| ಎನ್. ಮುನಿವೆಂಕಟೇಗೌಡ ಕೋಲಾರ
ಎಷ್ಟೇ ಮುತುವರ್ಜಿ ವಹಿಸಿ ಕೃಷಿ ಮಾಡಿದರೂ ಕೀಟ, ರೋಗ ಬಾಧೆ ಸರ್ವೆ ಸಾಮಾನ್ಯ. ಆದಾಯದ ಬಹುಪಾಲು ಹಣ ಇದಕ್ಕೆ ವ್ಯಯವಾಗುತ್ತದೆ. ಆದರೆ ಪ್ರತಿ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ ಎನ್ನುವಂತೆ ರೋಗಗಳ ನಿಯಂತ್ರಣಕ್ಕೆ ಪರಿಹಾರವಾಗಿ ಇದೀಗ ರೈತರು ಕಸಿ ಕೃಷಿಗೆ ಮುಂದಾಗಿದ್ದಾರೆ! ರಾಜ್ಯದಲ್ಲೇ ಅತಿ ಹೆಚ್ಚು ತರಕಾರಿ ಬೆಳೆಯುವ ಜಿಲ್ಲೆಯ ರೈತರು ಇದೀಗ ಹೊಸ ಪ್ರಯೋಗದಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಶ್ರೀನಿವಾಸಪುರ ತಾಲೂಕಿನ ಕೊತ್ತಪೇಟೆ ಗ್ರಾಮದ ರೈತ ನಾರಾಯಣಸ್ವಾಮಿ ಬದನೆ ಗಿಡದ ಕಾಂಡಕ್ಕೆ ಟೊಮ್ಯಾಟೊ ಗಿಡದ ಕಾಂಡ ಕಸಿ ಮಾಡಿದ ಸಸಿಗಳನ್ನು ತಂದು ಬೆಳೆಯುವ ಮೂಲಕ ಯಶಸ್ಸು ಕಂಡಿದ್ದಾರೆ. ತರಕಾರಿ ಬೆಳೆಯಲ್ಲಿ ಈ ಕಸಿ ಪ್ರಯೋಗ ಜಿಲ್ಲೆಯಲ್ಲೇ ಮೊದಲು ಎನ್ನಲಾಗಿದ್ದು, ಭರ್ಜರಿ ಇಳುವರಿ ಪಡೆಯುತ್ತಿದ್ದಾರೆ. ಟೊಮ್ಯಾಟೊಗೆ ಉತ್ತಮ ಬೆಲೆ ಇರುವ ಕಾರಣ ಉತ್ತಮ ಆದಾಯವನ್ನೂ ಗಳಿಸಿದ್ದಾರೆ.
ರೋಗಗಳಿಂದ ಪಾರಾಗಲು ಹೊಸ ಪ್ರಯೋಗ: ರೈತ ನಾರಾಯಣಸ್ವಾಮಿ ಈ ಹಿಂದೆ ಟೊಮ್ಯಾಟೊ, ಹೂವು ಕೋಸು, ಜೋಳ ಸೇರಿ ಹಲವು ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ರೋಗಗಳ ಕಾಟದಿಂದ ಬೆಳೆ ಆಗದೆ ಭಾರಿ ನಷ್ಟ ಅನುಭವಿಸಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಸಿ ಮಾಡಿದ ಟೊಮ್ಯಾಟೊ ಬೆಳೆಯುವ ಪದ್ಧತಿಯನ್ನು ತಿಳಿದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಕಸಿ ಮಾಡಿದ್ದ ರೈತರಿಂದ ಮಾಹಿತಿ ಪಡೆದು ಆ ಪ್ರಯೋಗವನ್ನು ಜಿಲ್ಲೆಯಲ್ಲಿ ಮಾಡುವ ಮೂಲಕ ಯಶ ಕಂಡಿದ್ದಾರೆ. ಆರಂಭದಲ್ಲಿ ಗೊಂದಲಕ್ಕೆ ಒಳಗಾದರೂ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಧೈರ್ಯ ಮಾಡಿ ಹೊಸ ಸಾಹಸಕ್ಕೆ ಕೈ ಹಾಕಿ ಸೈ ಎನಿಕೊಂಡಿದ್ದಾರೆ.
ಕಪ್ಪು ಬದನೆ ಸಾಹೋ ಸಮ್ಮಿಶ್ರ: ಆಂಧ್ರಪ್ರದೇಶದ ಕುಪ್ಪಂನ ಕೃಷಿ ವಿಜ್ಞಾನ ಕೇಂದ್ರದಿಂದ ಕಪ್ಪು ಬದನೆಕಾಯಿ ಗಿಡದ ಕಾಂಡದಲ್ಲಿ ಸಾಹೋ ಜಾತಿಯ ಟೊಮ್ಯಾಟೊ ಅಂಟು ಕಟ್ಟಿದ್ದ ತಳಿಯನ್ನು ತಂದಿದ್ದಾರೆ. ಒಂದು ಗಿಡಕ್ಕೆ 6.25 ಪೈಸೆ ನೀಡಲಾಗಿದೆ. ಸಾರಿಗೆ ವೆಚ್ಚ ಸೇರಿ ತೋಟಕ್ಕೆ ಬರುವಷ್ಟರಲ್ಲಿ ಒಂದು ಗಿಡಕ್ಕೆ 8 ರೂ. ವೆಚ್ಚವಾಗಿದೆ. ಎಕರೆಗೆ 5 ಸಾವಿರ ಗಿಡಗಳಂತೆ 2 ಎಕರೆಗೆ ನಾಟಿ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ, ಔಷಧ, ಕೂಲಿಯಾಳುಗಳ ಖರ್ಚು ಸೇರಿ ಒಟ್ಟು 6 ಲಕ್ಷ ರೂ. ಬಂಡವಾಳ ಹಾಕಿದ್ದೇನೆ ಎನ್ನುತ್ತಾರೆ ನಾರಾಯಣಸ್ವಾಮಿ.
ಏಕೆ ಈ ಪ್ರಯೋಗ: ಜಿಲ್ಲೆಯಲ್ಲಿ ಹೆಚ್ಚಾಗಿ ಟೊಮ್ಯಾಟೊ ಬೆಳೆಯುತ್ತಿರುವುದರಿಂದ ಭೂಮಿಯ ಫಲವತ್ತತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದರಿಂದಾಗಿ ಮತ್ತೆ ಮತ್ತೆ ಟೊಮ್ಯಾಟೊ ಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ರೀತಿ ಬದನೆ ಗಿಡಕ್ಕೆ ಕಸಿ ಮಾಡಿದ ಸಸಿಗಳನ್ನು ನಾಟಿ ಮಾಡಿದರೆ ಸಾಮಾನ್ಯ ಟೊಮ್ಯಾಟೊ ಸಸಿಗಿಂತ ಬದನೆ ಗಿಡದಲ್ಲಿ ಕಸಿ ಮಾಡಿದ ಟೊಮ್ಯಾಟೊ ಗಿಡ ಭೂಮಿಯ ಆಳಕ್ಕೆ ಬೇರುಗಳನ್ನು ಬಿಡುವುದರಿಂದ ಒಳಗಿನ ಫಲವತ್ತೆಯನ್ನು ಹೀರಿಕೊಳ್ಳುತ್ತದೆ. ಜತೆಗೆ ಮಳೆ, ಗಾಳಿ ಬಂದರೂ ನೆಲಕಚ್ಚುವುದಿಲ್ಲ, ಬದನೆ ಗಿಡ ಯಾವ ರೀತಿ ಗಟ್ಟಿಯಾಗಿ ಇರುತ್ತದಯೋ ಅದೇ ರೀತಿ ಈ ಗಿಡವೂ ಗಟ್ಟಿತನ ತೋರುತ್ತದೆ. ಹೆಚ್ಚು ಮಳೆಯಾದರೂ ಗಿಡ ಹಾಗೂ ಹಣ್ಣುಗಳು ಕರಗುವುದಿಲ್ಲ ಎನ್ನುತ್ತಾರೆ ರೈತ ನಾರಾಯಣಸ್ವಾಮಿ. ಟೊಮ್ಯಾಟೊ ಕಸಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ನಾರಾಯಣಸ್ವಾಮಿ ಅವರನ್ನು ಸಂಪರ್ಕಿಸಬಹುದು ಮೊ.ನಂ: 7760900536
ಕಸಿ ಮಾಡಿರುವ ಸಸಿಗಳನ್ನು ಪಡೆಯಬೇಕಾದಲ್ಲಿ ಒಂದು ತಿಂಗಳ ಮುಂಚಿತವಾಗಿ ಕುಪ್ಪಂ ಕೃಷಿ ವಿಜ್ಞಾನ ಕೇಂದ್ರಕ್ಕೆ ಬೇಡಿಕೆ ನೀಡಿ ಶುಲ್ಕ ಪಾವತಿಸಬೇಕು. ಅವರು ನಮಗೆ 2 ತಿಂಗಳ ನಂತರ ಸಸಿಗಳನ್ನು ನೀಡುತ್ತಾರೆ. ನಾಟಿ ಮಾಡಿದ ಎರಡೂವರೆ ತಿಂಗಳಿಗೆ ಮೊದಲ ಸ್ಯಾಂಪಲ್ ಬರುತ್ತದೆ, ನಂತರ 4 ರಿಂದ 5 ತಿಂಗಳಲ್ಲಿ ಫಸಲು ಬರಲಿದೆ.
| ರೈತ ನಾರಾಯಣಸ್ವಾಮಿ
ಕಸಿ ಮಾಡಿದ ಹೊಸ ತಳಿ ಉತ್ತಮ ಇಳುವರಿ ನೀಡುತ್ತದೆ. ಎಷ್ಟೇ ಮಳೆ ಬಂದರೂ, ತೇವ ಇದ್ದರೂ ಗಿಡಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಜತೆಗೆ ಗಿಡಗಳು ಬೇಗ ಒಣಗುವುದಿಲ್ಲ. ಕಾಂಡ ಯಾವಾಗಲೂ ಹಸಿರಾಗಿಯೇ ಇರುತ್ತದೆ. ಕಾಂಡದಲ್ಲಿ ಮತ್ತೆ ಮತ್ತೆ ಬದನೆ ಗಿಡ ಚಿಗುರೊಡೆಯುತ್ತಲೇ ಇರುತ್ತದೆ. ಅದನ್ನು ಆಗಾಗ ಕಿತ್ತು ಹಾಕುತ್ತಿರಬೇಕು. ಉತ್ತಮ ಮಟ್ಟದ ಹಣ್ಣು ಸಿಗುವುದರಿಂದ ಬೇರೆ ಬೇರೆ ರಾಜ್ಯಗಳಿಗೆ ಪಾರ್ಸಲ್ ಮಾಡುವುದಕ್ಕೂ ಈ ಟೊಮ್ಯಾಟೊ ಹೇಳಿ ಮಾಡಿಸಿದಂತಿದೆ.
| ಬೈರಾರೆಡ್ಡಿ, ಸಹಾಯಕ ತೋಟಗಾರಿಕೆ ಇಲಾಖೆ ನಿರ್ದೇಶಕ, ಶ್ರೀನಿವಾಸಪುರ
ಎರಡು ಎಕರೆಗೆ 15 ಲಕ್ಷ ರೂ. ಆದಾಯ
ಗಿಡ ನಾಟಿ ಮಾಡಿದ 2 ತಿಂಗಳಿಗೆ ಫಸಲು ಆರಂಭವಾಗುತ್ತದೆ. ಮಧ್ಯಮ ಗಾತ್ರದಲ್ಲಿ ಹಣ್ಣು ಸಿಗುತ್ತಿದ್ದು, ಈವರೆಗೆ 15 ಬಾರಿ ಕೊಯ್ಲು ಮಾಡಿದ್ದಾರೆ. ಇನ್ನೂ ಮೂರ್ನಾಲ್ಕು ಕೊಯ್ಲು ಸಿಗುತ್ತದೆ. ಸಾಮಾನ್ಯ ಟೊಮ್ಯಾಟೊ ಬೆಳೆಯಾದರೆ ಒಂದೂವರೆಯಿಂದ 2 ತಿಂಗಳವರೆಗೆ ಹಣ್ಣು ಬಿಡುತ್ತವೆ. ಆದರೆ, ಕಸಿ ಮಾಡಿದ ಗಿಡದಲ್ಲಿ 4 ರಿಂದ 5 ತಿಂಗಳು ಫಸಲು ತೆಗೆದುಕೊಳ್ಳಬಹುದು. ವಿಶೇಷ ಎಂದರೆ ತಾಲೂಕಿನಲ್ಲಿ ಟೊಮ್ಯಾಟೊ ಬೆಳೆಯೇ ಆಗುವುದಿಲ್ಲ. ಆದರೆ ಈ ಗಿಡಗಳಿಗೆ ವೈರಸ್ ಕಾಟ ಇದ್ದರೂ ಇಳುವರಿ ಅರ್ಧಕ್ಕೆ ಅರ್ಧ ಕಡಿಮೆಯಾಗಿದೆ. ಆದರೂ ಈವರೆಗೆ 15 ಲಕ್ಷ ರೂ. ಆದಾಯ ಬಂದಿದೆ. ಇನ್ನೂ ನಾಲ್ಕು ಕೊಯ್ಲು ಸಿಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿರುವ ಕಾರಣ ಇನ್ನೂ 2 ಲಕ್ಷ ರೂ. ಆದಾಯ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!