More

    ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಸುಧಾರಣೆಗೆ ಅವಕಾಶ: ಎಸ್.ವಿ. ಸಂಕನೂರ

    ಗದಗ: ಪ್ರವಾಸೋದ್ಯಮ  ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿ ಹಾಗೂ ದೇಶದ ಆರ್ಥಿಕ ಸುಧಾರಣೆ ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

    ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಬುಧವಾರದಂದು ಗದಗ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಫೋಬ್ರ್ಸ ಪತ್ರಿಕೆಯ ಪ್ರಕಾರ ಜಗತ್ತಿನ 50 ಅತೀ ಸುಂದರವಾದ ದೇಶಗಳ ಪಟ್ಟಿಯಲ್ಲಿ ಭಾರತ ದೇಶವು 7 ನೇ ಸ್ಥಾನವನ್ನು ಪಡೆದಿದೆ. ನಮ್ಮ ದೇಶದ ಪ್ರಾಚೀನ ದೇವಾಲಯಗಳನ್ನು, ಅರಮನೆಗಳನ್ನು, ಐತಿಹಾಸಿಕ ಕ್ಷೇತ್ರಗಳನ್ನು ವೀಕ್ಷಿಸಲು ದೇಶ ವಿದೇಶಗಳಿಂದ ಜನರು ಬರುತ್ತಾರೆ. ಜಗತ್ತಿನಲ್ಲಿ ಭಾರತ ದೇಶವು ಉತ್ತಮವಾದ ಪ್ರವಾಸಿ ತಾಣವಾಗಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ದೇಶದ ಐತಿಹಾಸಿಕ ತಾಣಗಳ, ನೈಸರ್ಗಿಕ ತಾಣಗಳ ಕುರಿತು ತಿಳುವಳಿಕೆ ನೀಡುವ ಕೆಲಸವಾಗಬೇಕು.

    ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ವಿಶಿಷ್ಟ ವಿದೇಶಿ ನೀತಿಗಳಿಂದ ಪ್ರವಾಸೋದ್ಯಮವು ಸಾಕಷ್ಟು ಬೆಳವಣಿಗೆಯನ್ನು ಹೊಂದುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

    ಪ್ರವಾಸೋದ್ಯಮದಿಂದ ಆರ್ಥಿಕ ಸುಧಾರಣೆಗೆ ಅವಕಾಶ ಸಿಗಲಿದೆ ಮತ್ತು ಐತಿಹಾಸಿಕ ದೇವಾಲಯ, ಅರಮನೆ ರಕ್ಷಣೆಗೆ ಅನುಕೂಲವಾಗಲಿದೆ. ಕರ್ನಾಟಕ ರಾಜ್ಯದ  ಐತಿಹಾಸಿಕ ಮತ್ತು ಕಲೆ ಸಂಸ್ಕøತಿಗೆ ಪ್ರತೀಕವಾಗಿರುವ ಹಾಸನ ಜಿಲ್ಲೆಯ ಬೇಲೂರು, ಹಳೆಬೀಡು ಮತ್ತು ಮೈಸೂರು ಜಿಲ್ಲೆಯ ಸೋಮನಾಥಪುರ ದೇಗುಲಗಳಿಗೆ ಜಾಗತಿಕ ಮನ್ನಣೆ ದೊರೆತಿದ್ದು, ಯುನೆಸ್ಕೋ ಈ ಮೂರು ದೇಗುಲಗಳನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ. ಗದಗ ಜಿಲ್ಲೆಯು ಐತಿಹಾಸಿಕ ಹಿನ್ನೆಲೆ ಹೊಂದಿರುವ  ವೀರನಾರಾಯಣ, ತ್ರಿಕೂಟೇಶ್ವರ, ಸೋಮನಾಥೇಶ್ವರ ದೇವಸ್ಥಾನ, ಲಕ್ಕುಂಡಿಯಲ್ಲಿನ ಕಾಶಿವಿಶ್ವನಾಥೇಶ್ವರ, ನನ್ನೇಶ್ವರ, ಸೂರ್ಯನಾರಾಯಣ ದೇವಸ್ಥಾನ ಸೇರಿದಂತೆ ಅನೇಕ  ದೇವಸ್ಥಾನಗಳನ್ನು,  ಪ್ರೇಕ್ಷಣೀಯ  ಸ್ಥಳಗಳನ್ನು ಹೊಂದಿದೆ.  ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಸಮಗ್ರ  ಅಭಿವೃದ್ಧಿಗಾಗಿ  ಸಮಿತಿಯನ್ನು  ರಚಿಸಲಾಗಿದೆ.  ಗದಗ ಜಿಲ್ಲೆಯಲ್ಲಿನ  ಐತಿಹಾಸಿಕ ಸ್ಥಳಗಳನ್ನು ಹೆಚ್ಚು ಹೆಚ್ಚು ಅಭಿವೃದ್ಧಿಗೊಳಸಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಗದಗ ಜಿಲ್ಲೆಯನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿಸಲು  ಪ್ರಯತ್ನ ನಡೆಸಲಾಗುತ್ತಿದೆ ಎಂದರು.

    ವಿ.ಡಿ.ಎಸ್.ಟಿ. ಮಹಾವಿದ್ಯಾಲಯದ ಉಪನ್ಯಾಸಕರಾದ ದತ್ತಪ್ರಸನ್ನ ಪಾಟೀಲ ಅವರು ಕರ್ನಾಟಕ ಪ್ರವಾಸಿ ಸ್ಥಳಗಳ ಕುರಿತು  ಉಪನ್ಯಾಸ ನೀಡುತ್ತಾ ಮಾತನಾಡಿ  ಪ್ರವಾಸಿ ತಾಣಗಳ  ವೀಕ್ಷಣೆಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜ್ಞಾನ  ಹಾಗೂ ಮನಸ್ಸಿಗೆ ಮುದ ದೊರೆಯುತ್ತದೆ.  ರಾಜ್ಯದಲ್ಲಿ ಧಾರ್ಮಿಕ, ಮನರಂಜನಾ, ಐತಿಹಾಸಿಕ ಪ್ರವಾಸೋದ್ಯಮ ಎಂದು ಅನೇಕ ಮಜಲುಗಳಿವೆ. ರೇಷ್ಮೆ, ಸಾಂಬಾರ ಪದಾರ್ಥ, ಕಾಫಿಬೀಜ, ಶ್ರೀಗಂಧ, ಶಿಲ್ಪಕಲೆ, ಆಕರ್ಷಕ ಹಾಗೂ ನೈಸರ್ಗಿಕ ತಾಣಗಳನ್ನು  ಹೊಂದಿರುವಂತಹ  ಕರ್ನಾಟಕ ರಾಜ್ಯವು  ಅನೇಕ ಐತಿಹಾಸಿಕ, ಧಾರ್ಮಿಕ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ರಾಜ್ಯವಾಗಿದೆ ಎಂದರು.

    ಗದಗ ಜಿಲ್ಲೆಯಲ್ಲಿನ ವೀರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ದೇವಸ್ಥಾನ, ಲಕ್ಷ್ಮೇಶ್ವರದ ಫಕೀರೇಶ್ವರ ಮಠ, ಸೋಮನಾಥೇಶ್ವರ ದೇವಸ್ಥಾನ, ಲಕ್ಕುಂಡಿಯಲ್ಲಿನ  ಅನೇಕ ದೇವಸ್ಥಾನಗಳು, ಬಾವಿಗಳು,  ಮಾಗಡಿ ಕೆರೆ ಪಕ್ಷಿಧಾಮ, ಬಿಂಕದಕಟ್ಟಿಯ ಮೃಗಾಲಯ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ತಾಣಗಳು, ಪ್ರೇಕ್ಷಣೀಯ ಸ್ಥಳಗಳನ್ನು ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಪ್ರವಾಸೋದ್ಯಮವನ್ನು ಬೆಳೆಸುವುದು ಸರ್ಕಾರದ ಹಾಗೂ ಸಾರ್ವಜನಿಕರ ಕರ್ತವ್ಯವಾಗಿದೆ ಎಂದು ತಿಳಿಸಿದ ಅವರು  ವೀರನಾರಾಯಣ ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು.

    ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ವೀರನಾರಾಯಣ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕೆ.ಡಿ. ಗೋಡಖಿಂಡಿ, ವೀರನಾರಾಯಣ ದೇವಸ್ಥಾನ ಮತ್ತು ತ್ರಿಕೂಟೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿಗಳಾದ ಆನಂದ ಪೋತ್ನೀಸ್, ಗಣ್ಯರುಗಳಾದ ಶ್ರೀನಿವಾಸ ಹುಯಿಲಗೋಳ, ಪ್ರಭು ಬುರಬುರೆ, ಜಮಾದಾರ, ಅ.ದ.ಕಟ್ಟಿಮನಿ, ವಿವೇಕಾನಂದಗೌಡ ಪಾಟೀಲ, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

    ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಸ ಪ್ರಶ್ನೆ, ಪ್ರಬಂಧ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಸಿದ್ಧಲಿಂಗನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ ಸ್ವಾಗತಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts