ರಾಷ್ಟ್ರಗುರು ವೇದವ್ಯಾಸ

ಭಗವಾನ್ ವೇದವ್ಯಾಸರು ವೈಶಾಖ ಶುದ್ಧ ದ್ವಾದಶಿಯಂದು ಯಮುನಾದ್ವೀಪದಲ್ಲಿ ಪ್ರಾದುರ್ಭವಿಸಿದರು. ಅದರಿಂದಲೇ ಅವರಿಗೆ ‘‘ದ್ವೆ ೖಪಾಯನ’’ ಎಂಬ ಹೆಸರು ಪ್ರಾಪ್ತವಾಯಿತು. ಋಷಿಗಳ ಆಹಾರವೆನಿಸಿದ ಬೋರೆಹಣ್ಣುಗಳನ್ನು (ಬದರಿ) ನೀಡುವ ಮರಗಳ ಪ್ರದೇಶವನ್ನೇ ಆಶ್ರಮರೂಪದಲ್ಲಿ ಸ್ವೀಕರಿಸಿದ್ದರಿಂದ ‘ಬಾದರಾಯಣ’ ಎಂದು ಪ್ರಖ್ಯಾತರಾದರು. ವೇದವನ್ನು ‘ವಿಕರ್ಷಣ’ (ವಿಭಾಗ) ಮಾಡಿದ್ದರಿಂದ ನೀಲಮೇಘಶ್ಯಾಮರಾದ ವ್ಯಾಸರಿಗೆ ‘ಕೃಷ್ಣ’ ಎಂಬ ಹೆಸರು ಪ್ರಾಪ್ರವಾಯಿತು. ‘ವೇದಾನ್ ವ್ಯಸತೀತಿ ವೇದವ್ಯಾಸಃ’ – ಎಂದು ‘ವೇದವ್ಯಾಸ’ ಶಬ್ದವನ್ನು ವಿಶ್ಲೇಷಣೆ ಮಾಡಿದಾಗ ಲಭ್ಯವಾಗುವ ಅರ್ಥ ‘ವೇದ ವಿಭಾಗ ಮಾಡಿದವರು’ ಎಂದು.

ಮೂಲವೇದವೊಂದೇ ಮೊದಲಿತ್ತು. ತ್ರೇತಾಯುಗದಲ್ಲಿ ನಾಲ್ಕು ವಿಭಾಗಗಳನ್ನು ಹೊಂದಿತು. ದ್ವಾಪರಯುಗದಲ್ಲಿ ಆ ವೇದಗಳೂ ಬುದ್ಧಿಗೆ ಗ್ರಹಣ ಮಾಡಲು ಅಶಕ್ಯವಾದವು. ವೇದಜ್ಞಾನದ ರಕ್ಷಣೆಗಾಗಿ ಬ್ರಹ್ಮಾದಿಗಳು ಪ್ರಾರ್ಥಿಸಿದಾಗ ಭಗವಾನ್ ನಾರಾಯಣನು ಪರಾಶರರಿಂದ ಸತ್ಯವತಿಯಲ್ಲಿ ವ್ಯಾಸರೂಪದಿಂದ ಪ್ರಕಟನಾದನು. ವೇದವಿದ್ಯೆಯು ಯಾರಿಗೆ ಎಟುಕಲಾರದೋ ಅಂತಹವರಿಗೂ ಜ್ಞಾನದಲ್ಲಿ, ಮೋಕ್ಷದಲ್ಲಿ ಅರ್ಹತೆ ಇರುವುದರಿಂದ ಅವರ ಜ್ಞಾನಕ್ಕಾಗಿ ಮಹಾಭಾರತ-ಭಾಗವತಾದಿ ಸಾತ್ತಿ್ವಕ ಪುರಾಣಗಳನ್ನು ರಚಿಸಿದರು.

ಮಹಾಭಾರತವನ್ನು ರಚಿಸಿ ಮನುಷ್ಯಲೋಕದಲ್ಲಿ ಅದರ ಪ್ರಸಾರಕ್ಕಾಗಿ ವೈಶಂಪಾಯನರನ್ನು ನಿಯೋಜಿಸಿದರು. ಮನುಷ್ಯ-ಗಂಧರ್ವಾದಿ ವರ್ಗದಲ್ಲೂ ಅದರ ಪ್ರಸಾರಕ್ಕಾಗಿ ತನ್ನ ಪುತ್ರನಾದ ಶುಕರನ್ನು ನಿಯೋಜಿಸಿದರು. ನಾರದರಿಗೆ ಮಹಾಭಾರತಾದಿಗಳ ಪಾಠ ಹೇಳಿ ದೇವಲೋಕದಲ್ಲಿ ಅವುಗಳ ಪ್ರಸಾರಕ್ಕಾಗಿ ಅವರನ್ನು ನಿಯೋಜಿಸಿದರು. ಪಶುಪತಿ ಪ್ರಣೀತವಾದ ಪಾಶುಪತಶಾಸ್ತ್ರವನ್ನು ಆಧರಿಸಿ ಶಿವಪಾರಮ್ಯಪರವಾದ ಶೈವಪುರಾಣಗಳನ್ನು ರಚಿಸಿದರು. ಪಂಚರಾತ್ರಾಗಮವನ್ನು ಆಧರಿಸಿ ವಿಷ್ಣುಪಾರಮ್ಯಪರವಾದ ಸಾತ್ವಿಕ ಪುರಾಣಗಳನ್ನು ತತ್ತ್ವಜ್ಞಾನಕ್ಕಾಗಿ ರಚಿಸಿದರು. ವೇದದಲ್ಲಿ ಮೇಲ್ನೋಟಕ್ಕೆ ಕಾಣುವ ಅರ್ಥಗಳನ್ನು ಆಧರಿಸಿ ಇನ್ನಿತರ ಪುರಾಣ ಸಮುದಾಯವನ್ನು ರಚಿಸಿದರು.

ಐತಿಹಾಸಿಕ ಘಟನಾವಳಿ ನಡೆದ ನಂತರ ಅದರ ಬಗ್ಗೆ ಬೆಳಕನ್ನು ಚೆಲ್ಲಬಲ್ಲ ಗ್ರಂಥವನ್ನು ರಚಿಸಿದ ಮಹನೀಯರು ಸಿಗುತ್ತಾರೆ. ಆದರೆ ವ್ಯಾಸರು ಐತಿಹಾಸಿಕ ಪುರುಷರಾದ ಧೃತರಾಷ್ಟ್ರ – ಪಾಂಡು ಮೊದಲಾದವರು ಜನಿಸುವುದಕ್ಕಿಂತ ಮೊದಲೇ ಅವರ ಪುತ್ರರ ಚರಿತ್ರೆಯನ್ನು ದಿವ್ಯಜ್ಞಾನಚಕ್ಷುಸ್ಸಿನಿಂದ ಮೊದಲೇ ನೋಡಿ ಅದರ ಬಗ್ಗೆ ಐತಿಹಾಸಿಕ ಗ್ರಂಥವೆನಿಸಿದ ಮಹಾಭಾರತವನ್ನು ರಚಿಸಿದರು. ಭಗವಾನ್ ವೇದವ್ಯಾಸರು ಸದಸತ್ಪಾತ್ರರ ಚಾರಿತ್ರ್ಯನ್ನು ಮಹಾಭಾರತದಲ್ಲಿ ತೋರಿಸುವ ಮೂಲಕ ಮಾನವೀಯ ಜೀವನ ಮೌಲ್ಯ ಹಾಗೂ ಅಧ್ಯಾತ್ಮ ಸಾಧನ ಸಾರವೇನೆಂಬುದನ್ನು ತೋರಿದರು. ಇದಕ್ಕಾಗಿ ವ್ಯಾಸರಿಗೆ ಸದಸತ್ಪಾತ್ರರ ಚಿತ್ರಣ ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ಕೌರವ-ಪಾಂಡವರ ಜನಕರಾದ ಧೃತರಾಷ್ಟ್ರ – ಪಾಂಡುರಾಜರನ್ನು ತಾವೇ ಸೃಜಿಸಿ ಕೌರವ-ಪಾಂಡವ ರೂಪ ಸದಸತ್ಪಾತ್ರಗಳನ್ನು ತಾವೇ ಸಂಪಾದಿಸಿಕೊಂಡರು.

ವೇದವ್ಯಾಸರು ಒಮ್ಮೆ ಮಾರ್ಗದಲ್ಲಿ ಸಾಗುತ್ತಿದ್ದಾಗ ಒಂದು ಕೀಟವು ಗೋಚರವಾಯಿತು. ಅದು ಬಂಡಿಯ ಶಬ್ದವನ್ನು ಕೇಳಿ ತನ್ನ ಶರೀರವನ್ನು ಬಂಡಿಯ ಚಕ್ರದಿಂದ ರಕ್ಷಿಸಿಕೊಳ್ಳಲು ಧಾವಿಸುತ್ತಿತ್ತು. ವ್ಯಾಸರು ಪ್ರಶ್ನಿಸಿದಾಗ ಅದು ತನ್ನ ಈ ಉದ್ದೇಶವನ್ನು ಸ್ಪಷ್ಟಪಡಿಸಿತು. ಆಗ ವ್ಯಾಸರು ಈ ಕ್ಷುದ್ರ ಕೀಟ ದೇಹದಲ್ಲಿ ನಿನಗೇಕೆ ದುರಭಿಮಾನ? ನಾನು ನಿನಗೆ ರಾಜದೇಹವನ್ನು ನೀಡುತ್ತೇನೆಂದು ಔದಾರ್ಯವನ್ನು ತೋರಿದರು. ಆದರೆ ಆ ಕೀಟವು ತನ್ನ ದೇಹವನ್ನು ಬಿಡಲು ಬಯಸಲಿಲ್ಲ. ಆಗ ಆ ಕೀಟ ದೇಹದಲ್ಲೇ ಅದನ್ನು ರಾಜನನ್ನಾಗಿ ಮಾಡಿದರು. ಎಲ್ಲಾ ಸಾಮಂತರಾಜರು ಅದಕ್ಕೆ ತಲೆಬಾಗಿ ಕಪ್ಪ-ಕಾಣಿಕೆಗಳನ್ನು ಅರ್ಪಿಸಿ ಗೌರವಿಸುವಂತೆ ಪ್ರಭಾವ ಬೀರಿದರು.

ಹಿಮಾಲಯದಲ್ಲಿ ತಪಸ್ಸನ್ನು ಆಚರಿಸುತ್ತಿರುವ ಧೃತರಾಷ್ಟ್ರ-ಗಾಂಧಾರಿಯ ಆಶ್ರಮಕ್ಕೆ ಒಮ್ಮೆ ವ್ಯಾಸರು ಅನುಗ್ರಹಿಸಲು ಆಗಮಿಸಿದರು. ವರವನ್ನು ಕೇಳಿಕೊಳ್ಳಲು ಅವರಿಗೆ ವ್ಯಾಸರು ಸೂಚಿಸಿದರು. ಆಗ ಧೃತರಾಷ್ಟ್ರ-ಗಾಂಧಾರಿ ದಂಪತಿಗಳು ಯುದ್ಧದಲ್ಲಿ ಹೋರಾಡಿ ವೀರಸ್ವರ್ಗವನ್ನು ಹೊಂದಿದ ಯೋಧರನ್ನು ಕಾಣಬೇಕೆಂದು ಬಯಸಿದಾಗ ವ್ಯಾಸರು ತನ್ನ ಪ್ರಭಾವದಿಂದ ಸ್ವರ್ಗವನ್ನು ಹೊಂದಿದ ಎಲ್ಲಾ ವೀರಯೋಧರನ್ನು ತರಿಸಿ ತೋರಿಸುತ್ತಾರೆ. ಈ ಕಥೆಯನ್ನು ವ್ಯಾಸ ಶಿಷ್ಯರಾದ ವೈಶಂಪಾಯನರು ಪರೀಕ್ಷಿತನ ಸುತನಾದ ಜನಮೇಜಯನಿಗೆ ಹೇಳಿದಾಗ, ಆತ ತನ್ನ ತಂದೆ ಭಾಗವತವನ್ನು ಕೇಳಿ ವೈಕುಂಠವನ್ನು ಸೇರಿದ್ದಾನೆ, ಆತನನ್ನೂ ತಂದು ಎನಗೆ ತೋರಿಸಿರಿ ಎಂದು ಅಲ್ಲೇ ಇದ್ದ ವ್ಯಾಸರನ್ನು ಪ್ರಾರ್ಥಿಸುತ್ತಾನೆ. ಆಗ ವ್ಯಾಸರು ವೈಕುಂಠದಿಂದ ಪರೀಕ್ಷಿತನನ್ನು ತಂದು ತೋರಿಸಿ ತನ್ನ ಸಾಮರ್ಥ್ಯ ಹಾಗೂ ಅದನ್ನು ನಿರೂಪಿಸುವ ಮಹಾಭಾರತ ಗ್ರಂಥದಲ್ಲಿ ದೃಢ ವಿಶ್ವಾಸವನ್ನು ಮೂಡಿಸಿದರು.

ಮುಂದೆ ಆಗಬಹುದಾದ ಕೌರವ-ಪಾಂಡವರ ಅನ್ಯೋನ್ಯ ಕಲಹದಿಂದ ತನ್ನ ತಾಯಿ ಸತ್ಯವತಿ ಮನಃಕ್ಷೋಭೆಯನ್ನು ಹೊಂದಬಾರದು, ಅಂತಿಮಕಾಲದಲ್ಲಿ ಮನಃಶಾಂತಿಯಿಂದಲೇ ಅವಳು ಕಾಲಕಳೆದು ಧ್ಯಾನಮಾಡಿ ಕೃತಾರ್ಥಳಾಗಬೇಕೆಂಬ ಬಯಕೆಯಿಂದ ವ್ಯಾಸರು ತನ್ನ ತಾಯಿಯನ್ನು ಹಸ್ತಿನಾಪುರದಿಂದ ತನ್ನ ಆಶ್ರಮಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅಂತಿಮವಾಗಿ ಮನಃಶಾಂತಿಕರವಾದ ಧ್ಯಾನಮಾರ್ಗವನ್ನು ಉಪದೇಶಿಸಿ ನಿಜಧ್ಯಾನದಿಂದ ಆಕೆ ನೆಮ್ಮದಿಯಿಂದ ಸದ್ಗತಿಯನ್ನು ಹೊಂದುವ ವ್ಯವಸ್ಥೆ ಮಾಡಿದರು. ಹೀಗಾಗಿ ಸತ್ಯವತಿಯ ಹೃದಯಕ್ಕೆ ಅಂತಿಮಕಾಲದಲ್ಲಿ ಆನಂದವನ್ನು ನೀಡಿದರು. ಅವರ ಮುಖಕಮಲದಿಂದ ಹರಿದು ಬಂದ ವಾಗಮೃತವನ್ನೇ ಆಶ್ರಯಿಸಿ ಕವಿಗಳು, ಧರ್ಮಶಾಸ್ತ್ರಕಾರರು ಹಾಗೂ ಅರ್ಥಶಾಸ್ತ್ರಕಾರು ಮುಂತಾದ ವಿವಿಧ ಕ್ಷೇತ್ರದ ವಿದ್ವಾಂಸರು ತಮ್ಮ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಪ್ರಸಿದ್ಧಿಯನ್ನು ಪಡೆದು ಕೃತಕೃತ್ಯರಾದರು.

ಭಾರತ ದೇಶವನ್ನು ಗೌರವದ ‘ಜಗದ್ಗುರು’ ಸ್ಥಾನಕ್ಕೆ ಏರಿಸಿದವರು ಭಗವಾನ್ ವೇದವ್ಯಾಸರು. ಹೀಗಾಗಿ ಭಾರತದೇಶವು ಭಗವಾನ್ ವೇದವ್ಯಾಸರಿಗೆ ಚಿರಋಣಿಯಾಗಿದೆ. ಆದರೆ ಅಂತಹ ದೊಡ್ಡ ಕೊಡುಗೆ ನೀಡಿದ ವೇದವ್ಯಾಸರ ಜಯಂತಿಯನ್ನು ನಮ್ಮ ಸರ್ಕಾರಗಳು ನಡೆಸುವುದಿಲ್ಲ. ಇನ್ನಾದರೂ ಎಚ್ಚೆತ್ತು ಸರ್ಕಾರಗಳು ‘ವೇದವ್ಯಾಸರ ಜಯಂತಿ’ಯನ್ನು ‘ರಾಷ್ಟ್ರಗುರು ಜಯಂತಿ’ ರೂಪದಲ್ಲಿ ಆಚರಿಸುವ ವಿವೇಕದ ಮಾರ್ಗವನ್ನು ತುಳಿದರೆ ಅದು ದೇಶಕ್ಕೆ ಸಂದ ಗೌರವವೆನಿಸುತ್ತದೆ.

ಲೋಕವನ್ನು ರಕ್ಷಿಸಿದ ತೇಜಸ್ವಿ

ಮಹಾಭಾರತ ಯುದ್ಧದಲ್ಲಿ ಸೋತ ಅಶ್ವತ್ಥಾಮಾಚಾರ್ಯರು ಬ್ರಹ್ಮಶಿರೋಸ್ತ್ರ ಪ್ರಯೋಗಿಸಿದಾಗ ಅದರ ಉಪಶಮನಕ್ಕಾಗಿ ಪರಮಾತ್ಮನಿಂದ ಪ್ರೇರಿತನಾದ ಅರ್ಜುನನು ಪ್ರತಿ ಬ್ರಹ್ಮಶಿರೋಸ್ತ್ರ ಪ್ರಯೋಗಿಸಿದನು. ಆಗ ಎರಡೂ ಅಸ್ತ್ರಗಳ ಸಂಘರ್ಷದಿಂದ ನಿರಪರಾಧಿಯಾದ ಸಮಗ್ರ ಜಗತ್ತೇ ವಿನಾಶದಂಚಿನಲ್ಲಿ ಸಿಲುಕಿತು. ಆಗ ಭಗವಾನ್ ವೇದವ್ಯಾಸರು ಎರಡೂ ಅಸ್ತ್ರಗಳನ್ನು ಮಧ್ಯದಲ್ಲಿ ನಿಂತು ನಿರೋಧಿಸುತ್ತಾರೆ. ಜಗತ್ತನ್ನು ವಿನಾಶದಿಂದ ರಕ್ಷಿಸುತ್ತಾರೆ. ವೇದವ್ಯಾಸರು ಈ ಎರಡೂ ಅಸ್ತ್ರಗಳನ್ನು ತಡೆಹಿಡಿಯಬೇಕಾದರೆ, ಅವರಲ್ಲಿ ಅಪಾರವಾದ ತೇಜಸ್ಸು ಇಲ್ಲದಿದ್ದರೆ ಸಾಧ್ಯವೇ? ಹೀಗಾಗಿ ವ್ಯಾಸರು ಅಮಿತ ತೇಜಸ್ಸನ್ನು ಪಡೆದ ಭಗವಂತನ ರೂಪವೇ ಆಗಿದ್ದಾರೆ.

ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಭಂಡಾರಕೇರಿ ಮಠ, ಉಡುಪಿ

Leave a Reply

Your email address will not be published. Required fields are marked *