ಪಲ್ಮನೇರು: ತಿರುಪತಿಗೆ ತೆರಳಿದ್ದ ಬೆಂಗಳೂರು ಮೂಲದ ಜೂನಿಯರ್ ಇಂಜಿಯರ್ ಒಬ್ಬರ ಕಾರು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಗಡಿಯ ಗಂಗಾವರಂ ಬಳಿ ಶನಿವಾರ ಅಪಘಾತಕ್ಕೆ ಈಡಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿಯ ಗುಂಡಿಗೆ ಉರುಳಿರುವ ಕಾರು ಬೆಂಕಿ ಹೊತ್ತಿಕೊಂಡು ಉರಿದಿದೆ. ಅದರಲ್ಲಿದ್ದ ಆರು ಮಂದಿಯ ಪೈಕಿ ಐವರು ಸಜೀವ ದಹನವಾಗಿದ್ದರೆ, ಒಬ್ಬರು ಸುಟ್ಟುಗಾಯಗಳೊಂದಿಗೆ ಪಾರಾಗಿದ್ದಾರೆ.
ಸಜೀವವಾಗಿ ದಹನವಾದವರ ಹೆಸರು ಗೊತ್ತಾಗಿಲ್ಲ. ಇವರೆಲ್ಲರೂ ಬೆಂಗಳೂರು ಮೂಲದವರು ಎನ್ನಲಾಗಿದೆ. ಬದುಕುಳಿದಿರುವವರ ಹೆಸರು ವಿಷ್ಣು ಎಂದಷ್ಟೇ ಗೊತ್ತಾಗಿದೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ತಿರುಪತಿಯಲ್ಲಿ ದೇವರ ದರ್ಶನ ಪಡೆದ ಜೂನಿಯರ್ ಇಂಜಿನಿಯರ್ ಅವರ ಕುಟುಂಬ ಆಂಧ್ರ ಪ್ರದೇಶದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ತೆರಳುತ್ತಿತ್ತು. ಶನಿವಾರ ಬೆಳಗಿನ ಜಾವದಲ್ಲಿ ಚಾಲಕ ತೂಕಡಿಸಿ, ಡಿವೈಡರ್ಗೆ ಡಿಕ್ಕಿ ಹೊಡೆದ ಎಂದು ಹೇಳಲಾಗಿದೆ. ಕಾರು ತಕ್ಷಣವೇ ರಸ್ತೆ ಬದಿಯ ಗುಂಡಿಗೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡಿದೆ.
ಅಪಘಾತವಾಗಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ವಿಷ್ಣು ಎಂಬುವರನ್ನು ಉಳಿಸಿದ್ದಾರೆ. ಬೇರೆಯವರನ್ನು ಉಳಿಸುವಷ್ಟರಲ್ಲಿ ಬೆಂಕಿ ಕಾರನ್ನು ಸಂಪೂರ್ಣವಾಗಿ ಆವರಿಸಿಕೊಂಡಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರು ಅಲ್ಲಿಯೇ ಸಜೀವವಾಗಿ ದಹನವಾಗಿದ್ದಾರೆ. (ದಿಗ್ವಿಜಯ ನ್ಯೂಸ್)