ಮುಖ್ಯಮಂತ್ರಿಯಾಗಿ ವಿಫಲವಾಗಿರುವ ನಾಯ್ಡು ಪ್ರಧಾನಿಯಾಗುವ ಹಗಲುಗನಸು ಕಾಣುತ್ತಿದ್ದಾರೆ: ಮೋದಿ

ಅಮರಾವತಿ: ತನ್ನ ಮಗನ ಉದಯಕ್ಕಾಗಿ ರಾಜ್ಯವನ್ನು ಸೂರ್ಯಾಸ್ತದ ಕಡೆಗೆ ನೂಕುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಕಡೆಗಣಿಸಿ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್​. ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಂಧ್ರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾನುವಾರ ವಿಡಿಯೋ ಕಾನ್ಫರೆನ್ಸ್​ ಮುಖಾಂತರ ಮಾತನಾಡಿದ ಅವರು ಚಂದ್ರಬಾಬು ನಾಯ್ಡು ಕಾಂಗ್ರೆಸ್​ ಜತೆ ಕೈ ಜೋಡಿಸುವ ಮೂಲಕ ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸ್ಥಾಪಕ ಎನ್​ ಟಿ ರಾಮರಾವ್​ ಅವರಿಗೆ ದ್ರೋಹ ಬಗೆದಿದ್ದಾರೆ ಎಂದು ಟೀಕಿಸಿದರು.

ನಿಮ್ಮ ರಾಜಕೀಯ ಹಿತಾಶಕ್ತಿ ಹಾಗೂ ಅಧಿಕಾರದ ದಾಹವನ್ನು ಪಕ್ಕಕ್ಕಿಟ್ಟು ಆಂಧ್ರ ಪ್ರದೇಶದ ಅಭಿವೃದ್ಧಿ ಕಡೆ ಗಮನವಹಿಸಿದಾಗ ಮಾತ್ರ ತೆಲುಗು ಹೆಮ್ಮೆ ಸಾಧ್ಯ ಎಂದು ನಾಯ್ಡು ಅವರಿಗೆ ತಿರುಗೇಟು ನೀಡಿದರು.

ಅಭಿವೃದ್ಧಿ ಎಂಬ ಹಣ್ಣನ್ನು ಆಂಧ್ರದ ಪ್ರತಿಯೊಬ್ಬ ನಾಗರಿಕನು ಅನುಭವಿಸಬೇಕು ಎಂಬುದು ಎನ್​ಟಿಆರ್​ ಅವರ ಸ್ವರ್ಣ ಆಂಧ್ರ ಪ್ರದೇಶದ ಕನಸ್ಸಾಗಿತ್ತು. ಆದರೆ, ಅದು ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಎನ್​ಟಿಆರ್​​ ಅವರ ಮೌಲ್ಯ ಹಾಗೂ ಅವರ ನೆನಪನ್ನು ಮರೆ ಮಾಚಿ, ಅವರಿಗೆ ದ್ರೋಹ ಬಗೆದವರ ವಿರುದ್ಧ ಮತಚಲಾವಣೆ ಮಾಡಿದಾಗಲೇ ಎನ್​ಟಿಆರ್​ ಅವರಿಗೆ ನಿಜವಾದ ಕಾಣಿಕೆ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.

ಹೆಮ್ಮೆಯ ತೆಲುಗು ಮಾಡುವುದರ ಕುರಿತು ಕೆಲಸ ಮಾಡುವುದರ ಬದಲು ಸುಳ್ಳು ಹೇಳಿಕೊಂಡು ಮೋದಿ ಅವರನ್ನು ಟೀಕಿಸುತ್ತಿದ್ದಾರೆ. ಯಾಕೆಂದರೆ ಅವರು ಅಧಿಕಾರವನ್ನು ಕಳೆದುಕೊಳ್ಳುವುದರ ಬಗ್ಗೆ ಚಿಂತಿಸುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ವಿಫಲವಾಗಿರುವ ನಾಯ್ಡು ಪ್ರಧಾನ ಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. (ಏಜೆನ್ಸೀಸ್​)