ಹಿರೇಕೆರೂರ: ತಾಲೂಕಿನ ಚನ್ನಳ್ಳಿ, ಚಿಕ್ಕೇರೂರ ಶೆಟ್ಟರ್ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗುರುವಾರ ತುಂಗಾ ಮೇಲ್ದಂಡೆ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಾಲರಾಜ್ ಅವರೊಂದಿಗೆ ಮಾತನಾಡಿದ್ದೇನೆ. ಈಗಾಗಲೇ ತಾಲೂಕಿನ ಚಟ್ನಳ್ಳಿ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಿಂದ ಉಡತಡಿ ಏತ ನೀರಾವರಿ ಯೋಜನೆಯಲ್ಲಿ ನಮ್ಮ ತಾಲೂಕಿನ ಮೂಲಕ ಶಿಕಾರಿಪುರ ತಾಲೂಕಿನ ಅನೇಕ ಗ್ರಾಮಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ. ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ನಮ್ಮ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಉಡತಡಿ ಏತ ನೀರಾವರಿ ಯೋಜನೆಯಲ್ಲಿ ತಾಲೂಕಿನ ಚನ್ನಳ್ಳಿ ಹಾಗೂ ಚಿಕ್ಕೇರೂರಿನ ಶೆಟ್ಟರ ಮತ್ತು ಮತ್ತೊಂದು ಕೆರೆ ತುಂಬಿಸಲು ಅವಕಾಶವಿದೆ. ಕೂಡಲೇ ಈ ಕೆರೆಗಳನ್ನು ತುಂಬಿಸಬೇಕು. ಒಂದು ದಿನ ನೀರು ಹರಿಸಿ ಬಂದ್ ಮಾಡಿದರೆ ಸರಿಯಲ್ಲ ಎಂದಿದ್ದಾರೆ.
ಇದಕ್ಕೆ ಸಮ್ಮತಿಸಿದ ಯುಟಿಪಿ ಅಧಿಕಾರಿ ಬಾಲರಾಜ್, ಶೆಟ್ಟರ ಕೆರೆ ತುಂಬಿಸಲು ಕೆಲವು ಸ್ಥಳಗಳಲ್ಲಿ ಪೈಪ್ಲೈನ್ ಒಡೆದಿವೆ ಹಾಗೂ ತಾಂತ್ರಿಕ ದೋಷಗಳಿವೆ. ಅದನ್ನು ಸರಿಪಡಿಸಿ ಸೋಮವಾರದ ಒಳಗೆ ನೀರು ಹರಿಸಲಾಗುವುದು. ಇನ್ನು ಚನ್ನಳ್ಳಿ ಕೆರೆ ತುಂಬಿಸಲು ಅಲ್ಲಿನ ಜನರು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಶಾಸಕರೊಂದಿಗೆ ರ್ಚಚಿಸಿ ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು. ಕೆರೆ ತುಂಬಿಸಿ ಇಲ್ಲವಾದಲ್ಲಿ ಚಟ್ನಳ್ಳಿ ಜಾಕ್ವೆಲ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿ.ಸಿ. ಪಾಟೀಲ ಎಚ್ಚರಿಸಿದ್ದಾರೆ.