ಬೆಳಗಾವಿ: ಕರೊನಾ ವೈರಸ್ ಭೀತಿ ನಡುವೆಯೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸುಸೂತ್ರವಾಗಿ ಮುಗಿದಿದೆ. ಅಗತ್ಯ ಸುರಕ್ಷತಾ ಕ್ರಮ ಅನುಸರಿಸಿ 32 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಆದರೆ, 774 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಸುಳಿದಿರಲಿಲ್ಲ.ಹಾಗಾದರೆ, ಈ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಲು ಕಾರಣಗಳೇನು? ಕರೊನಾ ಭಯದಿಂದ ಅವರು ಪರೀಕ್ಷೆ ಬರೆಯಲಿಲ್ಲವೇ? ಎಂಬಿತ್ಯಾದಿ ಮಾಹಿತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಗ್ರಹಿಸಿದೆ.

ಅಧಿಕಾರಿಗಳು, ಆಯಾ ಪ್ರೌಢಶಾಲೆಗಳ ಮುಖ್ಯಾ ಧ್ಯಾಪಕರು ಮತ್ತು ಶಿಕ್ಷಕರು ನೇರವಾಗಿ ವಿದ್ಯಾರ್ಥಿ ಗಳ ಮನೆಗೆ ಹೋಗಿ, ಯಾವುದೇ ಗೊಂದಲಗಳಿದ್ದರೆ ಬಗೆಹರಿಸುತ್ತಿದ್ದಾರೆ. ಪೂರಕ ಪರೀಕ್ಷೆಗೆ ಹಾಜರಾಗಿ ಶೈಕ್ಷಣಿಕ ಸಾಧನೆ ತೋರುವಂತೆ ಪ್ರೇರಣೆ ತುಂಬುತ್ತಿದ್ದಾರೆ. ಅಲ್ಲದೆ, ಪರೀಕ್ಷೆಗೆ ಸಿದ್ಧವಾಗಲು ಅಗತ್ಯವಿರುವ ಮಾಹಿತಿ, ಮಾರ್ಗದರ್ಶನವನ್ನೂ ನೀಡುತ್ತಿದ್ದಾರೆ.
ಕೋವಿಡ್-19 ಭಯವೇ?: ಅನಾರೋಗ್ಯ, ಕೌಟುಂಬಿಕ ಸಮಸ್ಯೆ, ಅಪಘಾತ, ಪಾಲಕರ ನಿರಾಸಕ್ತಿ, ಇತರ ಕಾರಣಗಳಿಂದ ಪರೀಕ್ಷೆ ಬರೆದಿಲ್ಲವೆಂದು ಗೈರಾಗಿರುವ ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ, ಕರೊನಾ ಭಯದಿಂದಲೇ ಪರೀಕ್ಷೆ ಬರೆದಿಲ್ಲವೆಂದು ಯಾರೂ ಸ್ಪಷ್ಟಪಡಿಸಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಹೆಚ್ಚಿನ ವಿದ್ಯಾರ್ಥಿಗಳು ಕರೊನಾತಂಕದಿಂದಲೇ ಪರೀಕ್ಷೆ ಬರೆಯಲು ಮನಸ್ಸು ಮಾಡಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪಾಲಕರಿಗೆ ಸಲಹೆ: ಲಾಕ್‌ಡೌನ್ ಜಾರಿಗೂ ಮುನ್ನ, ಪಾಲಕರೊಂದಿಗೆ ವಿವಿಧ ರಾಜ್ಯಗಳಿಗೆ ತೆರಳಿದ್ದ 104 ವಿದ್ಯಾರ್ಥಿಗಳಿಗೆ ಬೆಳಗಾವಿಗೆ ಮರಳಿ ಬಂದು ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಆ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಮತ್ತು ಶಿಕ್ಷಕರು ಪತ್ತೆ ಹಚ್ಚುತ್ತಿದ್ದಾರೆ. ಪಾಲಕರಿಗೆ ಕರೆ ಮಾಡಿ ಪೂರಕ ಪರೀಕ್ಷೆಗೆ ಮಕ್ಕಳನ್ನು ಕಳುಹಿಸುವಂತೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ.
ಪ್ರಥಮ ಅವಕಾಶವೆಂದು ಪರಿಗಣನೆ
ಪರೀಕ್ಷೆಗೂ ಮುನ್ನವೇ ಚನ್ನಮ್ಮ ಕಿತ್ತೂರು ತಾಲೂಕಿನ ಕಲಬಾವಿಯ ವಿದ್ಯಾರ್ಥಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ರಾಮದುರ್ಗ ವಲಯದಲ್ಲಿ ಇಬ್ಬರು, ಸವದತ್ತಿಯ ಓರ್ವ ವಿದ್ಯಾರ್ಥಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಹಾಗಾಗಿ, ನಾಲ್ವರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು. ಪೂರಕ ಪರೀಕ್ಷೆಯಲ್ಲಿ ‘ಪ್ರಥಮ ಅವಕಾಶ’ ಎಂದೇ ಪರಿಗಣಿಸಿ, ಅವರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಡಿಡಿಪಿಐ ಡಾ.ಎ.ಬಿ.ಪುಂಡಲೀಕ ತಿಳಿಸಿದ್ದಾರೆ. ಶೇ.75ರಷ್ಟು ಹಾಜರಾತಿ ಹೊಂದಿರದ ಕಾರಣ 481 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರವೇಶಪತ್ರ ದೊರೆತಿಲ್ಲ. ಹಾಗಾಗಿ, ಪೂರಕ ಪರೀಕ್ಷೆ ಬರೆಯಲು ಅವರಿಗೆ ಅವಕಾಶವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ವಿವಿಧ ಕಾರಣಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾಗಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿದ್ದೇವೆ. ಪೂರಕ ಪರೀಕ್ಷೆಗೆ ಹಾಜರಾಗುವಂತೆ ಪ್ರತಿಯೊಬ್ಬರಿಗೆ ಸೂಚಿಸಿದ್ದೇವೆ. ವಿದ್ಯಾರ್ಥಿಗಳ ಮತ್ತು ಪಾಲಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಏನೇ ಗೊಂದಲ ತಲೆದೋರದಂತೆ ಎಚ್ಚರ ವಹಿಸುತ್ತೇವೆ.
| ಡಾ. ಎ.ಬಿ. ಪುಂಡಲೀಕ ಡಿಡಿಪಿಐ, ಬೆಳಗಾವಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. ಶೇ.75 ಹಾಜರಾತಿ ಹೊಂದಿರದ 1 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶಪತ್ರ ನೀಡಲಾಗಿಲ್ಲ. 352 ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ವಲಸೆ ಹೋಗಿದ್ದಾರೆ. ಅಂದಾಜು 400 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಲು ಕಾರಣವೇನು ಎಂದು ಮಾಹಿತಿ ಕಲೆಹಾಕುತ್ತಿದ್ದೇವೆ. ಪೂರಕ ಪರೀಕ್ಷೆ ಬರೆಯಲು ಆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತೇವೆ. ಅಗತ್ಯ ಮಾಹಿತಿಯನ್ನೂ ನೀಡುತ್ತೇವೆ.
| ಗಜಾನನ ಮನ್ನಿಕೇರಿ ಚಿಕ್ಕೋಡಿ ಡಿಡಿಪಿಐ