ತುಂಬಿದ ಕೆರೆಗಳು, ನಿಟ್ಟುಸಿರುಬಿಟ್ಟ ರೈತರು

ಸೋಮವಾರಪೇಟೆ: ಧಾರಾಕಾರವಾಗಿ ಸುರಿದ ಮುಂಗಾರು ಮಳೆಗೆ ತಾಲೂಕಿನ ಕೆರೆಗಳು ತುಂಬಿದ್ದು, ರೈತರ ಮೊಗದಲ್ಲಿ ಹರ್ಷ ಮೂಡಿದೆ.
ಮಳೆಯಿಂದಾಗಿ ಫಸಲು ನಷ್ಟ ಅನುಭವಿಸಿದರೂ, ಮುಂದಿನ ದಿನಗಳಲ್ಲಿ ತುಂಬಿರುವ ಕೆರೆಗಳು ನಮ್ಮನ್ನು ರಕ್ಷಿಸಲಿವೆ ಎಂದು ಗ್ರಾಮದ ಕೆರೆಗಳಿಗೆ ಬಾಗಿನ ಆರ್ಪಿಸುತ್ತಿದ್ದಾರೆ.

2017ರಲ್ಲಿ ಮುಂಗಾರು, ಹಿಂಗಾರು ಕೈಕೊಟ್ಟ ಪರಿಣಾಮ ತಾಲೂಕಿನಲ್ಲಿ ಬರದ ಕಾರ್ಮೋಡವಿತ್ತು. ಬಿಸಿಲ ಧಗೆ ಹೆಚ್ಚಾಗಿ, ಕೆರೆಕೊಳ್ಳಗಳು ಬತ್ತಿದ್ದವು. ಹೆಚ್ಚಿನ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ತಾಲೂಕಿನ ಆರು ಹೋಬಳಿಗಳ 1445 ಹೆಕ್ಟೇರ್ ಭತ್ತದ ಬೆಳೆ ಒಣಗಿ ನಾಶವಾಗಿತ್ತು.

ಕುಡಿಯುವ ನೀರಿಗಾಗಿ 50 ಬೋರ್‌ವೆಲ್ ಕೊರೆಸಲಾಗಿತ್ತು. ರಾಜ್ಯ ಸರ್ಕಾರದ ಕೆರೆ ಸಂಜೀವಿನಿ ಯೋಜನೆಯಲ್ಲಿ 22ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ 9 ಕೆರೆಗಳ ಹೂಳು ತೆಗೆಸಲಾಗಿತ್ತು. ಪ್ರಸಕ್ತ ವರ್ಷ ಸುರಿಯುತ್ತಿರುವ ಮಹಾಮಳೆಯಿಂದ ತಾಲೂಕಿನ 200 ಕೆರೆಗಳು ತುಂಬಿ ತುಳುಕುತ್ತಿವೆ. ಧಾರ್ಮಿಕ ಹಿನ್ನೆಲೆಯುಳ್ಳ, ಹತ್ತಾರು ಗ್ರಾಮಗಳ ಕೃಷಿ ಚಟುವಟಿಕೆಗೆ ನೀರುಣಿಸುವ ಹೊನ್ನಮ್ಮನ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಕೃಷಿಕರು ಹರ್ಷಗೊಂಡಿದ್ದಾರೆ.

ಯಡೂರು ಗ್ರಾಮದ ಕೆರೆ ಹಾಗೂ ಪಟ್ಟಣದ ಆನೆಕೆರೆ ತುಂಬಿವೆ. ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 40 ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಆಲೂರುಕೆರೆ, 30 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಅಂಕನಳ್ಳಿಯ ದೇವಕೆರೆ, ಶನಿವಾರಸಂತೆಯ ತೋಯಳ್ಳಿ ಕೆರೆ(10 ಹೆಕ್ಟೇರ್ ಕೃಷಿ ಭೂಮಿಗೆ ನೀರು), ಐಗೂರು ಸಮೀಪದ ಚಿಕ್ಕಕೆರೆ(12 ಹೆಕ್ಟೇರ್), ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಹಾಡಗೇರಿ ಕೆರೆ(12 ಹೆಕ್ಟೇರ್), ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಕಾಟಿಕೆರೆ(26.3 ಹೆಕ್ಟೇರ್), ಹರದೂರು ಗ್ರಾ.ಪಂ. ವ್ಯಾಪ್ತಿಯ ಹರದೂರು ಕೆರೆ(11 ಹೆಕ್ಟೇರ್), ಬಾಣವಾರ ಕೆರೆ, ಹಿರಿಕರ ದೊಡ್ಡಕೆರೆ, ಚನ್ನಾಪುರ ಕೆರೆ, ಕೂಗೂರು ಕೆರೆ, ಕಿತ್ತೂರು ಕೆರೆ ಸೇರಿದಂತೆ ಮತ್ತಿತರ ಕೆರೆಗಳು ತುಂಬಿವೆ.

ತಾಲೂಕಿನಲ್ಲಿ ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕಾಗಿ 2161 ಕೊಳವೆ ಬಾವಿಗಳಿದ್ದು, ಅಂತರ್ಜಲ ಹೆಚ್ಚಳದಿಂದ ಯಥೇಚ್ಚವಾಗಿ ನೀರು ಸಿಗುತ್ತಿದೆ. ತಾಲೂಕಿನ ಬಹುತೇಕ ಕಾಫಿ ಬೆಳೆಗಾರರು ಏಪ್ರಿಲ್‌ನಲ್ಲಿ ಕಾಫಿ ಹೂ ಆರಳಿಸಲು ಬೋರ್‌ವೆಲ್‌ಗಳನ್ನು ಅವಲಂಭಿಸಿದ್ದಾರೆ. ಸುಂಠಿಕೊಪ್ಪ ಹೋಬಳಿಯಲ್ಲಿ ಹೆಚ್ಚಿರುವ ರೋಬಾಸ್ಟಾ ಕಾಫಿ ಹೂ ಅರಳಿಸಲು ಹೊಳೆ, ಕೆರೆಗಳನ್ನು ಅವಲಂಬಿಸಿರುವುದರಿಂದ ನೀರಿನ ಆತಂಕ ಇಲ್ಲದಂತಾಗಿದೆ. ಒಟ್ಟಿನಲ್ಲಿ ಪ್ರಸಕ್ತ ಸಾಲಿನ ಮುಂಗಾರು ಮಳೆ ನಷ್ಟಪಡಿಸಿದರೂ, ರೈತರಿಗೆ ವರದಾನವಾಗಿದೆ.

ಮುಂಗಾರು ಪೂರ್ವದಲ್ಲಿ ಬರದ ಆತಂಕ ಎದುರಾಗಿತ್ತು. ಕೆರೆಗಳು ಬತ್ತಿದ್ದವು. ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗುತ್ತಿತ್ತು. ಈ ಮಳೆ ಸಂತೃಪ್ತಿಕೊಟ್ಟಿದೆ. ಮಳೆಹಾನಿಯಾಗಿದ್ದು, ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ಮಳೆ ಬಿದ್ದಷ್ಟು ರೈತರು ಸಂತೋಷಗೊಳ್ಳುತ್ತಾರೆ. ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಕೆ.ಎಂ.ಲೋಕೇಶ್ ಕೃಷಿಕ, ಶಾಂತಳ್ಳಿ ಗ್ರಾಮ