ತಂದೆಯ ಸಾಯಿಸಿ, ಡಿಎಂಕೆ ಮುಖ್ಯಸ್ಥರಾದರಾ ಎಂ.ಕೆ. ಸ್ಟಾಲಿನ್​? ತಮಿಳುನಾಡು ಸಿಎಂ ಗಂಭೀರ ಆರೋಪ

ಚೆನ್ನೈ: ಡಿಎಂಕೆ ಪಕ್ಷದ ಅಧ್ಯಕ್ಷರಾಗಬೇಕು ಎಂಬ ಏಕೈಕ ಉದ್ದೇಶದಿಂದ ಎಂ.ಕೆ. ಸ್ಟಾಲಿನ್​ ತಮ್ಮ ತಂದೆ ಹಾಗೂ ಡಿಎಂಕೆ ಮುಖಂಡರಾಗಿದ್ದ ಎಂ. ಕರುಣಾನಿಧಿ ಅವರನ್ನು ಗೃಹಬಂಧನದಲ್ಲಿರಿಸಿ, ಸಾಯುವಂತೆ ಮಾಡಿದ್ದಾಗಿ ತಮಿಳುನಾಡು ಸಿಎಂ ಇ. ಪಳನೀಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಲೋಕಸಭೆ ಚುನಾವಣೆ ನಿಮಿತ್ತ ಎಐಎಡಿಎಂಕೆ ಪರವಾಗಿ ಸೋಮವಾರ ಪ್ರಚಾರ ನಡೆಸಿದ ಅವರು ಈ ಗಂಭೀರ ಆರೋಪ ಮಾಡಿದರು. ಈ ಹಿನ್ನೆಲೆಯಲ್ಲಿ ಎಂ. ಕರುಣಾನಿಧಿ ಅವರ ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು.

ಡಿಎಂಕೆ ಪಕ್ಷದ ಹಿರಿಯ ಮುಖಂಡರ ಪ್ರಕಾರ ಎಂ. ಕರುಣಾನಿಧಿ ಅವರಿಗೆ 2 ವರ್ಷಗಳಿಂದ ಮಾತು ನಿಂತಿತ್ತು. ಅವರಿಗೆ ಒಳ್ಳೆಯ ಚಿಕಿತ್ಸೆ ಕೊಡಿಸಿದ್ದರೆ ಅವರು ಚೇತರಿಸಿಕೊಳ್ಳುತ್ತಿದ್ದರು. ಆದರೆ, ಆಗ ಡಿಎಂಕೆ ಅಧ್ಯಕ್ಷರಾಗಲು ಸ್ಟಾಲಿನ್​ಗೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ತಮ್ಮ ತಂದೆಯನ್ನು ಗೃಹಬಂಧನದಲ್ಲಿರಿಸಿದ ಅವರು, ಸಾಯುವಂತೆ ಮಾಡಿದರು ಎಂದು ದೂರಿದರು. (ಏಜೆನ್ಸೀಸ್​)