More

    ಪ್ರವಾಸಿಗರ ನೆಚ್ಚಿನ ತಾಣ ಸಿದ್ಧಗಂಗೆ!

    ತುಮಕೂರು: ಜಿಲ್ಲೆಯಲ್ಲಿ ಅತ್ಯಧಿಕ ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡುವ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಸಿದ್ಧಗಂಗಾ ಮಠಕ್ಕೆ ಕಳೆದ ಒಂದು ವರ್ಷದಲ್ಲಿ 48,70,757 ಪ್ರವಾಸಿಗರು ಭೇಟಿ ನೀಡಿದ್ದಾರೆ.

    ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಬಳಿಕ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ಜ.21, 2019ರಲ್ಲಿ ಶ್ರೀಗಳು ನಿಧನರಾದ ಬಳಿಕ ಭಕ್ತರ ಪ್ರವಾಹವೇ ಹರಿದುಬಂದಿತ್ತು. ಅಂತಿಮದರ್ಶನಕ್ಕೆ 24 ಗಂಟೆಗಳಲ್ಲಿ 15 ಲಕ್ಷ ಭಕ್ತರು ಬಂದಿದ್ದು ಇತಿಹಾಸ.

    4 ಪ್ರಮುಖ ಪ್ರವಾಸಿ ತಾಣ: ಸಿದ್ಧಗಂಗೆ ಅಲ್ಲದೆ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಎಡೆಯೂರು ಸಿದ್ದಲಿಂಗೇಶ್ವರ, ದೇವರಾಯನದುರ್ಗ ಹಾಗೂ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ. ಈ 4 ತಾಣಗಳು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳೆಂದು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.

    ಶಿವಕುಮಾರ ಶ್ರೀಗಳ ಗದ್ದುಗೆ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಪ್ರತೀ ತಿಂಗಳು ಸರಾಸರಿ 4 ಲಕ್ಷ ಪ್ರವಾಸಿಗರು, ಭಕ್ತರು ಭೇಟಿ ನೀಡಿರುವ ಅಂಕಿ-ಅಂಶವನ್ನು ಪ್ರವಾಸೋದ್ಯಮ ಇಲಾಖೆ ನೀಡಿದ್ದು, ಗದ್ದುಗೆಗೆ ಭೇಟಿ ನೀಡಿ ಬಳಿಕ ಬೆಟ್ಟದ ಮೇಲಿನ ಸಿದ್ದಲಿಂಗೇಶ್ವರ ಸ್ವಾಮಿ ಹಾಗೂ ಸಿದ್ದಗಂಗಮ್ಮ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

    ಇನ್ನು ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಪ್ರತೀ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವರ್ಷ 30,10,598 ಪ್ರವಾಸಿಗರು ಸಿದ್ದಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಚಾರಣಪ್ರಿಯರ ನೆಚ್ಚಿನ ತಾಣ ದೇವರಾಯನದುರ್ಗವನ್ನು 27,74,371 ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ 30,52,009 ಭಕ್ತರು ಭೇಟಿ ನೀಡಿ ಲಕ್ಷ್ಮೀ ಕೃಪೆಗೆ ಪಾತ್ರರಾಗಿದ್ದಾರೆ.

    2018-19ನೇ ಸಾಲಿನಲ್ಲಿ ಅಂದಾಜು 35-40 ಲಕ್ಷ ಪ್ರವಾಸಿಗರು ಹಾಗೂ ಭಕ್ತರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಈ ವರ್ಷ ಹತ್ತಿರತ್ತಿರ ಅರ್ಧಕೋಟಿಗೆ ತಲುಪಿದೆ. ಪ್ರವಾಸೋದ್ಯಮ ಇಲಾಖೆ ನಿಗದಿತ ಮಾನದಂಡ ಬಳಸಿ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಲೆಕ್ಕ ತಯಾರಿಸಿಲ್ಲ. ಪ್ರತೀ ತಿಂಗಳ ವಿಶೇಷ ಹಬ್ಬಹರಿದಿನ, ಜಾತ್ರಾ ಮಹೋತ್ಸವ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ವರ್ಷಾಂತ್ಯದಲ್ಲಿ ಶಾಲಾ ಮಕ್ಕಳ ಪ್ರವಾಸ ಎಲ್ಲವನ್ನೂ ಆಧರಿಸಿ ಅಂದಾಜು ಅಂಕಿ-ಅಂಶಗಳನ್ನು ತಯಾರಿಸಲಿದೆ.

    ಕಳೆದೊಂದು ವರ್ಷದಲ್ಲಿ ಸಿದ್ಧಗಂಗೆಗೆ ಭೇಟಿ ನೀಡಿರುವ ಪ್ರವಾಸಿಗರು, ಭಕ್ತರ ಸಂಖ್ಯೆ ಸರಿ ಸುಮಾರು 50 ಲಕ್ಷ ಮುಟ್ಟಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಿದ್ಧಗಂಗೆಯನ್ನೂ ಗುರುತಿಸಿದ್ದು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು 4 ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ. ಸಿದ್ಧಗಂಗಾ ಬೆಟ್ಟದ ಹಿಂಭಾಗ ಅಡ್ವೆಂಚರ್ಸ್‌ ಟೂರಿಸಂ ಅಭಿವೃದ್ಧಿಪಡಿಸುವ ಯೋಜನೆ ಇದೆ.
    ಜಾವೇದ್ ಕೆ.ಕರಂ, ಪ್ರಭಾರ ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

    ಅಡ್ವೆಂಚರ್ ಟೂರಿಸಂ ಅಭಿವೃದ್ಧಿ !: ಸಿದ್ಧಗಂಗೆಗೆ ಎರಡು ಬಾರಿ ಪ್ರಧಾನಿ ಮೋದಿ ಭೇಟಿ ನೀಡಿದ್ದು, ನಾಡಿನೆಲ್ಲೆಡೆಯಿಂದ ಭಕ್ತರು ಬರುತ್ತಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚು ಸೌಕರ್ಯ ಒದಗಿಸುವುದರ ಜತೆಗೆ ಸಾಹಸ ಪ್ರವಾಸ (ಅಡ್ವೆಂಚರ್ ಟೂರಿಸಂ) ಅಭಿವೃದ್ಧಿಪಡಿಸಲು ಸ್ಮಾರ್ಟ್‌ಸಿಟಿ ಯೋಜನೆ ಅಡಿ ವಿಸ್ತೃತ ಯೋಜನೆ ರೂಪಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಸಿದ್ಧಗಂಗೆ ಬೆಟ್ಟದ ಹಿಂಭಾಗ ರಾಕ್ ಕ್ಲೈಂಬಿಂಗ್ ಹಾಗೂ ಜಿಪ್‌ಲೈನ್ ಅಳಡಿಸುವ ಯೋಜನೆ ಇದರಲ್ಲಿದೆ.

    21ಕ್ಕೆ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ 1 ವರ್ಷ

    ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾಗಿ ಜ.21ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಶ್ರೀಗಳ ಗದ್ದುಗೆಯಲ್ಲಿ ಮಂಗಳವಾರ ಶಿವಕುಮಾರ ಶ್ರೀಗಳ 50 ಕೆಜಿ ತೂಕದ ಬೆಳ್ಳಿ ಪುತ್ಥಳಿ ಪ್ರತಿಷ್ಠಾಪನೆ ಬ್ರಾಹ್ಮೀ ಮಹೂರ್ತದಲ್ಲಿ ನೆರವೇರಲಿದೆ. ಶ್ರೀಗಳ ಪ್ರಥಮ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಜ.19ರಂದೇ ನಡೆದಿದ್ದು, 21ರಂದು ಬೆಳಗಿನಜಾವ ಪ್ರತಿನಿತ್ಯದಂತೆ ಪೂಜಾದಿಗಳು ನೆರವೇರಲಿವೆ. ಗದ್ದುಗೆಗೆ ರುದ್ರಾಭಿಷೇಕ, ಹೂವಿನ ಅಲಂಕಾರ ಎಂದಿನಂತೆ ಮಾಡಲಾಗುವುದು. ಶ್ರೀಗಳ ಗದ್ದುಗೆಯಲ್ಲಿ ಸ್ಥಾಪಿಸಿರುವ ಶಿವಲಿಂಗು ಹಿಂಭಾಗ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಶ್ರೀಗಳ ಬೆಳ್ಳಿ ಪುತ್ಥಳಿಯನ್ನು ಶಾಸ್ತ್ರೋಕ್ತವಾಗಿ ಪೂಜಾಕೈಂಕರ್ಯಗಳ ಮೂಲಕ ಪ್ರತಿಷ್ಠಾಪನೆ ಮಾಡಲಾಗುವುದು.  ಶಾಲಾ-ಕಾಲೇಜುಗಳಲ್ಲಿ ಪುಣ್ಯಸ್ಮರಣೆ: ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಜ.21 ರಂದು ಪರಮಪೂಜ್ಯ ಶಿವಕುಮಾರ ಶ್ರೀಗಳ ವರ್ಷದ ಪುಣ್ಯಸ್ಮರಣೆ ಆಚರಿಸುವುದರ ಜತೆಗೆ ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಶ್ರೀಗಳ ಜೀವನ ಸಾಧನೆಗಳನ್ನು ತಿಳಿಸುವಂತೆ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ವೇಳೆ ದಾಸೋಹ ವ್ಯವಸ್ಥೆ ಮಾಡುವಂತೆ ಸಹ ಸೂಚಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts