ಶಿರಗುಪ್ಪಿ: ಜಗತ್ತಿಗೆ ಅಹಿಂಸಾ ಸಂದೇಶ ಬಿತ್ತರಿಸಿರುವುದು ಜೈನ ಧರ್ಮ. ಸನಾತನ ಹಿಂದು ಧರ್ಮದ ಪಾಲನೆಯಲ್ಲಿ ಜೈನ ಧರ್ಮದ ಕೊಡುಗೆ ಅಪಾರವಾಗಿದೆ. ಜೈನ ಧರ್ಮವು ದೇಶ, ವಿದೇಶದ ಅನೇಕರಿಗೆ ಸತ್ಯ, ನಿಷ್ಠೆ ಹಾಗೂ ಅಹಿಂಸಾ ಮಾರ್ಗ ತೋರಿಸಿಕೊಟ್ಟಿದೆ ಎಂದು ರಾಷ್ಟ್ರಸಂತ ಮುನಿಶ್ರೀ 108 ಚಿನ್ಮಯಸಾಗರ (ಜಂಗಲ್ವಾಲೆ ಬಾಬಾ) ಮಹಾರಾಜರು ಹೇಳಿದ್ದಾರೆ.
ಶೇಡಬಾಳದ ಶಾಂತಿಸಾಗರ ಆಶ್ರಮದಲ್ಲಿ ಭಾನುವಾರ ದಕ್ಷಿಣ ಭಾರತ ಜೈನ ಸಭೆಯ ವೀರಸೇವಾದಳದ ವತಿಯಿಂದ ಮುನಿಶ್ರೀಗಳ 32 ವರ್ಷಗಳ ಧರ್ಮಸೇವೆಗೆ ವಿದ್ಯಾವರ್ಧನ ಸಮರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುನಿಶ್ರೀಗಳ ಆರೋಗ್ಯ ಲೆಕ್ಕಿಸದೆ ಸಮಾರಂಭದಲ್ಲಿ ಪಾಲ್ಗೊಂಡು ನೆರೆದ ಸಹಸ್ರಾರು ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡಿದರು.
ವೀರಸೇವಾದಳದ ಅನೇಕ ಪದಾಕಾರಿಗಳು ಮಾತನಾಡಿ, ಮುನಿಶ್ರೀ ಚಿನ್ಮಯಸಾಗರಜೀ ಮಹಾರಾಜರು ಜೈನ ಮತ್ತು ಜೈನೇತರ ಸಮಾಜಕ್ಕೆ ಸತತ 32 ವರ್ಷಗಳಿಂದ ದೇಶ ಸಂಚಾರ ಮಾಡಿ ಧರ್ಮಪ್ರವಾರ, ಧರ್ಮಸೇವೆ, ವ್ಯಸನಮುಕ್ತ ಸಮಾಜದ ನಿರ್ಮಾಣ ಸೇರಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದನ್ನು ಸ್ಮರಿಸಿದರು. ಮುನಿಶ್ರೀಗಳ ಧರ್ಮೋಪದೇಶದಿಂದ ಅರಣ್ಯದಲ್ಲಿ ವಾಸಿಸುವ ಆದಿವಾಸಿ ಜನಾಂಗ ಮತ್ತು ಜೈನ, ಇತರೇ ಸಮಾಜದ ಯುವಕರು ಜಾಗೃತರಾಗಿದ್ದಾರೆ. ಅವರ ಉಪದೇಶದಿಂದ ಯುವಕರು ವ್ಯಸನಮುಕ್ತಿ ಮತ್ತು ಸಸ್ಯಾಹಾರಿಗಳಾಗಿದ್ದಾರೆ ಎಂದರು. ಸಭೆಯಲ್ಲಿ ಆಚಾರ್ಯ 108 ಜಿನಸೇನ ಮಹಾರಾಜ ಹಾಗೂ ಅಜಿತಸೇನ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ಬಾಲಬ್ರಹ್ಮಚಾರಿ ಸಂಜಯ ಗೋಪಾಲಕರ, ಜೈನ ಸಭೆಯ ಪ್ರಮುಖರಾದ ಬಾಲಚಂದ್ರ ಪಾಟೀಲ, ಡಾ.ಅಜಿತ್ ಪಾಟೀಲ, ಮಹಾದೇವ ಡೋರಲೆ, ಪಾ.ಪಾ.ಪಾಟೀಲ, ಸಂಜಯ ಶೆಟೆ, ಅಪ್ಪಣಗೌಡ ಪಾಟೀಲ, ಸುಭಾಷ ಮಗದುಮ್ಮ, ಡಾ.ರಾಜೇಂದ್ರ ಕುನ್ನೂರೆ, ಎನ್.ಜೆ.ಪಾಟೀಲ, ಭೂಪಾಲ ಗಿರಮಲ್ಲ ಹಾಗೂ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಭಾರತದ ಅನೇಕ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ವೀರಸೇವಾದಳದ ಪದಾಕಾರಿಗಳು ಮತ್ತು ಶ್ರಾವಕ -ಶ್ರಾವಕಿಯರು ಇದ್ದರು.
ಪ್ರಕಾಶ ಮೋದಿ ದಂಪತಿಗೆ ಸನ್ಮಾನ
ಸಮಾರಂಭದಲ್ಲಿ ವಿಶೇಷವಾಗಿ ದಕ್ಷಿಣ ಭಾರತ ಜೈನ ಸಭೆ ವತಿಯಿಂದ ಛತ್ತೀಸ್ಗಡದ ಚಿನ್ಮಯಸಾಗರ ಮಹಾರಾಜ ಚಾರಿಟೆಬಲ್ ಟ್ರಸ್ಟ್ನ ಪ್ರಕಾಶ ಮೋದಿ ಹಾಗೂ ಸೌ.ಸುಮನಲತಾ ಮೋದಿ ಅವರನ್ನು ಮುನಿಶ್ರೀಗಳು ಸನ್ಮಾನಿಸಿದರು. ಅಲ್ಲದೆ ಅವಿರತ 25 ವರ್ಷ ಸೇವೆಗೆ ಮುನಿಭಕ್ತ ಪರಿವಾರ ಬಿರುದು, ಪ್ರಶಸ್ತಿ ಪತ್ರ ನೀಡಲಾಯಿತು.