More

    ಅಧಿಕಾರಿಗಳ ಮಧ್ಯ ಸಮನ್ವಯತೆ ಅಗತ್ಯ,ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸಲಹೆ

    ಹುಬ್ಬಳ್ಳಿ: ಸಾಮಾಜಿಕ ಅರಣ್ಯ ವಲಯ ಅಧಿಕಾರಿಗಳು ರಸ್ತೆ ಬದಿ ಗಿಡ ನೆಡುವ ಮೊದಲು ಆಯಾ ಗ್ರಾಪಂ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು, ಇಲಾಖೆಗಳ ಮಧ್ಯೆ ಸಮನ್ವಯತೆ ಇದ್ದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಜಾರಿಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಹೇಳಿದರು.

    ಇಲ್ಲಿಯ ತಾಲೂಕು ಆಡಳಿತಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

    ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಅರವಿಂದ ಕಣವಿ ಅವರು ಮಾಹಿತಿ ನೀಡುತ್ತಿದ್ದಾಗ ಪಿಡಿಒ ಒಬ್ಬರು ಗಿಡ ನೆಡುತ್ತಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೀಗಾಗಬಾರದು. ಪರಸ್ಪರ ಅಧಿಕಾರಿಗಳ ಮಧ್ಯೆ ಮಾಹಿತಿ ಹಂಚಿಕೆಯಾಗಬೇಕು ಎಂದು ಸೂಚಿಸಿದರು.

    ಕರಿಬೇವು, ಬೇವು, ಸಾಗವಾನಿ, ಲಿಂಬೆ, ಸೀತಾಫಲ, ಮಹಾಗನಿ ಸಸಿಗಳನ್ನು ರಸ್ತೆಯ ಪಕ್ಕದಲ್ಲಿ ನೆಡಲಾಗುತ್ತಿದ್ದು, ಅವುಗಳ ನಿರ್ವಹಣೆ ಮಾಡಲಾಗುವುದು. ಬುಡ್ನಾಳ, ಚನ್ನಾಪೂರ, ರಾಯನಾಳ, ಕುಸುಗಲ್ ರಸ್ತೆ, ಅಣ್ಣಿಗೇರಿ ನಗರಗಳಲ್ಲಿ ನೆಡುತೋಪು ನಿಮಾರ್ಣ ಮಾಡಲಾಗುತ್ತದೆ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಎನ್.ಎಸ್. ಉಪ್ಪಾರ ತಿಳಿಸಿದರು.

    ಸಾರ್ವಜನಿಕರಿಗೆ ವಿವಿಧ ಸಸಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 2 ಲಕ್ಷಕ್ಕೂ ಅಧಿಕ ಸಸಿಗಳನ್ನು ವಿತರಣೆ ಮಾಡಲಾಗುವುದು. ಮೂರು ರೂಪಾಯಿ ಹಾಗೂ ಆರು ರೂಪಾಯಿಗೆ ಒಂದರಂತೆ ಸಸಿ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಕೋರಿದರು.

    ಗ್ರಾಮೀಣ ಭಾಗದಲ್ಲಿ ಹಲವಾರು ಯೋಜನೆಗಳು ಚಾಲ್ತಿಯಲ್ಲಿವೆ. ಅದರಲ್ಲೂ ಜಲ್ಜೀವನ್ ಮಿಶನ್ ಪ್ರಮುಖ ಯೋಜನೆಯಾಗಿದೆ. ಇವುಗಳ ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

    ಜಿಲ್ಲೆಯಲ್ಲಿ ಜೂನ್ನಲ್ಲಿ ಮಳೆ ಕೊರತೆಯಿಂದ ಬಿತ್ತನೆ ವಿಳಂಬವಾಗಿದೆ. ಜುಲೈನಲ್ಲಿ ಶೇ. 80ರಷ್ಟು ಬಿತ್ತನೆಯಾಗಿರುತ್ತದೆ. ಹೆಸರು, ಶೇಂಗಾ, ಸೋಯಾಬೀನ್ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಆದರೆ, ನಂತರದಲ್ಲಿ ಮಳೆ ಕೊರತೆಯಾಗಿದೆ. ಬೆಳೆಗಳು ಕುಂಠಿತವಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಇದೀಗ ಹಿಂಗಾರು ಬಿತ್ತನೆಗೆ ಬೀಜ, ಗೊಬ್ಬರ ಶೇಖರಣೆೆ ಮಾಡಿ ಇಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ತಿಳಿಸಿದರು.

    ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ. ಕರವೀರಮಠ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಭುಲಿಂಗ ಗಡ್ಡದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಜಾವೂರ, ಹೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ವರದಿ ಸಲ್ಲಿಸಿದರು.

    ಪಂಚಾಯತ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಕುರ್ತಕೋಟಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಆರ್. ಅಂಬಿಗೇರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ ಪಾಟೀಲ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts