ಪುತ್ರಿಯನ್ನು ಅಂಗನವಾಡಿಗೆ ದಾಖಲಿಸಿದ ಡಿಸಿ

ತಿರುನೆಲ್ವೇಲಿ: ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ತಮ್ಮ ಮಕ್ಕಳನ್ನು ಪ್ರತಿಷ್ಠಿತ ನರ್ಸರಿ ಅಥವಾ ಶಾಲೆಗಳಿಗೆ ದಾಖಲಿಸುವುದು ಸಾಮಾನ್ಯ. ಆದರೆ, ತಿರುನೆಲ್ವೇಲಿ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರು ಭಿನ್ನವಾಗಿ ನಿಲ್ಲುತ್ತಾರೆ. ಇವರು ಪುತ್ರಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಮೀಪವಿರುವ ಅಂಗನ ವಾಡಿಯೊಂದಕ್ಕೆ ದಾಖಲಿಸಿದ್ದಾರೆ. ಕರ್ನಾಟಕ ಮೂಲದವರಾದ ಇವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಸಮಾಜದ ಎಲ್ಲ ವರ್ಗಗಳ ಮಕ್ಕಳೊಂದಿಗೆ ಒಡನಾಡಬೇಕು. ಅವರೊಂದಿಗೆ ಬದುಕುವುದನ್ನು ಕಲಿಯಬೇಕು ಎಂಬ ಬಯಕೆಯಿಂದ ಪುತ್ರಿಯನ್ನು ಅಂಗನವಾಡಿಗೆ ದಾಖಲಿಸಿದ್ದಾಗಿ ಶಿಲ್ಪಾ ಸ್ಪಷ್ಟಪಡಿಸಿದ್ದಾರೆ. ಅಂಗನವಾಡಿಗೆ ಹೋಗಲಾರಂಭಿಸಿದ ಬಳಿಕ ಆಕೆಯ ತಮಿಳು ಭಾಷೆ ಜ್ಞಾನ ಮತ್ತು ಗ್ರಹಿಕೆ ಉತ್ತಮಗೊಂಡಿರುವುದಾಗಿ ಹೇಳಿದ್ದಾರೆ.

ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲೂ ಉತ್ತಮ ಮೂಲಸೌಕರ್ಯ ಲಭ್ಯವಿದೆ. ಶಿಕ್ಷಕಿಯರೆಲ್ಲರೂ ತುಂಬಾ ಕ್ರಿಯಾಶೀಲರಾಗಿದ್ದಾರೆ. ಪ್ರತಿಯೊಂದು ಅಂಗನವಾಡಿಯಲ್ಲೂ ಸ್ಮಾರ್ಟ್​ಫೋನ್ ಲಭ್ಯವಿದೆ. ಅದನ್ನು ಬಳಸಿ ಮಕ್ಕಳ ಎತ್ತರ ಮತ್ತು ದೇಹತೂಕವನ್ನು ಅಳೆಯಲಾಗುತ್ತದೆ. ಈ ಮಾಹಿತಿಯನ್ನು ಆಧರಿಸಿ ಮಕ್ಕಳಿಗೆ ಪೌಷ್ಟಿಕಾಂಶಭರಿತ ಆಹಾರವನ್ನು ನೀಡಲಾಗುತ್ತದೆ. ಮಕ್ಕಳ ಆರೈಕೆ ಮತ್ತು ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಶಿಲ್ಪಾ ತಿಳಿಸಿದ್ದಾರೆ.

ಸಮಾಜದ ಎಲ್ಲ ವರ್ಗಗಳ ಮಕ್ಕಳೊಂದಿಗೆ ಒಡನಾಡಬೇಕು. ಅವರೊಂದಿಗೆ ಬದುಕುವುದನ್ನು ಕಲಿಯಬೇಕು ಎಂಬ ಬಯಕೆಯಿಂದ ಪುತ್ರಿಯನ್ನು ಅಂಗನವಾಡಿಗೆ ದಾಖಲಿಸಿದ್ದೇನೆ.

| ಶಿಲ್ಪಾ ಪ್ರಭಾಕರ್ ಸತೀಶ್, ತಿರುನೆಲ್ವೇಲಿ ಜಿಲ್ಲಾಧಿಕಾರಿ