ಗುಜರಾತ್​ ಹತ್ಯಾಕಾಂಡ: ಮೋದಿ ಕ್ಲೀನ್ ಚಿಟ್​ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

ನವದೆಹಲಿ: 2002ರ ಗುಜರಾತ್​ ಕೋಮು ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ದಳ ನೀಡಿರುವ ಕ್ಲೀನ್​ ಚಿಟ್​​ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನ.19ರಂದು ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್​ ಮಂಗಳವಾರ ತಿಳಿಸಿದೆ.

ಗುಜರಾತ್​ ಕೋಮು ಗಲಭೆಯ ಭಾಗವಾಗಿದ್ದ ಗುಲ್ಬರ್ಗ್​ ಸೊಸೈಟಿ ಹತ್ಯಾಕಾಂಡದಲ್ಲಿ ಕಾಂಗ್ರೆಸ್​ನ ಮಾಜಿ ಸಂಸದ ಇಶಾನ್​ ಜೆಫ್ರಿ ಅವರೂ ಸೇರಿದಂತೆ ಒಟ್ಟು 69 ಮಂದಿ ಮೃತಪಟ್ಟಿದ್ದರು. 2002ರ ಫೆ.28ರಂದು ನಡೆದ ಈ ಹತ್ಯಾಕಾಂಡದ ಹಿಂದೆ ಅಂದಿನ ಗುಜರಾತ್​ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಸಂಚು ಅಡಗಿದೆ ಎಂದು ಆರೋಪಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ದಳ (ಎಸ್​ಐಟಿ) ನರೇಂದ್ರ ಮೋದಿ ಅವರಿಗೆ ಕ್ಲೀನ್​ ಚಿಟ್​ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಮೃತ ಇಶಾನ್​ ಜೆಫ್ರಿ ಪತ್ನಿ ಜಾಕಿಯಾ ಜೆಫ್ರಿ ಅಹಮದಾಬಾದ್​ ಹೈಕೋರ್ಟ್​ಗೆ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್​ ಎಸ್​ಐಟಿಯ ವರದಿಯನ್ನು ಎತ್ತಿಹಿಡಿದಿತ್ತು.

ಹೋರಾಟ ಮುಂದವರಿಸಿರುವ ಜಾಕಿಯಾ ಜೆಫ್ರಿ ಅವರು, ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ. ಜೆಫ್ರಿ ಅವರ ಅರ್ಜಿಯನ್ನು ಮಾನ್ಯ ಮಾಡಿರುವ ಸುಪ್ರೀಂ ಕೋರ್ಟ್​ ನ. 19ರಂದು ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದೆ.