ರಾಜ್ಯ ಸರ್ಕಾರದ ಇಲಾಖೆಯೊಂದರಲ್ಲಿ ಕಾಯದರ್ಶಿ ಹುದ್ದೆಯ ಅಧಿಕಾರಿಯಾಗಿದ್ದ ರಾಜಾರಾಮ್ೆ ಶಾಮಲ ಎಂಬ ಪತ್ನಿಯೂ, ಸುಮನಾ ಎಂಬ ಮಗಳೂ ಇದ್ದರು. ಸುಮನಾ ಲಂಡನ್ನಿನಲ್ಲಿ ಕಲಿಯುತ್ತಿದ್ದಳು. ಆರು ತಿಂಗಳ ಹಿಂದೆ ಶಾಮಲಾ ಯಾವುದೋ ಯುವಕನೊಬ್ಬನೊಡನೆ ಅನುರಕ್ತಳಾಗಿದ್ದಾಳೆ ಎಂಬ ಅನುಮಾನ ರಾಜಾರಾಮ್ೆ ಬಂದಾಗ ಅವರು ಪತ್ನಿಯನ್ನು ಈ ಬಗ್ಗೆ ವಿಚಾರಿಸಿದರು. ‘26 ವರ್ಷಗಳ ಕಾಲ ನಿಮ್ಮೊಡನೆ ಸಂಸಾರ ನಡೆಸಿದ ನಂತರವೂ ನನ್ನ ಮೇಲೆ ಸಂಶಯವನ್ನು ಪಡುತ್ತಿದ್ದೀರಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ?’ ಎಂದು ಗಂಡನನ್ನು ಮೂದಲಿಸಿದ ಶಾಮಲ ಕೋಪಗೊಂಡು ತನ್ನ ತವರು ಮನೆಗೆ ಹೊರಟು ಹೋದಳು. ತನ್ನ ಪ್ರಿಯಕರನೊಂದಿಗೆ ಚಕ್ಕಂದವಾಡಲು ಸುಲಭವಾಗುತ್ತದೆಂಬ ಉದ್ದೇಶದಿಂದಲೇ ಶಾಮಲಾ ತವರುಮನೆಗೆ ಹೋದಳೆಂದು ಅನುಮಾನಿಸಿದ ರಾಜಾರಾಮ್ ಅವಳ ಚಟುವಟಿಕೆಗಳನ್ನು ಗುಟ್ಟಾಗಿ ಗಮನಿಸಬೇಕೆಂದು ಉದ್ದೇಶಿಸಿದರು. ಆಗ ಅವರ ಗಮನ ಅಂದಿನ ವೃತ್ತಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜಾಹೀರಾತೊಂದರ ಮೇಲೆ ಹೋಯಿತು. ಖಾಸಗಿ ಪತ್ತೆದಾರಿ ಸಂಸ್ಥೆಯೊಂದು ವಿವಾಹ ಸಂಬಂಧಗಳ ಬಗ್ಗೆ ತನಿಖೆ ಮಾಡುವುದು ತನ್ನ ವಿಶೇಷ ವೆಂದು ಜಾಹೀರಾತಿನಲ್ಲಿ ತಿಳಿಸಿತ್ತು. ಆ ಸಂಸ್ಥೆಯ ದೂರವಾಣಿಗೆ ರಾಜಾರಾಮ್ ಕೂಡಲೇ ಕರೆ ಮಾಡಿದರು.
ಶರತ್ ಎನ್ನುವ ವ್ಯಕ್ತಿ ಕರೆಯನ್ನು ಉತ್ತರಿಸಿ ತಾನೇ ಆ ಸಂಸ್ಥೆಯ ಮಾಲೀಕನೆಂದ. ತಮ್ಮ ಪರಿಚಯವನ್ನು ಮಾಡಿಕೊಂಡ ರಾಜಾರಾಮ್ ತಾವು ಹೇಳುವುದು ಗುಟ್ಟಿನ ವಿಷಯವಾದ್ದರಿಂದ ತಮ್ಮೊಡನೆ ಮಾತುಕತೆಯಾಡಲು ಅವನನ್ನು ತಮ್ಮ ಮನೆಗೇ ಬರಹೇಳಿದರು. ಮಾರನೆಯ ದಿನ ತನ್ನ ಪತ್ನಿ ಹಾಗೂ ಪಾರ್ಟ್ನರ್ ಶಬನಮ್ ಜತೆಗೆ ಶರತ್ ಆಗಮಿಸಿದ. ರಾಜಾರಾಮರ ಭವ್ಯ ಬಂಗಲೆ, ಅವರ ಹಲವಾರು ಐಷಾರಾಮಿ ಕಾರುಗಳನ್ನು ನೋಡಿದ ಅವರಿಬ್ಬರೂ ದಂಗು ಬಡಿದು ತಮಗೆ ಒಬ್ಬ ಭಾರಿ ಕುಳವೇ ಗಿರಾಕಿಯಾಗಿ ಸಿಗುತ್ತಿದೆಯೆಂದು ಸಂತಸಗೊಂಡರು. ತನ್ನ ಪತ್ನಿ ಶಾಮಲಾಳ ಮೇಲೆ ತನಗೆ ಅನುಮಾನವಿರುವುದಾಗಿ ಅವರಿಗೆ ತಿಳಿಸಿದ ರಾಜಾರಾಮ್ ಆಕೆಯ ಚಟುವಟಿಕೆಗಳ ಮೇಲೆ ಗಮನವಿಡಬಹುದೇ ಎಂದು ಪ್ರಶ್ನಿಸಿದರು.
ಇದೇ ರೀತಿಯ ಕೆಲಸವೇ ನಮ್ಮ ವಿಶೇಷತೆ ಎಂದ ಶರತ್, ‘ಮೇಡಂ ಎಲ್ಲಿ ಹೋದರೆ ಅಲ್ಲಿಗೆ ಫಾಲೋ ಮಾಡುವುದು, ಅವರ ಮೊಬೈಲ್ ಫೋನಿನ ಸಂಭಾಷಣೆಗಳನ್ನು ಕದ್ದು ಕೇಳುವುದು ಮತ್ತು ಅವರ ಇ ಮೇಲ್ಗಳನ್ನು ಕದಿಯುವ ಕೆಲಸವನ್ನು ನಾವು ಮಾಡಲು ಸಾಧ್ಯ’ ಎಂದ. ತಮ್ಮ ಬಳಿ ಇಸ್ರೇಲಿನಲ್ಲಿ ತಯಾರಾದ ಅತ್ಯಾಧುನಿಕ ಉಪಕರಣಗಳಿದ್ದು ನಿಮ್ಮ ಪತ್ನಿಯ ಚಟುವಟಿಕೆಗಳ ವಿಡಿಯೋ ರೆಕಾರ್ಡಿಂಗ್ ಮತ್ತು ಅವರ ಟೆಲಿಫೋನ್ ಕರೆಗಳ ಸಿ.ಡಿ.ಆರ್ ವರದಿಗಳನ್ನು ವಾರಕ್ಕೊಮ್ಮೆ ಕೊಡುವೆನೆಂದ. ಆ ಕೆಲಸಕ್ಕೆ ಎಷ್ಟು ಹಣ ಖರ್ಚಾಗುತ್ತದೆ ಎಂದು ಕೇಳಿದಾಗ ಒಂದು ತಿಂಗಳಿಗೆ ಅಂದಾಜು ಐದರಿಂದ ಹತ್ತು ಲಕ್ಷರೂಗಳಾಗಬಹುದು, ಇದು ನಿಮ್ಮ ಪತ್ನಿಯ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದ. ಆ ಹಣವನ್ನು ಕೊಡಲು ರಾಜಾರಾಮ್ ಒಪ್ಪಿ ಮುಂಗಡವಾಗಿ 2 ಲಕ್ಷರೂಗಳನ್ನೂ ಕೊಟ್ಟರು.
ಒಂದು ವಾರದ ನಂತರ ರಾಜಾರಾಮ್ನ್ನು ಭೇಟಿಯಾದ ಶರತ್, ನಿಮ್ಮ ಪತ್ನಿ ಎರಡು ನಂಬರುಗಳಿಗೆ ಪದೇಪದೆ ಕರೆಗಳನ್ನು ಮಾಡಿದ್ದಾರೆ, ಅವುಗಳಲ್ಲೊಂದು ವಿದೇಶದಲ್ಲಿದೆ. ಎರಡೂ ನಂಬರಿನ ವಿವರಗಳು ತಿಳಿಯುತ್ತಿಲ್ಲ ಎನ್ನುತ್ತಾ ಶಾಮಲಾಳ ಕರೆಗಳ ವರದಿಯನ್ನು ನೀಡಿದ. ಇದರಲ್ಲಿರುವ ನಂಬರ್ಗಳು ನನ್ನದು ಹಾಗೂ ನಮ್ಮ ಪುತ್ರಿಯದು ಎಂದು ಗುರುತಿಸಿದ ರಾಜಾರಾಮ್ ಬೇರೆ ಯಾವ ಮಾಹಿತಿಯೂ ದೊರೆಯಲಿಲ್ಲವೇ? ಎಂದಾಗ ಆತ ಇಲ್ಲವೆಂದ. ಆನಂತರ ಚಾಲಾಕಿ ಶರತ್, ರಾಜಾರಾಮ್ ಫೋನನ್ನೇ ಟ್ಯಾಪ್ ಮಾಡತೊಡಗಿದ. ಅವರು ಹಲವಾರು ವ್ಯಕ್ತಿಗಳ ಜತೆ ತಮ್ಮ ಕಚೇರಿಯ ಕೆಲಸ ಕಾರ್ಯಗಳ ಸಂಬಂಧ ಹಣದ ವ್ಯವಹಾರ ಮಾಡುತ್ತಿದ್ದುದನ್ನು ಕೇಳಿಸಿಕೊಂಡು ಆ ಕಾಲ್ಗಳ ರೆಕಾರ್ಡಿಂಗ್ ಮಾಡಿಕೊಂಡ. ಒಂದು ಸಂಭಾಷಣೆಯಲ್ಲಿ ರಾಜಾರಾಮ್ ಹತ್ತು ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದನ್ನು ಕೇಳಿಸಿಕೊಂಡ ಶರತ್ ತನ್ನ ತನಿಖೆಯನ್ನು ಅವರತ್ತ ಕೇಂದ್ರೀಕರಿಸಿದ. ಅವರು ಭ್ರಷ್ಟ ಅಧಿಕಾರಿಯಾಗಿದ್ದು 100 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಮಾಡಿರುವುದನ್ನು ಅರಿತ. ಆಗ ಅವರಿಂದಲೇ ಹಣ ಕಸಿಯಬೇಕೆಂಬ ಯೋಜನೆಯೊಂದನ್ನು ಹಾಕಿದ.
ಮಾರನೆಯ ದಿನವೇ ಶಬನಮ್ ರಾಜಾರಾಮರ ಮನೆಗೆ ಹೋದಳು. ‘ನಮ್ಮ ತನಿಖೆಯಲ್ಲಿ ನಿಮ್ಮ ಪತ್ನಿ ಯಾರೊಂದಿಗೂ ಸಂಪರ್ಕವನ್ನಿಟ್ಟುಕೊಳ್ಳದೆ ಪತಿವ್ರತೆಯಾಗಿರುವ ಬಗ್ಗೆ ಸಾಬೀತಾಗಿದೆ. ಆದರೆ, ನೀವೇ ಕೆಟ್ಟ ಕೆಲಸಗಳಲ್ಲಿ ತೊಡಗಿರುವುದು ತಿಳಿದುಬಂದಿದೆ. ನಿಮ್ಮ ಇಲಾಖೆಯ ಕೆಲಸವನ್ನು ಮಾಡಿಕೊಡಲು ನೀವು ಹತ್ತು ಕೋಟಿ ರೂ.ಗಳ ಲಂಚಕ್ಕೆ ಬೇಡಿಕೆಯಿಟ್ಟಿರುವ ಸಂಭಾಷಣೆಯನ್ನು ನಾವು ರೆಕಾರ್ಡ್ ಮಾಡಿದ್ದೇವೆ, ನೋಡಿ’ ಎಂದು ತನ್ನ ಮೊಬೈಲಿನಲ್ಲಿಯೇ ಆ ಸಂಭಾಷಣೆಯನ್ನು ಕೇಳಿಸಿದಳು. ರಾಜಾರಾಮ್ ಗಾಬರಿಯಾದರು. ‘ಈ ಕ್ಲಿಪ್ಪನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ನಿಮ್ಮ ನಿಜ ಸ್ವರೂಪವನ್ನು ಬಯಲಿಗೆಳೆಯುತ್ತೇವೆ, ಒಂದು ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಎರಡು ದಿನಗಳೊಳಗೆ ಕೊಟ್ಟರೆ ಸುಮ್ಮನಾಗುತ್ತೇವೆ’ ಎಂದು ಬೆದರಿಸಿದಳು.
1 ಕೋಟಿ ಕೊಡಲಾಗುವುದಿಲ್ಲ. ಹೆಚ್ಚೆಂದರೆ 25 ಲಕ್ಷ ಕೊಡುತ್ತೇನೆ ಎಂದ ರಾಜಾರಾಮ್ ಅವಳನ್ನು 2 ದಿನಗಳ ನಂತರ ಒಂದು ಪಂಚತಾರಾ ಹೋಟೆಲ್ಗೆ ಬರಹೇಳಿದರು. ಪತಿ-ಪತ್ನಿ ಅಲ್ಲಿಗೆ ಹೋದಾಗ ರಾಜಾರಾಮ್ ಅವರಿಗೆ ಹಣವನ್ನು ಕೊಟ್ಟರು. ಆದರೆ, ಈ ಹಣ ಪಡೆದ ನಂತರವೂ ಶರತ್ ಸುಮ್ಮನಾಗಲಿಲ್ಲ. ರಾಜಾರಾಮ್ 10 ಕೋಟಿಗೆ ಬೇಡಿಕೆಯಿಟ್ಟ ಮಾಹಿತಿಯನ್ನು ಆತ ತನಗೆ ಪರಿಚಯವಿರುವ ಪತ್ರಕರ್ತನೊಬ್ಬನಿಗೆ ಕೊಟ್ಟ. ತಾನು ಹೊರತರುತ್ತಿದ್ದ ಟ್ಯಾಬ್ಲಾಯ್್ಡಲ್ಲಿ ರಾಜಾರಾಮ್ ವಿರುದ್ಧ ವರದಿಯೊಂದನ್ನು ಆ ಪತ್ರಕರ್ತ ಪ್ರಕಟಿಸಿದ.
ಆ ಲೇಖನವನ್ನು ರಾಜಾರಾಮ್ೆ ತೋರಿಸಿದ ಶರತ್ ಇನ್ನಷ್ಟು ಹಣ ಕೊಡದಿದ್ದರೆ ಪ್ರತಿವಾರವೂ ಇಂತಹ ವರದಿಗಳು ಹೊರಬರುತ್ತವೆ ಎಂದ. ಆಗಲೇ ಹೆದರಿದ್ದ ರಾಜಾರಾಮ್ ಅವನಿಗೆ 50 ಲಕ್ಷ ರೂ. ಕೊಡಲು ಒಪ್ಪಿ ಮಾರನೆಯ ದಿನ ಇನ್ನೊಂದು ಹೋಟೆಲ್ಲಿಗೆ ಬರಹೇಳಿದರು. ಆ ಭೇಟಿಯ ಸಮಯದಲ್ಲಿ ತಮ್ಮ ಕೋಟಿನ ಜೇಬಿಗೆ ಸ್ಪೈ ಕ್ಯಾಮರಾ ಧರಿಸಿಕೊಂಡು ಹೋಗಿದ್ದ ರಾಜಾರಾಮ್ ತಮ್ಮ ಹಾಗೂ ಶರತ್ ದಂಪತಿಯ ಮಧ್ಯೆ ನಡೆದ ಎಲ್ಲಾ ಮಾತುಕತೆಯನ್ನು ವೀಡಿಯೋ ರೆಕಾರ್ಡ್ ಮಾಡಿಕೊಂಡರು. ಆನಂತರ ಅವನ ಕೈಗೆ ಒಂದು ಬ್ರೀಫ್ಕೇಸನ್ನು ಕೊಟ್ಟು ಅದರಲ್ಲಿ ಹಣವಿರುವುದಾಗಿ ಹೇಳಿದರು. ತನ್ನ ಮನೆಗೆ ವಾಪಾಸಾದ ಶರತ್ ಬ್ರೀಫ್ಕೇಸ್ ಖಾಲಿಯಿದ್ದುದನ್ನು ನೋಡಿ ಕ್ಷುಧ್ರನಾದ. ಕೂಡಲೇ ರಾಜಾರಾಮ್ೆ ಫೋನ್ ಮಾಡಿ ಅವರನ್ನು ಬಾಯಿಗೆ ಬಂದಂತೆ ಬೈದು, ‘ನೀನು ನನಗೆ ಹಣ ಕೊಡದಿದ್ದರೆ ನಿನ್ನನ್ನು ನಿರ್ನಾಮ ಮಾಡುತ್ತೇನೆ’ ಎಂದು ಹೇಳಿ ಫೋನ್ ಕಟ್ ಮಾಡಿದ. ಈ ಸಂಭಾಷಣೆಯನ್ನೂ ರಾಜಾರಾಮ್ ರೆಕಾರ್ಡ್ ಮಾಡಿಕೊಂಡರು.
ತನಗೆ ರಾಜಾರಾಮ್ ಮೋಸ ಮಾಡಿದನೆಂದು ಕುದಿಯುತ್ತಿದ್ದ ಶರತ್, ರಾಜ್ಯದ ವಿಚಕ್ಷಣ ದಳದ ಕಚೇರಿಗೆ ಹೋಗಿ ರಾಜಾರಾಮ್ ವಿರುದ್ಧ ಅಪಾರ ಆಸ್ತಿಯನ್ನು ಗಳಿಸಿರುವ ದೂರನ್ನು ಕೊಟ್ಟ. ಅದಕ್ಕೆ ಪೂರಕವಾಗಿ ತಾನು ರೆಕಾರ್ಡ್ ಮಾಡಿದ್ದ ಆಡಿಯೋ ಕ್ಲಿಪ್ಗಳನ್ನು ಲಗತ್ತಿಸಿದ. ದೂರಿನ ಬಗ್ಗೆ ಅಧಿಕಾರಿಗಳು ಪ್ರಾಥಮಿಕ ತನಿಖೆಯನ್ನು ಕೈಗೊಂಡರು. ಈ ವಿಷಯ ರಾಜಾರಾಮ್ೆ ಅದು ಹೇಗೋ ತಿಳಿದ ಕೂಡಲೇ ಅವರು ಶರತ್ನಿಗೆ ಫೋನ್ ಮಾಡಿ ತಾವು ಅವನಿಗೆ ಮೋಸ ಮಾಡಿದ್ದಕ್ಕೆ ಕ್ಷಮೆಯನ್ನು ಯಾಚಿಸಿದರು. ಬಾಕಿ ಹಣವನ್ನು ಕೂಡಲೇ ಕೊಡುವುದಾಗಿ ಹೇಳಿ ತಮ್ಮನ್ನು ಭೇಟಿ ಮಾಡಲು ಕರೆದರು. ಈ ಭೇಟಿಯಲ್ಲಿ ವಿಚಕ್ಷಣ ದಳಕ್ಕೆ ಕೊಟ್ಟ ದೂರನ್ನು ಹಿಂಪಡೆಯಲು ಶರತ್ಗೆ ಸೂಚಿಸಿದರು. ಹತ್ತು ಕೋಟಿ ರೂ. ಕೊಟ್ಟರೆ ಮಾತ್ರ ದೂರನ್ನು ವಾಪಸ್ ಪಡೆಯುವುದಾಗಿ ಹೇಳಿದ ಶರತ್ ಆ ಹಣವನ್ನು ಬೇರೆ ಊರಿನಲ್ಲಿದ್ದ ಶಬನಮ್ ಸೋದರನಿಗೆ ಕೊಡಲು ಹೇಳಿದ. ರಾಜಾರಾಮ್ ಒಪ್ಪಿ ಈ ಸಂಭಾಷಣೆಯನ್ನೂ ಗುಟ್ಟಾಗಿ ವೀಡಿಯೋ ರೆಕಾರ್ಡ್ ಮಾಡಿಕೊಂಡರು.
ಏತನ್ಮಧ್ಯೆ ವಿಚಕ್ಷಣಾ ದಳದ ಸೂಚನೆಯ ಮೇರೆಗೆ ಸರ್ಕಾರ ರಾಜಾರಾಮ್ನ್ನು ಅಮಾನತ್ತು ಮಾಡಿತು. ಇದರಿಂದ ಕೋಪಗೊಂಡ ರಾಜಾರಾಮ್ ತಾವು ಕೊಡಲೊಪ್ಪಿದ ಹಣವನ್ನು ಶಬನಮ್ ಸೋದರನಿಗೆ ಕೊಡಲೇ ಇಲ್ಲ. ಬದಲಾಗಿ ಪೊಲೀಸ್ ಇಲಾಖೆಯ ರೌಡಿ ನಿಗ್ರಹ ದಳದ ಕಚೇರಿಗೆ ಹೋದರು. ಈ ದಳವು ಶ್ರೀಮಂತ ವ್ಯಕ್ತಿಗಳು, ಬಿಲ್ಡರ್ಗಳು ಮುಂತಾದವರಿಗೆ ಕರೆ ಮಾಡಿ ಹಣ ವಸೂಲು ಮಾಡುವ ಗ್ಯಾಂಗುಗಳ ಬಗ್ಗೆ ತನಿಖೆ ಮಾಡುವ ವಿಶೇಷ ಘಟಕವಾಗಿತ್ತು. ತಾವು ರೆಕಾರ್ಡ್ ಮಾಡಿದ್ದ ಒಂದು ಆಡಿಯೋ ಮತ್ತು ಎರಡು ವಿಡಿಯೋಗಳನ್ನು ಅಲ್ಲಿನ ಅಧಿಕಾರಿಗಳಿಗೆ ಕೊಟ್ಟ ರಾಜಾರಾಮ್ ಶರತ್-ಶಬನಮ್ ತನಗೆ ಬ್ಲ್ಯಾಕ್ವೆುೕಲ್ ಮಾಡುತ್ತಿರುವ ಬಗ್ಗೆ ದೂರಿತ್ತರು. ಅವರು ಬೇಡಿದ ಹಣ ಕೊಡುವೆನೆಂದು ಅವರನ್ನು ಒಂದು ಜಾಗಕ್ಕೆ ಕರೆಯಿರಿ. ನಾವು ಅವರನ್ನು ಹಿಡಿಯುತ್ತೇವೆ ಎಂದರು ಅಧಿಕಾರಿಗಳು.
ರಾಜಾರಾಮ್ ಶರತ್ಗೆ ಕರೆ ಮಾಡಿ ತನ್ನ ವಿರುದ್ದ ವಿಚಕ್ಷಣಾ ದಳಕ್ಕೆ ಕೊಟ್ಟಿದ್ದ ದೂರು ವಾಪಸ್ ಪಡೆದರೆ ತಕ್ಷಣವೇ ಒಂದು ಕೋಟಿ ರೂ.ಗಳನ್ನು ಕೊಡುವುದಾಗಿ ಹೇಳಿದರು. ಒಪ್ಪಿದ ಶರತ್-ಶಬನಮ್ ಅವರು ಸೂಚಿಸಿದ್ದ ಜಾಗಕ್ಕೆ ಬಂದರು. ರಾಜಾರಾಮ್ ತನಗೆ ಹಣವಿದ್ದ ಬ್ರೀಫ್ಕೇಸ್ ಕೊಟ್ಟ ಕೂಡಲೇ ಅದರಲ್ಲಿದ್ದ ಹಣವನ್ನು ಶರತ್ ಮತ್ತು ಶಬನಮ್ ಎಣಿಸತೊಡಗಿದರು. ಆಗ ಅಲ್ಲಿಯೇ ಅಡಗಿದ್ದ ಪೊಲೀಸರು ಅವರನ್ನು ಬಂಧಿಸಿದರು. ನಂತರ ಶರತ್ನ ಪತ್ತೇದಾರಿ ಕಚೇರಿಗೆ ದಾಳಿ ಮಾಡಿ ಅವರಿಬ್ಬರೂ ಇದೇ ರೀತಿಯೇ ಹಲವಾರು ಮಂದಿಗೆ ಬ್ಯ್ಲಾಕ್ವೆುೕಲ್ ಮಾಡಿರುವುದನ್ನು ಪತ್ತೆ ಮಾಡಿದರು. ಅವರ ಮೇಲೆ ರೌಡಿ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣವನ್ನು ದಾಖಲಿಸಿ ಇಬ್ಬರನ್ನೂ ಜೈಲಿಗೆ ತಳ್ಳಿದರು.
ಈ ಪ್ರಕರಣದ ವಿಚಾರಣೆ ನಡೆಯಲು ಅಂದಾಜು ಏಳು ವರ್ಷಗಳು ಹಿಡಿಯಿತು. ಆ ಇಡೀ ಅವಧಿಯಲ್ಲಿ ಪತ್ತೇದಾರ ದಂಪತಿಯು ಜೈಲಿನಲ್ಲಿಯೇ ಕಳೆದರು. ವಿಚಾರಣೆಯ ನಂತರ ನ್ಯಾಯಾಲಯವು ದಂಪತಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರವಿಲ್ಲವೆಂದು ಇಬ್ಬರನ್ನೂ ಖುಲಾಸೆಗೊಳಿಸಿತು. ಏತನ್ಮಧ್ಯೆ ರಾಜಾರಾಮ್ ಅಮಾನತ್ತಿನಿಂದ ಬಿಡುಗಡೆಗೊಂಡು ರಿಟೈರ್ ಆದರು. ಅಧಿಕಾರಸ್ಥರಿಗೆ ಅವರು ಹತ್ತಿರವಾಗಿದ್ದ ಕಾರಣ ನಿವೃತ್ತಿಯ ನಂತರವೂ ಅವರಿಗೆ ಸರ್ಕಾರದ ಸಲಹೆಗಾರನೆಂಬ ಸ್ಥಾನ ದೊರಕಿತು. ಮುಳ್ಳಿನ ಮೇಲೆ ಎಲೆ ಬಿದ್ದರೂ ಅಥವಾ ಎಲೆಯ ಮೇಲೆ ಮುಳ್ಳು ಬಿದ್ದರೂ ಗಾಸಿಯಾಗುವುದು ಎಲೆಗೇ ಎಂಬ ನಾಣ್ಣುಡಿ ನಿಜವಾಯಿತು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..