More

    ಗುವಾಹಟಿಯಲ್ಲಿ ಇಂದು ಭಾರತ-ಶ್ರೀಲಂಕಾ ಮೊದಲ ಟಿ20 ಹಣಾಹಣಿ; ವರ್ಷದ ಮೊದಲ ಸವಾಲಿಗೆ ಸಿದ್ಧ

    ಗುವಾಹಟಿ: ಕಳೆದ ವರ್ಷಾಂತ್ಯದಲ್ಲಿ ಸಾಲು ಸಾಲು ಸರಣಿ ಜಯಿಸಿರುವ ಭಾರತ ತಂಡ ಅದೇ ಲಯ ಮುಂದುವರಿಸುವ ಇರಾದೆಯೊಂದಿಗೆ 2020ರ ಮೊದಲ ಸವಾಲಿಗೆ ಸಜ್ಜಾಗಿದೆ. ಚುಟುಕು ಕ್ರಿಕೆಟ್ ವಿಶ್ವಕಪ್ ಸಿದ್ಧತೆಯ ಭಾಗವಾಗಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾನುವಾರ ಪ್ರವಾಸಿ ಶ್ರೀಲಂಕಾ ತಂಡವನ್ನು ಭಾರತ ಎದುರಿಸಲಿದ್ದು, ಹೊಸ ವರ್ಷದಲ್ಲಿ ಶುಭಾರಂಭ ಕಾಣುವ ತವಕದಲ್ಲಿದೆ.

    2019ರ ಕೊನೆಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಬೀಗಿರುವ ಭಾರತ ತಂಡದ ಆಟಗಾರರು, ಹೊಸ ವರ್ಷದ ಸವಾಲಿಗೆ ಮುನ್ನ ಕುಟುಂಬ ಸದಸ್ಯರು ಮತ್ತು ಆಪ್ತರೊಂದಿಗೆ ಬಿಡುವಿನ ಸಮಯವನ್ನು ಕಳೆದು ರಿಫ್ರೆಶ್ ಆಗಿದ್ದಾರೆ. ಕಳೆದೊಂದು ದಶಕದಿಂದ ಲಂಕಾ ವಿರುದ್ಧ ಸಾಧಿಸಿರುವ ಪ್ರಾಬಲ್ಯವನ್ನು ಈ ದಶಕದಲ್ಲೂ ಮುಂದುವರಿಸುವ ಅವಕಾಶ ಭಾರತದ ಮುಂದಿದೆ. ಪಾಕಿಸ್ತಾನ ಪ್ರವಾಸದ ಬಳಿಕ ಚುಟುಕು ಪ್ರವಾಸಕ್ಕಾಗಿ ಭಾರತಕ್ಕೆ ಬಂದಿರುವ ಲಂಕಾ ತಂಡ, ಆತಿಥೇಯರಿಗೆ ಆಘಾತ ನೀಡುವ ಹುರುಪಿನಲ್ಲಿದೆ. ಲಸಿತ್ ಮಾಲಿಂಗ ಪಡೆ ಬಹುತೇಕ ಹೊಸ ಆಟಗಾರರಿಂದ ಕೂಡಿದೆ.

    ಬುಮ್ರಾ ಮೇಲೆ ಎಲ್ಲರ ಚಿತ್ತ

    ಗಾಯದಿಂದಾಗಿ 4 ತಿಂಗಳ ಕಾಲ ಬಿಡುವು ಪಡೆದಿದ್ದ ವೇಗಿ ಜಸ್​ಪ್ರೀತ್ ಬುಮ್ರಾ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಫಿಟ್ನೆಸ್ ಪರೀಕ್ಷೆಯಾಗಿ ರಣಜಿ ಟ್ರೋಫಿ ಪಂದ್ಯದಲ್ಲಿ ಅವರು ಆಡಬೇಕಾಗಿತ್ತಾದರೂ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಧ್ಯಪ್ರವೇಶದಿಂದಾಗಿ ಅದರಿಂದ ದೂರ ಉಳಿದಿದ್ದರು. ಹೀಗಾಗಿ ಈ ಸರಣಿಯಲ್ಲೇ ಅವರು ಮರಳಿ ಲಯಕಂಡುಕೊಳ್ಳಬೇಕಾಗಿದೆ. ಮೊಹಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಗೈರಿನಲ್ಲಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯೂ ಇದೆ.

    3ನೇ ಅಂತಾರಾಷ್ಟ್ರೀಯ ಪಂದ್ಯ

    ಬರ್ಸಾಪರ ಕ್ರೀಡಾಂಗಣದಲ್ಲಿ ಇದು 3ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. 2017ರ ಅಕ್ಟೋಬರ್​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್​ಗಳಿಂದ ಸೋತಿತ್ತು. 2018ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ 8 ವಿಕೆಟ್​ಗಳಿಂದ ಗೆದ್ದಿತ್ತು. 323 ರನ್ ಸವಾಲಿಗೆ ಪ್ರತಿಯಾಗಿ ಭಾರತ ತಂಡ ರೋಹಿತ್ ಶರ್ಮ (152*) ಮತ್ತು ವಿರಾಟ್ ಕೊಹ್ಲಿ (140) ಶತಕದಿಂದ 42.1 ಓವರ್​ಗಳಲ್ಲೇ ಚೇಸಿಂಗ್ ಮಾಡಿತ್ತು.

     

    ಟೀಮ್ ನ್ಯೂಸ್

    ಭಾರತ: ಗಾಯದಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ತಂಡ ಕೂಡಿಕೊಂಡಿದ್ದರೆ, ರೋಹಿತ್ ಶರ್ಮಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ರಾಹುಲ್-ಧವನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಬುಮ್ರಾಗೆ ಯುವ ವೇಗಿಗಳಾದ ನವದೀಪ್ ಸೈನಿ ಮತ್ತು ಶಾರ್ದೂಲ್ ಠಾಕೂರ್ ಸಾಥ್ ನೀಡಲಿದ್ದರೆ, ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರಲ್ಲಿ ಈ ಬಾರಿಯೂ ಒಬ್ಬರಷ್ಟೇ ಕಣಕ್ಕಿಳಿಯಬಹುದು. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮರಳುವುದಕ್ಕೆ ಮುನ್ನ ಶಿವಂ ದುಬೆ ಇನ್ನಷ್ಟು ಅವಕಾಶಗಳನ್ನು ಪಡೆಯಲಿದ್ದಾರೆ. ರಿಷಭ್ ಪಂತ್ ಈ ಸರಣಿಯಲ್ಲಿ ಮತ್ತೆ ಎಡವಿದರೆ ಸಂಜು ಸ್ಯಾಮ್ಸನ್​ಗೆ ಅವಕಾಶ ನಿಶ್ಚಿತ.

    ಸಂಭಾವ್ಯ ತಂಡ: ಧವನ್, ಕೆಎಲ್ ರಾಹುಲ್, ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ), ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್/ಚಾಹಲ್, ಬುಮ್ರಾ, ನವದೀಪ್ ಸೈನಿ/ವಾಷಿಂಗ್ಟನ್ ಸುಂದರ್.

    ಶ್ರೀಲಂಕಾ: ಪಾಕ್ ಸರಣಿಯಲ್ಲಿ ಮಿಂಚಿದ್ದ ಲೆಗ್ ಸ್ಪಿನ್ನರ್ ವಾನಿಂದು ಹಸರಂಗ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ನಿರೋಶನ್ ಡಿಕ್​ವೆಲ್ಲಾ ಮತ್ತು ಕುಸಲ್ ಮೆಂಡಿಸ್ ಆಡದಿರುವ ಬಗ್ಗೆ ನಾಯಕ ಮಾಲಿಂಗ ಸುಳಿವು ನೀಡಿದ್ದಾರೆ.

    ಸಂಭಾವ್ಯ ತಂಡ: ಗುಣತಿಲಕ, ಒಶದ ಫೆರ್ನಾಂಡೊ, ಅವಿಷ್ಕಾ ಫೆರ್ನಾಂಡೊ, ಭನುಕಾ ರಾಜಪಕ್ಷೆ, ಕುಸಲ್ ಪೆರೇರಾ (ವಿ.ಕೀ), ಏಂಜೆಲೊ ಮ್ಯಾಥ್ಯೂಸ್, ಶನಕ, ಉದಾನ, ಹಸರಂಗ, ಮಾಲಿಂಗ (ನಾಯಕ), ಲಹಿರು ಕುಮಾರ/ಕಸುನ್ ರಜಿತ.

    ಪಂದ್ಯಕ್ಕೆ ಮಳೆ ಅಡಚಣೆ ಭೀತಿ

    ಹವಾಮಾನ ವರದಿಯ ಪ್ರಕಾರ, ಪಂದ್ಯಕ್ಕೆ ಮಳೆ ಅಡಚಣೆ ಭೀತಿ. ಆದರೆ ಪಂದ್ಯ ರಾತ್ರಿ ನಡೆಯಲಿ ರುವ ಕಾರಣ, ಬೆಳಗ್ಗೆ ಮಳೆ ಬಂದರೂ ಸಂಜೆಯ ವೇಳೆಗೆ ಮೈದಾನವನ್ನು ಸಜ್ಜುಗೊಳಿಸುವ ವಿಶ್ವಾಸವನ್ನು ಅಸ್ಸಾಂ ಕ್ರಿಕೆಟ್ ಸಂಸ್ಥೆ ವ್ಯಕ್ತಪಡಿಸಿದೆ.

    ಶ್ರೀಲಂಕಾ ವಿರುದ್ಧ 12 ವರ್ಷಗಳಿಂದ ಸರಣಿ ಸೋಲಿಲ್ಲ

    ಉಭಯ ತಂಡಗಳ ಮುಖಾಮುಖಿಯ ಇತ್ತೀಚೆಗಿನ ಇತಿಹಾಸ ಗಮನಿಸಿದಾಗ ಭಾರತವೇ ಪ್ರಾಬಲ್ಯ ಸಾಧಿಸಿರುವುದು ಸ್ಪಷ್ಟವಾಗುತ್ತಿದೆ. ಕಳೆದ 12 ವರ್ಷಗಳಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಸೋಲು ಕಂಡಿಲ್ಲ. ಅಂದರೆ 2008ರ ಆಗಸ್ಟ್​ನಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬಳಿಕ ಭಾರತ ತಂಡ ಶ್ರೀಲಂಕಾ ವಿರುದ್ಧ ಯಾವುದೇ ಸರಣಿಯಲ್ಲಿ ಸೋಲು ಅನುಭವಿಸಿಲ್ಲ. ಅದರಲ್ಲೂ ಲಂಕಾ ವಿರುದ್ಧದ ಎಲ್ಲ ದ್ವಿಪಕ್ಷೀಯ ಸರಣಿಗಳಲ್ಲೂ ಭಾರತ ಅಜೇಯ ಸಾಧನೆ ಮಾಡಿದೆ.

    2008ರ ಜುಲೈ-ಆಗಸ್ಟ್​ನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಆಡಿದ ಟೆಸ್ಟ್ ಸರಣಿಯಲ್ಲಿ ಕುಮಾರ ಸಂಗಕ್ಕರ, ಮಹೇಲ ಜಯವರ್ಧನೆ, ಮುತ್ತಯ್ಯ ಮುರಳೀಧರನ್, ಚಾಮಿಂಡ ವಾಸ್ ಅವರಂಥ ದಿಗ್ಗಜರನ್ನು ಒಳಗೊಂಡ ತಂಡದೆದುರು ಭಾರತ ಕೊನೆಯದಾಗಿ ಸರಣಿ ಸೋಲು ಕಂಡಿತ್ತು. ನಂತರ ಆಡಿರುವ 18 ದ್ವಿಪಕ್ಷೀಯ ಸರಣಿಗಳಲ್ಲಿ 16ರಲ್ಲಿ ಭಾರತ ತಂಡವೇ ಗೆಲುವು ದಾಖಲಿಸಿದ್ದರೆ, 2 ಸರಣಿಗಳು ಮಾತ್ರ ಸಮಬಲದಲ್ಲಿ ಅಂತ್ಯ ಕಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts