More

  ಟೊಮ್ಯಾಟೊ ಬೆಳೆಗಾರರಿಗೆ ಶುಕ್ರದೆಸೆ: ಮಾರಾಟವಾಗದೇ ರಸ್ತೆ ಪಾಲಾಗುತ್ತಿದ್ದ ಸಲಿಗೆ ಬಂಪರ್ ಬೆಲೆ

  ಮುಳಬಾಗಿಲು : ಕರೊನಾ ಕಾರಣದಿಂದ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗಿ ಬೀದಿ ಬದಿ ಸುರಿಯುತ್ತಿದ್ದ ಟೊಮ್ಯಾಟೊಗೆ ಈಗ ಶುಕ್ರದೆಸೆ ಬಂದಿದ್ದು, 15 ಕೆ.ಜಿ ಬಾಕ್ಸ್ 100 ರಿಂದ 400 ರೂಗಳವರೆಗೂ ಮಾರಾಟವಾಗುತ್ತಿದೆ.
  ಕೋಲಾರ ಆ್ಯಪಲ್ ಎಂದೇ ಹೆಸರುವಾಸಿಯಾಗಿರುವ ಟೊಮ್ಯಾಟೊವನ್ನು ಇತ್ತೀಚೆಗೆ ಕೇಳುವವರೇ ಇಲ್ಲವಾಗಿತ್ತು. ಮಾರುಕಟ್ಟೆಗೆ ತಂದಿದ್ದ ಟನ್‌ಗಟ್ಟಲೆ ಟೊಮ್ಯಾಟೊವನ್ನು ರೈತರು ರಸ್ತೆ ಬದಿ ಸುರಿದ ಉದಾಹರಣೆಯೂ ಇದೆ. ವಾರದ ಹಿಂದೆ 30 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ.

  ದೇಶದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಮುಳಬಾಗಿಲಿನ ಎನ್.ವಡ್ಡಹಳ್ಳಿಯ ಎಪಿಎಂಸಿ ಉಪಮಾರುಕಟ್ಟೆಗೆ ಪ್ರತಿದಿನ 15 ಕೆ.ಜಿ.ಯ 1 ಲಕ್ಷ ಬಾಕ್ಸ್‌ಗಳನ್ನು ರೈತರು ತೆಗೆದುಕೊಂಡು ಬರುತ್ತಿದ್ದಾರೆ.ಇತ್ತೀಚೆಗೆ ಬೀಳುತ್ತಿರುವ ಜಡಿ ಮಳೆ, ಮೋಡ ಮುಚ್ಚಿದ ವಾತಾವರಣದಿಂದ ಟೊಮ್ಯಾಟೊ ತೋಟ ರೋಗಕ್ಕೆ ತುತ್ತಾಗಿರುವುದು ಒಂದೆಡೆಯಾದರೆ ಸಲಿಗೆ ಬಂದ ಟೊಮ್ಯಾಟೊ ಬೆಳೆಗೆ ತೇವಾಂಶ ಹೆಚ್ಚಾಗಿ ತೋಟದಲ್ಲೇ ಅರ್ಧ ಸಲು ನಾಶವಾಗಿದೆ. ಸಾವಿರಾರು ರೈತರು ಕಳೆದೊಂದು ವರ್ಷದಿಂದ ಟೊಮ್ಯಾಟೊ ಬೆಳೆದು ಕೈಸುಟ್ಟುಕೊಂಡಿದ್ದಾರೆ. ಆದರೆ ಈಗ ಅದೃಷ್ಟ ಖುಲಾಯಿಸಿದ್ದು, ಬೆಳೆಗೆ ಬೆಲೆ ಬಂದಿದೆ. ಬೆಳೆ ಇರುವ ರೈತರಿಗೆ ಲಾಭ ಸಿಗುವ ನಿರೀಕ್ಷೆ ಇದೆ. ಇದೇ ಬೆಲೆ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿವೆ.

  ಎಕರೆಗೆ 1ರಿಂದ 2 ಲಕ್ಷ ರೂ.: ಒಂದು ಎಕರೆ ಬೆಳೆ ಬೆಳೆಯಲು 1.5 ಲಕ್ಷದಿಂದ 2 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಕಳೆದ ವರ್ಷ ಹಾಕಿದ ಬಂಡವಾಳವೂ ಬರದೆ, ಶ್ರಮಕ್ಕೆ ತಕ್ಕ ಪ್ರತಿಲವೂ ಸಿಗದೆ ರೈತರು ಕೈ ಸುಟ್ಟುಕೊಂಡಿದ್ದರು. ಈಗ ತಾಲೂಕಿನಲ್ಲಿ 5 ಸಾವಿರ ಹೆಕ್ಟೇರ್‌ನಲ್ಲಿ ಟೊಮ್ಯಾಟೊ ಬೆಳೆ ಇದ್ದು, ಕೊಯ್ಲಿಗೆ ಬಂದಿರುವ ತೋಟಗಳು ಮಳೆಯಿಂದ ಉಳಿದುಕೊಂಡರೆ ಆ ರೈತರಿಗೆ ಭಾಗ್ಯಲಕ್ಷ್ಮೀ ಒಲಿಯುವುದು ಖಚಿತ.

  ಬೇರೆಡೆಗೂ ಪೂರೈಕೆ: ಮಳೆ ನಿಂತು ಬಿಸಿಲಿನ ವಾತಾವರಣ ಬಂದರೆ ಉತ್ತರ ಭಾರತ, ದಕ್ಷಣ ಭಾರತದ ಹಲವಾರು ರಾಜ್ಯಗಳಿಗೆ ವಡ್ಡಹಳ್ಳಿ ಮಾರುಕಟ್ಟೆಯಿಂದ ಟೊಮ್ಯಾಟೊ ಪೂರೈಕೆಯಾಗುತ್ತದೆ. ದೂರದ ಊರುಗಳಿಂದ ವರ್ತಕರು ಬಂದು ಖರೀದಿಸಿಕೊಂಡು ಹೋಗುತ್ತಾರೆ. ಈಗ ಆಂಧ್ರಪ್ರದೇಶದ ತೆಲಂಗಾಣ ಮತ್ತು ತಮಿಳುನಾಡು ಕಡೆ ಮಾತ್ರ ಇಲ್ಲಿಂದ ಟೊಮ್ಯಾಟೊ ಪೂರೈಕೆಯಾಗುತ್ತಿದೆ.

  ಸರ್ಕಾರ ಸಮಗ್ರ ಕೃಷಿ ನೀತಿ ಜಾರಿಗೆ ತಂದರೆ ರೈತರಿಗೆ ಅನುಕೂಲವಾಗಲಿದೆ. ಎಪಿಎಂಸಿಗಳ ಮೂಲಕ ಪ್ರತಿ ಕಿಲೋ 5 ರೂಪಾಯಿಯಂತೆ ಪ್ರೋತ್ಸಾಹಧನ ನೀಡಿ ಖರೀದಿಸಬೇಕು.
  ನಗವಾರ ಎನ್.ಆರ್. ಸತ್ಯಣ್ಣ, ಎಪಿಎಂಸಿ ನಿರ್ದೇಶಕ, ಮುಳಬಾಗಿಲು

  ಮೊದಲು ಬೆಳೆ ಇದ್ದರೂ ಬೆಲೆ ಇರಲಿಲ್ಲ. ಈಗ ಉತ್ತಮ ಬೆಲೆ ಇದೆ. ಆದರೆ ಮಳೆಯಿಂದ ತೋಟದಲ್ಲಿ ಅರ್ಧಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಬೆಲೆ ಇದ್ದರೂ ರೈತರಿಗೆ ಪ್ರಯೋಜನವಿಲ್ಲದಂತಾಗಿದೆ.
  ಮಂಜುನಾಥ್, ರೈತ, ಗುಡಿಪಲ್ಲಿ, ಮುಳಬಾಗಿಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts