Friday, 16th November 2018  

Vijayavani

Breaking News

ಆಡಳಿತಯಂತ್ರ ಅತಂತ್ರ

Tuesday, 10.07.2018, 3:05 AM       No Comments

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ಬಜೆಟ್ ಮಂಡಿಸಿದ್ದರೂ, ಮಹತ್ವದ ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಆಡಳಿತಯಂತ್ರ ಮಾತ್ರ ಜಡ್ಡುಗಟ್ಟಿದ ಸ್ಥಿತಿಯಲ್ಲಿದೆ!

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದೂವರೆ ತಿಂಗಳು ಕಳೆದರೂ ಆಡಳಿತಯಂತ್ರಕ್ಕೆ ಚುರುಕು ನೀಡುವ ಕೆಲಸ ನಡೆದಿಲ್ಲ. ಅಧಿಕಾರಿಗಳು ಯಾರ ಹಿಡಿತಕ್ಕೂ ಸಿಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬ ಭಾವನೆಯೇ ಜನರಲ್ಲಿ ಮೂಡುತ್ತಿಲ್ಲ.

ಯಾಕೆ ಹೀಗಾಯ್ತು?: ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭಕ್ಕೆ ಮುನ್ನವೇ ಕಾಂಗ್ರೆಸ್ ಸರ್ಕಾರದ ಸಚಿವರು ಪ್ರಚಾರ ಕಾರ್ಯದತ್ತ ಗಮನ ಕೇಂದ್ರೀಕರಿಸಿದ್ದರು. ಆಗಿನಿಂದಲೇ ಆಡಳಿತ ಯಂತ್ರ ಸ್ತಬ್ಧವಾಗಿತ್ತು. ಚುನಾವಣೆ ಬಳಿಕ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ವಿಚಾರದಲ್ಲಿ ನಡೆದ ಬೆಳವಣಿಗೆಯಿಂದ ಆಡಳಿತಯಂತ್ರ ಮತ್ತಷ್ಟು ಜಡವಾಯಿತು. ಸರ್ಕಾರ ರಚನೆಯ ಬಳಿಕ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಆಗದ ಕಾರಣ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಳ್ಳುತ್ತಿಲ್ಲ. ಅನೇಕ ಯೋಜನೆಗಳಿಗೆ ಹಣ ಬಿಡುಗಡೆಯಾಗಿಲ್ಲ.

ಕೆಲ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ಸಂಕಷ್ಟ ಎದುರಿಸುತ್ತಿದ್ದರೂ ಜಿಲ್ಲಾಡಳಿತವನ್ನು ಸರಿಯಾದ ರೀತಿಯಲ್ಲಿ ಸಜ್ಜುಗೊಳಿಸುವ ಕೆಲಸ ಆಗಿಲ್ಲ.

ಜಿಲ್ಲೆಗೆ ಉಸ್ತುವಾರಿಯೇ ಇಲ್ಲ

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತಕ್ಕೆ ಚುರುಕು ನೀಡುವ ಕೆಲಸ ಮಾಡುತ್ತಾರೆ. ರಾಜ್ಯ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆ ಮೂಲಕ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂಬ ಭಾವನೆ ಮೂಡಿಸಬಹುದಿತ್ತು. ಆದರೆ ಇದುವರೆಗೂ ಉಸ್ತುವಾರಿ ಸಚಿವರ ನೇಮಕವಾಗಿಲ್ಲ;ಯಾವಾಗ ನೇಮಕವಾಗುತ್ತಾರೆ ಎಂಬುದೇ ಇನ್ನೂ ಗೊಂದಲದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗುವ ತನಕ ಉಸ್ತುವಾರಿ ಸಚಿವರ ನೇಮಕದ ಸಾಧ್ಯತೆ ಇಲ್ಲ. ಮುಖ್ಯಮಂತ್ರಿ ಸಹ ಇದುವರೆಗೆ ಯಾವುದೇ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಜಿಲ್ಲಾ ಪ್ರಗತಿ ಪರಿಶೀಲನೆ ಮಾಡಿಲ್ಲ. ಉಸ್ತುವಾರಿ ನೀಡದೇ ಜಿಲ್ಲೆಗೆ ಹೋಗುವುದಿಲ್ಲ ಎಂದು ಕೆಲ ಸಚಿವರು ಪಟ್ಟು ಹಿಡಿದಿದ್ದಾರೆ.

ಜಿಲ್ಲೆಗೆ ತೆರಳದ ಕಾರ್ಯದರ್ಶಿಗಳು

ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ. ಆದರೆ 5 ಕಾರ್ಯದರ್ಶಿಗಳು ಮಾತ್ರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಭೆ ನಡೆಸಿ, ಮಳೆ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿದ್ದಾರೆ. ಉಳಿದವರು ಇನ್ನೂ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಉಸ್ತುವಾರಿ ಸಚಿವರು ಇಲ್ಲದ ಕಾರಣ ಕಾರ್ಯದರ್ಶಿಗಳಾದರೂ ಪ್ರವಾಸ ಮಾಡಿ ಜಿಲ್ಲಾಡಳಿತ ಕಾರ್ಯಕ್ಕೆ ವೇಗ ನೀಡಬಹುದಿತ್ತು.

ಚುರುಕಾಗದ ಸಚಿವರು

ಸಿಎಂ ಕುಮಾರಸ್ವಾಮಿ ಸಂಪುಟ ರಚನೆಯಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಆಗಿದೆ. ಆರಂಭದಲ್ಲಿ ಇಲಾಖೆ ಪರಿಚಯ ಮಾಡಿಕೊಳ್ಳಲು ಪ್ರಾಥಮಿಕ ಸಭೆಗಳನ್ನು ನಡೆಸಿದ್ದು ಹೊರತುಪಡಿಸಿ, ಬಹುತೇಕ ಮಂತ್ರಿಗಳು ಕೆಲಸವನ್ನೇ ಆರಂಭಿಸಿಲ್ಲ. ಹಿರಿಯ ಸಚಿವರಾದ ದೇಶಪಾಂಡೆ, ಡಿ.ಕೆ. ಶಿವಕುಮಾರ್, ರೇವಣ್ಣ ಹಾಗೂ ಒಂದಿಬ್ಬರನ್ನು ಬಿಟ್ಟರೆ ಬಹುತೇಕ ಸಚಿವರು ಬೆಂಗಳೂರು ಹಾಗೂ ಸ್ವಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ಮಂತ್ರಿಗಳು ವಿಧಾನಸೌಧಕ್ಕೆ ಗೈರಾಗುವ ಪ್ರವೃತ್ತಿ ಈ ಸರ್ಕಾರದಲ್ಲೂ ಮುಂದುವರಿದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ಸಭೆಗಳನ್ನು ನಡೆಸುತ್ತಿದ್ದಾರೆ.

ವರ್ಗಾವಣೆ ಸುಗ್ಗಿ

ವಿಧಾನಮಂಡಳ ಅಧಿವೇಶನ ಮುಗಿಯುತ್ತಿದ್ದಂತೆ ಆರಂಭವಾಗುವ ಸಾರ್ವತ್ರಿಕ ವರ್ಗಾವಣೆಯಿಂದಾಗಿ ಮತ್ತೊಂದು ತಿಂಗಳು ಸರ್ಕಾರದಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ. ಜುಲೈ ಅಂತ್ಯದೊಳಗೆ ಶೇ. 4ರಷ್ಟು ಸರ್ಕಾರಿ ನೌಕರರನ್ನು ಮಾತ್ರ ವರ್ಗಾವಣೆ ಮಾಡಬೇಕೆಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿದೆ. ಆದರೆ ಯಾವುದೇ ವರ್ಷದಲ್ಲಿ ಇಷ್ಟು ಕಡಿಮೆ ಪ್ರಮಾಣ ಹಾಗೂ ಅವಧಿಯಲ್ಲಿ ವರ್ಗಾವಣೆ ನಡೆದ ಉದಾಹರಣೆ ಇಲ್ಲ. ವರ್ಗಾವಣೆ ಪ್ರಕ್ರಿಯೆಯೇ ಆಗಸ್ಟ್ ಅಂತ್ಯದ ತನಕ ನಡೆದರೂ ಆಶ್ಚರ್ಯವಿಲ್ಲ. ಅಂದರೆ ಆಡಳಿತಯಂತ್ರ ಆಗಸ್ಟ್​ವರೆಗೂ ಚುರುಕು ಪಡೆಯುವ ಸಾಧ್ಯತೆ ಇಲ್ಲ. ಅಧಿಕಾರಿ, ನೌಕರರು ವರ್ಗಾವಣೆ ಯಲ್ಲಿಯೇ ಬಿಜಿ ಯಾಗುತ್ತಾರೆ.

ಪರಿಣಾಮವೇನು?

# ಸಿದ್ದರಾಮಯ್ಯ ಬಜೆಟ್​ನಲ್ಲಿ ಘೋಷಿಸಿದ್ದ ಹಲವು ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಗ ಅನುದಾನ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬಹುತೇಕ ಘೋಷಣೆಗಳ ಆದೇಶವೂ ಹೊರಬಿದ್ದಿಲ್ಲ. ಹೀಗಾಗಿ ಮೊದಲ ತ್ರೖೆಮಾಸಿಕದಲ್ಲಿ ಯಾವುದೇ ಯೋಜನೆ ಟೇಕಾಫ್ ಆಗಿಲ್ಲ.

# ಅನುದಾನ ಬಿಡುಗಡೆಯಾಗದೆ ಅನೇಕ ಕಡೆ ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿಯಲ್ಲಿದೆ.

# ಹಾಲಿನ ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ

# ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ಹಣದ ಕೊರತೆ

# ವಸತಿ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ

# ವಿದ್ಯಾರ್ಥಿಗಳ ಬಸ್​ಪಾಸ್ ಗೊಂದಲ ಮುಂದುವರಿದಿದೆ

# ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಾಗಿದ್ದರೂ ಮೂರು ತಿಂಗಳಿನಿಂದ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ

# ಶಾಲಾ ಮಕ್ಕಳ ಸಮವಸ್ತ್ರ ವಿತರಣೆಯಲ್ಲಿ ಸಮಸ್ಯೆಗಳಿವೆ.

# ಪ್ರವಾಹ ಪೀಡಿತರ ಪುನರ್ವಸತಿ, ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ ಸಮರ್ಪಕವಾಗಿಲ್ಲ.

Leave a Reply

Your email address will not be published. Required fields are marked *

Back To Top