ಇಂದಿನಿಂದ ಮಂಗಳೂರಿನಲ್ಲಿ ಅಮೃತ ಸಂಗಮ

<ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಆಗಮನ>

ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ (ಅಮ್ಮ) ಗುರುವಾರ ಮಂಗಳೂರಿಗೆ ಆಗಮಿಸಿದ್ದು, ನಗರದ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಮಾ.8 ಮತ್ತು 9ರಂದು ನಡೆಯುವ ಅಮೃತ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮುಂಬೈಯಿಂದ ಗುರುವಾರ ಪ್ರಾತಃಕಾಲ ಮಂಗಳೂರಿಗೆ ಆಗಮಿಸಿದ ಮಾತಾ ಅಮೃತಾನಂದಮಯಿ ಅವರನ್ನು ಬೋಳೂರು ಮಠದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಅಮೃತಾನಂದಮಯಿ ಸೇವಾ ಸಮಿತಿ ಅಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್, ಡಾ.ಜೀವರಾಜ್ ಸೊರಕೆ, ಸನತ್ ಹೆಗ್ಡೆ, ಶ್ರುತಿ ಹೆಗ್ಡೆ, ವಾಮನ್ ಕಾಮತ್, ಸಂತೋಷ್ ಅಮೀನ್, ಮಾಧವ ಸುವರ್ಣ ಮುಂತಾದವರು ಸ್ವಾಗತಿಸಿದರು.

ಬೋಳೂರು ಮಠದಲ್ಲಿ ವಿಶ್ರಾಂತಿ ಪಡೆದ ಅಮ್ಮ ಸಾಯಂಕಾಲ ಭಕ್ತರಿಗೆ ಉಪಹಾರ ಹಾಗೂ ಪ್ರಸಾದ ಹಂಚಿದರು. ಬಳಿಕ ಅಮೃತ ವಿದ್ಯಾಲಯಂ ಆವರಣದಲ್ಲಿ ಭಜನೆ, ಧ್ಯಾನ ನಡೆಯಿತು. ಅಮ್ಮನ ಜತೆ ವಿದೇಶಿಯರು ಸಹಿತ 20ಕ್ಕೂ ಅಧಿಕ ಬಸ್‌ಗಳಲ್ಲಿ ಭಕ್ತರು ವಿಶೇಷ ಭದ್ರತೆಯಲ್ಲಿ ಆಗಮಿಸಿದ್ದಾರೆ.

 ಕಾರ್ಯಕ್ರಮ: ಮಾ.8ರಂದು ಅಮೃತ ಸಂಗಮ ಯಜ್ಞ ಶಾಲೆಯಲ್ಲಿ ಬೆಳಗ್ಗೆ 5.45ರಿಂದ ಶ್ರೀ ಲಲಿತ ಸಹಸ್ರನಾಮ ಅರ್ಚನೆ, ರಾಹು ದೋಷ ನಿವಾರಣಾ ಪೂಜೆ, ಬ್ರಹ್ಮ ಸ್ಥಾನದಲ್ಲಿ ಮಹಾ ಗಣಪತಿ ಹೋಮ, ನವಗ್ರಹ ಶಾಂತಿಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಬಳಿಕ ಅಮ್ಮನವರಿಂದ ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಅನುಗ್ರಹ ದರ್ಶನ ನಡೆಯಲಿದೆ.

ಕಾರ್ಪೊರೇಷನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಪಿ.ವಿ. ಭಾರತಿ, ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ್ ಕೆ, ಸಂಧ್ಯಾ ಎಸ್.ಪೈ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ದರ್ಶನ ಅವಕಾಶ: ಭಕ್ತರಿಗೆ ಅಮ್ಮನವರ ದರ್ಶನ ಪಡೆಯಲು ಯಾವುದೇ ಶುಲ್ಕ ಇರುವುದಿಲ್ಲ. ಅಗತ್ಯ ಟೋಕನ್‌ಗಳನ್ನು ಸ್ಥಳದಲ್ಲೇ ಉಚಿತವಾಗಿ ನೀಡಲಾಗುತ್ತದೆ. ಸಕಾಲದಲ್ಲಿ ಆಗಮಿಸಿ ಆಸೀನರಾದವರಿಗೆ ದರ್ಶನ ಪಡೆಯಲು ಅವಕಾಶವಿರುತ್ತದೆ. ಲೇಡಿಹಿಲ್‌ನಿಂದ ಅಮೃತ ವಿದ್ಯಾಲಯಂವರೆಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಸಾದ್‌ರಾಜ್ ಕಾಂಚನ್ ತಿಳಿಸಿದ್ದಾರೆ.