ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ರಾಣೆಬೆನ್ನೂರ ಮಾತ್ರವಲ್ಲದೆ ರಾಜ್ಯಾದ್ಯಂತ ಭರ್ಜರಿ ಬೆಲೆಗೆ ಮಾರಾಟವಾಗಿ ಗಗನಕ್ಕೆ ಏರಿದ್ದ ಟೊಮ್ಯಾಟೊ ಬೆಳೆ ಇದೀಗ ಬೆಳೆ ಕುಸಿತ ಕಂಡು ಬೀದಿಗೆ ಬಿದ್ದಿದೆ.
ನಗರದ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದ ಹಿಂದೆ 60 ರೂ.ಗೆ ಕೆ.ಜಿ.ಯಂತೆ ಮಾರಾಟವಾಗಿದ್ದ ಟೊಮ್ಯಾಟೊ ಬೆಲೆ ಇದೀಗ ಏಕಾಏಕಿ 10 ರೂ.ಗೆ ಕುಸಿದಿದೆ. ಅಲ್ಲದೆ, ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆ.ಜಿ. ಒಂದು ಬಾಕ್ಸ್ 30ರಿಂದ 40 ರೂ.ಗೆ ಮಾರಾಟವಾಗುತ್ತಿದೆ. ಇದು ಬೆಳೆಗಾರರನ್ನು ಕಂಗಾಲಾಗಿಸಿದೆ. ಇಲ್ಲಿಯ ಎಪಿಎಂಸಿಗೆ ಮಾರಾಟಕ್ಕಾಗಿ ತಂದಿದ್ದ ಟೊಮ್ಯಾಟೊ ಬೆಳೆಯನ್ನು ರೈತರು ಉತ್ತಮ ಬೆಲೆ ಸಿಗದೆ ಬೇಸರಗೊಂಡು ತಿಪ್ಪೆಗೆ ಎಸೆದು ಕಣ್ಣೀರು ಹಾಕುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆ ಎಪಿಎಂಸಿ ಮಾರುಕಟ್ಟೆಯಲ್ಲಿ 1 ಕೆ.ಜಿ. ಟೊಮ್ಯಾಟೊ 50 ರೂ.ನಿಂದ 60 ರೂ. ವರೆಗೂ ಮಾರಾಟವಾಗಿದೆ. ಆದರೀಗ ತಾಲೂಕಿನಲ್ಲಿ ಸಮೃದ್ಧವಾಗಿ ಮಳೆಯಾಗಿದ್ದು, ಈ ಹಿಂದೆ ಮಾರುಕಟ್ಟೆಗೆ 500 ಬಾಕ್ಸ್ ಬರುತ್ತಿದ್ದ ಟೊಮ್ಯಾಟೊ ಈಗ 2 ಸಾವಿರಕ್ಕೂ ಅಧಿಕ ಬಾಕ್ಸ್ನಷ್ಟು ಭರಲಾರಂಭಿಸಿದೆ. ಹೀಗಾಗಿ ಬೆಲೆ ಕುಸಿತವಾಗಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ಖರ್ಚು ಮಾಡಿದ ಹಣ ಸಿಗಲ್ಲ…
1 ಎಕರೆ ಟೊಮ್ಯಾಟೊ ಬೆಳೆಯಲು ಬೀಜ, ಗೊಬ್ಬರ, ಕೂಲಿ ಕಾರ್ವಿುಕರು ಸೇರಿ 30 ಸಾವಿರ ರೂ. ವರೆಗೂ ಖರ್ಚು ಬರುತ್ತದೆ. ಅಲ್ಲದೆ, ಮಳೆ ನಡುವೆ ಕಷ್ಟಪಟ್ಟು ಬೆಳೆ ರಕ್ಷಿಸಿಕೊಳ್ಳಬೇಕು. ಬೆಳೆ ಬಂದ ಮೇಲೆ ಕಿತ್ತು ಮಾರುಕಟ್ಟೆಗೆ ಸಾಗಿಸಬೇಕಾದರೆ 1 ಬಾಕ್ಸ್ಗೆ 20 ರೂ. ಕೊಡಬೇಕು. ಹರಾಜಿನಲ್ಲಿ ದಲಾಲಿ ಹಾಗೂ ಹಮಾಲಿ ಎಂದು ನೂರು ರೂ.ಗೆ 10 ರೂಪಾಯಿ ಮುರಿದುಕೊಳ್ಳುತ್ತಾರೆ.
ಖಾಲಿ ಬಾಕ್ಸ್ ತೆಗೆದುಕೊಂಡು ಹೋಗಲು 5 ರೂ. ಕೊಡಬೇಕು. 1 ಎಕರೆಗೆ 8ರಿಂದ 10 ಸಾವಿರ ಕ್ವಿಂಟಾಲ್ನಷ್ಟು ಇಳುವರಿ ಬಂದರೂ ಈಗಿರುವ 30 ರೂ.ಗೆ ಒಂದು ಬಾಕ್ಸ್ನಂತೆ ಮಾರಾಟ ಮಾಡಿದರೆ, ಟೊಮ್ಯಾಟೊ ಬೆಳೆಯಲು ಮಾಡಿದ ಖರ್ಚು ಸಹ ಹುಟ್ಟುವುದಿಲ್ಲ ಎಂಬುದು ರೈತರ ಅಳಲು.
ಬೆಲೆ ಉತ್ತಮವಾಗಿರುವುದನ್ನು ನೋಡಿ ಈ ಬಾರಿಯೂ ಟೊಮ್ಯಾಟೊ ಬೆಳೆದಿದ್ದೇವೆ. ಆದರೀಗ ಏಕಾಏಕಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದ್ದರಿಂದ ನಷ್ಟ ಅನುಭವಿಸುವಂತಾಗಿದೆ. ಮಳೆ ಚೆನ್ನಾಗಿ ಬಂದಿದ್ದರಿಂದ ಇಳುವರಿಯೂ ಚೆನ್ನಾಗಿದೆ. ಆದರೆ, ಬೆಲೆ ಇಲ್ಲದ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಎದುರಾಗಿದೆ.
| ಮಹೇಶಪ್ಪ ಗಾಣಗೇರ, ಟೊಮ್ಯಾಟೊ ಬೆಳೆಗಾರ
ಈ ಹಿಂದೆ ಮಾರುಕಟ್ಟೆಗೆ ಬೇರೆ ಬೇರೆ ಕಡೆಯಿಂದ 500 ಬಾಕ್ಸ್ ಬರುತ್ತಿತ್ತು. ಇದೀಗ ಸ್ಥಳೀಯವಾಗಿ ಬೆಳೆದ ಟೊಮ್ಯಾಟೊ ಭರಲಾರಂಭಿಸಿದ್ದು, ಬೇಡಿಕೆಗಿಂತ ಹೆಚ್ಚಿನ ಬೆಳೆ ಬರುತ್ತಿದೆ. ಆದರೆ, ಖರೀದಿದಾರರು ಕಡಿಮೆ ಇರುವುದರಿಂದ ಅನಿವಾರ್ಯ ಎಂಬಂತೆ ಬೆಲೆ ಕುಸಿತವಾಗಿದೆ.
| ಮಹಾಂತೇಶ, ಟೊಮ್ಯಾಟೊ ಖರೀದಿದಾರ