ನವದೆಹಲಿ: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಗೆ ಇನ್ನು ಐದೇ ದಿನಗಳು ಬಾಕಿ ಉಳಿದಿವೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳ ನಡುವಿನ ಕಾದಾಟದೊಂದಿಗೆ ಶನಿವಾರ ಟೂರ್ನಿಗೆ ಚಾಲನೆ ಸಿಗಲಿದೆ. ಯುಎಇಯ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದರೂ, ವಿಶ್ವದೆಲ್ಲೆಡೆಯ ಕ್ರಿಕೆಟ್ ಪ್ರೇಮಿಗಳು ಪಂದ್ಯಗಳ ರೋಚಕತೆಯನ್ನು ಮನೆಯಲ್ಲೇ ಕುಳಿತು ಟಿವಿ ಮತ್ತು ಮೊಬೈಲ್‌ಗಳ ಮೂಲಕ ಆನಂದಿಸಬಹುದಾಗಿದೆ. ಭಾರತ ಮಾತ್ರವಲ್ಲದೆ ವಿಶ್ವದ 120 ದೇಶಗಳಲ್ಲಿ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಆದರೆ ನಮ್ಮ ನೆರೆಯ ದೇಶದಲ್ಲೇ ಐಪಿಎಲ್ ಪಂದ್ಯಗಳು ನೇರಪ್ರಸಾರ ಕಾಣುವುದಿಲ್ಲ ಎಂಬುದು ವಿಪರ‌್ಯಾಸ.
ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದಲ್ಲಿ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹಕ್ಕು ಪಡೆದುಕೊಂಡಿದೆ. ಜತೆಗೆ ವಿವಿಧ ರಾಷ್ಟ್ರಗಳ ಪ್ರಸಾರ ವಾಹಿನಿಗಳ ಜತೆಗೂ ಪಂದ್ಯದ ನೇರಪ್ರಸಾರವನ್ನು ಹಂಚಿಕೊಳ್ಳಲಿದೆ. ಆದರೆ ನೆರೆಯ ದೇಶ ಪಾಕಿಸ್ತಾನದಲ್ಲೇ ಈ ಬಾರಿ ಐಪಿಎಲ್ ಪಂದ್ಯಗಳು ನೇರಪ್ರಸಾರ ಕಾಣುವುದಿಲ್ಲ. ಪಾಕಿಸ್ತಾನದ ಯಾವುದೇ ಚಾನಲ್‌ಗಳು ಪಂದ್ಯದ ನೇರಪ್ರಸಾರ ಹಕ್ಕು ಪಡೆದುಕೊಂಡಿಲ್ಲ.
ಬ್ರಿಟನ್‌ನಲ್ಲಿ ಐಪಿಎಲ್ ಪಂದ್ಯಗಳನ್ನು ನೇರಪ್ರಸಾರ ಮಾಡುವ ಹೊಣೆಯನ್ನು ಸ್ಕೈ ಸ್ಪೋರ್ಟ್ಸ್ ಪಡೆದುಕೊಂಡಿದೆ. ಜತೆಗೆ ಐರ್ಲೆಂಡ್‌ನಲ್ಲೂ ಪಂದ್ಯಗಳನ್ನು ಪ್ರಸಾರ ಮಾಡಲಿದೆ. ಅಮೆರಿಕ ಮತ್ತು ಕೆನಡದಲ್ಲಿ ವಿಲ್ಲೋ ಟಿವಿ ಪ್ರಸಾರ ಮಾಡಲಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಸೂಪರ್‌ಸ್ಪೋರ್ಟ್ ಚಾನಲ್‌ನೊಂದಿಗೆ ಸ್ಟಾರ್ ಸ್ಪೋರ್ಟ್ಸ್ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: VIDEO | ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಿರುಗೇಟು
ಟಿವಿ ಚಾನಲ್‌ಗಳಲ್ಲಿ ಮಾತ್ರವಲ್ಲದೆ, ಹಾಟ್‌ಸ್ಟಾರ್‌ನಲ್ಲೂ ಐಪಿಎಲ್ ಪಂದ್ಯಗಳು ನೇರಪ್ರಸಾರ ಕಾಣಲಿವೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಫಾಕ್ಸ್ ಸ್ಪೋರ್ಟ್ಸ್ ಚಾನಲ್ ನೇರಪ್ರಸಾರ ಮಾಡಲಿದೆ. ಇನ್ನು ನೆರೆಯ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲೂ ಸ್ಥಳೀಯ ಚಾನಲ್‌ಗಳ ಜತೆಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಸಾರ ಒಪ್ಪಂದ ಮಾಡಿಕೊಂಡಿದೆ.
ಐಪಿಎಲ್ ಪಂದ್ಯಗಳು ಯಾವೆಲ್ಲ ದೇಶಗಳಲ್ಲಿ, ಯಾವೆಲ್ಲ ಚಾನಲ್‌ಗಳಲ್ಲಿ ನೇರಪ್ರಸಾರ ಕಾಣಲಿವೆ ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ:
ಭಾರತ: ಸ್ಟಾರ್ ಸ್ಪೋರ್ಟ್ಸ್, ಹಾಟ್ ಸ್ಟಾರ್.
ಯುಕೆ, ಐರ್ಲೆಂಡ್: ಸ್ಕೈ ಸ್ಪೋರ್ಟ್ಸ್, ಯುಪ್ಪ್ ಟಿವಿ.
ಅಮೆರಿಕ, ಕೆನಡ: ವಿಲ್ಲೋ ಟಿವಿ.
ದಕ್ಷಿಣ ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ: ಸೂಪರ್‌ಸ್ಪೋರ್ಟ್
ಮಲೇಷ್ಯಾ, ಸಿಂಗಾಪುರ ಒಳಗೊಂಡ ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಅಮೆರಿಕ: ಯುಪ್ಪ್ ಟಿವಿ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್: ಫಾಕ್ಸ್ ಸ್ಪೋರ್ಟ್ಸ್, ಕಯೊ ಸ್ಪೋರ್ಟ್ಸ್.
https://www.vijayavani.net/mohammed-shamis-wife-hasin-jahan-files-petition-against-police/