ಮುಗಿಯಲಿದೆ. ಸಾಂಪ್ರದಾಯಿಕ ಮೀನುಗಾರರು ವರ್ಷದಲ್ಲಿ ಒಂದಷ್ಟು ಅಧಿಕ ಸಂಪಾದನೆ ಗಳಿಸಲು ಅವಕಾಶವಿರುವ ಈ ಅವಧಿಯಲ್ಲಿ ಕೆಲವರು ಕಡಲಿಗೆ ಇಳಿದಿದ್ದರೂ, ಸಂಪಾದನೆ ಆಗಿಲ್ಲ. ಹೆಚ್ಚಿನವರು ಕಡಲಿಗೆ ಇಳಿದೇ ಇಲ್ಲ.\

ಮಳೆಗಾಲದ ಆದಾಯ ಮುಖ್ಯ: ಸಾಂಪ್ರದಾಯಿಕ ಮೀನುಗಾರರಿಗೆ ವರ್ಷಪೂರ್ತಿ ಮೀನುಗಾರಿಕೆ ನಡೆಸಲು ಅವಕಾಶವಿದ್ದರೂ, ಹೆಚ್ಚು ಆದಾಯ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧವಿರುವ ಎರಡು ತಿಂಗಳ ಅವಧಿ. ಈ ಸಂದರ್ಭ ಮೀನುಗಾರಿಕೆಗೆ ಇಳಿಯುವ ಮೀನುಗಾರರಿಗೆ ಸಿಗಡಿ ತೆಪ್ಪ (ಗುಂಪು) ಸಿಕ್ಕಿದರಂತೂ ಚಿನ್ನದ ಬೇಟೆ. ಬೊಳ್ಳಿಂಜಿರ್, ಕೊಡ್ಡೈ, ಬಂಗುಡೆ, ಬೆರಕೆ ಮೀನುಗಳಿಗೆ ಕೂಡ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತದೆ.
ಇಷ್ಟೊತ್ತಿಗೆ ನಾಡದೋಣಿ ಮೀನುಗಾರಿಕೆ ಆರಂಭವಾಗಿದ್ದರೆ, ಮೀನುಗಾರರಿಗೆ ಉತ್ತಮ ಆದಾಯ ಸಿಗುತ್ತಿತ್ತು. ಇದು ಚಟ್ಲಿ (ಸಿಗಡಿ) ಸಿಗುವ ಸಮಯವಾಗಿದ್ದು, ಸಿಗಡಿಗೆ ಉತ್ತಮ ಬೆಲೆ ಸಿಗುತ್ತದೆ. ಆದರೆ ಈ ಸಲ ಇನ್ನು ಕಡಲಿಗಿಳಿಯದಿದ್ದುದರಿಂದ ಪ್ರತಿಯೊಬ್ಬ ಮೀನುಗಾರರು ಕನಿಷ್ಠ 30 ಸಾವಿರ ರೂ.ವರೆಗೆ ನಷ್ಟ ಅನುಭವಿಸಿದ್ದಾರೆ. ಕಳೆದ ವರ್ಷ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭವಾಗುವ ಸ್ವಲ್ಪ ದಿನ ಮುನ್ನ ನಾಡದೋಣಿ ಮೀನುಗಾರಿಕೆ ಪ್ರಾರಂಭಗೊಂಡಿದ್ದು, ಮೀನುಗಾರರು ನಿರಾಸೆಗೊಂಡಿದ್ದರು. ಈ ಬಾರಿಯೂ ಅದೇ ಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಮೀನುಗಾರರಲ್ಲಿದೆ.
ಸಾಂಪ್ರದಾಯಿಕ ಮೀನುಗಾರಿಕೆ ಮೇಲೆ ದೊಡ್ಡ ಪೆಟ್ಟು ಬಿದ್ದಿರುವುದು ಮೀನುಗಾರ ಸಮುದಾಯವನ್ನು ಕಂಗೆಡಿಸಿದೆ.

ಮತ್ಸೃ ಖಾದ್ಯ ಖಾರ: ಊರಿನ ಮೀನು ಇಲ್ಲದ ಕಾರಣ ಮಾರುಕಟ್ಟೆಯನ್ನು ತಮಿಳುನಾಡು, ಆಂಧ್ರ ರಾಜ್ಯಗಳ ಮೀನು ಪ್ರವೇಶಿಸಿದೆ. ಪರಿಣಾಮ ಸಾಧಾರಣ ಮೀನುಗಳು ಕೂಡ ಕೋಳಿ, ಆಡು ಮಾಂಸಕ್ಕಿಂತ ದುಬಾರಿಯಾಗಿವೆ. 100 ರೂ. ಪಾವತಿಸಿ ಕೇವಲ ಎರಡು ಬಂಗುಡೆ ಖರೀದಿಸುವ ಪರಿಸ್ಥಿತಿ ಬಂದಿದೆ. ಸಾಮಾನ್ಯ ಸಂದರ್ಭಗಳಲ್ಲಿ ಇದೇ ದರಕ್ಕೆ 5- 6 ಖರೀದಿಸಬಹುದಿತ್ತು.

ತಿಂಗಳ ಹಿಂದೆ ಕೆ.ಜಿ.ಗೆ 160 ರೂ.ನಷ್ಟು ಇದ್ದ ಬಂಗುಡೆ ದರ ಈಗ 275 ರೂ. ದಾಟಿದೆ. ಕೆ.ಜಿ.ಗೆ 80 ರೂ. ತನಕ ಇದ್ದ ಬೂತಾಯಿ(ಬೈಗೆ) ದರ 170 ರೂ., 80 ರೂ.ನಲ್ಲಿದ್ದ ಬೊಳ್ಳೆಂಜಿರ್ ದರ (ಸಿಲ್ವರ್ ಫಿಶ್) 200 ರೂ., 200 ರೂ.ನಷ್ಟು ಇದ್ದ ಕೊಡ್ಡೈ ದರ 300 ರೂ. ಮುಟ್ಟಿದೆ. ಇನ್ನು ಅಂಜಲ್, ಪಾಂಪ್ಲೆಟ್‌ನಂತಹ ಮೀನುಗಳು ಸಿಗುವುದೇ ಇಲ್ಲ. ಹೊಳೆ ಮೀನುಗಳಿಗೂ ಭಾರಿ ಬೇಡಿಕೆಯಿದ್ದು, ಕಾಣೆ ಮೀನು ಕೆ.ಜಿ.ಗೆ 700 ರೂ. ನಿಂದ 1000 ರೂ. ಬೆಲೆ ಇದೆ. ಹೊಳೆ ಬೈಗೆಗೆ ಕೆ.ಜಿ.ಗೆ 500 ರೂ. ವರೆಗೆ ಬೇಡಿಕೆಯಿದೆ.
ಹಳ್ಳಿಗಳಲ್ಲಿ ದುಬಾರಿ ದರದ ಮೀನು ಮಾರಾಟ ನಡೆಸಲು ಸಾಧ್ಯವಾಗದೆ ಹಳ್ಳಿಗಳಲ್ಲಿ ವ್ಯಾಪಾರ ನಡೆಸುವ ಕೆಲ ಮೀನು ವ್ಯಾಪಾರಿಗಳು ವ್ಯಾಪಾರವನ್ನೇ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ. ಮೀನಿನ ಖಾದ್ಯಗಳಂತೂ ಮತ್ತೂ ದುಪ್ಪಟ್ಟಾಗಿದೆ.

ತಿಂಗಳಾಂತ್ಯಕ್ಕೆ ಆರಂಭ ನಿರೀಕ್ಷೆ: ಕೋಡಿ, ಗಂಗೊಳ್ಳಿ, ಕೊಡೇರಿ, ಮರವಂತೆ, ಹೊಸಪೇಟೆ, ಕಂಚುಗೋಡು, ಶಿರೂರು ಸೇರಿದಂತೆ ಕುಂದಾಪುರ ಭಾಗದಲ್ಲಿ ಸುಮಾರು 600ಕ್ಕೂ ಹೆಚ್ಚು ನಾಡದೋಣಿಗಳಿದ್ದು, ಸಾವಿರಾರು ಮಂದಿ ಮೀನುಗಾರರಿದ್ದಾರೆ. ಮಳೆಗಾಲದಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆ ಕೋಡಿ, ಗಂಗೊಳ್ಳಿ, ಮರವಂತೆ, ಕೊಡೇರಿ ಭಾಗದಲ್ಲಿ ಇನ್ನೂ ಆರಂಭವಾಗಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಕೋಡಿ, ಗಂಗೊಳ್ಳಿ ಭಾಗದಲ್ಲಿ ನಾಡದೋಣಿ ಮೀನುಗಾರರು ಕಡಲಿಗಿಳಿದಿದ್ದರು. ಆದರೆ ಈ ಬಾರಿ ಜೂನ್ ತಿಂಗಳಿನಲ್ಲಿ ಮಳೆ ಕೈಕೊಟ್ಟಿದ್ದು, ಈಗಷ್ಟೇ ಮಳೆ ಚುರುಕುಗೊಂಡಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಈ ವೇಳೆಯಲ್ಲಿ ಮೀನುಗಾರರು ಕಡಲಿಗಿಳಿಯುವಂತಿಲ್ಲ. ಸಮುದ್ರದಲ್ಲಿ ಎದ್ದಿರುವ ತೂಫಾನ್ ಕಡಿಮೆಯಾಗಿ ಸಮುದ್ರ ಶಾಂತವಾದ ಬಳಿಕವಷ್ಟೇ ಮೀನುಗಾರಿಕೆಗೆ ತೆರಳಬಹುದು. ಇನ್ನೂ ಒಂದು ವಾರ ನಾಡದೋಣಿ ಮೀನುಗಾರಿಕೆ ಆರಂಭವಾಗುವುದು ಕಷ್ಟ ಎನ್ನಲಾಗುತ್ತಿದ್ದು, ಜುಲೈ ತಿಂಗಳ ಅಂತ್ಯಕ್ಕೆ ನಾಡದೋಣಿ ಮೀನುಗಾರಿಕೆ ಆರಂಭಗೊಳ್ಳುವ ನಿರೀಕ್ಷೆಯಿದೆ.

 ಒಂದು ವಾರದಿಂದ ಭಾರಿ ಮಳೆಯಾಗುತ್ತಿರುವುದರಿಂದ ಇಲಾಖೆಯಿಂದಲೇ ಸಮುದ್ರಕ್ಕಿಳಿಯದಂತೆ ಮುನ್ಸೂಚನೆ ಬಂದಿದೆ. ಮಳೆ ಕಡಿಮೆಯಾಗಿ, ಸಮುದ್ರ ಶಾಂತವಾದ ಬಳಿಕ ನಾಡದೋಣಿ ಮೀನುಗಾರಿಕೆ ಆರಂಭವಾಗಬಹುದು. ಈ ತಿಂಗಳಾಂತ್ಯಕ್ಕೆ ಕಡಲಿಗಿಳಿಯುವ ನಿರೀಕ್ಷೆಯಲ್ಲಿದ್ದೇವೆ.
– ಎಚ್.ಮಂಜು ಬಿಲ್ಲವ, ಅಧ್ಯಕ್ಷ, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ

ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಂಬಿರುವ ಮೀನುಗಾರರು ಈ ಮಳೆಗಾಲದಲ್ಲಿ ಕಂಗಾಲಾಗಿದ್ದಾರೆ. ಕೃಷಿ ಹಾನಿ, ಬರ ಬಂದರೆ ಕೃಷಿಕರಿಗೆ ಸರ್ಕಾರ ಪರಿಹಾರ ಒದಗಿಸುತ್ತದೆ. ಅದೇ ರೀತಿ ಮೀನುಗಾರಿಕೆಯನ್ನೇ ನಂಬಿರುವ ಮೀನುಗಾರರಿಗೆ ತೊಂದರೆಯಾದಾಗಲೂ ಅವರ ರಕ್ಷಣೆಗೆ ಸರ್ಕಾರ ನಿಲ್ಲಬೇಕು.
– ಯೋಗೀಶ್ ಕಾಂಚನ್, ಮೀನುಗಾರ ಮುಖಂಡ, ಮಂಗಳೂರು

Leave a Reply

Your email address will not be published. Required fields are marked *