72 ಪ್ರವಾಸಿ ತಾಣ ಅಭಿವೃದ್ಧಿ

ಉಡುಪಿ: ಪ್ರಾಕೃತಿಕ ಸೊಬಗು ಮತ್ತು ಸಾಂಸ್ಕೃತಿಕವಾಗಿ ವೈವಿಧ್ಯತೆಯಿಂದ ಕೂಡಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ರೂಪುರೇಷೆ ಸಿದ್ಧಪಡಿಸಿದೆ. ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿ ಜಿಲ್ಲೆಯ 72 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ.

ಧಾರ್ಮಿಕ ಕ್ಷೇತ್ರಗಳು, ವೈಲ್ಡ್‌ಲೈಫ್ ಮತ್ತು ಅಡ್ವೆಂಚರ್, ಬೀಚ್‌ಗಳು, ಜಾನಪದ ಮತ್ತು ಕಲೆ ಹೀಗೆ ವಿವಿಧ ವಿಷಯಗಳನ್ನು ವಿಂಗಡಿಸಿ, ಈ ಕ್ಷೇತ್ರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಮುಖ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಇಲಾಖೆ ಮುಂದಾಗಿದೆ. ಉಡುಪಿ ತಾಲೂಕಿನಲ್ಲಿ 23 ಸ್ಥಳ, ಬ್ರಹ್ಮಾವರದಲ್ಲಿ 4, ಕಾಪುವಿನಲ್ಲಿ 5, ಕಾರ್ಕಳದಲ್ಲಿ 14, ಕುಂದಾಪುರದಲ್ಲಿ 14, ಬೈಂದೂರಿನಲ್ಲಿ 5, ಹೆಬ್ರಿಯಲ್ಲಿ 7 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ.

ಬೀಚ್‌ಗಳಿಗೆ ಆಧುನಿಕ ಸ್ಪರ್ಶ: ಜಿಲ್ಲೆಯ ಬೀಚ್‌ಗಳ ಅಭಿವೃದ್ಧಿಗೆ ಆಧುನಿಕ ಸ್ಪರ್ಶ ನೀಡುವುದು ಈ ಯೋಜನೆಯ ಆದ್ಯತೆಗಳಲ್ಲಿ ಒಂದು. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ 6 ಬೀಚ್‌ಗಳಲ್ಲಿ ನೂತನ ಕಾಮಗಾರಿಗಳಿಗೆ 9.13 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, 6.43 ಕೋಟಿ ರೂ. ಬಿಡುಗಡೆಯಾಗಿದೆ. ಮಲ್ಪೆ, ಕಾಪು, ಪಡುಬಿದ್ರಿ, ಶಿರೂರು ಒತ್ತಿನೆಣೆ-1, ಶಿರೂರು ಒತ್ತಿನೆಣೆ-2, ಮರವಂತೆ, ತ್ರಾಸಿ ಬೀಚ್‌ನಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ.
5 ಕೋಟಿ ರೂ. ವೆಚ್ಚದಲ್ಲಿ ತ್ರಾಸಿ, ಮರವಂತೆ ಕಡಲ ತೀರದಲ್ಲಿ ಪಾದಚಾರಿಗಳಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಹೈಮಾಸ್ಟ್ ಲೈಟಿಂಗ್, ಲೈಫ್‌ಗಾರ್ಡ್ ವಾಚ್ ಟವರ್, ಘನತ್ಯಾಜ್ಯ ನಿರ್ವಹಣೆ ಘಟಕ, ಸೂಚನ ಫಲಕಗಳು, ಶೌಚಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಆಶ್ರಯ ತಾಣಗಳು ಹಾಗೂ ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಸೇಂಟ್ ಮೇರಿಸ್ ಐಲೆಂಡ್ ಬಳಿ ಫೆರ‌್ರಿ ಜೆಟ್ಟಿ ನಿರ್ಮಾಣಕ್ಕೆ 3.75 ಕೋಟಿ ರೂ. ಹಾಗೂ ಕಾರ್ಕಳ ತಾಲೂಕಿನ ಪುರಾತನ ಐತಿಹಾಸಿಕ ಆನೆಕೆರೆ ಹಾಗೂ ಬಸದಿ ಅಭಿವೃದ್ಧಿಗೆ 2 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಗೊಂಡಿದೆ.

ವಿಕಿಪೀಡಿಯ ಮಾದರಿ ಮಾಹಿತಿ
ಆಯಾ ಪ್ರದೇಶಗಳಲ್ಲಿರುವ ಪ್ರಮುಖ ಶಾಲಾ, ಕಾಲೇಜು ಮಕ್ಕಳು ಹಾಗೂ ಪ್ರಾಂಶುಪಾಲರ ಸಹಕಾರದಿಂದ ಪ್ರತೀ ಗ್ರಾಮಗಳ ವಿಶೇಷತೆ, ಇತಿಹಾಸ, ಸಂಸ್ಕೃತಿಯ ಮಾಹಿತಿ ಪಡೆದು, ವಿಕಿಪೀಡಿಯ ಮಾದರಿಯಲ್ಲಿ ಆನ್‌ಲೈನ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶವೂ ಇಲಾಖೆಗಿದೆ.

ಶಾಸಕರಿಗೆ ಜವಾಬ್ದಾರಿ: ಪ್ರವಾಸಿ ತಾಣಗಳ ಅಭಿವೃದ್ಧಿ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ಶಾಸಕರಿಗೆ ವಹಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಶಾಸಕರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿ ರಚಿಸಿದರೆ ಅನುದಾನ ತರಿಸಿಕೊಳ್ಳುವುದು ಸುಲಭವಾಗಲಿದೆ ಎಂಬುದು ಇಲಾಖೆ ಚಿಂತನೆ. ಪ್ರವಾಸಿತಾಣಗಳ ಅಭಿವೃದ್ಧಿಗೆ ಸೂಕ್ತ ನೀಲಿನಕಾಶೆ ಸಿದ್ಧಪಡಿಸಿ ಅದು ಅನುಷ್ಠಾನ ಮಾಡುವ ಹೊಣೆಗಾರಿಕೆಯನ್ನು ಶಾಸಕರಿಗೆ ವಹಿಸಲಾಗುತ್ತದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ 72 ಪ್ರವಾಸಿ ತಾಣಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದ ಸ್ವದೇಶ ದರ್ಶನ್ ಯೋಜನೆಯಲ್ಲಿ ಮಲ್ಪೆ ಮತ್ತು ಮರವಂತೆ ಕಡಲ ತೀರಗಳನ್ನು ಸೇರಿಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ನೀಡಲಾಗಿದೆ.
– ಚಂದ್ರಶೇಖರ್ ನಾಯಕ್, ಪ್ರಭಾರ ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ, ಉಡುಪಿ

Leave a Reply

Your email address will not be published. Required fields are marked *