30 ಕೇಂದ್ರಗಳಲ್ಲಿ ತೊಗರಿ ಖರೀದಿ

ಬೀದರ್: ಕೇಂದ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ಜಿಲ್ಲಾದ್ಯಂತ ತೊಗರಿ ಖರೀದಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಜಿಲ್ಲೆಯ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ(ಪಿಕೆಪಿಎಸ್) ಮೂಲಕ ಖರೀದಿಗೆ ಜಿಲ್ಲಾಡಳಿತ ನಿರ್ಧರಿಸಿದೆ.

ಎಲ್ಲ ತಾಲೂಕುಗಳ ಆಯ್ದ 30 ಪಿಕೆಪಿಎಸ್​ಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ತೊಗರಿ ಖರೀದಿಗೆ ನೋಂದಣಿ ಆರಂಭವಾಗಿದ್ದು, ಜ.14 ಕೊನೆಯ ದಿನವಾಗಿದೆ. 15ರ ನಂತರ ಖರೀದಿ ಪ್ರಕ್ರಿಯೆ ಶುರುವಾಗಲಿದೆ.

ಕ್ವಿಂಟಾಲ್​ಗೆ 5675 ರೂ. ದರದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಮಾರ್ಗಸೂಚಿಗಳ ಅನ್ವಯ ಬೀದರ್, ಕಲಬುರಗಿ, ಯಾದಗಿರಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಬೆಳಗಾವಿ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ತೊಗರಿ ಖರೀದಿಸಲು ಸಹಕಾರ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಎನ್.ಗೋಪಾಲಯ್ಯ ಆದೇಶಿಸಿದ್ದಾರೆ. ಕೇಂದ್ರದ ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ ಕ್ವಿಂಟಾಲ್​ಗೆ 425 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಹೀಗಾಗಿ ಕ್ವಿಂಟಾಲ್ ತೊಗರಿಗೆ 6100 ರೂ. ರೈತರ ಕೈ ಸೇರಲಿದೆ.

ಕೇಂದ್ರದ ನಾಫೆಡ್, ಎಫ್​ಸಿಐ ಸಂಸ್ಥೆಯನ್ನು ಖರೀದಿ ಏಜೆನ್ಸಿ ಹಾಗೂ ಮಾಕರ್್ಫೆಡ್ ಮತ್ತು ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿಯನ್ನು ರಾಜ್ಯದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಬೀದರ್ ಸೇರಿ ತೊಗರಿ ಬೆಳೆಯುವ 9 ಜಿಲ್ಲೆಗಳಿಂದ ಎಕರೆಗೆ 5 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ತೊಗರಿ ಖರೀದಿ ನಡೆಯಲಿದೆ.

ರಾಜ್ಯ ಸರ್ಕಾರದ ಆದೇಶದಂತೆ ಇತ್ತೀಚೆಗೆ ಡಿಸಿ ಡಾ.ಎಚ್.ಆರ್. ಮಹಾದೇವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಆಯ್ದ 30 ಪಿಕೆಪಿಎಸ್ಗಳಲ್ಲಿ ತೊಗರಿ ಖರೀದಿಗೆ ತೀರ್ಮಾನಿಸಲಾಗಿದೆ. ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ ತಲಾ 6 ಸೇರಿ 30 ಪಿಕೆಪಿಎಸ್ಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ.

ಕ್ವಿಂಟಾಲ್​​ಗೆ ರು. 6100 ರೈತರಿಗೆ ಸಮಾಧಾನ

ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ದರ ತೀವ್ರ ಕುಸಿದಿದ್ದರಿಂದ ರೈತ ವಲಯ ಘಾಸಿಗೊಂಡಿದೆ. ಕಳೆದ ವರ್ಷ 5ರಿಂದ 6 ಸಾವಿರ ರೂ. ಇದ್ದ ದರ ಪ್ರಸಕ್ತ 4000-4500ಕ್ಕೆ ಕುಸಿದಿದೆ. ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಇರುವ ಕಾರಣ ರೈತರನ್ನು ತೀವ್ರ ಚಿಂತೆಗೆ ತಳ್ಳಿತ್ತು. ಕೇಂದ್ರ ಸರ್ಕಾರ 5675 ರೂ. ಬೆಂಬಲ ಬೆಲೆಗೆ ರಾಜ್ಯ ಸರ್ಕಾರದ 425 ರೂ. ಪ್ರೋತ್ಸಾಹ ಧನ ಸೇರಿ ಕ್ವಿಂಟಾಲ್​ಗೆ 6100 ರೂ. ಸಿಗಲಿದೆ. ಇದು ರೈತರಿಗೆ ಪೂರ್ಣ ಖುಷಿ ಇಲ್ಲದಿದ್ದರೂ ಸಮಾಧಾನ ತಂದಿದೆ. ರಾಜ್ಯದಲ್ಲೇ ಕಲಬುರಗಿಯಲ್ಲಿ ಅತಿ ಹೆಚ್ಚು ಹಾಗೂ ನಂತರದ ಸ್ಥಾನ ಬೀದರ್ ಜಿಲ್ಲೆಯಲ್ಲಿ ತೊಗರಿ ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟು ಬೇಡಿಕೆಯ ಶೇ.65 ತೊಗರಿ ಈ ಎರಡೇ ಜಿಲ್ಲೆಗಳು ಉತ್ಪಾದಿಸುವುದು ವಿಶೇಷ. ತೊಗರಿಗೆ ಕನಿಷ್ಠ 8 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬುದು ರೈತರ ಪ್ರಬಲ ಬೇಡಿಕೆಯಾಗಿದೆ.

ಇಲ್ಲಿವೆ ಖರೀದಿ ಕೇಂದ್ರ

ಬೀದರ್ ತಾಲೂಕಿನ ಆಣದೂರ, ಮನ್ನಳ್ಳಿ, ಬಗದಲ್, ಮಾಳೇಗಾಂವ್, ಜನವಾಡ ಹಾಗೂ ಕಮಠಾಣ. ಭಾಲ್ಕಿ ತಾಲೂಕಿನಲ್ಲಿ ಲಖನಗಾಂವ್, ದಾಡಗಿ, ಸಾಯಗಾಂವ, ಖಟಕಚಿಂಚೋಳಿ, ನಿಟ್ಟೂರ್(ಬಿ) ಹಾಗೂ ಹಲಬರ್ಗಾ. ಹುಮನಾಬಾದ್ ತಾಲೂಕಿನಲ್ಲಿ ಚಿಟಗುಪ್ಪ, ದುಬಲಗುಂಡಿ, ಹಳ್ಳಿಖೇಡ್(ಬಿ), ನಿರ್ಣಾ, ಮನ್ನಾಎಖೇಳ್ಳಿ ಹಾಗೂ ಬೇಮಳಖೇಡ. ಔರಾದ್ ತಾಲೂಕಿನ ವಡಗಾಂವ್(ಡಿ), ಸಂತಪುರ, ದಾಬಕಾ, ಕಮಲನಗರ, ಚಿಂತಾಕಿ ಹಾಗೂ ಠಾಣಾಕುಶನೂರ. ಬಸವಕಲ್ಯಾಣ ತಾಲೂಕಿನ ಹುಲಸೂರ, ಕೋಹಿನೂರ, ರಾಜೇಶ್ವರ, ನಾರಾಯಣಪುರ, ಮುಡಬಿ ಹಾಗೂ ಮಂಠಾಳ ಪಿಕೆಪಿಎಸ್​ಗಳಲ್ಲಿ ಖರೀದಿ ಕೆಂದ್ರ ತೆರೆಯಲಾಗಿದೆ.

ಉದ್ದು, ಸೋಯಾಬೀನ್ 150 ಕ್ವಿಂಟಾಲ್ ಖರೀದಿ!

ಬೆಂಬಲ ಬೆಲೆಯಲ್ಲಿ ಜಿಲ್ಲಾದ್ಯಂತ ಕೇಂದ್ರ ತೆರೆದರೂ ಸೋಯಾಬೀನ್, ಉದ್ದು ಖರೀದಿಗೆ ರೈತರು ನಿರಾಶಕ್ತಿ ತೋರಿಸಿದ್ದಾರೆ. ಸೋಯಾ, ಉದ್ದು ಖರೀದಿ ಪ್ರಕ್ರಿಯೆ ಮುಗಿದಿದ್ದು, ಕೇವಲ 150 ಕ್ವಿಂಟಾಲ್ ಖರೀದಿಸಲಾಗಿದೆ. ಮನ್ನಾಎಖೇಳ್ಳಿ ಹಾಗೂ ಹಳ್ಳಿಖೇಡ್(ಬಿ) ಕೇಂದ್ರದಿಂದ 50 ಕ್ವಿಂಟಾಲ್ ಸೋಯಾ ಹಾಗೂ 100 ಕ್ವಿಂಟಾಲ್ ಉದ್ದು ಮಾತ್ರ ಖರೀದಿ ಆಗಿದೆ. ಸೋಯಾಬೀನ್​ಗೆ 3399 ರೂ., ಉದ್ದಿಗೆ 5600 ರೂ. ಬೆಂಬಲ ಬೆಲೆ ನಿಗದಿಯಾಗಿತ್ತು. ಮುಕ್ತ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚು ಧಾರಣೆ ಇರುವ ಕಾರಣ ಖರೀದಿ ಕೇಂದ್ರದತ್ತ ರೈತರು ಚಿತ್ತ ಹರಿಸಿಲ್ಲ.