ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಗಡಿಯಲ್ಲಿರುವ ಕುರ್ಚಿ ಗ್ರಾಮದಲ್ಲಿ ಪ್ರಸಿದ್ಧ ಇರ್ಪು ಜಲಪಾತ ಮತ್ತು ಪೌರಾಣಿಕ ಇರ್ಪು ರಾಮೇಶ್ವರ ದೇವಾಲಯವಿದ್ದು, ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತದೆ.
ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿರುವ ಈ ಗಡಿ ಗ್ರಾಮದಲ್ಲಿ ಸುಮಾರು 2000 ಜನಸಂಖ್ಯೆ ಇದೆ. ಗ್ರಾಮದ ಮುಖ್ಯ ಆಕರ್ಷಣೆ ಎಂದರೆ ಬ್ರಹ್ಮಗಿರಿ ಬೆಟ್ಟ. ಸುಮಾರು 60 ಅಡಿ ಎತ್ತರದಿಂದ ಧುಮ್ಮಿಕ್ಕುವ ಇರ್ಪು ಜಲಪಾತಕ್ಕೆ ಪುರಾಣದ ಐಹಿತ್ಯವಿದೆ.
ತ್ರೇತಾಯುಗದಲ್ಲಿ ರಾಮ-ಲಕ್ಷ್ಮಣ ಈ ಮಾರ್ಗವಾಗಿ ಸಾಗುವಾಗ ರಾಮನಿಗೆ ಬಾಯಾರಿಕೆ ಆಗುತ್ತದೆ. ಆಗ ಲಕ್ಷ್ಮಣ ಬೆಟ್ಟಕ್ಕೆ ಬಾಣವನ್ನು ಹೂಡಿದಾಗ ಅಲ್ಲಿ ನೀರು ಚಿಮ್ಮಿ ನದಿಯಾಗಿ ಹರಿಯುತ್ತದೆ. ಹಾಗಾಗಿ ಇದಕ್ಕೆ ಲಕ್ಷ್ಮಣ ತೀರ್ಥ ಎಂದೇ ಹೆಸರು ಬಂದಿದೆ. ಇಲ್ಲಿಗೆ ನಿತ್ಯ ಪ್ರವಾಸಿಗರು ಬರುವುದು ಸಾಮಾನ್ಯ. ಇನ್ನು ನದಿಯ ಪಕ್ಕದಲ್ಲಿಯೇ ರಾಮೇಶ್ವರ ದೇವಾಲಯವಿದ್ದು, ಕೇರಳ ಶೈಲಿಯಲ್ಲಿ ನಿರ್ಮಿತವಾಗಿದೆ.
ಇರ್ಪು ತಾಣಕ್ಕೂ ತ್ರೇತಾಯುಗದ ರಾಮಾಯಣಕ್ಕೂ ನಂಟು ಇರುವುದನ್ನು ಇತಿಹಾಸ ತಿಳಿಸುತ್ತದೆ. ಪ್ರಚಲಿತದಲ್ಲಿರುವ ಪೌರಾಣಿಕ ಕಥೆಯ ಪ್ರಕಾರ ಇಲ್ಲಿನ ರಾಮೇಶ್ವರ ದೇವಾಲಯದಲ್ಲಿ ಪೂಜಿಸಲ್ಪಡುವ ಶಿವಲಿಂಗ ಸ್ವತಃ ರಾಮನೇ ಪ್ರತಿಷ್ಠಾಪಿಸಿದ್ದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪೌರಾಣಿಕ ಕಥೆಯೂ ಪ್ರಚಲಿತದಲ್ಲಿದೆ.
ಕಾಶಿಯಿಂದ ಶಿವಲಿಂಗ ತರಲು ಹನುಮಂತನಿಗೆ ರಾಮ ಆದೇಶಿಸುತ್ತಾನೆ. ಹನುಮಂತ ಶಿವಲಿಂಗ ತರುವಷ್ಟರಲ್ಲಿ ಸಮಯ ಮೀರಿದ್ದರಿಂದ ರಾಮನೇ ಮರಳಿನಿಂದ ಶಿವಲಿಂಗ ಸ್ಥಾಪಿಸಿದ ಎನ್ನಲಾಗಿದೆ. ಈಗಲೂ ಅದೇ ಲಿಂಗಕ್ಕೆ ಪೂಜೆ ಸಲ್ಲುತ್ತಿದೆ. ನಂತರ ಹನುಮಂತ ತಂದ ಲಿಂಗವನ್ನು ಇಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಹೇರ್ಮಾಡು ಎಂಬಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತಿದೆ. ಪ್ರತಿ ವರ್ಷ ಶಿವರಾತ್ರಿಯ ಮಾರನೇ ದಿನ ಇಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತದೆ. ಶಿವರಾತ್ರಿ ಮಾರನೇ ದಿನ ಜಾಗರಣೆ ಮುಗಿಸಿ ಇರ್ಪುವಿನಲ್ಲಿರುವ ಲಕ್ಷ್ಮಣತೀರ್ಥದ ಜಲಧಾರೆಯಲ್ಲಿ ಸ್ನಾನ ಮಾಡಿ ಪಕ್ಕದಲ್ಲಿರುವ ರಾಮೇಶ್ವರದೇಗುಲದಲ್ಲಿ ಶಿವಲಿಂಗದ ದರ್ಶನ ಮಾಡಿ ಪೂಜೆ ಸಲ್ಲಿಸುವುದು ಸಂಪ್ರದಾಯ. ದಂಪತಿಗಳು ಕೈಹಿಡಿದುಕೊಂಡು ಸ್ನಾನ ಮಾಡಿದರೆ ದಾಂಪತ್ಯ ಗಟ್ಟಿಯಾಗಿ ಸುಖ-ಸಂತೋಷ, ನೆಮ್ಮದಿ ವೃದ್ಧಿಸುತ್ತದೆ ಎಂಬ ನಂಬಿಕೆ ಭಕ್ತರ ವಲಯದಲ್ಲಿದೆ. ಹಾಗಾಗಿ ಇಲ್ಲಿಗೆ ಕರ್ನಾಟಕ ಸೇರಿದಂತೆ ಕೇರಳದಿಂದ ಭಕ್ತರು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಗ್ರಾಮದಲ್ಲಿ ಉಳಿದುಕೊಳ್ಳಲು ಹೋಂಸ್ಟೇಗಳು ಲಭ್ಯವಿದ್ದು, ಕುರ್ಚಿ ಗ್ರಾಮ ತನ್ನ ನೈಸರ್ಗಿಕ ಸೌಂದರ್ಯ, ಇರ್ಪು ಜಲಪಾತ ಮತ್ತು ರಾಮೇಶ್ವರ ದೇವಾಲಯದಿಂದ ಅನೇಕ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರೇ ಇದ್ದಾರೆ. ಕಾಫಿ, ಕಾಳುಮೆಣಸು, ಭತ್ತ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಗ್ರಾಮದಲ್ಲಿ ಹೊಳೆ ಇರುವ ಕಾರಣ ನೀರಿಗೆ ದೊಡ್ಡ ಮಟ್ಟದ ಸಮಸ್ಯೆ ಇಲ್ಲ. ಗ್ರಾಮದ ಕೆಲವು ಭಾಗಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಇದರಿಂದ ರೈತರಿಗೆ ಕೊಂಚ ತೊಂದರೆ ಆಗುತ್ತಿದೆ. ಇರ್ಪು ಜಲಪಾತ ಇರುವ ಬೆಟ್ಟದ ಆಚೆಗೆ ಕೇರಳದ ವಯನಾಡು ಜಿಲ್ಲೆ ಇದೆ. ಪ್ರವಾಸಿ ತಾಣದೊಂದಿಗೆ ಪವಿತ್ರ ಕ್ಷೇತ್ರವಾಗಿರುವ ಕಾರಣ ಇಲ್ಲಿ ಮದ್ಯ ನಿಷೇಧವಿದೆ. ಜಲಪಾತಕ್ಕೆ ತೆರಳುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡಲಾಗುತ್ತದೆ. ಅರಣ್ಯ ಇಲಾಖೆ ಮತ್ತು ದೇವಾಲಯದ ಸಿಬ್ಬಂದಿ ಮುಖ್ಯದ್ವಾರದಲ್ಲಿಯೇ ತಪಾಸಣೆ ಮಾಡಿ ಕಳಿಸುತ್ತಾರೆ. ಅಲ್ಲದೆ ಇಲ್ಲಿ ಪ್ಲಾಸ್ಟಿಕ್ ಬಳಕೆಯೂ ನಿಷೇಧ.
ಮಾರ್ಗ: ಮಡಿಕೇರಿಯಿಂದ 85 ಕಿ.ಮೀ. ದೂರದಲ್ಲಿರುವ ಇರ್ಪುಗೆ ಮಡಿಕೇರಿ ಕಡೆಯಿಂದ ಹೋಗುವವರು ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪ, ಶ್ರೀಮಂಗಲ ಮೂಲಕ ಹಾಗೂ ಮೈಸೂರಿನಿಂದ ಹುಣಸೂರು, ಪಂಚವಳ್ಳಿ, ಗೋಣಿಕೊಪ್ಪ ಮೂಲಕ ಅಥವಾ ಹುಣಸೂರು, ನಾಗರಹೊಳೆ, ಕುಟ್ಟದ ಮೂಲಕವೂ ತೆರಳಬಹುದಾಗಿದೆ. ಇಲ್ಲಿಗೆ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯ ಇಲ್ಲ. ಖಾಸಗಿ ವಾಹನ ಅಥವಾ ವಾಹನಗಳನ್ನು ಬಾಡಿಗೆ ಪಡೆದು ಹೋಗಬೇಕು.
ಸಮಸ್ಯೆ: ಹೆಚ್ಚು ಪ್ರವಾಸಿಗರು ಆಗಮಿಸುವ ಸ್ಥಳ ಇದಾಗಿದ್ದರೂ ಸಹ ಸೂಕ್ತ ಬಸ್ ಸೇವೆ ಇಲ್ಲ. ಮೊದಲು ಖಾಸಗಿ ಬಸ್ ಸೇವೆ ಇತ್ತು. ಈಗ ಅದೂ ಕೂಡ ನಿಂತಿದೆ. ಸರ್ಕಾರಿ ಬಸ್ ಸೇವೆಯನ್ನು ಆರಂಭಿಸಿದರೆ ಸ್ಥಳೀಯರು, ಪ್ರವಾಸಿಗರಿಗೂ ಅನುಕೂಲವಾಗಲಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಕುರ್ಚಿ ಗ್ರಾಮದಲ್ಲಿ ಮುಖ್ಯವಾಗಿ ಜಲಪಾತ ಮತ್ತು ದೇವಾಲಯ ಆಕರ್ಷಣೀಯ. ಇಲ್ಲಿಗೆ ಬರುವ ಪ್ರವಾಸಿಗರು ಮೋಜು ಮಸ್ತಿ ಮಾಡದೆ ಪಾವಿತ್ರೃತೆ ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಹಾಕಿ ಪರಿಸರ ಹಾಳು ಮಾಡಬಾರದೆಂಬ ಉದ್ದೇಶದಿಂದ ಮುಖ್ಯ ದ್ವಾರದಲ್ಲಿಯೇ ತಪಾಸಣೆ ನಡೆಸಲಾಗುತ್ತದೆ. ಮದ್ಯ, ಪ್ಲಾಸ್ಟಿಕ್ ಬಾಟಲಿಗಳಿದ್ದರೆ ಅಲ್ಲಿಯೇ ತಡೆ ಹಿಡಿಯುತ್ತೇವೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ದೇವಾಲಯ ಸಿಬ್ಬಂದಿ ಅಲ್ಲಿ ಇರುತ್ತಾರೆ.
> ಚೋಕೀರ ಬಿದ್ದಪ್ಪ ಕಾರ್ಯದರ್ಶಿ, ದೇವಾಲಯ ಅಭಿವೃದ್ಧಿ ಸಮಿತಿ
ಇರ್ಪು ರಾಮೇಶ್ವರ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯಿದೆ. ರಾಮಾಯಣದ ಕಾಲದಲ್ಲಿ ಸ್ವತಃ ಶ್ರೀರಾಮನೇ ನಿರ್ಮಿಸಿದನೆಂಬ ಪ್ರತೀತಿ ಇದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ. ಶಿವರಾತ್ರಿಯ ಮಾರನೇ ದಿನ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಇಲ್ಲಿಗೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಭಕ್ತರಿಗೆ ಇನ್ನೂ ಅನುಕೂಲವಾಗಲಿದೆ.
> ಮದ್ರೀರ ವಿಷ್ಣು ಅಧ್ಯಕ್ಷ, ದೇವಾಲಯ ಅಭಿವೃದ್ಧಿ ಸಮಿತಿ