ರಬಕವಿ/ಬನಹಟ್ಟಿ: ದೇಶ ಮತ್ತು ಸೈನಿಕರ ವಿಷಯ ಬಂದಾಗ ಭಾರತೀಯರೆಲ್ಲರೂ ಧರ್ಮ, ಪಕ್ಷ, ಜಾತಿ-ವರ್ಣಗಳ ಮರೆತು ದೇಶಾಭಿಮಾನ ಪ್ರದರ್ಶಿಸಬೇಕು ಎಂದು ಸಂಘ ಪರಿವಾರ ಧುರೀಣ ಶಿವಾನಂದ ಗಾಯಕವಾಡ ಹೇಳಿದರು.

ಬನಹಟ್ಟಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ತಿರಂಗಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದು ಸಂಘಟನೆಗಳು ಮೇ 16ರಂದು ಸಂಜೆ 4 ಗಂಟೆಗೆ ಬನಹಟ್ಟಿಯ ಶ್ರೀ ಈಶ್ವರಲಿಂಗ ಮೈದಾನದಲ್ಲಿ ಪಕ್ಷ, ಧರ್ಮ, ಜಾತಿ-ಪಂಥಗಳ ಭೇದವಿಲ್ಲದೆ ಸರ್ವರನ್ನೊಳಗೊಂಡು ತೇರದಾಳ ಕ್ಷೇತ್ರ ವ್ಯಾಪ್ತಿಯ ಬೃಹತ್ ತಿರಂಗಾ ಯಾತ್ರೆ ನಡೆಸಲು ಉದ್ದೇಶಿಸಲಾಗಿದೆ. ಹಲವಾರು ಸಾಧು-ಸಂತರು, ಮಠಾಧೀಶರು ಹಾಗೂ 5 ಸಾವಿರಕ್ಕೂ ಅಧಿಕ ದೇಶಪ್ರೇಮಿಗಳು ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.
ದೇಶದ ಸಾರ್ವಭೌಮತೆ ಪ್ರಶ್ನೆ ಬಂದಾಗ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಒಂದಾಗುವುದು ಅಗತ್ಯವಾಗಿದೆ. ಚಂಡಿಗಢದಲ್ಲಿ ಕೇವಲ ಅರ್ಧ ಗಂಟೆಯಲ್ಲಿ 20 ಸಾವಿರಕ್ಕೂ ಅಧಿಕ ತರುಣರು ಸೈನ್ಯಕ್ಕೆ ಸೇರ್ಪಡೆಗೊಂಡಿರುವುದು ನಮ್ಮಲ್ಲಿನ ದೇಶಪ್ರೇಮದ ಪ್ರತೀಕ. ನಿವೃತ್ತ ಸೈನ್ಯಾಧಿಕಾರಿಗಳು ಹೇಳುವ ಪ್ರಕಾರ ನಾವು ಬಾಹ್ಯ ಶತ್ರುಗಳಿಗಿಂತ ದೇಶದೊಳಗಿನ ಆಂತರಿಕ ಶತ್ರುಗಳನ್ನು ಸದ್ದಡಗಿಸಬೇಕಿದೆ ಎಂಬುದನ್ನು ಅರಿತುಕೊಂಡು, ದೇಶ ಮತ್ತು ಸೈನಿಕರ ಬಗ್ಗೆ ಆದ್ಯತೆ ನೀಡಬೇಕು ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ, ದೇಶವೇ ಇಲ್ಲದಿದ್ದರೆ ನಮ್ಮ ಕೆಲಸವೇನೂ ಇರದು ಎಂಬ ಸತ್ಯ ಅರಿತು ಎಲ್ಲ ದೇಶಪ್ರೇಮಿಗಳು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಇದು ಯಾವುದೇ ಪಕ್ಷ ಪರ ಕಾರ್ಯವಲ್ಲ. ಇದು ದೇಶವಾಸಿಗಳೆಲ್ಲರ ಜವಾಬ್ದಾರಿಯಾಗಿದ್ದು, ಕ್ಷೇತ್ರದಲ್ಲಿ ಎಲ್ಲರೂ ಬೆಂಬಲಿಸಬೇಕು ಎಂದರು.
ಬಸವರಾಜ ತೆಗ್ಗಿ, ಶಂಕರಗೌಡ ಪಾಟೀಲ, ಮಹಾಲಿಂಗ ಕುಳ್ಳೊಳ್ಳಿ, ಪರಪ್ಪ ಪೂಜಾರಿ, ಸುರೇಶ ಬೀಳಗಿ, ಚಂದು ಆದಿಬಸಪ್ಪಗೋಳ, ಗೌರಿ ಮಿಳ್ಳಿ, ಆನಂದ ಕಂಪು, ಸಂಜಯ ತೆಗ್ಗಿ, ಶಂಕರ ಬಟಕುರ್ಕಿ, ಬುಜಬಲಿ ವೆಂಕಟಾಪುರ, ಧರೆಪ್ಪ ಉಳ್ಳಾಗಡ್ಡಿ, ಮಹಾವೀರ ಭಿಲವಡಿ, ಮಹಾದೇವ ಕೊಟ್ಯಾಳ, ಚಿದಾನಂದ ಹೊರಟ್ಟಿ, ಬಸವರಾಜ ಅಮ್ಮಣಗಿಮಠ, ಶಂಕರ ಕುಂಬಾರ, ದುರ್ಗವ್ವ ಹರಿಜನ, ಪ್ರಭು ಪಾಲಭಾಂವಿ ಮತ್ತಿತರರಿದ್ದರು.