ತಂಬಾಕು ಸಸಿ ಬೆಳೆಸುವ ಕಾರ್ಯ ತಿಂಗಳ ಮುಂಚೆಯೇ ಆರಂಭ

blank
blank

ಶಿವು ಹುಣಸೂರು
ಮುಂಬರುವ ಸಾಲಿಗಾಗಿ ತಂಬಾಕು ಬೆಳೆವ ಪ್ರದೇಶಗಳಲ್ಲಿ ನರ್ಸರಿ ಬೆಡ್(ಪಟ)ಗಳ ಮೂಲಕ ತಂಬಾಕು ಸಸಿ ಬೆಳೆಸುವ ಕಾರ್ಯ ಇದೇ ಮೊದಲ ಬಾರಿಗೆ ತಿಂಗಳ ಮುಂಚೆಯೇ ಆರಂಭಗೊಂಡಿದ್ದು, ವೈಜ್ಞಾನಿಕ ಪದ್ಧತಿ ಅನುಸರಿಸುವ ಮೂಲಕ ನರ್ಸರಿ ಬೆಡ್‌ಗಳ ಸಮರ್ಥ ನಿರ್ವಹಣೆ ಮಾಡಲು ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ(ಸಿಟಿಆರ್‌ಐ)ದ ವಿಜ್ಞಾನಿಗಳು ಕೋರಿದ್ದಾರೆ.

ರಾಜ್ಯದಲ್ಲಿ ಗರಿಷ್ಠ 75 ಸಾವಿರ ಎಕರೆ ಭೂಪ್ರದೇಶದಲ್ಲಿ ತಂಬಾಕು ಕೃಷಿ ಕಾರ್ಯಕ್ಕೆ ಅವಕಾಶವಿದ್ದು, ಕಳೆದ ಸಾಲಿನಲ್ಲಿ 60 ಸಾವಿರ ಹೆಕ್ಟೇರ್ ಭೂಪ್ರದೇಶದಲ್ಲಿ ತಂಬಾಕು ಬೆಳೆದಿದ್ದು, 88 ಮಿಲಿಯನ್ ಕೆಜಿ ತಂಬಾಕು ಬೆಳೆದಿದ್ದರು. ದಶಕದ ಅವಧಿಯಲ್ಲೇ ದಾಖಲೆಯ ಸರಾಸರಿ 291 ರೂ.ಗಳ ಬೆಲೆಯನ್ನೂ ಪಡೆದಿದ್ದರು. ಇದೀಗ ತಂಬಾಕು ಮಾರುಕಟ್ಟೆ ವ್ಯವಹಾರ ಮುಂದುವೆರಿದಿದ್ದು, ಈವರೆಗೆ 50 ಮಿಲಿಯನ್ ಕೆಜಿ ಹೊಗೆಸೊಪ್ಪನ್ನು ರೈತರು ಮಾರಾಟ ಮಾಡಿದ್ದಾರೆ. ಇನ್ನೂ 40-45ಕೆಜಿ ಮಿಲಿಯನ್ ಹೊಗೆಸೊಪ್ಪು ರೈತರ ಬಳಿಯಿದೆ. ಸರಾಸರಿ 275 ರೂ.ಗಳ ದರವನ್ನೂ ರೈತರು ಪಡೆಯುತ್ತಿದ್ದಾರೆ.

ತಿಂಗಳ ಮುಂಚೆಯೇ ಪಟ(ನರ್ಸರಿ ಬೆಡ್)ತಯಾರಿ: ಪ್ರತಿವರ್ಷ ರೈತರು ತಂಬಾಕು ನರ್ಸರಿ ಬೆಡ್ ಕಾರ್ಯವನ್ನು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ಕೈಗೊಳ್ಳುತ್ತಿದ್ದರು. ಆದರೆ ಈ ಬಾರಿ ಜನವರಿ ಅಂತ್ಯದಲ್ಲೇ ನರ್ಸರಿ ಬೆಡ್ಡಿಂಗ್ ಆರಂಭಿಸಿದ್ದಾರೆ. ತಂಬಾಕು ಮಂಡಳಿಯಿಂದ ಕೂಡ ಈಗಾಗಲೇ ಬಿತ್ತನೆಬೀಜಗಳ ಪೂರೈಕೆ ಆರಂಭಗೊಂಡಿದೆ ಸಿಟಿಆರ್‌ಐ ಕೇಂದ್ರದಲ್ಲೂ ಈಗಾಗಲೇ ಬಿತ್ತನೆ ಬೀಜಗಳ ಖರೀದಿಯನ್ನು ರೈತರು ಆರಂಭಿಸಿದ್ದಾರೆ. ಈ ಬಾರಿ ತಿಂಗಳು ಮುಂಚೆಯೇ ರೈತರು ತಂಬಾಕು ಕೃಷಿಗೆ ತೊಡಗಲು ಮುಖ್ಯ ಕಾರಣ ಈಗಾಗಲೇ ಶೇ.60ರಷ್ಟು ಹೊಗೆಸೊಪ್ಪು ಮಾರಾಟ ಮಾಡಿದ್ದಾರೆ. ಎರಡನೇಯದಾಗಿ ಅತಿನಿರೀಕ್ಷೆಯೊಂದಿಗೆ ಕಳೆದ ಸಾಲಿನಲ್ಲಿ ರೈತರು ಬೆಳೆದ ಶುಂಠಿ ದರ ಈ ಬಾರಿ ಪಾತಾಳಕ್ಕೆ ಇಳಿದಿದೆ. ಹೊಗೆಸೊಪ್ಪು ಕೃಷಿಯಲ್ಲಿ ಅಂತಿಮವಾಗಿ ಲಾಭ ಸಿಗದ ಪರಿಸ್ಥಿತಿ ಬಂದರೂ ನಷ್ಟವುಂಟಾಗುವುದಿಲ್ಲವೆನ್ನುವ ಖಾತರಿ ಇದೆ. ಆದರೆ ಶುಂಠಿ ಸಂಪೂರ್ಣವಾಗಿ ರೈತರನ್ನು ಘಾಸಿಗೊಳಿಸಿದೆ. ಈ ಎಲ್ಲ ಕಾರಣಗಳಿಂದ ರೈತರು ಈ ಬಾರಿ ಮುಂಚಿತವಾಗಿಯೇ ಹೊಗೆಸೊಪ್ಪು ನರ್ಸರಿ ಬೆಡ್ ಕಾರ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ನರ್ಸರಿ ಬೆಡ್‌ಗಳ ನಿರ್ವಹಣೆ: ತಂಬಾಕು ಕೃಷಿಯಲ್ಲಿ ಪ್ರಮುಖವಾಗಿ ಸಸಿಗಳ ನಿರ್ವಹಣೆ ಬಹುಮುಖ್ಯವಾಗಿದ್ದು, ಸಾಂಪ್ರದಾಯಿಕವಾಗಿ ಎತ್ತರದ ದಿಂಡುಗಳನ್ನು ನಿರ್ಮಿಸಿ ಬಿತ್ತನೆ ಬೀಜಗಳನ್ನು ನೆಟ್ಟು ಸಸಿಗಳ ನಿರ್ವಹಣೆ ಮಾಡುವುದು ಸಾಮಾನ್ಯವಾಗಿದೆ. ಆದರೆ ಬೆಡ್‌ಗಳ ಸದ್ಬಳಕೆ ಮತ್ತು ವೈಜ್ಞಾನಿಕ ಪದ್ಧತಿಯನ್ನು ಬಹುತೇಕ ರೈತರು ಅನುಸರಿಸದ ಕಾರಣ ಆರಂಭಿಕ ಹಂತದಲ್ಲೇ ಸಸಿಗಳು ರೋಗಬಾಧೆಯನ್ನು ಹೊತ್ತು ಬೆಳೆಯುವ ಪರಿಸ್ಥಿತಿ ಇದೆ. ಹೀಗಾಗಿ ನರ್ಸರಿ ಬೆಡ್‌ಗಳ ನಿರ್ವಹಣೆ ಕುರಿತು ರೈತರು ಹೆಚ್ಚಿನ ಗಮನಹರಿಸಬೇಕೆಂದು ಸಿಟಿಆರ್‌ಐ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ಸಲಹೆ ನೀಡುತ್ತಾರೆ.

ಜಮೀನಿನಲ್ಲಿ ನಿರ್ಮಿಸುವ ನರ್ಸರಿ ಬೆಡ್(ದಿಂಡುಗಳು) 15ಸೆಂ.ಮೀ ಎತ್ತರ, 1 ಮೀ.ಅಗಲ, 15 ಮೀಟರ್ ಉದ್ದವಿರಬೇಕು ಮತ್ತು ಬೆಡ್‌ಗಳ ನಡುವೆ 30 ಸೆಂ.ಮೀ. ಅಂತರದಲ್ಲಿ ನೀರು ಹರಿಯಲು ಚಾನೆಲ್‌ಗಳನ್ನು ನಿರ್ಮಿಸಿರುವುದು ಅಗತ್ಯ. ಬೆಡ್‌ಗಳ ನಿರ್ಮಾಣದ ನಂತರ ತಿಪ್ಪೆ ಗೊಬ್ಬರದ ಬಳಕೆ ಅತ್ಯಗತ್ಯ. ನಂತರ 20 ಗ್ರಾಂ. ಅಮೋನಿಯಂ ಸಲ್ಫೇಟ್, 30 ಗ್ರಾಂ.ಎಸ್‌ಎಸ್‌ಪಿ, 50 ಗ್ರಾಂ ಎಸ್‌ಒಪಿ ಅಥವಾ 110ಗ್ರಾಂ ಡಿಎಪಿ, 100ಗ್ರಾಂ. ಅಮೋನಿಯಂ ಸಲ್ಫೇಟ್ ಮತ್ತು 50 ಗ್ರಾಂ ಎಸ್‌ಒಪಿ ಹಾಕಬೇಕು. 40 ಗ್ರಾಂ. ಮೆಗ್ನೀಷಿಯಂ ಸಲ್ಫೇಟ್ ಬಳಸುವುದು ಅಗತ್ಯ. ಬಿತ್ತನೆ ಮಾಡುವ ಹಿಂದಿನ ದಿನ ರೆಡೋಮಿಲ್ ಗೋಲ್ಡ್ ಔಷಧವನ್ನು 15ಗ್ರಾಂ.ಗೆ 10 ಲೀಟರ್ ನೀರು ಮಿಶ್ರಣ ಮಾಡಿ ಬೆಡ್‌ಗಳ ಮೇಲೆ ಸುರಿಯಬೇಕು.
20-25ದಿನಗಳ ಕಾಲ ಬೀಜಗಳು ಮೊಳಕೆಯೊಡೆದು ಬೆಳೆಯಲು ಈ ಎಲ್ಲ ಕ್ರಮಗಳು ಅವಶ್ಯಕ. ನರ್ಸರಿ ಬೆಡ್ ಮಾಡಿದ ಭೂಮಿಯಲ್ಲಿ ಈ ಹಿಂದೆ ಬೇರು ಗಂಟು ರೋಗ ಅಥವಾ ಕಪ್ಪುಚುಕ್ಕೆ ರೋಗ ಬಾಧೆ ಕಂಡುಬಂದ ಹಿನ್ನಲೆಯಿದ್ದರೆ, ಈ ಬಾರಿ ಸಿಟಿಆರ್‌ಐ ಆವಿಷ್ಕಾರ ಮಾಡಿರುವ ಎಫ್‌ಸಿಎಚ್ 222 ತಳಿಯನ್ನು ಬಳಸುವುದು ಸೂಕ್ತ. ಏಕೆಂದರೆ ಎಫ್‌ಸಿಎಚ್ 222 ತಳಿ ರೋಗ ಮುಕ್ತ ಮತ್ತು ಗ್ರೇಡ್ ಒನ್ ಎಲೆಗಳನ್ನು ಅತಿಹೆಚ್ಚು ನೀಡುವ ತಳಿಯಾಗಿದೆ.

ಎಫ್‌ಐಎಂ ಔಷಧವನ್ನು(ಪ್ರತಿಬೆಡ್‌ಗೆ 15-20 ಕೆಜಿ)ಬೆಡ್ ಮೇಲೆ ಸಿಂಪಡಿಸಬೇಕು. ಬಿತ್ತನೆಬೀಜಗಳನ್ನು ನೆಡುವ ಮುನ್ನ 10 ಲೀಟರ್ ನೀರಿಗೆ ರೆಡೋಮಿಲ್ ಗೋಲ್ಡ್ ಅಥವಾ ಮಾಟ್ಕೋ ಔಷಧವನ್ನು ಸಿಂಪಡಿಸಿ ನೆಟ್ಟಲ್ಲಿ ಗುಣಮಟ್ಟದ ಸಸಿಗಳನ್ನು ಪಡೆಯಲು ಸಾಧ್ಯ.

ಕೋಕಾಪಿಟ್ ಬಳಕೆ: 30 ದಿನಗಳ ನಂತರ ಸಸಿಗಳನ್ನು ಟ್ರೇಯಲ್ಲಿಟ್ಟು ನಿರ್ವಹಿಸುವ ಕಾರ್ಯ ಆರಂಭವಾಗುತ್ತದೆ. ಒಂದು ಟ್ರೇಯಲ್ಲಿ 98 ಗುಳಿಗಳಿದ್ದು, ಪ್ರತಿ ಟ್ರೇ 1-2 ಕೆಜಿ ಕೋಕಾಪಿಟ್ ಗೊಬ್ಬರದ ಅವಶ್ಯಕತೆ ಇರುತ್ತದೆ. 3 ಎಕರೆ ಭೂಮಿಯಲ್ಲಿ ತಂಬಾಕು ಬೆಳೆಯಲು ಕನಿಷ್ಟ 250 ಟ್ರೇಗಳಲ್ಲಿ ಸಸಿಗಳನ್ನು ನಿರ್ವಹಿಸುವ ಅಗತ್ಯವಿದ್ದು, ಇದರ ಮೂಲಕ 20 ಸಾವಿರ ಸಸಿಗಳನ್ನು ಪಡೆಯಬಹುದಾಗಿದೆ. ಕೋಕಾಪಿಟ್ ಗೊಬ್ಬರ ಪರಿಣಾಮಕಾರಿಯಾಗಲು ಜೈವಿಕ ಪೋಷಕಾಂಶಗಳಾದ ಪೆಸಿಲೋಮೈಸಿಸ್ ಲಿಲಾಸಿಯಮ್ ಮತ್ತು ಟ್ರೀಕೋಡರ್ಮ ಪೋಷಕಾಂಶಗಳನ್ನು 36 ಕೆಜಿ ಕೋಕಾಪಿಟ್ ಬ್ಯಾಗ್‌ಗೆ ಒಂದು ಕೆಜಿ ಮಿಶ್ರಣ ಮಾಡಿ ಬಳಸುವುದು ಸೂಕ್ತ ಎಂದು ವಿಜ್ಞಾನಿಗಳು ತಿಳಿಸುತ್ತಾರೆ.

ಟ್ರೇನಲ್ಲಿ ಸಸಿಗಳನ್ನು ಸ್ಥಳಾಂತರಿಸಿದ ನಂತರದ 15 ದಿನಗಳಲ್ಲಿ ದಿಂಡಿನಲ್ಲಿ ಕಪ್ಪುಚುಕ್ಕೆ ರೋಗ ಕಾಣಿಸಿಕೊಳ್ಳುವ ಸಾದ್ಯತೆ ಇದ್ದು, ಟಿಲ್ಟ್ ಅಥವಾ ಗ್ಲೋ ಇಟ್ ಔಷಧಗಳನ್ನು(15 ಲೀಟರ್ ಕ್ಯಾನ್‌ಗೆ 7 ಎಂಎಲ್) ಸಿಂಪಡಿಸುವುದರಿಂದ ರೋಗಬಾಧೆ ತಡೆಗಟ್ಟಲು ಸಾಧ್ಯ. ಹವಾಮಾನದಲ್ಲಿ ಒಣಹವೆ ಮುಂದುವರೆದಿದ್ದರೆ ಕಾಂಡ ಕೊರೆತ ರೋಗ ತಗಲುವ ಸಾಧ್ಯತೆ ಇದ್ದು, 15 ಲೀಟರ್ ನೀರಿಗೆ 5ಎಂಲ್‌ಎಲ್ ಕೊರಾಜೆನ್ ಅಥವಾ 5 ಗ್ರಾಂ ಎಮ್ಯಾಕ್ಟಿನ್‌ನ್ನು 5ಗ್ರಾಂ ಲಿಗಾಸಿ ಔಷಧಿಯೊಂದಿಗೆ ಮಿಶ್ರಣಗೊಳಿಸಿ ಸಿಂಪಡಿಸುವುದು ಸೂಕ್ತ ಎಂದು ತಿಳಿಸುತ್ತಾರೆ

 

Share This Article

ಖಾಲಿ ಹೊಟ್ಟೆಯಲ್ಲಿ ಶುಂಠಿ ತಿನ್ನಿರಿ! ಈ 6 ಆರೋಗ್ಯ ಪ್ರಯೋಜನಗಳು ಪಡೆಯಿರಿ.. | Ginger

Ginger: ಇಂದಿನ ಆಧುನಿಕ ಜಗತ್ತಿನಲ್ಲಿ ವೇಗದ ಜೀವನದಲ್ಲಿ ಮನುಷ್ಯನ ದೇಹ ರೋಗದ ಗೂಡಾಗುತ್ತಿದೆ. ಜಡ ಜೀವನ…

ಸಾಲದ ಹೊರೆಯಿಂದ ಬಳಲುತ್ತಿದ್ರೆ ಶ್ರಾವಣ ಮಾಸದಲ್ಲಿ ಈ ಸಣ್ಣ ಕೆಲಸ ಮಾಡಿ: ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಿರಿ.. | Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಪವಿತ್ರ ಮಾಸದಲ್ಲಿಯೇ ಶಿವನು ಪಾರ್ವತಿಯನ್ನು ವಿವಾಹವಾಗದ್ದು ಎಂದು…