ಮೈಸೂರಿನ 14 ಪ್ರವಾಸಿಗರು ಶ್ರೀಲಂಕಾದಲ್ಲಿ ಸುರಕ್ಷಿತ

ಮೈಸೂರು: ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್ ಸೇರಿದಂತೆ ನಗರದ 14 ಜನರು ಸುರಕ್ಷಿತವಾಗಿದ್ದಾರೆ.

ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ರವಿಶಂಕರ್, ಭೂಗರ್ಭಶಾಸ್ತ್ರಜ್ಞರಾದ ಕೆ.ವಿ.ವೇದಮೂರ್ತಿ, ಚನ್ನಬಸಪ್ಪ, ವಿನಯ್ ರಂಗನಾಥ್, ಎಚ್.ಎನ್.ಉಮೇಶ್ ಕುಟುಂಬ ಸದಸ್ಯರಾದ ಶೈಲಾ, ಮೌನಾ ಉಮೇಶ್, ಪೂರ್ಣಿಮಾ ರವಿಶಂಕರ್, ಅನುಪ್ ರವಿಶಂಕರ್, ಬಿ.ಎಸ್.ಶಾಲಿನಿ, ಸ್ವರೂಪ, ಗೌತಮಿ ವೇದಮೂರ್ತಿ, ಸನತ್ ರಂಗನಾಥ್ ಅವರು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು.

ನಗರದ ಥಾಮಸ್ ಕುಕ್(ಇಂಡಿಯಾ) ಟ್ರಾವೆಲ್ಸ್ ಮೂಲಕ ಆರು ದಿನಗಳ ಶ್ರೀಲಂಕಾ ಪ್ರವಾಸಕ್ಕಾಗಿ ಇವರು ಏ.19ರಂದು ಮುಂಜಾನೆ ಬೆಂಗಳೂರಿನಿಂದ ವಿಮಾನದ ಮೂಲಕ ಶ್ರೀಲಂಕಾದ ಕೊಲಂಬೋಕ್ಕೆ ತೆರಳಿ ಅಲ್ಲಿಂದ ಪಿನ್ನವಾಲಾ ನೋಡಿ ಕ್ಯಾಂಡಿಯಲ್ಲಿ ವಾಸ್ತವ್ಯ ಹೂಡಿದ್ದರು.

ಏ.20ರಂದು ಇಲಿಯಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸಿ ತಾಣ ವೀಕ್ಷಿಸಿದ ಬಳಿಕ ಕ್ಯಾಂಡಿಗೆ ಮರಳಿದ್ದರು. ಬಳಿಕ ಬೆಂಟೋಟಾಗೆ ಪ್ರಯಾಣ ಬೆಳೆಸಿ ಅಲ್ಲಿನ ಹಿಬಿಸ್ಕಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಪ್ರವಾಸ ಪಟ್ಟಿಯಂತೆ ಬೆಂಟೋಟಾದಿಂದ ಕೊಲೊಂಬೋಗೆ ತೆರಳಿ ಅಲ್ಲಿಯ ಪ್ರವಾಸಿ ತಾಣಗಳನ್ನು ನೋಡಿದ ಬಳಿಕ ಏಪ್ರಿಲ್ 24ರಂದು ಬೆಂಗಳೂರಿಗೆ ವಾಪಸ್ಸಾಗಬೇಕಿತ್ತು.

ಆದರೆ ಇವರು ಬೆಂಬೋಟಾದಲ್ಲಿ ವಾಸ್ತವ್ಯ ಹೂಡಿರುವಾಗಲೇ 40 ಕಿ.ಮೀ. ದೂರದಲ್ಲಿರುವ ಕೊಬೊಂಬೋದಲ್ಲಿ ಭೀಕರ ಬಾಂಬ್ ಸ್ಫೋಟಗೊಂಡಿದ್ದರಿಂದ ಅವರು ತಮ್ಮ ಹೋಟೆಲ್‌ನಲ್ಲಿಯೇ ಉಳಿಯುವಂತಾಯಿತು. ಶ್ರೀಲಂಕಾ ದೇಶಾದ್ಯಂತ ತುರ್ತು ಪರಿಸ್ಥಿತಿ ಜೊತೆಗೆ ಹೈ ಅಲರ್ಟ್ ಘೋಷಿಸಿರುವುದರಿಂದ ಹೊರಗೆ ಎಲ್ಲಿಯೂ ಹೋಗಲು ಸಾಧ್ಯವಿಲ್ಲದೆ ಹೋಟೆಲ್‌ನಲ್ಲಿಯೇ ಉಳಿಯುವಂತಾಗಿದೆ. ಇಂಟರ್‌ನೆಟ್, ಫೋನ್ ಸಂಪರ್ಕ ಕೂಡಾ ಕಡಿತಗೊಂಡಿರುವುದರಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೊಲಂಬೋಗೆ ತೆರಳದೆ ಏ.24ರಂದು ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಮರಳಲಿದ್ದಾರೆ ಎಂದು ಟ್ರಾವೆಲ್ಸ್ ಮೂಲಗಳು ಖಚಿತಪಡಿಸಿವೆ.

Leave a Reply

Your email address will not be published. Required fields are marked *