More

    ಬಿಬಿಎಂಪಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಾಳೆ; ಮೂರು ಬಾರಿ ಮುಂದೂಡಿಕೆಯಾಗಿರುವ ಎಲೆಕ್ಷನ್  

    ಬೆಂಗಳೂರು:  ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಗಾಗಿ ಶನಿವಾರ (ಜ.18) ಮುಹೂರ್ತ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆ ಕುರಿತು ಎಲ್ಲ ಪಕ್ಷಗಳು ಆಂತರಿಕ ಸಭೆಗಳನ್ನು ನಡೆಸಲಾರಂಭಿಸಿವೆ.

    4ನೇ ಪ್ರಯತ್ನ: ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ಸದಸ್ಯರು ಮತ್ತು ಅಧ್ಯಕ್ಷ ರನ್ನು ಆಯ್ಕೆ ಮಾಡಲು ಎರಡು ತಿಂಗಳಲ್ಲಿ ನಡೆಸುತ್ತಿರುವ 4ನೇ ಪ್ರಯತ್ನ ಇದಾಗಿದೆ. ಮೊದಲು ಸದಸ್ಯರ ಕೋರಂ ಕೊರತೆಯಿಂದ ಚುನಾವಣೆ ನಡೆದಿರಲಿಲ್ಲ. 2019ರ ಡಿ.4ರಂದು ವಿಧಾನಸಭಾ ಉಪಚುನಾವಣೆ ನೆಪವೊಡ್ಡಿ ಹಾಗೂ 2020ರ ಜ.30ರಂದು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಕೃಷ್ಣೆೈಕ್ಯರಾದ ನಿಮಿತ್ತ ಶೋಕಾಚರಣೆ ಘೋಷಿಸಿದ್ದರಿಂದ ಪಾಲಿಕೆಯ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಚುನಾವಣೆಗಳನ್ನು ಮುಂದೂಡಲಾಗಿತ್ತು. ಇದೀಗ ಶನಿವಾರಕ್ಕೆ ಚುನಾವಣೆ ನಿಗದಿಯಾಗಿದೆ. ಈ ಬಾರಿ ಚುನಾವಣೆಯಿಂದ ತಪ್ಪಿಸಿಕೊಳ್ಳಲು ಯಾವುದೇ ಕಾರಣಗಳು ಸಿಗದಾಗಿದೆ. ಹಾಗಾಗಿ, ಸ್ಥಾಯಿ ಸಮಿತಿಗಳು ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

    ಪಕ್ಷಗಳ ಆಂತರಿಕ ಸಭೆಗಳು: ಬಿಬಿಎಂಪಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯ 101 ಸದಸ್ಯರು, 5 ಪಕ್ಷೇತರರು ಹಾಗೂ ಬಿಜೆಪಿಯನ್ನು ಬೆಂಬಲಿಸುತ್ತಿರುವ 18 ಸದಸ್ಯರು ಹಾಗೂ ಸ್ಥಳೀಯ ಶಾಸಕರು ಇದ್ದಾರೆ. ಇವರೆಲ್ಲರೂ ಪಕ್ಷದ ಮುಖಂಡರ ಜತೆ ಸಭೆ ನಡೆಸಲು ಮುಂದಾಗಿದ್ದಾರೆ. ಈ ಸಭೆಯಲ್ಲಿ ಸಮಿತಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತು ಚರ್ಚೆಗಳಾಗಲಿವೆ. ಪ್ರತಿಪಕ್ಷ ಕಾಂಗ್ರೆಸ್​ನ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಮತ್ತು ಕಾರ್ಯಾಧ್ಯಕ್ಷ ಈಶ್ವರ್​ಖಂಡ್ರೆ ನೇತೃತ್ವದಲ್ಲಿ 60 ಸದಸ್ಯರು ಸಭೆ ನಡೆಸಲಿದ್ದಾರೆ.

    ಚುನಾವಣೆ ಬೇಡ ಎನ್ನುತ್ತಿರುವ ಶಾಸಕರು

    ಪಾಲಿಕೆ ಸದಸ್ಯರ ಅಧಿಕಾರಾವಧಿ ಆಗಸ್ಟ್​ಗೆ ಕೊನೆಯಾಗಲಿದೆ. 7 ತಿಂಗಳಿ ಗಾಗಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ಮಾಡುವುದು ಬೇಡ ಎಂಬುದು ಆಡಳಿತ ಪಕ್ಷದ ಶಾಸಕರ ಅಭಿಪ್ರಾಯ. ಹೀಗಾಗಿ ತಮ್ಮ ಕ್ಷೇತ್ರಗಳಿಂದ ಸ್ಥಾಯಿ ಸಮಿತಿಗೆ ಆಯ್ಕೆ ಮಾಡಬೇಕಾದವರ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಇಂಥವರು ನಾಮಪತ್ರ ಸಲ್ಲಿಸಬೇಕು ಎಂದು ಶಾಸಕರು ಹೇಳದಿದ್ದಲ್ಲಿ, ಆಡಳಿತ ಪಕ್ಷದ ಸದಸ್ಯರು ಚುನಾವಣೆಯಿಂದ ಮತ್ತೊಮ್ಮೆ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

    ಮತದಾನದ ಹಕ್ಕು ಹೊಂದಿರುವವರು

    ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ತಲಾ 11 ಸದಸ್ಯರಂತೆ 132 ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಚುನಾವಣೆಯಲ್ಲಿ ಬಿಜೆಪಿಯ 101, ಕಾಂಗ್ರೆಸ್​ನ 76, ಜೆಡಿಎಸ್​ನ 14 ಹಾಗೂ 7 ಮಂದಿ ಪಕ್ಷೇತರರು ಸೇರಿ 198 ಪಾಲಿಕೆ ಸದಸ್ಯರು, 28 ಶಾಸಕರು, 5 ಸಂಸದರು, 9 ರಾಜ್ಯಸಭೆ ಸದಸ್ಯರು ಹಾಗೂ 19 ಮಂದಿ ವಿಧಾನಪರಿಷತ್ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಆದರೆ, ಚುನಾವಣೆ ದಿನ ಶೇ.33 ಕೋರಂ ಇದ್ದರೆ ಮಾತ್ರ ಚುನಾವಣೆ ನಡೆಯಲು ಸಾಧ್ಯವಿದೆ.

    ರದ್ದುಗೊಳಿಸಬಹುದು

    ಚುನಾವಣೆ ಶನಿವಾರ ಬೆಳಗ್ಗೆ 11.30ಕ್ಕೆ ನಿಗದಿಯಾಗಿದೆ. ಈ ಬಾರಿ ಸಾಧ್ಯವಾಗದಿದ್ದರೆ ಚುನಾವಣೆಯನ್ನೇ ರದ್ದುಗೊಳಿಸಿ ಆದೇಶಿಸುವ ಅಧಿಕಾರ ಚುನಾವಣೆ ನಡೆಸುವ ಜವಾಬ್ದಾರಿ ಹೊತ್ತ ಪ್ರಾದೇಶಿಕ ಆಯುಕ್ತರಿಗೆ ಇದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸ್ಥಾಯಿ ಸಮಿತಿ ಚುನಾವಣೆಯಿಂದ ಆಡಳಿತ ಪಕ್ಷ ಹೊರಗೆ ಉಳಿದರೂ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಹಾಗೂ ಪಕ್ಷೇತರರ ಜತೆಗೂಡಿ ನಾಮಪತ್ರ ಸಲ್ಲಿಸುತ್ತೇವೆ.

    | ಅಬ್ದುಲ್ ವಾಜಿದ್ ಬಿಬಿಎಂಪಿ ವಿರೋಧ ಪಕ್ಷದ ನಾಯಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts