More

    ತಿಥಿ ನಂತರ ಮಸಣದಲ್ಲಿ ಪೂಜಾ!

    ಬೆಂಗಳೂರು: ತಿಥಿ ಬಳಿಕ ಪೂಜಾ ಈಗ ದಾರಿ ಯಾವುದಯ್ಯಾ ವೈಕುಂಠಕೆ ಎಂದು ಕೇಳುತ್ತಿದ್ದು, ಸ್ಮಶಾನಕ್ಕೆ ಹೋಗಲೂ ಸಜ್ಜಾಗುತ್ತಿದ್ದಾರೆ. ಅರ್ಥಾತ್, ಪ್ರಶಸ್ತಿ ಪುರಸ್ಕೃತ ಸಿನಿಮಾ ‘ತಿಥಿ’ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೂಜಾ, ಇದೀಗ ‘ದಾರಿ ಯಾವುದಯ್ಯಾ ವೈಕುಂಠಕೆ..’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.

    ವಿಶೇಷವೆಂದರೆ ಈ ಚಿತ್ರದಲ್ಲಿ ಅವರು ಹೆಚ್ಚಾಗಿ ಸ್ಮಶಾನದಲ್ಲೇ ಕಾಣಿಸಿಕೊಳ್ಳಲಿದ್ದಾರಂತೆ.. ಅದರಲ್ಲೂ ರಾತ್ರಿ ಹೊತ್ತಲ್ಲಿ..! ‘ಶ್ರೀಬಸವೇಶ್ವರ ಕ್ರಿಯೇಷನ್ಸ್’ ಬ್ಯಾನರ್​ನಲ್ಲಿ ಶರಣಪ್ಪ ಎಂ. ಕೊಟಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ನಿರ್ದೇಶಕ ಸಿದ್ದು ಪೂರ್ಣಚಂದ್ರ ಆಕ್ಷನ್- ಕಟ್ ಹೇಳಲಿದ್ದಾರೆ. ‘ಒಂದೊಳ್ಳೆಯ ಸಂದೇಶ ಇರುವ ಈ ಸಿನಿಮಾದಲ್ಲಿ ನಾನು ಸ್ಮಶಾನದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದೇನೆ. ನನ್ನ ಪಾತ್ರದ ಬಹುತೇಕ ದೃಶ್ಯಗಳ ಶೂಟಿಂಗ್ ಮಸಣದಲ್ಲೇ ನಡೆಯಲಿದೆ. ಈ ಬಗ್ಗೆ ಮನೆಯಲ್ಲಿ ಹೇಳಿದಾಗ, ಸ್ಮಶಾನದಲ್ಲಿ ಶೂಟಿಂಗ್ ಎಂಬ ಕಾರಣಕ್ಕೆ ಮೊದಲು ಒಪ್ಪಿರಲಿಲ್ಲ. ಬಳಿಕ ಅವರಿಗೆ ಕಥೆ ಪೂರ್ತಿಯಾಗಿ ತಿಳಿಸಿದಾಗ ಒಪ್ಪಿಗೆ ನೀಡಿದರು’ ಎನ್ನುತ್ತಾರೆ ನಾಯಕಿ ಪೂಜಾ.

    ‘ಇದು ಯಾವ ಜಾನರ್ ಸಿನಿಮಾ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಏಕೆಂದರೆ ಇದು ಮನಸ್ಥಿತಿ ಹಾಗೂ ಭಾವನೆಗಳ ಕುರಿತಾದ ಚಿತ್ರವಾಗಿರುವುದರಿಂದ ಅದು ಪ್ರೇಕ್ಷಕರು ಯಾವ ದೃಷ್ಟಿಕೋನದಲ್ಲಿ ಸಿನಿಮಾ ನೋಡುತ್ತಾರೆ ಎಂಬುದರ ಮೇಲೆ ಅವಲಂಬಿಸಿದೆ’ ಎನ್ನುತ್ತಾರೆ ಅವರು. ‘ಕೃಷ್ಣ ಗಾರ್ವೆಂಟ್ಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದ ಸಿದ್ದು ಪೂರ್ಣಚಂದ್ರ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಮನುಷ್ಯತ್ವ ಇಲ್ಲದೆ ಬರೀ ಹಣ ಅಂತ ಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಹೋಗಿ ಬಂದ ಮೇಲೆ ಅವನ ಮನಸ್ಥಿತಿ ಹೇಗಿರುತ್ತದೆ ಎಂಬುದೇ ಈ ಚಿತ್ರದ ಕಥಾ ಹಂದರ.

    ವರ್ಧನ್ ಈ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಲಿದ್ದಾರೆ. ಬಾಲ ರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ನಿತಿನ್ ಛಾಯಾಗ್ರಹಣ ಹಾಗೂ ರಾಜೀವ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಸಿನಿಮಾದ ಶೀರ್ಷಿಕೆಯನ್ನು ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ಅನಾವರಣ ಗೊಳಿಸಿದ್ದು, ಫೆಬ್ರವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ರಾಮನಗರ, ಮಂಡ್ಯ ಮುಂತಾದ ಕಡೆ 30 ದಿನಗಳ ಕಾಲ 2 ಹಂತಗಳಲ್ಲಿ ಶೂಟಿಂಗ್ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts