ಇಂದು ಕೃಷ್ಣನೂರಲ್ಲಿ ಅಷ್ಟಮಿ

< ಕೃಷ್ಣಮಠಕ್ಕೆ ಉತ್ಸವದ ಕಳೆ ಇಂದು ರಾತ್ರಿ ದೇವರಿಗೆ ಅರ್ಘ್ಯ ಪ್ರದಾನ >

ಉಡುಪಿ: ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಪೊಡವಿಗೊಡೆಯನ ನಾಡು ಉಡುಪಿ ಸಜ್ಜಾಗಿದೆ.
ಕೃಷ್ಣನ ಜನ್ಮಜಯಂತಿ ಆರಾಧನೆಗೆ ರಥಬೀದಿ ಶೃಂಗಾರಗೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಶ್ರೀ ಕೃಷ್ಣಮಠ ವಸತಿಗೃಹ ಸೇರಿದಂತೆ ನಗರದ ವಸತಿಗೃಹಗಳು ಭರ್ತಿಯಾಗುತ್ತಿವೆ. ತಿಂಗಳ ಹಿಂದೆಯೇ ಭಕ್ತರು ಕೊಠಡಿಗಳನ್ನು ಕಾಯ್ದಿರಿಸಿಕೊಂಡಿದ್ದರು.
23ರಂದು ಕೃಷ್ಣ ಜಯಂತಿ, 24ರಂದು ಕೃಷ್ಣ ಜನನದ ಸಂಭ್ರಮಾಚರಣೆ ಶ್ರೀಕೃಷ್ಣಲೀಲೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಕೃಷ್ಣಮಠ ರಥಬೀದಿ ಸಂಭ್ರಮಕ್ಕೆ ವೇದಿಕೆಯಾಗಿದ್ದು, ನಗರದಲ್ಲಿ ವೇಷಧಾರಿಗಳ ಕಲರವ, ಹೂ ವ್ಯಾಪಾರಿಗಳ ಚಟುವಟಿಕೆ ವೇಗ ಪಡೆದುಕೊಂಡಿದೆ.

ಮೊಸರು ಕುಡಿಕೆ ಗುರ್ಜಿ ಸಿದ್ಧ: ವಿಟ್ಲಪಿಂಡಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ಮೊಸರುಕುಡಿಕೆ. ಅಷ್ಟ ಮಠಗಳ ರಥಬೀದಿಯಲ್ಲಿ ಗುರ್ಜಿ ಸಿದ್ಧಗೊಂಡಿದೆ. ರಥಬೀದಿಯಲ್ಲಿ ತ್ರಿಕೋನಾಕೃತಿ ಗುರ್ಜಿಗಳನ್ನು ನಿರ್ಮಿಸಿ ಮೊಸರು ಕುಡಿಕೆಗೆ ಸಿದ್ಧತೆ ಮಾಡಲಾಗಿದೆ. ಮಠದ ಆವರಣದಲ್ಲಿ ಮಡಿಕೆಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲಿ ಕಲಾವಿದರು ನಿರತರಾಗಿದ್ದಾರೆ. ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ಮೊಸರು ಕುಡಿಕೆ ಒಡೆಯುತ್ತಾರೆ. ರಥಬೀದಿಯಿಂದ ತೆಂಕಪೇಟೆ ಮತ್ತು ಕನಕ ಗೋಪುರದ ಕೆಳಗೆ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಹುಲಿವೇಷ ಸೇರಿದಂತೆ ನಾನಾ ರೀತಿಯ ವೇಷಗಳು ಅಷ್ಟಮಿ ಮತ್ತು ವಿಟ್ಲಪಿಂಡಿಯಂದು ರಾರಾಜಿಸಲಿವೆ.

ರಾತ್ರಿ 12.12ಕ್ಕೆ ಅರ್ಘ್ಯ ಪ್ರದಾನ: ಪರ್ಯಾಯ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಆ.23ರಂದು ಬೆಳಗ್ಗೆ ಮಹಾಪೂಜೆ ನಡೆಯಲಿದೆ. ಸಹಸ್ರ ವಿಷ್ಣು ಪರಾಯಣ, ಲಕ್ಷ ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ಸಮರ್ಪಣೆಯಾಗಲಿದೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಸಂತ ಮಂಟಪದಲ್ಲಿ ಭಜನಾ ಕಾರ್ಯಕ್ರಮ, ಬೆಳಗ್ಗೆ 12ರಿಂದ 4ರವರೆಗೆ ಓಲಗ ಮಂಟಪದಲ್ಲಿ ಪುತ್ತಿಗೆ ಚಂದ್ರಶೇಖರ್ ಬಳಗದಿಂದ ಸ್ಯಾಕ್ಸೋಫೋನ್ ವಾದನ ಜರುಗಲಿದೆ. ಮಧ್ಯರಾತ್ರಿ 12.12ಕ್ಕೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಆ.24ರಂದು ಬೆಳಗ್ಗೆ ಮಹಾಪೂಜೆ, ಬೆಳಗ್ಗೆ 9ರಿಂದ 12ರವರೆಗೆ ಸೂರ್ಯ ಶಾಲೆಯಲ್ಲಿ ವಿಪಂಚಿ ಬಳಗ ಮಣಿಪಾಲ ಇವರಿಂದ ಪಂಚವೀಣಾ ವಾದನ. ವಸಂತ ಮಂಟಪದಲ್ಲಿ 10 ಗಂಟೆಗೆ ಮಹಿಳಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಭಕ್ತರಿಗೆ ವಿಶೇಷ ಹಾಲು ಪಾಯಸದ ಅನ್ನಸಂತರ್ಪಣೆ ನಡೆಯಲಿದೆ. 3.30ಕ್ಕೆ ಶ್ರೀಕೃಷ್ಣನ ಮಣ್ಣಿನ ಮೂರ್ತಿಯೊಂದಿಗೆ ಬೃಹತ್ ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆ ವಿಟ್ಲಪಿಂಡಿ ಸಂಭ್ರಮ ನಡೆಯಲಿದೆ.

ಮೂಡೆ ಎಲೆ ದುಬಾರಿ: ಶ್ರೀಕೃಷ್ಣ ಜನ್ಮಾಷ್ಟಮಿಗೂ ಮೂಡೆಗೂ ಅವಿನಾಭಾವ ಸಂಬಂಧ. ಇತ್ತೀಚಿನ ದಿನಗಳಲ್ಲಿ ಮೂಡೆ ವರ್ಷದ ಎಲ್ಲ ದಿನಗಳಲ್ಲೂ ಲಭ್ಯವಿ ದ್ದರೂ ಅಷ್ಟಮಿಯಂದು ವಿಶೇಷ ಸ್ಥಾನ ಪಡೆದುಕೊಳ್ಳುತ್ತದೆ. ದೂರದ ಊರಿನಿಂದ ಬಂದ ವ್ಯಾಪಾರಿಗಳು ಹಲಸಿನ ಎಲೆಗಳಿಂದ ಕಟ್ಟಿದ ಮೂಡೆ ಎಲೆ (ಒಲಿ)ಯನ್ನು ರಥಬೀದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೇಡಿಕೆ ಹೆಚ್ಚಿದ್ದು ರೇಟು ದುಬಾರಿಯಾಗಿದೆ.

ಉಚಿತ ಆ್ಯಂಬುಲೆನ್ಸ್ ಸೇವೆ: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿ ಕೃಷ್ಣ ಮಠಕ್ಕೆ ಊರ-ಪರವೂರ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಶನಿವಾರ ವಿಟ್ಲಪಿಂಡಿಯ ದಿನ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ತುರ್ತು ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲಿದೆ. ಕೃಷ್ಣ ಮಠದ ಪರಿಸರದ ಆಯಾಕಟ್ಟಿನ ಸ್ಥಳದಲ್ಲಿ ತುರ್ತು ನಾಗರಿಕ ಸೇವೆಗಾಗಿ ಉಚಿತ ಆ್ಯಂಬುಲೆನ್ಸ್ ನಿಲುಗಡೆಗೊಳಿಸಲಿದೆ.

ಇಂದು ಗಣ್ಯರಿಗೆ ಸನ್ಮಾನ: ಶುಕ್ರವಾರ ಸಾಯಂಕಾಲ 5ಕ್ಕೆ ರಾಜಾಂಗಣದಲ್ಲಿ ಗಣ್ಯರಿಗೆ ಸನ್ಮಾನ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಮುಖ್ಯಅತಿಥಿಗಳಾಗಿ ಚೆನ್ನೈ ಉದ್ಯಮಿ ಲಕ್ಷ್ಮೀನಾರಾಯಣ ರಾವ್, ಮುರಳಿ ರಾವ್, ಕೆ. ರಾಮಪ್ರಸಾದ್ ಭಟ್ ಭಾಗವಹಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸೋದೆ ಮಠ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್, ಹಾಂಗ್ಯೋ ಐಸ್‌ಕ್ರೀಮ್ ನಿರ್ದೇಶಕ ಜಗದೀಶ್ ಪೈ, ಸಮಾಜ ಸೇವಕ ರಾಮಚಂದ್ರ ಉಪಾಧ್ಯಾಯ, ರಂಗಕರ್ಮಿ ಈಶ್ವರ ಶೆಟ್ಟಿ ಚಿಟ್ಪಾಡಿ ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *