ರಾಮನಗರ : ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಧ್ಯೇಯದೊಂದಿಗೆ ಶನಿವಾರ ಬಿಜೆಪಿ ನೇತೃತ್ವದಲ್ಲಿ ರಾಮನಗರ ನಾಗರಿಕರ ವೇದಿಕೆ ವತಿಯಿಂದ ರಾಮನಗರದ ವಿವೇಕಾನಂದನಗರದ ವಿವೇಕಾನಂದರ ಪ್ರತಿಮೆ ಸ್ಥಳದಿಂದ ತಿರಂಗ ಯಾತ್ರೆ ನಡೆಸಲಾಯಿತು.

ಆದಿಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಯಾತ್ರೆಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಬೀಸುತ್ತ ಭಾರತಿಯ ಸೇನೆ ಪರ ೂಷಣೆ ಕೂಗುತ್ತಾ ಸಾಗಿದರು. ವಿವೇಕಾನಂದ ವೃತ್ತದಿಂದ ಆರಂಭವಾಗಿ ಬಿ.ಎಂ.ರಸ್ತೆ, ಅಗ್ರಹಾರ ಬಡಾವಣೆ ಮೂಲಕ ಹಳೆ ಬಸ್ ನಿಲ್ದಾಣದಲ್ಲಿ ಕೆಂಗಲ್ ಹನುಮಂತಯ್ಯ ಪುತ್ಥಳಿಗೆ ನಿವೃತ್ತ ಯೋಧರಿಂದ ಪುಷ್ಪಾರ್ಚನೆ ಮಾಡಿದ ನಂತರ ಸಂಪನ್ನಗೊಂಡಿತು.
ಯಾತ್ರೆಯುದ್ದಕ್ಕೂ ಸ್ವಾಮೀಜಿಗಳು, ರಾಜಕೀಯ ನಾಯಕರು, ವಿದ್ಯಾರ್ಥಿ ಸಮೂಹ ಒಂದಾಗಿ ಸಾಗಿತು. ನೂರಾರು ಮಂದಿ ಜತೆಗೆ ಹೆಜ್ಜೆ ಹಾಕಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದರು.