ಬಿಜೆಪಿಯವರು ಗೋಮುಖ ವ್ಯಾಘ್ರಗಳು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸನ್ಮಾನ ಸ್ವೀಕರಿಸಿದ ಬಳಿಕ ತಮ್ಮ ನಿವಾಸದಲ್ಲಿ ಮಾತನಾಡಿ, ಟಿಪ್ಪು ಖಡ್ಗ ಹಿಡಿದು, ಪೇಟ ತೊಟ್ಟಾಗ ವಿರೋಧ ಮಾಡಲಿಲ್ಲ. ಟಿಪ್ಪು ಪುಸ್ತಕಕ್ಕೆ ಜಗದೀಶ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ. ಬಿಜೆಪಿಯವರು ಟಿಪ್ಪು ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಟಿಪ್ಪು ಹಿಂದು ವಿರೋಧಿ ಎಂಬುದು ಸುಳ್ಳು. ಅವರ ಕಾಲದಲ್ಲಿ ಹಲವು ಹಿಂದುಗಳು ಪ್ರಮುಖ ಹುದ್ದೆಯಲ್ಲಿದ್ದರು. ರಾಜ್ಯದ ಜನರಿಗೆ ಟಿಪ್ಪು ಜಯಂತಿಯ ಶುಭಾಶಯಗಳು ಎಂದರು.

ಟಿಪ್ಪು ಕಾಲದಲ್ಲಿ ಸಾಮರಸ್ಯ ಇತ್ತು. 13 ಜಯಂತಿಗಳನ್ನು ನನ್ನ ಕಾಲದಲ್ಲಿ ಮಾಡಿದ್ದೇವೆ. ಕಿತ್ತೂರು ರಾಣಿ ಚೆನ್ನಮ್ಮ, ಹೇಮರೆಡ್ಡಿ ಮಲ್ಲಮ್ಮ, ವಾಲ್ಮೀಕಿ ಸೇರಿದಂತೆ 13 ಜನರ ಜಯಂತಿ ಮಾಡಿದ್ದೇವೆ. ಅದರಲ್ಲಿ ಟಿಪ್ಪು ಜಯಂತಿಯೂ ಒಂದು. ಬಿಜೆಪಿಯವರು ದುರುದ್ದೇಶದಿಂದ, ರಾಜಕೀಯಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸಚಿವ ಜಮೀರ್ ಅಹಮದ್ ಅವರ ನೇತೃತ್ವದಲ್ಲಿ ಮುಸ್ಲಿಂ ಧರ್ಮ ಗುರುಗಳ ನಿಯೋಗ ಇಂದು ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಅವರಿಗೆ ಬೆಳ್ಳಿ ಖಡ್ಗ, ಹಾರ, ಪೇಟ ತೊಡಿಸಿ ಸನ್ಮಾನಿಸಿದರು. (ದಿಗ್ವಿಜಯ ನ್ಯೂಸ್)