ಬೆಳಗಾವಿ: ಸೌಹಾರ್ದ ಸಹಕಾರಿಗಳಲ್ಲಿ ಠೇವಣಿ ಮಾಡಿರುವ ಸದಸ್ಯರಿಗೆ ಯಾವುದೇ ಕಾರಣಕ್ಕೂ ಮೋಸವಾಗದಂತೆ ಆಡಳಿತ ಮಂಡಳಿ ಅವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡರ ಹೇಳಿದರು.
ಶಿವಬಸವ ನಗರದ ಕೆಪಿಟಿಸಿಎಲ್ ಸಭಾ ಭವನದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬೆಳಗಾವಿ, ಖಾನಾಪುರ, ಗೋಕಾಕ, ಮೂಡಲಗಿ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಯರಗಟ್ಟಿ ಹಾಗೂ ಯಮಕನಮರಡಿ ತಾಲೂಕು ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸಿಇಒಗಳ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಮೋಸ ಮಾಡುವ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ವಿರುದ್ಧ ಸಂಯುಕ್ತ ಸಹಕಾರಿಯು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಸಂಯುಕ್ತ ಸಹಕಾರಿಯ ಸ್ವಯಂ ನಿಯಂತ್ರಣ ಎಂಬ ಧ್ಯೇಯೋದ್ದೇಶದಂತೆ ಸಹಕಾರಿಗಳು ತಮ್ಮ ಸ್ವಯಂ ನಿಯಂತ್ರಣದ ಮೂಲಕ ಸಹಕಾರಿಯ ಹಿತಾಸಕ್ತಿ ಕಾಯ್ದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಯುಕ್ತ ಸಹಕಾರಿಯ ನಿರ್ದೇಕ ಜಗದೀಶ ಕವಟಗಿಮಠ ಮಾತನಾಡಿ, ಸಹಕಾರಿಗಳು ಆಡಳಿತವನ್ನು ಪಾರದರ್ಶಕವಾಗಿ ನಡೆಸಿಕೊಂಡು ಹೋಗಬೇಕು. ಸ್ವೇಚ್ಛಾಚಾರಕ್ಕೆ ಬಳಸಿಕೊಳ್ಳಬಾರದು. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದವರನ್ನು ಶಿಕ್ಷೆ ಮಾಡಿ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. ರಾಜ್ಯದ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ವಿಷಯದಲ್ಲಿ ಆತಂಕಪಡುವ ಅಗತ್ಯವಿಲ್ಲ. ಬೆಳಗಾವಿ ಜಿಲ್ಲೆ ಸಹಕಾರ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಸಾಧಿಸಿದೆ. ಈ ಹೆಸರನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬೆಳಗಾವಿಯ ಎಲ್ಲ ಸಹಕಾರಿಗಳ ಮೇಲಿದೆ ಎಂದರು.
ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ ಪ್ರಾಸ್ತಾವಿಕವಾಗಿ ಮಾತನಾಡಿ, ಸೌಹಾರ್ದ ಸಹಕಾರಿಗಳ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಸಂಯುಕ್ತ ಸಹಕಾರಿಯ ಸಮಾಲೋಚನಾ ಸಭೆಗಳನ್ನು ಏರ್ಪಡಿಸಿ ಸಹಕಾರಿಗಳಿಗೆ ಶಿಕ್ಷಣ, ತರಬೇತಿ ಮಾಡಲಾಗುತ್ತಿದೆ ಎಂದರು.
ವೈ.ವಿ.ಗುಂಡೂರಾವ್ ಸಹಕಾರಿಗಳ ಸಮಗ್ರ ಅಭಿವೃದ್ಧಿ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಬೆಳಗಾವಿ ಜಿಲ್ಲೆಯ 446 ಸೌಹಾರ್ದ ಸಹಕಾರಿಗಳಿಂದ 879ಕ್ಕೂ ಹೆಚ್ಚು ಪ್ರತಿನಿಧಿಗಳೊಡನೆ ಜಿ.ನಂಜನಗೌಡ ಸಮಾಲೋಚನೆ ಮಾಡಿದರು. ಎಚ್.ಎಸ್.ಗಿರಡ್ಡಿ, ಮಲ್ಲಮ್ಮ ದೇಗಾಂವ, ರೇಶ್ಮಾ ಪಾಟೀಲ ಪ್ರಾರ್ಥಿಸಿದರು. ಜಿಲ್ಲಾ ಸಂಯೋಜಕ ರಾಚಯ್ಯ ಹಿರೇಮಠ ಸ್ವಾಗತಿಸಿದರು. ಸುಜಯ ಬೆಳವಿ ವಂದಿಸಿದರು.