ತೊಕ್ಕೊಟ್ಟು ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ

ಉಳ್ಳಾಲ: ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿ ಕೊನೆಗೂ ಕಾಮಗಾರಿ ಪೂರ್ಣಗೊಳಿಸಿದ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಮೇಲ್ಸೇತುವೆ ವಾಹನ ಸಂಚಾರಕ್ಕೆ ಗುರುವಾರ ಮುಕ್ತಗೊಂಡಿತು.
ತಲಪಾಡಿ-ಕುಂದಾಪುರ ನಡುವಿನ ತೊಕ್ಕೊಟ್ಟುವಿನಲ್ಲಿ ಚತುಷ್ಪಥ ರಸ್ತೆ ಪ್ರಯುಕ್ತ ನಿರ್ಮಾಣಗೊಂಡಿರುವ ಮೇಲ್ಸೇತುವೆಯನ್ನು ಸಂಸದ ನಳಿನ್‌ಕುಮಾರ್ ಕಟೀಲು ಉದ್ಘಾಟಿಸಿದರು.

ತಾಂತ್ರಿಕ ಕಾರಣ, ಗುತ್ತಿಗೆ ಸಂಸ್ಥೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದ ಕಾರಣ ಕಾಮಗಾರಿ ವಿಳಂಬವಾಗಿತ್ತು. ಹತ್ತಾರು ಟೀಕೆಗಳ ನಡುವೆ ಈಗ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಲಭಿಸಿದ್ದು, ಹಲವು ವರ್ಷಗಳ ಕನಸು ನನಸಾಗಿದೆ ಎಂದು ನಳಿನ್ ಹೇಳಿದರು.

ಮೇಲ್ಸೇತುವೆ ಉದ್ಘಾಟನೆ ಪ್ರಯುಕ್ತ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಬಹುದು ಎನ್ನುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಬೋಳಿಯಾರ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಉಳ್ಳಾಲ್, ಚಂದ್ರಹಾಸ್ ಉಚ್ಚಿಲ್, ಹರಿಯಪ್ಪ ಸಾಲಿಯಾನ್, ಸುರೇಶ್ ಆಳ್ವ ಸಾಂತ್ಯಗುತ್ತು ಇನ್ನಿತರರಿದ್ದರು.

ವಾಹನ ಸವಾರರಲ್ಲಿ ಗೊಂದಲ: ತೊಕ್ಕೊಟ್ಟು ಮೇಲ್ಸೇತುವೆಗೆ ಸಂಬಂಧಿಸಿ ಹಲವು ಬೇಡಿಕೆಗಳಿದ್ದು, ಸಚಿವ ಯು.ಟಿ.ಖಾದರ್ ಹಾಗೂ ಸ್ಥಳೀಯ ಸಂಘಟನೆಗಳು ಮಾತುಕತೆ ನಡೆಸಿದೆ. ಉಳ್ಳಾಲಕ್ಕೆ ಹೋಗುವ ಸರ್ವೀಸ್ ರಸ್ತೆ ಸಮಸ್ಯೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೊಕ್ಕೊಟ್ಟು ಬೈಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಬಗ್ಗೆ ಸಚಿವರ ಜತೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ತೆಗೆದುಕೊಳ್ಳಲಾಗುವುದು. ಮೇಲ್ಸೇತುವೆ ಸೌಂದರ್ಯಗೊಳಿಸಲು ಸುರತ್ಕಲ್- ಕೂಳೂರು ಮಾದರಿ ಅನುಸರಿಸಲಾಗುವುದು ಎಂದು ನಳಿನ್ ತಿಳಿಸಿದರು. ಸೇತುವೆ ಉದ್ಘಾಟನೆಗೊಂಡ ಬಳಿಕ ಸರ್ವೀಸ್ ರಸ್ತೆಯಲ್ಲೂ ಮೇಲ್ಸೇತುವೆಯಲ್ಲೂ ಭಾರಿ ವಾಹನ ಸಂಚಾರ ಕಂಡುಬಂತು. ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿದ್ದು, ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿತು. ಉಳ್ಳಾಲ ತಿರುವು ಹಾಗೂ ಕಲ್ಲಾಪು ಸಮೀಪವಿರುವ ನಾಗನ ಕಟ್ಟೆ ಬಳಿ ವಾಹನ ಸವಾರರು ಗೊಂದಲಕ್ಕೀಡಾಗುತ್ತಿದ್ದು, ಅಪಾಯದ ಆತಂಕವಿದೆ.

ಪಂಪ್‌ವೆಲ್ ಫ್ಲೈಓವರ್ ಶೀಘ್ರ: ನವಯುಗ ಸಂಸ್ಥೆಗೆ ಆರ್ಥಿಕ ಸಮಸ್ಯೆ ಎದುರಾದಾಗ ಕೇಂದ್ರ ಹೆದ್ದಾರಿ ಸಚಿವರು 58 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿ ಮಾರ್ಚ್‌ನಿಂದ ಕಾಮಗಾರಿಗೆ ವೇಗ ನೀಡಿದ್ದರು. ಈಗ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಮುಗಿದಿದೆ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯೂ ಶೀಘ್ರ ಪೂರ್ಣಗೊಳಿಸಲು ಸರ್ಕಾರ 55 ಕೋಟಿ ರೂ. ಸಾಲ ಕೊಟ್ಟಿದ್ದು, ಬಿಡುಗಡೆಯಾಗಬೇಕಿದ್ದ 7 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ನಳಿನ್ ತಿಳಿಸಿದರು.

One Reply to “ತೊಕ್ಕೊಟ್ಟು ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ”

Leave a Reply

Your email address will not be published. Required fields are marked *