Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಗ್ರೇಟ್ ನೆಗೋಷಿಯೇಟರ್

Sunday, 03.06.2018, 3:04 AM       No Comments

| ಉಮೇಶ್ ಕುಮಾರ್ ಶಿಮ್ಲಡ್ಕ

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಐದು ದಿನಗಳ ತ್ರಿರಾಷ್ಟ್ರ (ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ) ಪ್ರವಾಸ ಮುಗಿಸಿ ಶನಿವಾರ ವಾಪಸಾಗಿದ್ದಾರೆ. ಅವರ ಈ ಪ್ರವಾಸ ಇಂಡೋ-ಪೆಸಿಫಿಕ್ ಸಂಬಂಧಗಳ ದೃಷ್ಟಿಯಿಂದ ಮಹತ್ವದ್ದು. ಸಹಜವಾಗಿಯೇ ಈ ಅವಧಿಯಲ್ಲಿ ಬೇರೆ ಬೇರೆ ವಿಚಾರಗಳು ಗಮನಸೆಳೆದಿವೆ. ಅವುಗಳಲ್ಲಿ ನಮ್ಮ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರವನ್ನು ಹಿರಿಯ ನಿವೃತ್ತ ರಾಜತಾಂತ್ರಿಕ ಅಧಿಕಾರಿ ಟಾಮಿ ಕೋಹ್ ತೋಂಗ್ ಬಿ ಅವರಿಗೆ ಶುಕ್ರವಾರ ಅವರ ತವರುನೆಲ ಸಿಂಗಾಪುರದಲ್ಲೇ ಪ್ರದಾನ ಮಾಡಿದ್ದು ವಿಶೇಷವಾಗಿ ಗಮನಸೆಳೆಯಿತು.

‘ಎಂಭತ್ತರ ಹರೆಯದ ಟಾಮಿ ಕೋಹ್ ಅವರಿಗೇಕೆ ಅಷ್ಟು ಮಹತ್ವ?’, ‘ಮೋದಿಯವರೇಕೆ ಅಲ್ಲೇ ಹೋಗಿ ಈ ನಾಗರಿಕ ಪುರಸ್ಕಾರ ಪ್ರದಾನಿಸಿದರು?’ ಎಂಬಿತ್ಯಾದಿ ಸಹಜ ಕುತೂಹಲ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ವೇಳೆ ಸಿಕ್ಕ ಮಾಹಿತಿಗಳನ್ನು ಇಲ್ಲಿ ದಾಖಲಿಸಿರುವೆ.

ಇತ್ತೀಚಿನ ಪದ್ಮ ಪುರಸ್ಕೃತರ ಪಟ್ಟಿಯಲ್ಲಿ ಆಸಿಯಾನ್ (ಅಸೋಸಿಯೇಷನ್ ಆಫ್ ಸೌತ್​ಈಸ್ಟ್ ಏಷ್ಯನ್ ನೇಷನ್ಸ್) ರಾಷ್ಟ್ರಗಳ ಹತ್ತು ಗಣ್ಯರ ಹೆಸರುಗಳೂ ಇದ್ದವು. ಅವುಗಳ ಪೈಕಿ ಟಾಮಿ ಕೂಡ ಒಬ್ಬರು. ರಾಜತಾಂತ್ರಿಕ ಅಧಿಕಾರಿ, ಪ್ರೊಫೆಸರ್, ಅಂತಾರಾಷ್ಟ್ರೀಯ ನ್ಯಾಯವಾದಿ ಅಷ್ಟೇ ಅಲ್ಲ, ಅಮೆರಿಕ ಮತ್ತು ವಿಶ್ವಸಂಸ್ಥೆಯಲ್ಲಿ ಸಿಂಗಾಪುರದ ರಾಯಭಾರಿಯಾಗಿ ಸೇವೆ ಸಲ್ಲಿಸಿದವರು. 1981-82ರಲ್ಲಿ ಸಮುದ್ರ ಕಾನೂನು ವಿಷಯವಾಗಿ ನಡೆದ ವಿಶ್ವಸಂಸ್ಥೆಯ ತೃತೀಯ ಶೃಂಗದ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ‘ಸೆಂಟರ್ ಫಾರ್ ಇಂಟರ್​ನ್ಯಾಷನಲ್ ಲಾ’ದ ಗವರ್ನರ್​ಗಳ ಮಂಡಳಿಯ ಚೇರ್​ವುನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಲೇಖನದ ಶೀರ್ಷಿಕೆಯಲ್ಲಿ ಉಲ್ಲೇಖಿಸಿರುವ ‘ಗ್ರೇಟ್ ನೆಗೋಷಿಯೇಟರ್’ ಎಂಬುದು ಟಾಮಿ ಅವರಿಗೆ ಸಿಕ್ಕ ಪುರಸ್ಕಾರ. 2014ರಲ್ಲಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್​ನಲ್ಲಿ ನಡೆದ ‘ನೆಗೋಷಿಯೇಷನ್’ ಕುರಿತ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಅವರನ್ನು ಗೌರವಿಸಲಾಗಿತ್ತು. ಅಮೆರಿಕ ಮತ್ತು ಸಿಂಗಾಪುರ ನಡುವಿನ ಮುಕ್ತ ವಾಣಿಜ್ಯ ಒಪ್ಪಂದ ಏರ್ಪಡುವಲ್ಲಿ ಮುಖ್ಯ ಸಮಾಲೋಚಕರಾಗಿ ಭಾಗವಹಿಸಿದ್ದೂ ಇವರೇ. ಅದೇ ರೀತಿ ಇಂಟರ್​ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್​ನಲ್ಲಿ ಪೆಡ್ರಾ ಬ್ರಾನ್ಕಾ ತನ್ನದೆಂಬ ಸಿಂಗಾಪುರದ ವಾದವನ್ನು ಸಮರ್ಥವಾಗಿ ಮಂಡಿಸಿದ ತಂಡದಲ್ಲೂ ಟಾಮಿ ಇದ್ದರು. ಚೀನಾ, ಜಪಾನ್, ಭಾರತದ ಜತೆಗಿನ ಸಿಂಗಾಪುರದ ಅರೆ ಅಧಿಕೃತ ವ್ಯೂಹಾತ್ಮಕ ಮಾತುಕತೆಗಳಲ್ಲೂ ಟಾಮಿ ಅವರದ್ದು ಪ್ರಮುಖ ಪಾತ್ರ. ಇದೇ ಕಾರಣಕ್ಕೆ ಅವರನ್ನು ಭಾರತ ಅತ್ಯುನ್ನತ ನಾಗರಿಕ ಪುರಸ್ಕಾರಗಳಲ್ಲಿ ಒಂದಾದ ‘ಪದ್ಮಶ್ರೀ’ ನೀಡಿ ಗೌರವಿಸಿದೆ.

ಟಾಮಿ ಹುಟ್ಟಿದ್ದು 1937ರ ನವೆಂಬರ್ 12ರಂದು. ತಂದೆ ತೋಂಗನ್, ಫುಜಿಯನ್ ಪ್ರಾಂತ್ಯದವರು. ತಾಯಿ ಶಾಂಘೈ ಮೂಲದವರು. ಇದೇ ಅವಧಿಯಲ್ಲಿ ಜಪಾನಿಯರು ಸಿಂಗಾಪುರವನ್ನು ಆಕ್ರಮಿಸಿ ಸ್ವಾಧೀನಪಡಿಸಿಕೊಂಡಿದ್ದರು. ರಾಫೆಲ್ಸ್ ಇನ್​ಸ್ಟಿಟ್ಯೂಷನ್ಸ್ ಮತ್ತು ಸೆರನ್​ಗೂನ್ ಸೆಕಂಡರಿ ಸ್ಕೂಲ್​ಗಳಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಸಿಂಗಾಪುರದ ಯೂನಿವರ್ಸಿಟಿ ಆಫ್ ಮಲಯದಲ್ಲಿ ಎಲ್​ಎಲ್​ಬಿ ಪದವಿ ಪಡೆದರು. ಬಳಿಕ ಹಾರ್ವರ್ಡ್ ಯೂನಿವರ್ಸಿಟಿಯಿಂದ ಎಲ್​ಎಲ್​ಎಂ ಹೊಂದಿದ ಟಾಮಿ, ಕೇಂಬ್ರಿಜ್ ಯೂನಿವರ್ಸಿಟಿಯಿಂದ ಕ್ರಿಮಿನಾಲಜಿ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪದವಿ ಪಡೆದರು. 1977ರಲ್ಲಿ ಪೂರ್ಣ ಪ್ರಮಾಣದ ಪ್ರೊಫೆಸರ್ ಆದ ಟಾಮಿ, ವಿವಿಧ ರೀತಿ ಹೊಣೆಗಾರಿಕೆಗಳನ್ನು ನಿಭಾಯಿಸಿದರು. ಮುಂದೆ, ಅವರಿಗೆ ಯಾಲೆ ಮತ್ತು ಮೊನಾಶ್ ಯೂನಿವರ್ಸಿಟಿಗಳಿಂದ ಗೌರವ ಎಲ್​ಎಲ್​ಡಿ ಪದವಿ ನೀಡಿ ಪುರಸ್ಕರಿಸಲಾಯಿತು.

ಶಿಕ್ಷಣ ಪೂರ್ಣಗೊಳ್ಳುತ್ತಿದ್ದಂತೆಯೇ ಅವರು ವಿಶ್ವಸಂಸ್ಥೆಯಲ್ಲಿ ಸಿಂಗಾಪುರದ ರಾಯಭಾರ ಪ್ರತಿನಿಧಿಯಾಗಿ ನಿಯೋಜಿತರಾದರು. ಅತ್ಯಂತ ಕಿರಿಯ ರಾಯಭಾರ ಪ್ರತಿನಿಧಿ ಎಂಬ ಕೀರ್ತಿಗೂ ಭಾಜನರಾದರು. 1971ರ ತನಕ ಅಲ್ಲಿ ಸೇವೆ ಸಲ್ಲಿಸಿದ ಅವರು, 33ನೇ ವಯಸ್ಸಿನಲ್ಲಿ ಸಿಂಗಾಪುರದ ಕಾನೂನು ಯೂನಿವರ್ಸಿಟಿಯಲ್ಲಿ ಡೀನ್ ಆಗಿ ನೇಮಕವಾದರು. 1974ರಲ್ಲಿ ಮತ್ತೆ ವಿಶ್ವಸಂಸ್ಥೆಗೆ ಹಿಂತಿರುಗಿದ ಅವರು, ಸಿಂಗಾಪುರದ ಕಾಯಂ ಪ್ರತಿನಿಧಿಯಾಗಿ ಕೆಲಸ ಆರಂಭಿಸಿದರು. 1984ರಿಂದ 1990ರ ತನಕ ಅವರು ಅಮೆರಿಕದಲ್ಲಿ ಸಿಂಗಾಪುರದ ರಾಯಭಾರಿಯಾಗಿದ್ದರು. ನಂತರ ಸಿಂಗಾಪುರಕ್ಕೆ ಹಿಂದಿರುಗಿದ ಅವರು, 1990-97 ಮತ್ತು 2000-04ರ ಅವಧಿಯಲ್ಲಿ ಇನ್​ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್​ನ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಸಿಂಗಾಪುರದ ನ್ಯಾಷನಲ್ ಆರ್ಟ್ಸ್ ಕೌನ್ಸಿಲ್(1991-96), ನ್ಯಾಷನಲ್ ಹೆರಿಟೇಜ್ ಬೋರ್ಡ್(2002-11)ಗಳ ಸಂಸ್ಥಾಪಕ ಚೇರ್​ವುನ್ ಆಗಿದ್ದರು.

ಎಲ್ಲದಕ್ಕೂ ಮಿಗಿಲಾಗಿ ಟಾಮಿ ಅತ್ಯುತ್ತಮ ಸಮಾಲೋಚಕರಾಗಿದ್ದರು ಎಂಬುದಕ್ಕೆ, ಕಾಂಬೋಡಿಯನ್ ರೆಪ್ರಸೆಂಟೇಷನ್ ಇನ್ ಯುನೈಟೆಡ್ ನೇಷನ್ಸ್(1970-79), ದ ಥರ್ಡ್ ಯುನೈಟೆಡ್ ನೇಷನ್ಸ್ ಕಾನ್ಪರೆನ್ಸ್ ಆನ್ ಲಾ ಆಫ್ ದ ಸೀ(1978-82), ರೆಕಗ್ನಿಷನ್ ಆಫ್ ಸಿಂಗಾಪುರ್ ಬೈ ಚೀನಾ(1990), ದ ಅರ್ಥ್ ಸಮಿಟ್(ರಿಯೋ ಸಮಿಟ್)(1990-92), ಡಿಸ್ಪ್ಯೂಟ್ ಬಿಟ್ವೀನ್ ಬಾಲ್ಟಿಕ್ ನೇಷನ್ಸ್ ಆಂಡ್ ದ ರಷ್ಯನ್ ಫೆಡರೇಷನ್ಸ್ (1993), ಫಾಮೇಷನ್, ರ್ಯಾಟಿಫಿಕೇಶನ್ ಆಂಡ್ ಇಂಪ್ಲಿಮೆಂಟೇಷನ್ ಆಫ್ ಆಸಿಯಾನ್ ಚಾರ್ಟರ್(2005-07), ನೆಗೋಸಿಯೇಷನ್ ಆಂಡ್ ರಾಟಿಫಿಕೇಶನ್ ಆಫ್ ಸಿಂಗಾಪುರ್- ಯುಎಸ್ ಫ್ರೀ ಟ್ರೇಡ್ ಅಗ್ರಿಮೆಂಟ್(2000-03), ಸೆಟಲ್​ವೆುಂಟ್ ಆಫ್ ಎ ಟೆರಿಟೋರಿಯಲ್ ಡಿಸ್ಪ್ಯೂಟ್ಸ್ ವಿತ್ ಮಲೇಷ್ಯಾ(1979-2007) ಮುಂತಾದ ಒಪ್ಪಂದಗಳು ಸಾಕ್ಷಿ. ಇನ್ನು ವೈಯಕ್ತಿಕ ಬದುಕಿನತ್ತ ನೋಟ ಬೀರಿದರೆ, 1967ರಲ್ಲಿ ಟಾಮಿ ಅವರು ಸ್ಯೂ ಆಂಗ್​ರನ್ನು ವಿವಾಹವಾದರು. ದಂಪತಿಗೆ ಇಬ್ಬರು ಪುತ್ರರು. ಕಲೆ, ಸಂಸ್ಕೃತಿ ಬಗ್ಗೆ ಅಪಾರ ಒಲವುಳ್ಳ ಟಾಮಿ, ಸಾಮಾಜಿಕ ನ್ಯಾಯ, ಆರ್ಥಿಕ ಸುಧಾರಣೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ನೆನಪಿಸಿಕೊಳ್ಳುವುದಾದರೆ 2010ರಲ್ಲಿ ಅವರು -‘ಬೀದಿಬದಿ ಆಹಾರ ವ್ಯಾಪಾರಿಗಳಿಗೆ ಅಡುಗೆ ತರಬೇತಿ ನೀಡಬೇಕು’ ಎಂಬ ಸಲಹೆಯನ್ನು ನೀಡಿದ್ದರು. ಆ ಮೂಲಕ ಅವರ ಕಾರ್ಯಕ್ಷಮತೆ, ಅಡುಗೆ, ಆಹಾರದ ಗುಣಮಟ್ಟ ಹೆಚ್ಚಿಸುವ ಬಗ್ಗೆ ಮಾತನಾಡಿದ್ದರು.

ಸಿಂಗಾಪುರದ ಅಭಿವೃದ್ಧಿ ಬಗ್ಗೆ ಕನಸು ಕಂಡ ಟಾಮಿ, ಸಿಂಗಾಪುರವನ್ನು ‘ಪೂರ್ವದ ಜಿನೇವಾ’ವನ್ನಾಗಿ ರೂಪಿಸಬೇಕು ಎಂದು ಬಯಸಿದ್ದರು. ಈ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. ಕ್ರೆಡಿಟ್ ಸೂಸಿ ಜತೆಗೂಡಿ ಸಿಮ್ ಏಷ್ಯಾ ಎಂಬ ಫೌಂಡೇಷನ್ ಸ್ಥಾಪಿಸಿ, ಅದಕ್ಕೆ ಸಂಸ್ಥಾಪಕ ಅಧ್ಯಕ್ಷರಾಗಿರುವ ಟಾಮಿ, ಏಷ್ಯಾದ ಅತಿಶ್ರೀಮಂತ ದಾನಿಗಳಿಂದ ಹಣ ದೇಣಿಗೆಯಾಗಿ ಪಡೆದು 47 ರಾಷ್ಟ್ರಗಳಲ್ಲಿ ಪರಿಸರಾತ್ಮಕ, ಮಾನವೀಯ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅದನ್ನು ಬಳಸುತ್ತಿದ್ದಾರೆ. ‘ಗ್ರೇಟ್ ನೆಗೋಷಿಯೇಟರ್’ ಪ್ರಶಸ್ತಿ ಸ್ವೀಕರಿಸಿದ ಆ ಸಂದರ್ಭದಲ್ಲಿ ಅವರು ಹೇಳಿದ, ‘ಈ ಪ್ರಶಸ್ತಿ ನನಗೆ ಸೇರಿದ್ದಲ್ಲ. ನಾನಿಲ್ಲಿ ನಿಮಿತ್ತ ಮಾತ್ರ. ಸರಿಯಾದ ಸಂದರ್ಭದಲ್ಲಿ ಸರಿಯಾದ ಜಾಗದಲ್ಲಿ ಕುಳಿತುಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಒಬ್ಬ ಅದೃಷ್ಟವಂತ ನಾಯಕನಾಗಿ ಎಲ್ಲರೆದುರು ಕಾಣಿಸಿಕೊಂಡೆ. ಇದರ ಶ್ರೇಯಸ್ಸೆಲ್ಲವೂ ನನ್ನ ಜತೆ ಕೆಲಸ ಮಾಡಿದವರಿಗೆ ಸಲ್ಲಬೇಕು. ನನ್ನ ತಂಡ ಸರಿಯಾಗಿ ಕೆಲಸ ಮಾಡದೇ ಇರುತ್ತಿದ್ದರೆ ಆ ಯಶಸ್ಸು ನನಗೆ ಸಿಕ್ಕುತ್ತಿರಲಿಲ್ಲ’- ಈ ಮಾತು ಸಾರ್ವಕಾಲಿಕ ಸತ್ಯ ಮತ್ತು ಆದರ್ಶವೂ ಹೌದು.

Leave a Reply

Your email address will not be published. Required fields are marked *

Back To Top