ಗಂಗಾವತಿ: ತಾಲೂಕಿನ ಆನೆಗೊಂದಿ ಮತ್ತು ಸಣಾಪುರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಕ್ರಮ ಚಟುವಟಿಕೆ ನಿಯಂತ್ರಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾ ಸಮಿತಿ ಸದಸ್ಯರು ನಗರದ ಡಿವೈಎಸ್ಪಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಆನೆಗೊಂದಿ ಉತ್ಸವ ಆಚರಣೆಗೆ ಮುಂದಾಗಿ
ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ರಾಮಾಯಣದ ಮಹಾಕಾವ್ಯದಲ್ಲಿ ಉಲ್ಲೇಖವಾದ ಆನೆಗೊಂದಿ, ಅಂಜನಾದ್ರಿ ಮತ್ತು ಸಣಾಪುರದ ಕಿಷ್ಕಿಂದಾ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್‌ಗಳ ಹಾವಳಿ ಹೆಚ್ಚುತ್ತಿದ್ದು, ಅನೈತಿಕ ಚಟುವಟಿಕೆಗಳಿಂದ ಪ್ರವಾಸಿಗರಿಗೆ ಸುರಕ್ಷತೆಯಿಲ್ಲದಂತಾಗಿದೆ.
ಮದ್ಯ, ಮಾದಕ ವಸ್ತುಗಳ ಹಾವಳಿ ಮಿತಿ ಮೀರಿದೆ. ಪ್ರವಾಸಿಗರ ಮೇಲಿನ ದೌರ್ಜನ್ಯ, ಹಲ್ಲೆ ಪ್ರಕರಣ ದಾಖಲಾಗುತ್ತಿದ್ದು, ರಕ್ಷಣೆಯಿಲ್ಲದಂತಾಗಿದೆ. ಹೋಂ ಸ್ಟೇ ನೆಪದಲ್ಲಿ ಪ್ರವಾಸಿಗರನ್ನು ಶೋಷಿಸಲಾಗುತ್ತಿದೆ. ರೆಸಾರ್ಟ್‌ಗಳ ಮೇಲೆ ನಿಗಾವಹಿಸಬೇಕಿದ್ದು, ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಭಾರತಿ ಅಗಲೂರು, ಈರಮ್ಮ, ರಾಜೇಶ್ವರಿ, ವಿಜಯಲಕ್ಷ್ಮೀ, ಮುತ್ತು ಇಳಿಗೇರ್, ಬಸವರಾಜ ನಾಯಕ, ಕೃಷ್ಣ ಆಗಲೂರು, ಭಾಷಾ ಸಂಗಾಪುರ, ಮೋಹನಬಾಬು, ಶಿವಾನಂದ, ಧನರಾಜ್, ಕೃಷ್ಣಚಂದ್ರಗಿರಿ, ಪುಂಡಲೀಕ್, ವೆಂಕಟೇಶ ಇತರರಿದ್ದರು.