More

  ಕೊಡಗು ಪ್ರವಾಸಿತಾಣಗಳಿಗೆ ಪ್ರವಾಸಿಗರ ಲಗ್ಗೆ

  ಸುನಿಲ್ ಪೊನ್ನೇಟಿ ಮಡಿಕೇರಿ:

  ಕೊಡಗಿನಲ್ಲಿ ಪ್ರವಾಸಿಗರು ಗಿಜಿಗುಟ್ಟುತ್ತಿದ್ದಾರೆ. ಕಳೆದ ೧೦ ದಿನಗಳಿಂದ ಈಚೆಗೆ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸ್ಥಳೀಯ ಪ್ರಸಿದ್ಧ ಪ್ರವಾಸಿತಾಣಗಳಲ್ಲಿ ಪ್ರತಿದಿನವೂ ಪ್ರವಾಸಿಗರ ದಟ್ಟಣೆ ಕಂಡುಬರುತ್ತಿದ್ದು, ಪ್ರವಾಸೋದ್ಯಮಿಗಳ ಮುಖದಲ್ಲಿ ನಗು ಅರಳಿದೆ.
  ೨೦೧೮ರ ನಂತರ ಸಾಲು ಸಾಲು ಪ್ರಾಕೃತಿ ವಿಕೋಪ, ಅತಿವೃಷ್ಠಿ, ಆದರ ಬೆನ್ನಲ್ಲೇ ಕಾಣಿಸಿಕೊಂಡ ಕೊರೊನಾ ಹಾಗೂ ೨೦೨೩-೨೪ರ ಭೀಕರ ಬರದ ನಂತರ ಕಳೆಗುಂದಿದ್ದ ಕೊಡಗಿನ ಪ್ರವಾಸೋದ್ಯಮಕ್ಕೆ ಈಗ ದೊಡ್ಡ ಮಟ್ಟದಲ್ಲಿ ಚೇತರಿಕೆಯ ಟಾನಿಕ್ ಸಿಕ್ಕಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಹೊಸ ಹೊಸ ಪ್ರವಾಸಿ ಆಕರ್ಷಣೆಗಳೂ ಪರಿಚಯವಾಗಿರುವುದು ಮನೋಲ್ಲಾಸ ಬಯಸಿ ಜಿಲ್ಲೆಗೆ ಬರುವವರನ್ನು ಎರಡು ಕೈಯಿಂದ ಸ್ವಾಗತಿಸಿ ಬರಮಾಡಿಕೊಳ್ಳುವಂತೆ ಮಾಡಿದೆ.

  ಸಾಮಾನ್ಯವಾಗಿ ವಾರದ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ ಈಗ ಸೋಮವಾರವೂ (ಮೇ೨೦) ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಇತ್ತು. ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಬೆಳಗ್ಗೆಯೇ ವಾಹನಗಳು ಭರ್ತಿ ಆಗಿ ರಾಷ್ಟ್ರೀಯ ಹೆದ್ದಾರಿ ೨೭೫ರ ಬದಿಯಲ್ಲೂ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿ ಕಂಡುಬಂತು.

  ಜಿಲ್ಲೆಯ ಗಡಿಯಲ್ಲಿರುವ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್‌ಗೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ಕುಶಾಲನಗರದ ಎಪಿಎಂಸಿ ಬಳಿಯಿಂದಲೇ ಟ್ರಾಫಿಕ್ ಜಾಂ ಆಗಿ ವಾಹನ ಸವಾರರು ಪರದಾಡುವಂತಾಗಿತ್ತು. ಇದೇ ಪರಿಸ್ಥಿತಿ ಕುಶಾಲನಗರ-ಮಡಿಕೇರಿ ನಡುವಿನ ರಾಷ್ಟ್ರೀಯ ಹೆದ್ದಾರಿ ೨೭೫ರಲ್ಲಿ ಕಂಡುಬಂದಿತ್ತು, ರಸ್ತೆಯುದ್ದಕ್ಕೂ ಇರುವೆ ಸಾಲಿನಂತೆ ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
  ದುಬಾರೆ ಸಾಕಾನೆ ಶಿಬಿರದಲ್ಲೂ ಪ್ರವಾಸಿಗರ ಜಂಗುಳಿ ಕಂಡು ಬರುತ್ತಿದೆ. ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಬರಡಾಗಿದ್ದ ಕಾವೇರಿ ನದಿಗೆ ಜೀವಕಳೆ ಬಂದಿದ್ದು, ೬ ತಿಂಗಳಿನಿಂದ ಸ್ಥಗಿತವಾಗಿದ್ದ ಇಲ್ಲಿಯ ಸ್ಟಿಲ್ ವಾಟರ್ ರಿವರ್ ರ‌್ಯಾಫ್ಟಿಂಗ್ ಪುನಾರಂಭ ಆಗಿರುವುದು ಪ್ರವಾಸಿಗರನ್ನು ಸೆಳೆಯುತ್ತಿದೆ. ಆನೆ ಕ್ಯಾಂಪ್ ಇತ್ತೀಚೆಗೆ ಹೆಚ್ಚು ಆಕರ್ಷಣಿಯವಾಗಿದ್ದು, ದೇಶ ವಿದೇಶಗಳ ಪ್ರವಾಸಿಗರೂ ಇಲ್ಲಿಗೆ ಭೇಟಿ ಕೊಡುತ್ತಿದ್ದಾರೆ.

  ಮಡಿಕೇರಿಯ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್‌ಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಖಾಸಗಿ ಸಹಭಾಗಿತ್ವದಲ್ಲಿ ಇಲ್ಲೂ ಪ್ರವಾಸಿಗರನ್ನು ಸೆಳೆಯುವ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಪ್ರವಾಸಿಗರು ರಜೆಯ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಮಳೆ ಬಂದ ನಂತರ ವಾತಾವರಣವೂ ಬದಲಾಗಿದ್ದು, ಮಂಜುಮುಸುಕಿದ ವಾತಾವರಣ, ಚುಮು ಚುಮು ಚಳಿ ಪ್ರವಾಸಿಗರಿಗೆ ವಿಶೇಷ ಅನುಭವಕ್ಕೆ ಕಾರಣವಾಗಿದೆ.
  ಬೇಸಿಗೆ ಮಳೆಯಿಂದಾಗಿ ಮುಗಿಲ್‌ಪೇಟೆ ಖ್ಯಾತಿಯ ಮಾಂದಲಪಟ್ಟಿಯೂ ಹಸಿರಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಳೆಯ ಕಾರಣಕ್ಕೆ ಅಬ್ಬಿಫಾಲ್ಸ್‌ನಲ್ಲಿ ನೀರಿನ ಹರಿವು ಜಾಸ್ತಿ ಆಗಿದ್ದು ಮತ್ತೆ ಜೀವಕಳೆ ತುಂಬಿಕೊಂಡಿದೆ. ಇರ್ಪು ಫಾಲ್ಸ್, ಮಲ್ಲಳ್ಳಿ ಫಾಲ್ಸ್ ಕೂಡ ಪ್ರವಾಸಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯುತ್ತಿದೆ.

  ಅಬಿಫಾಲ್ಸ್‌ಗೆ ತೆರಳುವ ರಸ್ತೆಯಲ್ಲಿ ಇತ್ತೀಚೆಗೆ ಆರಂಭವಾಗಿರುವ ಗ್ಲಾಸ್ ಬ್ರಿಡ್ಜ್ ಮತ್ತು ಭಾಗಮಂಡಲಕ್ಕೆ ತೆರಳುವ ಮಾರ್ಗದಲ್ಲಿ ಇರುವ ಗ್ಲಾಸ್ ಬ್ರಿಡ್ಜ್‌ಗಳೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

  ಕೊಡಗಿನ ಕಡೆಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದ ಪ್ರವಾಸಿಗರೂ ಬರುತ್ತಿದ್ದಾರೆ. ಈಗ ವೀಕೆಂಡ್ ದಿನಗಳು ಮಾತ್ರವಲ್ಲದೆ ವಾರದ ದಿನಗಳಲ್ಲೂ ರಾಷ್ಟೀಯ ಹೆದ್ದಾರಿ ೨೭೫ರ ಕುಶಾಲನಗರ-ಮಡಿಕೇರಿ, ಹುಣಸೂರು-ಗೋಣಿಕೊಪ್ಪ ರಸ್ತೆಗಳು, ಗೋಣಿಕೊಪ್ಪ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಪಟ್ಟಣಗಳಲ್ಲೂ ವಾಹನ ದಟ್ಟಣೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ. ವಾಹನಗಳಿರಲಿ, ಜನರೂ ತಿರುಗಾಡಲು ಅಸಾಧ್ಯವಾದ ಸ್ಥಿತಿ ಇದೆ.

  ಕೊಡಗಿನ ಚೇತೋಹಾರಿ ತಾಪಮಾನವೇ ಇಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಅಂಶವಾಗಿದೆ. ರಾಜ್ಯದ ಎಲ್ಲಾ ಕಡೆಗಳಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ದಾಟಿದ್ದರೂ ಕೊಡಗಿನಲ್ಲಿ ೩೮ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. ಕೊಡಗಿನ ಪ್ರವಾಸಿ ತಾಣಗಳ ಬಗ್ಗೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯ ಹರಿದಾಡುತ್ತಿರುವುದರಿಂದಲೂ ಪ್ರವಾಸಿಗರು ಇತ್ತ ಬರಲು ಮನಸ್ಸು ಮಾಡುತ್ತಿದ್ದಾರೆ. ಸರ್ಚ್ ಎಂಜಿನ್‌ಗಳಲ್ಲಿ ಅತ್ಯುತ್ತಮ ಪ್ರವಾಸಿ ತಾಣಗಳ ಹುಡುಕಾಟ ಪಟ್ಟಿಯಲ್ಲಿ ಕೊಡಗು ಈಗಲೂ ಪ್ರವಾಸಿಗರ ಆದ್ಯತೆಯ ಸ್ಥಳವಾಗಿದೆ.

  ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಗುರುತಿಸಿರುವ ಪ್ರವಾಸಿ ತಾಣಗಳು:

  • ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ
  • ಶ್ರೀ ಭಗಂಡೇಶ್ವರ ದೇವಾಲಯ, ಭಾಗಮಂಡಲ
  • ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
  • ರಾಜಾಸೀಟ್, ಮಡಿಕೇರಿ
  • ತಲಕಾವೇರಿ
  • ದುಬಾರೆ ಸಾಕಾನೆ ಶಿಬಿರ
  • ಚಿಕ್ಲಿಹೊಳೆ ಜಲಾಶಯ
  • ಹಾರಂಗಿ ಅಣೆಕಟ್ಟೆ
  • ಮಡಿಕೇರಿ ಕೋಟೆ
  • ರಾಜರ ಗದ್ದುಗೆ, ಮಡಿಕೇರಿ

  ಕಳೆದ ಕೆಲವು ದಿನಗಳಿಂದ ಭಾಗಮಂಡಲ, ತಲಕಾವೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಈ ವರ್ಷದಲ್ಲಿ ಇಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿರುವುದು ಇದೇ ಮೊದಲು. ಭಾಗಮಂಡಲದಲ್ಲಿ ಫ್ಲೈಓವರ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ತ್ರಿವೇಣಿ ಸಂಘಮವನ್ನೂ ಆಕರ್ಷಕ ಮಾಡಲಾಗಿದೆ.
  ಶಬರೀಶ್ ಕುದುಕುಳಿ, ಭಾಗಮಂಡಲ

  ಕಳೆದ ವರ್ಷಕ್ಕೆ ಹೋಲಿಸಿದರೆ ಕೊಡಗಿಗೆ ಪ್ರವಾಸಿಗರ ಆಗಮನ ಈ ವರ್ಷ ಹೆಚ್ಚಾಗಿದೆ. ಮಳೆಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಈ ಬೇಸಿಗೆಯಲ್ಲಿ ಉಳಿದೆಲ್ಲೆಡೆ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ಮೀರಿದ್ದರೂ ಕೊಡಗಿನಲ್ಲಿ ಈ ಪ್ರಮಾಣದ ಉಷ್ಣತೆ ಇರಲಿಲ್ಲ. ಇದು ಕೂಡ ಕೊಡಗಿಗೆ ಪ್ಲಸ್‌ಪಾಯಿಂಟ್ ಆಗಿದೆ. ಈಗ ಚುನಾವಣೆ ಮುಗಿದಿದೆ. ಮಕ್ಕಳಿಗೆ ರಜೆ ಇದೆ ಹಾಗಾಗಿ ಎಲ್ಲೆಡೆ ಹೆಚ್ಚಿನ ಪ್ರವಾಸಿ ದಟ್ಟಣೆ ಕಂಡುಬರುತ್ತಿದೆ.
  ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts