More

  ಸರಳವಾಗಿ ಟಿಪ್ಪು ಜಯಂತಿ ಆಚರಣೆ

  ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ನಿಷೇಧಾಜ್ಞೆಯ ನಡುವೆಯೂ ಮುಸ್ಲಿಮರು ಶಾಂತಿಯುತ ಹಾಗೂ ಸರಳವಾಗಿ ಟಿಪ್ಪು ಸುಲ್ತಾನ್ ಅವರ 273ನೇ ಜಯಂತಿ ಆಚರಿಸಿದರು.

  ಪಟ್ಟಣದ ಗಂಜಾಂನ ಹೊರವಲಯದ ಗುಂಬಜ್‌ನಲ್ಲಿ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್‌ನ ಅಧ್ಯಕ್ಷ, ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ನಿರ್ದೇಶಕರು ಹಾಗೂ ಮುಖಂಡರು ಮೌಲ್ವಿಗಳ ಸಮ್ಮುಖದಲ್ಲಿ ಟಿಪ್ಪು ಸುಲ್ತಾನ್ ಸಮಾಧಿಗೆ ಹೂವಿನ ಚಾದರ ಹೊದಿಸಿ, ಪುಷ್ಪನಮನ ಸಲ್ಲಿಸಿ, ಪ್ರಾರ್ಥನೆ ನೆರವೇರಿಸಿದರು. ಇದೇ ವೇಳೆ ಟಿಪ್ಪು ಪಾಲಕರಾದ ನವಾಬ್ ಹೈದರ್ ಅಲಿಖಾನ್ ಹಾಗೂ ಫಕ್ರುನ್ನಿಸಾ ಅವರ ಸಮಾಧಿಗೂ ಪುಷ್ಪನಮನದೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
  ಟಿಪ್ಪು ವಕ್ಫ್ ಎಸ್ಟೇಟ್‌ನ ನಿರ್ದೇಶಕರಾದ ಸೈಯದ್ ಯೂನಸ್, ಇಬ್ರಾಹಿಂ ಷರೀಫ್, ಉಬೇದುಲ್ಲಾ, ಕಾರ್ಯದರ್ಶಿ ಇರ್ಫಾನ್ ಅಹಮದ್, ಮುಖಂಡ ಮುಜೀಬ್ ಶಾಲಿಮಾರ್ ಇದ್ದರು.

  ನಿಷೇಧಾಜ್ಞೆ ಜಾರಿ: ಜಾಮಿಯಾ ಮಸೀದಿ, ಗುಂಬಜ್ ಹಾಗೂ ಖಾಸಗಿ ಪ್ರದೇಶಗಳಲ್ಲಿ ಸರಳವಾಗಿ ಟಿಪ್ಪು ಜಯಂತಿ ಆಚರಿಸಲು ತಾಲೂಕು ಆಡಳಿತ ಅವಕಾಶ ಕಲ್ಪಿಸಿತ್ತು. ಆದರೆ ಮೆರವಣಿಗೆ, ಬೈಕ್‌ರ‌್ಯಾಲಿ, ಧ್ವಜ, ಟ್ಯಾಬ್ಲೋ ಪ್ರದರ್ಶನ ಮತ್ತು ಹೆಚ್ಚಿನ ಜನರು ಜಮಾವಣೆಯಾಗದಂತೆ ನಿಷೇಧಾಜ್ಞೆ ವಿಧಿಸಿತ್ತು. ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

  ಜಯಂತಿ ಆಚರಿಸುವ ಸಾಮರ್ಥ್ಯ ಸಮುದಾಯಕ್ಕಿದೆ: ಟಿಪ್ಪು ಜಯಂತಿಯನ್ನು ಆಚರಿಸುವಂತೆ ಸರ್ಕಾರವನ್ನು ನಮ್ಮ ಸಮುದಾಯ ಎಂದೂ ಒತ್ತಾಯಿಸಿಲ್ಲ. ಈಗಲೂ ಮುಂದುವರಿಸುವಂತೆ ಒತ್ತಾಯಿಸುವುದಿಲ್ಲ. ಜಯಂತಿ ಆಚರಿಸಲು ನಮ್ಮ ಸಮುದಾಯಕ್ಕೆ ಸಾಮರ್ಥ್ಯವಿದೆ ಎಂದು ಮೈಸೂರಿನ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹೇಳಿದರು.

  ಟಿಪ್ಪು ಸುಲ್ತಾನ್ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಶತಮಾನಗಳಿಂದಲೂ ನಮ್ಮ ಸಮುದಾಯದಿಂದ ಟಿಪ್ಪು ಸುಲ್ತಾನ್‌ಗೆ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಅನೇಕರಿಗೆ ನಾವು ಟಿಪ್ಪು ಜಯಂತಿಯನ್ನು ಹೇಗೆ ಆಚರಿಸುತ್ತೇವೆ ಎಂಬ ವಿಷಯ ತಿಳಿದಿಲ್ಲ. ಇದರಿಂದ ಅನೇಕ ಗೊಂದಲಗಳಿಗೆ ನಾವು ಕಾರಣಕರ್ತರಾಗಿದ್ದೇವೆ. ಟಿಪ್ಪು ಸಮಾಧಿಗೆ ಹೂವನ್ನು ಅರ್ಪಿಸಿ, 10 ನಿಮಿಷ ಪ್ರಾರ್ಥನೆ ಸಲ್ಲಿಸಿ ವಿಶ್ವಶಾಂತಿಗೆ ಮೊರೆ ಇಡುತ್ತೇವೆಯೇ ಹೊರತು ಇಲ್ಲಿ ಬೇರೇನೂ ನಡೆಯುವುದಿಲ್ಲ ಎಂದರು.

  2016ರಲ್ಲಿ ರಾಜ್ಯ ಸರ್ಕಾರ ದೇಶದ ಎಲ್ಲ ಮಹನೀಯರಂತೆ ಟಿಪ್ಪು ಸುಲ್ತಾನ್‌ಗೆ ಸ್ಥಾನಮಾನ ನೀಡಿ ಜಯಂತಿ ಆಚರಿಸುವುದಾಗಿ ಹೇಳಿತು. ಆಗ ನಾವು ಪ್ರೀತಿಯಿಂದ ಸ್ವಾಗತಿಸಿ ಸಂಭ್ರಮಿಸಿದ್ದೆವು. ಇದಾದ ನಂತರ ಸಾಕಷ್ಟು ವೈಮನಸ್ಸು ಹಾಗೂ ವ್ಯತ್ಯಾಸಗಳು ಉಂಟಾಗಿ 2019ರಲ್ಲಿ ಬಿಜೆಪಿ ಸರ್ಕಾರ ಜಯಂತಿಯನ್ನು ರದ್ದುಗೊಳಿಸಿತು. ಆಗಲೂ ರಾಜ್ಯ ಸರ್ಕಾರದ ನಡೆಯನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ ಎಂದರು.

  ನಾವು ಶಾಂತಿ ಪ್ರಿಯರು. ಆದರೆ, ಸ್ವಾತಂತ್ರೃಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನ್ ಮುಸ್ಲಿಂ ಧರ್ಮದವನು ಎನ್ನುವ ಏಕೈಕ ಕಾರಣಕ್ಕೆ ರಾಜಕೀಯ ವಸ್ತುವನ್ನಾಗಿಸಿ, ಸಲ್ಲದ ಆರೋಪಗಳಿಗೆ ಗುರಿಯಾಗಿಸಿ ಸಂಪೂರ್ಣ ಇತಿಹಾಸವನ್ನೇ ತಿರುಚಿ ಸಮಾಜದ ಜನರ ಮನಸ್ಸನ್ನು ಹಾಳು ಮಾಡುವ ಕೆಲಸ ಯಾರಿಂದಲೂ ಬೇಡ. ಹೀಗಾಗಿ, ಟಿಪ್ಪು ಜಯಂತಿ ಮೂಲಕ ಅವರ ಇತಿಹಾಸವನ್ನು ನಾವು ಶಾಂತಿ ಮತ್ತು ಸರಳ ಆಚರಣೆ ಮೂಲಕ ಜಗತ್ತಿಗೆ ಸಾರುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ಸರ್ಕಾರದ ಪ್ರವೇಶ ಬೇಡ ಎಂದು ಮನವಿ ಮಾಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts