ಹೊಗೆ ಸೊಪ್ಪಿಗೆ ಹುಳು ಬಾಧೆ

ರಾಮನಾಥಪುರ: ಸತತ ಮಳೆಗೆ ನಲುಗುತ್ತಿರುವ ತಂಬಾಕು ಬೆಳೆಗೆ ಕೀಟಬಾಧೆ ಹೆಚ್ಚಿದ್ದು, ಬೆಳೆಗಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಕೆಲವು ದಿನಗಳಿಂದ ಒಂದೇ ಸಮನೆ ಸುರಿದ ಭಾರಿ ಮಳೆಯಿಂದಾಗಿ ಅತಿಯಾದ ತೇವಾಂಶದಿಂದ ತಂಬಾಕು ಗಿಡಗಳು ಸೊರಗುತ್ತಿವೆ. ಈ ನಡುವೆ ಹವಾಮಾನ ವೈಪರೀತ್ಯದಿಂದ ಹಸಿರು ಹುಳುಗಳು ಬಾಧಿಸಲಾರಂಭಿಸಿದ್ದು, ಬೆಳೆಯ ಬೆಳವಣಿಗೆ ಮೇಲೆ ಹೊಡೆತ ಬಿದ್ದಿದೆ.
ಪ್ರಾರಂಭದಲ್ಲಿ ಹದ ಮಳೆ ಬಿದ್ದ ಕಾರಣ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪಿನ ಪ್ರಥಮ ಹಂತದ ನಾಟಿ ಕಾರ್ಯವನ್ನು ರೈತರು ಬಿರುಸುಗೊಳಿಸಿ, ಮಡಿಗಳಲ್ಲಿ ಬೆಳೆದಿದ್ದ ಗಿಡಗಳನ್ನು ಕಿತ್ತು ಸಕಾಲದಲ್ಲಿ ನಾಟಿ ಕಾರ್ಯ ಮುಗಿಸಿದ ಖುಷಿಯಲ್ಲಿದ್ದರು. ಅದರೆ, ನಾಟಿ ಮಾಡಿದ ತರುವಾಯ ರಸಗೊಬ್ಬರ ನೀಡಿ ಆರೈಕೆ ಮಾಡುವ ವೇಳೆಗೆ ಶುರುವಾದ ಮಳೆ ಬಿಡುವಿಲ್ಲದೇ ಸುರಿದು ಅಲ್ಲಲ್ಲಿ ಗಿಡಗಳು ಕೊಳೆಯಲಾರಂಭಿಸಿವೆ. ಒಂದೆಡೆ ತೇವಾಂಶದಿಂದ ಗಿಡಗಳು ಹಾಳಾಗುತ್ತಿದ್ದರೆ ಇನ್ನೊಂದೆಡೆ ಹಸಿರು ಹುಳುಗಳು ಕಾಣಿಸಿಕೊಂಡಿದ್ದು ಎಲೆಗಳನ್ನು ತಿನ್ನುತ್ತಿವೆ.
ಮಳೆ ಬಿಡುವು ನೋಡಿಕೊಂಡು ಹಸಿರು ಹುಳುಗಳ ನಿಯಂತ್ರಣಕ್ಕಾಗಿ ರೈತರು ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆ ನೀಡಿ ಔಷಧಗಳನ್ನು ಖರೀದಿಸಿ ಸಿಂಪರಣೆ ಮಾಡುತ್ತಿದ್ದಾರೆ. ಇಷ್ಟಾದರೂ ಕೆಲವು ಕಡೆ ಹುಳುಗಳ ಕಾಟ ಹತೋಟಿಗೆ ಬರುತ್ತಿಲ್ಲ. ಗಿಡಗಳ ಕಾಂಡ ಕೊರೆದು ಬೇರಿನಡಿ ಸೇರಿರುವ ಹುಳುಗಳು ಬೆಳೆಗೆ ಕಂಟಕವಾಗುತ್ತಿವೆ. ಗಿಡಗಳಿಗೆ ಕೀಟನಾಶಕ ಸಿಂಪಡಿಸಿ ಸಾಕಾಗಿದೆ ಎನ್ನುತ್ತಾರೆ ಬೆಳೆಗಾರರು.
ಅಪಾರ ಹಣ ವ್ಯಯಿಸಿ ತಂಬಾಕು ಸಸಿ ನಾಟಿ ಮಾಡಿ ಗಿಡಗಳಿಗೆ ನೀಡಲಾಗಿದ್ದ ರಸಗೊಬ್ಬರವು ಅತಿಯಾದ ಮಳೆಗೆ ಬೆಳೆ ಬೆಳವಣಿಗೆಗೆ ಸಹಕರಿಸದೆ ಹಾಳಾಗಿದೆ. ತಂಬಾಕಿಗೆ ಹಾಕಿರುವ ರಸಗೊಬ್ಬರ ಹಾಗೂ ತಂಬಾಕಿಗೆ ಸಿಂಪರಣೆ ಮಾಡಿದ ಔಷಧ ವೆಚ್ಚವೂ ರೈತರ ಕೈಸೇರದಾಗಿದೆ.

ಹುಳುಗಳು ಕಾಣಿಸಿಕೊಂಡ ಬಗ್ಗೆ ರೈತರು ಮಾಹಿತಿ ನೀಡಿದರೆ ಭೇಟಿ ನೀಡಿ ಔಷಧ ಸಿಂಪರಣೆಗೆ ಸಲಹೆ ನೀಡಲಾಗುವುದು. ಹಲವೆಡೆ ಬೆಳೆ ಬೆಳೆಗಳ ಜಮೀನಿಗೆ ಭೇಟಿ ನೀಡಿ ಸಲಹೆ ನೀಡಲಾಗುತ್ತಿದೆ.
ಎಸ್. ಪಾಟೀಲ್, ತಂಬಾಕು ಮಾರುಕಟ್ಟೆ ವ್ಯವಸ್ಥಾಪಕ, ರಾಮನಾಥಪುರ

ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಗೆ ಬೆಳೆ ಹಾನಿಗೊಳಗಾಗಿದೆ. ರೈತರು ಹುಳುಗಳಿಗೆ ಔಷಧ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ. ತಂಬಾಕು ಮಂಡಳಿಯಲ್ಲಿ ಸಾಲದ ರೂಪದಲ್ಲಿ ನೀಡಿದ್ದ ರಸಗೊಬ್ಬರವನ್ನು ಗಿಡಗಳ ಬೆಳವಣಿಗೆಗಾಗಿ ಭೂಮಿಗೆ ನೀಡಿದ್ದು, ಮಳೆ ನೀರಿನಲ್ಲಿ ಕರಗಿ ವ್ಯರ್ಥವಾಗಿದೆ. ರಸಗೊಬ್ಬರದ ಸಾಲವನ್ನು ತಂಬಾಕು ಮಂಡಳಿ ಮನ್ನಾ ಮಾಡಬೇಕು.
ಕೃಷ್ಣೇಗೌಡ, ರೈತ ಸಂಘದ ಹಿರಿಯ ಮುಖಂಡ.

Leave a Reply

Your email address will not be published. Required fields are marked *