ಸಾಂಪ್ರದಾಯಿಕ ಹಾಗೂ ವಾಣಿಜ್ಯ ಬೆಳೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಹೆಸರುವಾಸಿ. ಹೆಚ್ಚು ತಾಪಮಾನ ಹೊಂದಿರುವ ಈ ಪ್ರದೇಶದಲ್ಲಿ ಇಲ್ಲಿನ ಭೌಗೋಳಿಕ ಸ್ಥಿತಿಗೆ ಅನುಗುಣವಾಗಿಯೇ ಬೆಳೆಗಳನ್ನು ಬೆಳೆಯಲಾಗುತ್ತದೆ. ಸೂರ್ಯನಗರಿ, ಬಿಸಿಲೂರು ಎಂದು ಕರೆಯಲ್ಪಡುವ ಕಲಬುರಗಿ ತೊಗರಿ ಕಣಜವಾಗಿ ಖ್ಯಾತಿಗಳಸಿದೆ ಮತ್ತು ಈ ತೊಗರಿಯ ಕಮಾಲ್ ಜಿಲ್ಲೆ, ರಾಜ್ಯಕ್ಕೆ ಸೀಮಿತವಾಗಿ ಇರದೆ ದಕ್ಷಿಣ ಭಾರತಕ್ಕೂ ವ್ಯಾಪಿಸಿದೆ. 2019ರ ಆಗಸ್ಟ್ನಲ್ಲಿ ಕಲಬುರಗಿ ತೊಗರಿಗೆ ಜಿಐ ಟ್ಯಾಗ್ ಪ್ರಾಪ್ತವಾಗಿದೆ.
ಇಲ್ಲಿನ ತೊಗರಿ ಬೇಳೆಗೆ ಜನಸಾಮಾನ್ಯರಿಂದ ಹಿಡಿದು ದೊಡ್ಡ ಹೋಟೆಲ್ಗಳವರೆಗೂ ಬೇಡಿಕೆ ಇದೆ. ತೊಗರಿ ಬೇಳೆಯ ಸಾಂಬಾರ್ನ (ಸ್ಥಳೀಯ ಭಾಷೆಯಲ್ಲಿ ಹುಳಿ) ರುಚಿಗೆ ಸರಿಸಾಟಿಯೇ ಇಲ್ಲ. ದಿನನಿತ್ಯದ ಸಾಂಬಾರು, ರಸಂ ಅಥವಾ ಸಾರಿನ ಸಹಚಾರಿಯಾಗಿ ತೊಗರಿ ಮನೆ-ಮನೆಗಳಲ್ಲೂ ಸ್ಥಾನ ಪಡೆದುಕೊಂಡಿದ್ದು, ಊಟದ ತಟ್ಟೆಯ ಆಪ್ತಸಂಗಾತಿಯಾಗಿದೆ. ತೊಗರಿ ಬೇಳೆಯ ಹೋಳಿಗೆ- ಒಬ್ಬಟ್ಟಿನಲ್ಲೂ, ಜೊತೆಗೆ ಅದರದ್ದೇ ಆದ ವಿಶೇಷವಾದ ಸಾರಿನ ಪರಿಮಳದಲ್ಲೂ ಶಾಶ್ವತ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ಬಳಸಲಾಗುವ ಬೇಳೆ-ಕಾಳುಗಳಲ್ಲಿ ತೊಗರಿಗೆ ಮೊದಲ ಸ್ಥಾನ. ಕಡಲೆ ನಂತರದ ಸ್ಥಾನದಲ್ಲಿದೆ.
ಇ-ಕಾಮರ್ಸ್ಗೂ ಪ್ರವೇಶ…
ಸಂತೆ, ಕಿರಾಣಾ ಅಂಗಡಿಗಳ ಸಾಂಪ್ರದಾಯಿಕ ಮಾರಾಟ ವಿಧಾನಗಳಿಗೆ ಸೀಮಿತವಾಗಿದ್ದ ತೊಗರಿ ಬೇಳೆ ಇತ್ತೀಚೆಗೆ ಇ-ಕಾಮರ್ಸ್ಗೂ ಪ್ರವೇಶ ಪಡೆಯುವ ಮೂಲಕ ಖದರ್ ಹೆಚ್ಚಿಸಿಕೊಂಡಿದೆ. ಕಲಬುರಗಿಯ ‘ಭೀಮಾ ಬ್ರ್ಯಾಂಡ್’ ತೊಗರಿಯನ್ನು (ಪಟಕಾ ತೊಗರಿ ಬೆಳೆ) ಇ-ಕಾಮರ್ಸ್ ಮೂಲಕ ದೇಶಾದ್ಯಂತ ಮಾರಾಟ ಮಾಡಲಾಗುತ್ತಿದೆ. ತಿಂಗಳಿಗೆ ಕನಿಷ್ಠ 250 ಆರ್ಡರ್ಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿಯು ಅಂಚೆ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪಡಿತರದಲ್ಲಿ ತೊಗರಿ ಬೇಳೆ ವಿತರಣೆ ಮಾಡುವ ಬಗ್ಗೆಯೂ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಪಡಿತರದಲ್ಲಿ ಸೇರ್ಪಡೆಯಾದರೆ ರೈತರಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ಅನುಕೂಲ.
ಗುಣಮಟ್ಟದ ಗರಿ-ಗುಣಮಟ್ಟದಲ್ಲಿ ಕಲಬುರಗಿಯ ತೊಗರಿ
ಉತ್ಕೃಷ್ಟವಾಗಿದ್ದು, ಹೊರಗಿನ ರಾಜ್ಯಗಳಲ್ಲೂ ಬೇಡಿಕೆ ಹೊಂದಿದೆ. ಪಕ್ಕದ ಬೀದರ್ ಜಿಲ್ಲೆಯಲ್ಲಿ ಕೆಲ ಬೆಳೆಗಳ ಮಧ್ಯೆ ತೊಗರಿಯನ್ನು ಬೆಳೆಯಲಾಗುತ್ತದೆ. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಪೂರ್ತಿ ಬೆಳೆಯಾಗಿ ತೊಗರಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ತೊಗರಿಯನ್ನು ಅವಲಂಬಿಸಿಯೇ ಸ್ಥಳೀಯ ಉದ್ಯಮವೂ ವಿಸ್ತಾರಗೊಂಡಿದೆ. ಕಲಬುರಗಿ ಜಿಲ್ಲೆಯೊಂದರಲ್ಲೇ ನೂರಕ್ಕೂ ಹೆಚ್ಚು ದಾಲ್ ಮಿಲ್ಗಳು ಇವೆ. ತೊಗರಿಯನ್ನು ಪಾಲಿಶ್ ಮಾಡಿ, ಬೇಳೆಯಾಗಿಸುವ ಮಿಲ್ಗಳು ಸ್ಥಳೀಯ ಜನರಿಗೆ ಉದ್ಯೋಗವನ್ನೂ ಸೃಷ್ಟಿಸುತ್ತಿವೆ.
ಬಡವರ ಬೆಳೆಯೂ ಹೌದು
ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬಿತ್ತನೆಗೆ ಯೋಗ್ಯವಾದ ಪ್ರದೇಶ 8.52 ಲಕ್ಷ ಹೆಕ್ಟೇರ್ನಷ್ಟಿದೆ. ಈ ಜಿಲ್ಲೆಯೊಂದರಲ್ಲೇ ಪ್ರತಿ ವರ್ಷ ಸರಾಸರಿ 5-6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗುತ್ತಿದೆ (ಕರ್ನಾಟಕದಲ್ಲಿ 10 ಲಕ್ಷ ಹೆಕ್ಟೇರ್ಗಳಲ್ಲಿ). ಪ್ರತಿ ವರ್ಷ 40ರಿಂದ 50 ಲಕ್ಷ ಕ್ವಿಂಟಾಲ್ ತೊಗರಿ ಉತ್ಪಾದನೆಯಾಗುತ್ತಿದೆ. ಹಾಗಾಗಿ, ರಾಜ್ಯದಲ್ಲಿ ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆಗಳ ಪೈಕಿ ಕಲಬುರಗಿ ಅಗ್ರಸ್ಥಾನದಲ್ಲಿದೆ. ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಮಣ್ಣಿನಲ್ಲಿರುವ ಸುಣ್ಣದ ಕಲ್ಲಿನ ಅಂಶವು ತೊಗರಿಗೆ ಅಗತ್ಯವಾದ ಖನಿಜಾಂಶಗಳನ್ನು ಪೂರೈಸುತ್ತದೆ. ಹಾಗಾಗಿಯೇ, ಉಳಿದ ಭಾಗಗಳಲ್ಲಿ ಬೆಳೆದ ತೊಗರಿಗೆ ಹೋಲಿಸಿದರೆ ಕಲಬುರಗಿ ಸೀಮೆಯ ತೊಗರಿ ಬೇಳೆಯು ಗಾತ್ರದಲ್ಲಿ ದಪ್ಪವಾಗಿರುತ್ತದೆ.
ಇದು ಮಾರುಕಟ್ಟೆಯಲ್ಲಿ ಪಟಗಾ ತೊಗರಿ (ಉತ್ಕೃಷ್ಟ ಗುಣಮಟ್ಟ) ಎಂದೇ ಖ್ಯಾತವಾಗಿದೆ. ಅಲ್ಲದೆ, ಕಲಬುರಗಿ ಜಿಲ್ಲೆಯ ತೊಗರಿಯು ಸುಣ್ಣದ ಕಲ್ಲುಗಳಿರುವ ಜಮೀನಿನಲ್ಲಿ ಬೆಳೆಯುವುದರಿಂದ ಹೇರಳವಾಗಿ (ಶೇಕಡ 21-22) ಪ್ರೊಟೀನ್ ಹೊಂದಿದ್ದು, ಆರೋಗ್ಯಕ್ಕೂ ಪೂರಕ. ಕ್ಯಾಲ್ಸಿಯಂ ಸಹ ಹೊಂದಿದ್ದು, ಕ್ಯಾಲ್ಸಿಯಂ ಇರುವ ಗುಣವನ್ನೇ ಪ್ರಮುಖವಾಗಿಸಿ, ಜಿಐ ಟ್ಯಾಗ್ ಪ್ರಾಪ್ತವಾಗಿದೆ. ಬಹುವಾರ್ಷಿಕ ಸಸ್ಯವಾಗಿದ್ದರೂ. ವಾರ್ಷಿಕ ಬೆಳೆಯಾಗಿ ಒಗ್ಗಿಕೊಂಡಿದೆ. ಅಲ್ಪಾವಧಿ ತಳಿಗಳು 3ರಿಂದ 4 ತಿಂಗಳಲ್ಲಿ ಮತ್ತು ಮಧ್ಯಮಾವಧಿ, ದೀರ್ಘಾವಧಿ ತಳಿಗಳು 6ರಿಂದ 11 ತಿಂಗಳಲ್ಲಿ ಫಸಲು ನೀಡುತ್ತವೆ. 500ರಿಂದ 1000 ಮಿ.ಮೀ. ಮಳೆಯ ಪ್ರದೇಶದಲ್ಲಿ ತೊಗರಿ ಚೆನ್ನಾಗಿ ಬೆಳೆಯಬಲ್ಲದು.
ಆದರೆ, 300 ಮಿ.ಮೀ.ಗಿಂತ ಕಡಿಮೆ ಮಳೆ ಬೀಳುವಲ್ಲಿಯೂ ಬೆಳೆಯುವುದರಿಂದ ಇದು ಬಡವರ ಬೆಳೆಯಾಗಿಯೂ, ರೈತರ ಕೈಹಿಡಿದಿದೆ. ಕೆಲವೆಡೆ ಅಂತರ ಬೆಳೆಯಾಗಿಯೂ ಬೆಳೆಯಲಾಗುತ್ತದೆ. ತೊಗರಿಯ ಎಳೆ ಕಾಳುಗಳು ವಿಟಮಿನ್ ‘ಸಿ’ನಿಂದ ಸಮೃದ್ಧ. ಕಲಬುರಗಿಯ ತೊಗರಿ ಹಾಗೂ ಬೇಳೆಗೆ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ.
ಆಧಾರ್ ಕಾರ್ಡ್ ಬಳಕೆದಾರರೇ ಇದೇ ನಿಮಗೆ ಕಡೆಯ ದಿನಾಂಕ! ತಪ್ಪಿದರೆ ರದ್ದಾಗಬಹುದು ಇರಲಿ ಎಚ್ಚರ