ಅರುಣ್‌ ಜೇಟ್ಲಿ ವಿರುದ್ಧ ಪಿಐಎಲ್‌ ಸಲ್ಲಿಸಿದ್ದ ವಕೀಲನಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಆರ್‌ಬಿಐನ ಮೀಸಲು ನಿಧಿಗೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಮಾಡಿದ್ದು, ಅರ್ಜಿ ಸಲ್ಲಿಸಿದ್ದ ವಕೀಲರಿಗೆ ನ್ಯಾಯಾಲಯ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

ಎಂ ಎಲ್‌ ಶರ್ಮಾ ಅವರು ದಂಡ ಪಾವತಿಸದ ಹೊರತು ಸುಪ್ರೀಂ ನೋಂದಣಿಯಲ್ಲಿ ಇನ್ನುಮುಂದೆ ಅವರಿಂದ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಈ ಪಿಐಎಲ್‌ನ್ನು ಉತ್ತೇಜಿಸಲು ನಮಗೆ ಯಾವುದೇ ಕಾರಣಗಳು ಕಾಣಿಸುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಮತ್ತು ನ್ಯಾಯಾಧೀಶ ಎಸ್‌ ಕೆ ಕೌಲ್‌ ಅವರಿದ್ದ ಪೀಠ ಹೇಳಿದೆ.

ಹಣಕಾಸು ಸಚಿವರನ್ನು ನಿಗ್ರಹಿಸಲು ಬಯಸಿದ್ದೇ ಆದರೆ ಅದಕ್ಕಾಗಿ ಕೆಲ ಉತ್ತಮ ಕೆಲಸಗಳನ್ನು ಮಾಡಿ. ಅದನ್ನು ಬಿಟ್ಟು ನಿಮ್ಮ ವಿಶ್ವಾಸಾರ್ಹತೆಯನ್ನು ನೀವು ಏಕೆ ಕಳೆದುಕೊಳ್ಳುತ್ತೀರಿ. “ಈ ಪಿಐಎಲ್ ಎಂದರೇನು? ಇಂತಹ ತಪ್ಪುದಾರಿಗೆಳೆಯುವಂತಹ ಕೆಲಸಗಳಲ್ಲಿ ನೀವು ಮುಂದುವರಿಯಲು ಸಾಧ್ಯವಿಲ್ಲ. ಹಣಕಾಸು ಸಚಿವರು ಆರ್‌ಬಿಐನ ಬಂಡವಾಳ ಮೀಸಲು ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದೀರಿ. ನೀವು ಈ ಸಂಸ್ಥೆಯನ್ನು ಗೌರವಿಸುತ್ತಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ಮುಂದುವರಿಯಲು ನಿಮಗೆ ನಾವೇಕೆ ಅನುಮತಿ ನೀಡಬೇಕು? ಎಂದು ವಕೀಲರನ್ನು ತರಾಟೆಗೆ ಪೀಠ ತೆಗೆದುಕೊಂಡಿದ್ದಾರೆ.

ಕೆಲ ಕಂಪನಿಗಳ ಸಾಲಮನ್ನಾ ಮಾಡಲು ಆರ್‌ಬಿಐನ ಮೀಸಲು ಹಣವನ್ನು ಅರುಣ್‌ ಜೇಟ್ಲಿ ಲೂಟಿ ಮಾಡಲು ಬಯಸಿದ್ದಾರೆ ಎಂದು ಆರೋಪಿಸಿ ಶರ್ಮಾ ಕೇಂದ್ರ ಸಚಿವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. (ಏಜೆನ್ಸೀಸ್)