ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿ

ಬೆಳಗಾವಿ: ನಗರದ ದಂಡುಮಂಡಳಿ ಪ್ರದೇಶದಲ್ಲಿರುವ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಹೈಟೆಕ್ ಸಗಟು ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾ ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ನಗರದ ಹಳೇ ಪಿಬಿ ರಸ್ತೆ ಪಕ್ಕದಲ್ಲಿರುವ ಖಾಸಗಿ ತರಕಾರಿ ಮಾರುಕಟ್ಟೆಯಿಂದ ಬೆಳೆಗಾರರಿಗೆ ತೂಕ ಮತ್ತು ದರದಲ್ಲಿ ಮೋಸವಾಗುತ್ತಿದೆ. ಸರಿಯಾಗಿ ಹರಾಜು ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರಸ್ಥರು ರೈತರಿಂದ ಬೇಕಾಬಿಟ್ಟಿ ದರದಲ್ಲಿ ತರಕಾರಿ ಖರೀದಿಸುತ್ತಿದ್ದಾರೆ.

ಇದರಿಂದ ಕಷ್ಟಪಟ್ಟು ಬೆಳೆ ಬೆಳೆದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು. ದೂರದ ಊರುಗಳಿಂದ ತರಕಾರಿ ಮಾರಾಟ ಮಾಡಲು ಬರುವ ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಸಂದಾಯವಾಗುತ್ತಿಲ್ಲ. ಕೆಲ ಮಧ್ಯವರ್ತಿಗಳು ತರಕಾರಿ ಖರೀದಿ ಮಾಡಿ ಒಂದು ವಾರದ ಬಳಿಕದ ರೈತರಿಗೆ ಹಣ ನೀಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ ರೈತರು ತತ್ತರಿಸಿದ್ದು, ಸೂಕ್ತ ಬೆಲೆ ಸಿಗದೆ ನಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ತಕ್ಷಣ ಮಾರುಕಟ್ಟೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬೇಕು.

ಈಗಾಗಲೇ ಎಪಿಎಂಸಿ ಆವರಣದ 14 ಎಕರೆ ವಿಸ್ತೀರ್ಣದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿ ಸಗಟು ಮಾರುಕಟ್ಟೆ ವ್ಯಾಪಾರ-ವಹಿವಾಟು ಇಲ್ಲದೆ ಅನಾಥವಾಗಿದೆ. ಹಾಗಾಗಿ ಜಿಲ್ಲಾಡಳಿತ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಮಳಿಗೆಗಳನ್ನು ಬಾಡಿಗೆ ಪಡೆದಿರುವ ವ್ಯಾಪಾರಿಗಳು ವಹಿವಾಟು ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಎಪಿಎಂಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹಾಗಾಗಿ ಕೂಡಲೇ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಬೇಕು ಎಂದು ವ್ಯಾಪಾರಿಗಳು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಶಿವನಗೌಡ ಪಾಟೀಲ, ಬಸವನಗೌಡ ಪಾಟೀಲ, ಗಜಾನನ ಶಹಾಪುರ, ರಾಜೇಂದ್ರ ಕಂಗ್ರಾಳಕರ, ಮೌನಪ್ಪ ಪಾಟೀಲ, ನಿತಿನ್ ಮುತಗೇಕರ, ಜಾವೇದ ಸನದಿ, ಶಂಕರಗೌಡ ಪಾಟೀಲ, ಅಲ್ತಾಫ್ ಬಾಗವಾನ, ಬಿ.ಆರ್.ಅಲ್ಲಯ್ಯನವರಮಠ ಹಾಗೂ ರೈತ ಮುಖಂಡರು ಇದ್ದರು.

Leave a Reply

Your email address will not be published. Required fields are marked *