More

    ಹಣ ಸೃಜಿಸುವ ಶಕ್ತಿ ಇರುವುದು ಉಳಿತಾಯಕ್ಕೆ

    ಹಣ ಸೃಜಿಸುವ ಶಕ್ತಿ ಇರುವುದು ಉಳಿತಾಯಕ್ಕೆಮಾಣಿ ಹುಟ್ಟಿದನೋ ಮಾರಾಯ ಹುಟ್ಟಿದನೋ ಭತ್ತದ ಕಣಜಾವ ಕಟ್ಟಲೆ ಹುಟ್ಟಿದನೋ | ಕೂಸು ಹುಟ್ಟಿತ್ತೋ ಕೊನ್ನಾಸು ಹುಟ್ಟಿತ್ತೋ ನುಚ್ಚಿನ ಕುಡಿಕೆಯ ಮುಚ್ಚಲು ಹುಟ್ಟಿತ್ತೋ ||

    ನಮ್ಮ ಹಳ್ಳಿಗಳಲ್ಲಿ ಇಲಿಗಳು ಹಾಡುತ್ತವೆ ಎನ್ನಲಾದ ಈ ಜಾನಪದ ಹಾಡನ್ನು ಮೊದಲ ಬಾರಿ ಕೇಳಿದಾಗ ನನಗಾದ ಆಶ್ಚರ್ಯ ಅಂತಿಂಥದ್ದಲ್ಲ. ಈ ಜಾನಪದ ಹಾಡನ್ನು ಒಂದು ಗಂಡು ಇಲಿಯೇ ಬರೆದಿರಬೇಕು ಎಂಬ ಅನುಮಾನ ಹುಟ್ಟಿಬಿಟ್ಟಿತು. ಏಕೆಂದರೆ ಜಾನಪದ ಹಾಡುಗಳನ್ನು ರಚಿಸಿದವರು ಯಾರು ಎಂಬುದಕ್ಕೆ ಪುರಾವೆಗಳಿಲ್ಲ. ಮನುಷ್ಯರ ಬಾಯಿಂದ ಬಾಯಿಗೆ ಹರಿದು ಬಂದ ಈ ಹಾಡನ್ನು ನಮ್ಮ ಹಳ್ಳಿಯ ಕಿಲಾಡಿ ಮೂಷಿಕಗಳು ಅದ್ಯಾವಾಗ ಕಲಿತವೋ ಆಶ್ಚರ್ಯವೇ ಸರಿ. ಸಹಜವಾಗಿಯೇ ಮನುಷ್ಯನ ಆಹಾರದ ಕಣಜವನ್ನು ಧ್ವಂಸ ಮಾಡುವುದರಲ್ಲಿ ಪಳಗಿದ ಈ ಇಲಿಗಳಿಗೆ ‘ಮಾಣಿ’ಗಳು ಇಷ್ಟವಾದಷ್ಟು ‘ಕೂಸು’ಗಳು ಇಷ್ಟವಾಗಲಾರವು. ಯಾಕೆಂದರೆ ನುಚ್ಚಿನ ಕುಡಿಕೆಯನ್ನು ಸಹ ಮುಚ್ಚಿಡುವಷ್ಟು ಜಾಗ್ರತೆ ವಹಿಸುವ ಹೆಣ್ಣುಮಕ್ಕಳು ಮನೆಯ ಆದಾಯ ಪೋಲಾಗಲು ಬಿಡುವುದಿಲ್ಲ ಎಂಬ ಸತ್ಯ ಇಲಿಗಳಿಗೂ ಗೊತ್ತು. ಆದ್ದರಿಂದಲೇ ಅವುಗಳು ಕೂಸುಗಳನ್ನು ಅಂದರೆ ಹೆಣ್ಣುಮಕ್ಕಳನ್ನು ಕೊನ್ನಾಸು (ನಿರುಪಯುಕ್ತ ಕಳೆಯಂಥ ಸಸ್ಯ)ಎಂದು ಕರೆದದ್ದು.

    ‘ಗಂಡು ಆಹಾರವನ್ನು ದುಡಿದು ತರುವವನು, ಹೆಂಡತಿ ಅದನ್ನು ಬೇಯಿಸುವವಳು’ ಎಂಬ ಸುಲಭ ಡಿವಿಷನ್ ಆಫ್ ಲೇಬರ್ ಇದ್ದ ಕಾಲದಲ್ಲಿ ಜಗತ್ತಿನ ಜನಸಂಖ್ಯೆ ಕಡಿಮೆಯಿದ್ದು, ಮನುಷ್ಯನ ಬೇಡಿಕೆಗಳ ಪಟ್ಟಿ ತೀರಾ ಚಿಕ್ಕದಿತ್ತು. ಗಂಡು ದುಡಿದು ತಂದಿದ್ದರಲ್ಲಿ ಹೆಂಡತಿ ಉಳಿತಾಯ ಮಾಡಿ ಆಪದ್ಧನವಾಗಿ ಬಂಗಾರದ ರೂಪದಲ್ಲಿಯೋ, ಸಾಸಿವೆಡಬ್ಬಿಯ ಖಾತೆಯಲ್ಲಿಯೋ ಉಳಿತಾಯ ಮಾಡುತ್ತಿದ್ದಳು. ಸರಳ ಜೀವನಶೈಲಿ, ಬಾಹ್ಯ ಅಲಂಕಾರದ ವಸ್ತುಗಳಿಗೆ ಕಡಿಮೆ ಪ್ರಾಮುಖ್ಯತೆ, ಮತ್ತು ಇದೆಲ್ಲಕ್ಕಿಂತ ತೋರುಗಾಣಿಕೆಯ ವೈಭೋಗದ ಕುರಿತು ಆಸಕ್ತಿ ಇಲ್ಲದ ಸರಳ ಶ್ರಮಜೀವಿಗಳು ಅಂದಿನವರಾದ್ದರಿಂದ ಕಡಿಮೆ ಆದಾಯದಲ್ಲಿಯೂ ಉಳಿತಾಯ ಮಾಡುವ ಪ್ರವೃತ್ತಿ ನಮ್ಮ ಹಿರಿಯರಲ್ಲಿತ್ತು. ಮಕ್ಕಳಿಗೆ ಮದುವೆಯ ಕಾಲಕ್ಕೆ ಆಭರಣ ಮಾಡಿಸುವುದು, ಉಳಿದಂತೆ ಭೂಸಂಪತ್ತು, ಗೋಸಂಪತ್ತನ್ನು ಅಭಿವೃದ್ಧಿ ಪಡಿಸುವುದರಲ್ಲಿ ಹೆಚ್ಚಿನ ಶ್ರಮವಹಿಸುತ್ತಿದ್ದ ಹಿರಿಯರು, ಇಂದಿನವರು ಮೈಗೆ ಆಹ್ವಾನಿಸಿಕೊಂಡು ಕುಣಿಯುತ್ತಿರುವ ‘ಕೊಳ್ಳುಬಾಕ ಸಂಸ್ಕೃತಿ’ಯನ್ನು ಕಂಡವರೇ ಅಲ್ಲ! ಅಗತ್ಯಕ್ಕಿಂತ ಹೆಚ್ಚಿನದನ್ನು ತಂದು ತಂದು ಮನೆಯಲ್ಲಿ ಪೇರಿಸುವ, ಅವುಗಳನ್ನು ಒಪ್ಪ ಓರಣವಾಗಿಸುವುದರಲ್ಲಿಯೇ ಹೈರಾಣಾಗುವ ಗೃಹಿಣಿಯರು, ಅಥವಾ ಅದಕ್ಕಾಗಿಯೇ ಕೆಲಸದವರನ್ನು ಇಟ್ಟು ಹಣ ವ್ಯಯಿಸುವ ಕೆಲ ಶ್ರೀಮಂತರು ನಮ್ಮ ನೆಲದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ‘ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ. ಆದರೆ ಅದನ್ನು ಕೇಳಿಸಿಕೊಂಡವರೆಷ್ಟು?

    ಹಾಗೆಂದು ಲೌಕಿಕ ವಿಷಯಗಳನ್ನು ಎಂದೂ ದೂರೀಕರಿಸದ ನಮ್ಮ ಅರ್ಥಶಾಸ್ತ್ರ, ‘ಮನುಷ್ಯನ ಬಯಕೆಗಳೇ ಆರ್ಥಿಕ ಚಟುವಟಿಕೆಗಳ ಮೂಲ’ ಎಂದು ಸಾರಿತು. ಹಾಗೂ ಈ ಮಾನವನ ಬಯಕೆಗಳ ಅಡಿಪಾಯದ ಮೇಲೇ ಬೆಳೆಸಲ್ಪಡುವ ಬೇಡಿಕೆ ಮತ್ತು ಪೂರೈಕೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದೇ ಮನುಷ್ಯನ ಬುದ್ಧಿವಂತಿಕೆ ಎಂದು ಬೋಧಿಸಿತು. ಅರ್ಥಶಾಸ್ತ್ರವು ‘ಸರಳ ಜೀವನ ಉನ್ನತ ಚಿಂತನ’ ಇತ್ಯಾದಿ ತಾತ್ವಿಕ ಸಂಗತಿಗಳ ಕುರಿತೇನೂ ಮಾತನಾಡುವುದಿಲ್ಲ. ಆದರೂ ಮನುಷ್ಯನ ಆಸೆಗಳನ್ನು (ಘಛ್ಚಿಛಿಠಠಚ್ಟಜಿಛಿಠ, ್ಚಞ್ಛಟ್ಟಠಿಠ ಚ್ಞಛ ಔx್ಟಛಿಠ) ಅಗತ್ಯಗಳು, ಆರಾಮದಾಯಕ ವಸ್ತುಗಳು ಹಾಗೂ ಐಷಾರಾಮೀ ವಸ್ತುಗಳೆಂದು ವಿಂಗಡಿಸಿ ತೋರಿಸುತ್ತದೆ.

    ಆದಾಯಕ್ಕೆ ತಕ್ಕಂತೆ ಖರ್ಚನ್ನು ಹೊಂದಿಸಿಕೊಳ್ಳುವ ಆರ್ಥಿಕ ಸೂತ್ರವನ್ನು ತಿಳಿಸಲು ನಮ್ಮ ಗಾದೆಗಳ ಜನಕರು ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬ ಗಾದೆಯನ್ನೇ ನೀಡಿದ್ದಾರೆ. ಸಂತೋಷದ ಬದುಕಿಗೆ ಐಷಾರಾಮಿ ವಸ್ತುಗಳ ಅಗತ್ಯವಿಲ್ಲ ಎಂಬುದನ್ನು ಕನ್ನಡದ ಹೆಮ್ಮೆಯ ಕವಿ ಜಿ.ಪಿ. ರಾಜರತ್ನಂ ಅವರ ಯೆಂಡಗುಡುಕ ರತ್ನನ ಬಾಯಲ್ಲಿ ಕೇಳಬೇಕು. ‘ಏಳ್ಕೋಳ್ಳಾಕೊಂದೂರು, ತಲೆಮ್ಯಾಗೆ ಒಂದ್ಸೂರು, ಮಲ್ಗಾಕೆ ಭೂಮಿತಾಯಿ ಮಂಚ. ಕೈಹಿಡಿದೋಳ್ ಪುಟ್ನಂಜಿ, ನಗ್ನಗ್ತಾ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ…’ ಹೀಗೆ ಸರಳ ಬದುಕಿನ ಸೂತ್ರವೊಂದನ್ನು ಹೆಂಡಕುಡುಕನ ಬಾಯಲ್ಲಿ ಹೇಳಿಸಿದ್ದಾರೆ ಕವಿ ರಾಜರತ್ನಂ. ಆದರೆ ಇಂದಿನ ಜೀವನಶೈಲಿಯಲ್ಲಿ ಹಣಕ್ಕೆ ಪ್ರಾಧಾನ್ಯ ಹೆಚ್ಚುತ್ತಲೇ ಹೋಗಿದೆ. ‘ರೋಟಿ ಕಪಡಾ ಔರ್ ಮಕಾನ್’ ಎಂಬ ಮೂರು ವಿಭಾಗಗಳಲ್ಲಿ ನಮ್ಮ ಹೊಟ್ಟೆ ಮತ್ತು ಬಟ್ಟೆಗೆ ಅಂಥ ಏನು ದೊಡ್ಡ ಮೊತ್ತದ ಖರ್ಚುಗಳಿರುವುದಿಲ್ಲ (ಇದರಲ್ಲಿ ಸ್ಟಾರ್ ಹೋಟೆಲ್​ಗಳಿಗೆ ಹೋಗಿ ತಿನ್ನುವ ಖಯಾಲಿ ಇರುವವರು, ಮಾತೆತ್ತಿದರೆ ಆನ್​ಲೈನ್ ಪರ್ಚೇಸ್ ಮಾಡಿ ವಿವಿಧವಿನ್ಯಾಸದ ಬಟ್ಟೆಗಳನ್ನು ತರಿಸುತ್ತಲೇ ಇರುವ ಜನರು ಬರುವ ಹಾಗಿಲ್ಲ). ಆದರೆ, ಮನೆ ಕಟ್ಟುವ, ಮಕ್ಕಳಿಗೆ ಶಿಕ್ಷಣ ಕೊಡಿಸುವ, ಹಿರಿಯರ ಔಷಧ ಖರ್ಚನ್ನು ಭರಿಸುವ ದೊಡ್ಡ ಹೊಣೆಗಾರಿಕೆಗಳನ್ನು ದುಡಿಯುವ ದಂಪತಿ ವಹಿಸಲೇಬೇಕಾಗುತ್ತದೆ.

    ಅಪ್ಪ ಮಾಡಿಟ್ಟ ಆಸ್ತಿಯ ಬಲ ಇಲ್ಲದವರು, ತಾವೇ ದುಡಿದು ಸಂಸಾರ ಸಾಗಿಸುವ ಮಧ್ಯಮವರ್ಗದವರು, ಬೆಲೆಏರಿಕೆಯ ಭರಾಟೆಯಲ್ಲಿ ಸಂಸಾರದ ಖರ್ಚನ್ನು ತೂಗಿಸಲಾರದೇ ಮನುಷ್ಯಸಹಜ ಆಸೆಗಳನ್ನು ಹತ್ತಿಕ್ಕುತ್ತ ನಿರಾಶರಾಗುವ ಮಹಿಳೆಯರು ಹೇಗಾದರೂ ಹಣ ಸಂಪಾದನೆ ಮಾಡಿಬಿಡಬೇಕೆಂಬ ಧಾವಂತಕ್ಕೆ ಬಲಿಯಾಗುವುದುಂಟು. ಈ ಹಣದ ಆಸೆ ಎಂಬುದು ಎಂಥವನನ್ನೂ ಅಪಾಯಕಾರಿ ಸ್ಥಿತಿಗೆ ತಳ್ಳಬಹುದು. ಚೀಟಿ ಕಟ್ಟಿ ಹಣ ಮಾಡುವುದು, ಹೆಚ್ಚಿನ ಬಡ್ಡಿಯ ಆಮಿಷ ತೋರಿಸುವ ಸಂಸ್ಥೆಗಳಲ್ಲಿ ಹಣವಿಟ್ಟು ಅವರು ಇದ್ದಕ್ಕಿದ್ದಂತೆ ಒಂದು ದಿನ ನಾಪತ್ತೆಯಾದಾಗ ತಲೆಯ ಮೇಲೆ ಕೈಯಿಟ್ಟು ರೋದಿಸುವುದು, ಇವನ್ನೆಲ್ಲ ನೋಡುತ್ತಲೇ ಇರುತ್ತೇವೆ. ಇದಕ್ಕಿಂತಲೂ ಅಪಾಯಕಾರಿಯಾದ ಮಾರ್ಗಗಳನ್ನು ತೋರಿಸುವ ಅಪರಾಧಿ ಜಗತ್ತು ಕೂಡ ನಮ್ಮಸುತ್ತಮುತ್ತ ಜಾಗೃತವಾಗಿರುತ್ತದೆ. ಅಮಾಯಕ ಯುವತಿಯರನ್ನು ಹನಿಟ್ರಾ್ಯಪ್​ನಂಥ ನೀಚ ಕೆಲಸಗಳಿಗೆ ಬಳಸಿಕೊಳ್ಳುವುದು, ಉದ್ಯೋಗ ಕೊಡಿಸುವ ನೆಪದಲ್ಲಿ ನಿರಪರಾಧಿ ಯುವಕರನ್ನು ಅಪರಾಧಿ ಜಗತ್ತಿನೊಳಗೆ ತಳ್ಳಿಬಿಡುವುದು ಇತ್ಯಾದಿ ಕ್ರಿಮಿನಲ್ ಕೆಲಸಗಳನ್ನು ಮೂಲದಲ್ಲಿಯೇ ಗುರುತಿಸಿ ಅವುಗಳಿಂದ ದೂರವಿರುವಷ್ಟಾದರೂ ನಮ್ಮ ಯುವಕ-ಯುವತಿಯರು ಜಾಣರಾಗುವ ಅಗತ್ಯವಿದೆ. ಇಂತಹ ಅಪರಾಧ ಜಗತ್ತಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂಥ ತಿಳಿವಳಿಕೆಯನ್ನೂ ನೀಡುವುದು ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆ ಆಗಬೇಕು. ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂಬ ಜನಜನಿತ ಮಾತು ಯುವಜನಾಂಗಕ್ಕೆ ಅರಿವಾಗಬೇಕು.

    ಕರೊನಾದಿಂದಾಗಿ ಉದ್ಯೋಗ ಕಳೆದುಕೊಂಡ ಅನೇಕ ಕುಟುಂಬಗಳು ಆರ್ಥಿಕವಾಗಿ ಕಂಗಾಲಾದ ಸಂದರ್ಭದಲ್ಲಿ ಮಹಿಳೆಯರನೇಕರು ಆತ್ಮನಿರ್ಭರ ಉದ್ಯೋಗಗಳತ್ತ ಮರಳಿ ಆದಾಯವನ್ನು ಹೆಚ್ಚಿಸಿಕೊಂಡಿದ್ದನ್ನು ನೋಡಿದ್ದೇವೆ. ಹಳ್ಳಿಯೊಂದರಲ್ಲಿ ಎರಡು ಬಗೆಯ ಮಹಿಳೆಯರನ್ನು ನೋಡುವ ಅವಕಾಶ ನನಗೆ ಒದಗಿಬಂದಿತ್ತು. ದೇವಸ್ಥಾನದ ಅರ್ಚಕರೊಬ್ಬರ ಮಡದಿ ದೇವಸ್ಥಾನವೇ ಮುಚ್ಚಿಹೋದಾಗ ಹಸಿವಿನಿಂದ ಕಂಗೆಟ್ಟು ಹತ್ತಿಯಿಂದ ಬತ್ತಿಗಳನ್ನು, ಗೆಜ್ಜೆವಸ್ತ್ರಗಳನ್ನು ಮಾಡಲು ಪ್ರಾರಂಭಿಸಿದರು. ಸುತ್ತಮುತ್ತಲಿನ ಕೆಲ ಮಹಿಳೆಯರು ಅವರ ಜತೆ ಕೈಗೂಡಿಸುತ್ತ ಸಂಜೆಯ ಸಮಯ ದೇವರಸ್ತೋತ್ರಗಳನ್ನು ರಾಗವಾಗಿ ಹಾಡುತ್ತ ಸಮಯದ ಸದುಪಯೋಗ ಪಡೆಯತೊಡಗಿದರು. ಅವರ ಗೃಹ ಕೈಗಾರಿಕೆಯ ವಸ್ತುಗಳಿಗೆ ಬೇಡಿಕೆ ಪ್ರಾಪ್ತವಾಗಿ ಸ್ವಾವಲಂಬಿ ಮಹಿಳೆಯರ ಒಂದು ಪಡೆಯೇ ಆ ಹಳ್ಳಿಯಲ್ಲಿ ನಿರ್ವಣವಾಗಿತ್ತು. ಅಷ್ಟೇನೂ ಬಡತನವಿಲ್ಲದ ಅಡಿಕೆ ಬೆಳೆಗಾರರ ಹೆಂಡತಿಯೊಬ್ಬಳು ಮನೆಗೆ ಕೆಲಸಕ್ಕೆ ಬರುವ ಕೂಲಿಕಾರರ ವಿಶ್ವಾಸಗಳಿಸಲು ಅಡಿಕೆ, ಚಹಾ ಕೊಡುವುದರ ಜೊತೆಗೆ ಒಂದೊಂದು ಗ್ಲಾಸು ಕಂಟ್ರಿ ಸಾರಾಯಿ ನೀಡಲು ತೊಡಗಿದ್ದಳು. ಬರುಬರುತ್ತ ಅದೊಂದು ಕಡ್ಡಾಯ ಪಾನೀಯವೆಂಬಂತೆ ಕೆಲಸದಾಳುಗಳು ಅವರ ಮೇಲೆ ಒತ್ತಡ ತರತೊಡಗಿದರು. ಗೌರವಾನ್ವಿತ ಕುಟುಂಬವೊಂದರ ಸೊಸೆಯಾದ ಅವಳೀಗ ಕಂಟ್ರಿ ಸಾರಾಯಿ ಮಾರುವ ಕಳಂಕಿತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾಳೆ.

    ಕುಟುಂಬದ ಆದಾಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕೆಂಬ ಬಯಕೆ ತಪ್ಪಲ್ಲ. ಆದರೆ ಅದಕ್ಕಾಗಿ ಆರಿಸಿಕೊಳ್ಳುವ ಮಾರ್ಗದ ಕುರಿತು ಸದಾ ಎಚ್ಚರದಿಂದಿರಬೇಕಾದ ಹೊಣೆಗಾರಿಕೆ ಮಹಿಳೆಯರ ಮೇಲಿದೆ. ಚಿಕ್ಕಂದಿನಿಂದಲೇ ಉಳಿತಾಯ ಪ್ರವೃತ್ತಿಯನ್ನು ಮಕ್ಕಳಲ್ಲಿ ಬೆಳೆಸುವುದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಪ್ರಾರಂಭಿಸಿದಲ್ಲಿ ಸಂಚಿತ ಹಣವೂ ಬೆಳೆಯುತ್ತ ಮತ್ತೆ ಹಣವನ್ನು ಸೃಜಿಸುವ ತನ್ನ ಶಕ್ತಿಯನ್ನು ತೋರಿಸುತ್ತದೆ. ಆ ಶಕ್ತಿಯೇ ಉಳಿತಾಯದ ಶಕ್ತಿ. ಅದನ್ನು ಸಾಕ್ಷಾತ್ಕರಿಸಿಕೊಂಡು ಉಳಿತಾಯದ ಹಣವನ್ನು ಎಲ್ಲಿ, ಹೇಗೆ ತೊಡಗಿಸಿಕೊಂಡು ಮತ್ತಷ್ಟು ಸದೃಢ ಮೂಲಗಳನ್ನಾಗಿ ಬದಲಾಯಿಸಿಕೊಳ್ಳಬಹುದೆಂದು ತಿಳಿಸುವ ಅನೇಕ ಪರಿಣಿತರು ಸಮಾಜದಲ್ಲಿ ಲಭ್ಯವಿದ್ದಾರೆ.

    ಇತ್ತೀಚೆಗೆ ಶಿಕ್ಷಣ ಸಂಸ್ಥೆಯೊಂದರಲ್ಲಿ ಮಹಿಳಾ ದಿನದ ಅಂಗವಾಗಿ ನನ್ನನ್ನು ಇನ್ನಿಬ್ಬರು ಯುವತಿಯರ ಜತೆ ಸನ್ಮಾನಿಸಿದರು. ಅವರಲ್ಲಿ ಒಬ್ಬಳು ತನ್ನ ಹಸುಗೂಸನ್ನು ತಾಯಿಯ ಮನೆಗೆ ಕಳುಹಿಸಿ ವರ್ಷವಾದರೂ ಮುಖ ನೋಡದ ಕೋವಿಡ್ ಹೆಲ್ತ್ ವಾರಿಯರ್ ಆಗಿದ್ದಳು. ಇನ್ನೊಬ್ಬಳು ಯುವತಿ ಈಗಿನ್ನೂ ಪಿಯುಸಿ ಮುಗಿಸಿ ಇಂಜಿನಿಯರಿಂಗ್ ಪದವಿಗೆ ಸೇರಬೇಕಾದವಳು. ಪತ್ರಿಕಾ ವಿತರಕರಾದ ತನ್ನ ತಂದೆ ದಿಢೀರನೆ ಸಾವನ್ನಪ್ಪಿದಾಗ ಆದಾಯದ ಮೂಲವಿಲ್ಲದ ತಾಯಿಯೊಂದಿಗೆ ಕಂಗಾಲಾಗಿ ಕೂತು ಬಿಡಬಹುದಾಗಿದ್ದಷ್ಟು ಚಿಕ್ಕ ಹುಡುಗಿ. ಆದರೆ ಆಕೆಯ ಕರ್ತೃತ್ವಶಕ್ತಿ ಹೇಗಿದೆಯೆಂದರೆ ತಂದೆಯ ಪತ್ರಿಕಾ ವಿತರಣೆಯನ್ನೇ ಸ್ವಾಭಿಮಾನಿ ಕಾಯಕವನ್ನಾಗಿ ತೆಗೆದುಕೊಂಡು ಪ್ರತಿನಿತ್ಯ ಬೆಳಗಿನ ಜಾವ ನಾಲ್ಕೂವರೆಗೆ ಎದ್ದು ಮನೆಮನೆಗೆ ಪತ್ರಿಕೆಗಳನ್ನು ವಿತರಿಸುವ ಅವಳು ಅಂದಿನ ಸಮಾರಂಭದ ಪ್ರತಿಯೊಬ್ಬರಿಂದಲೂ ಪ್ರಶಂಸೆಗೆ ಒಳಗಾದಳು. ‘ಮುಂದೆ ನಿನ್ನಂಥ ಅನೇಕ ಯುವತಿಯರಿಗೆ ಉದ್ಯೋಗ ನೀಡುವ ಸಾಧನೆಯನ್ನು ನೀನು ಮಾಡಬಲ್ಲೆ’ ಎಂದು ನಾನು ಅವಳನ್ನು ಮನಸಾರೆ ಹಾರೈಸಿದೆ. ನಮ್ಮ ಅನ್ನವನ್ನು ನಾವು ‘ದುಡಿದು ತಿನ್ನುವ ಕಾಯಕ’ ಎಂಥ ಆತ್ಮಸ್ಥೈರ್ಯವನ್ನು ನೀಡುತ್ತದೆ ಅಲ್ಲವೇ? ಎಂದಾಗ ಆಕೆ ನಕ್ಕಳು. ಆ ನಗೆಯಲ್ಲಿ ನಮ್ಮ ಮಹಿಳಾವರ್ಗಕ್ಕೇ ಒಂದು ಸಂದೇಶ ಹೊಳೆದಂತಿತ್ತು.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts