ಟಿಪ್ಪು ಜಯಂತಿ ಅರ್ಥಪೂರ್ಣ ಆಚರಣೆ

ಬಾಗಲಕೋಟೆ: ಟಿಪ್ಪು ಜಯಂತಿಯನ್ನು ನ.10ಕ್ಕೆ ಅರ್ಥ ಪೂರ್ಣವಾಗಿ ಆಚರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣಲ್ಲಿ ಬುಧವಾರ ಟಿಪ್ಪು ಜಯಂತಿ ಆಚರಣೆ ಕುರಿತು ಜರುಗಿದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾನ್ ವ್ಯಕ್ತಿಗಳು, ಸಂತರು, ಶರಣರು, ಸೂಫಿಗಳು ಯಾವುದೇ ಜಾತಿ ಮತಕ್ಕೆ ಸೀಮಿತರಲ್ಲ. ಅವರು ನಾಡಿಗೆ ನೀಡಿದ ಕೊಡುಗೆ, ಸಾಧನೆ ಅವುಗಳನ್ನು ಮುಂದಿನ ಪೀಳಿಗೆ ಅನುಕರಿಸಲಿ ಎಂಬ ಉದ್ದೇಶದಿಂದ ಸರ್ಕಾರ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಸಭಾಭವನ ದಲ್ಲಿ ಟಿಪ್ಪು ಜಯಂತಿ ಸಂಭ್ರಮದಿಂದ ನಡೆಸಲಾಗುವುದು. ನ್ಯಾಯಾಲಯದ ಆದೇಶದಂತೆ ಮೆರವಣಿಗೆ, ರ‍್ಯಾಲಿ ಮುಂತಾದವುಗಳನ್ನು ನಿಷೇಧಿಸಿದ್ದರಿಂದ ಅಂತವು ಗಳಿಗೆ ಅವಕಾಶ ನೀಡದೆ ಜಯಂತಿಗೆ ಅವಶ್ಯವಿರುವ ಸಲಹೆ, ಸೂಚನೆ ನೀಡಬೇಕೆಂದು ಸಭೆಗೆ ಡಿಸಿ ತಿಳಿಸಿದರು.

ಸಮಾಜದ ಮುಖಂಡರಾದ ಎ.ಎ.ದಂಡಿಯಾ, ಕುತುಬುದ್ದಿನ್ ಖಾಜಿ, ಎಂ.ಎಂ. ನಬಿವಾಲೆ ಮಾತನಾಡಿ, ಟಿಪು್ಪ ಜಯಂತಿ ಆಚರಣೆಯಲ್ಲಿ ಟಿಪು್ಪ ಕುರಿತಾದ ಸಮಗ್ರ ಅಧ್ಯಯನ ಮಾಡಿದ ಉಪನ್ಯಾಸಕರನ್ನು ಕರೆಸಬೇಕು. ಪ್ರತಿಬಾರಿ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಗುತ್ತಿದ್ದು, ಅದರ ಬದಲಾಗಿ ಕಲಾಭವನದಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ಮನವಿ ಮಾಡಿದರು. ಸರ್ಕಾರ ಹಾಗೂ ನ್ಯಾಯಾಲಯದ ಆದೇಶವನ್ನು ನಾವೆಲ್ಲರೂ ಪಾಲಿಸುವುದಾಗಿ ತಿಳಿಸಿದ ಅವರು, ಟಿಪು್ಪಜಯಂತಿ ಒಂದು ಜನಾಂಗಕ್ಕೆ ಸೀಮಿತವಾಗಿರದೆ ಎಲ್ಲ ಸಮುದಾಯದವರ ಸಹಕಾರ ಪಡೆದು ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಹೇಳಿದರು.

ಎಸ್ಪಿ ಸಿ.ಬಿ. ರಿಷ್ಯಂತ ಮಾತನಾಡಿ, ವೇದಿಕೆ ಮೇಲೆ ಟಿಪು್ಪ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಲು ಸಮಾಜದ ಮುಖಂಡರಿಗೆ ಅವಕಾಶ ಮಾಡಿಕೊಡಲಾಗುವುದು. ಆದರೆ, ಮೆರವಣಿಗೆ, ಜಾಥಾ ರದ್ದುಗೊಳಿಸಲಾಗಿದೆ. ಇದು ಪ್ರತಿ ತಾಲೂಕು, ಜಿಲ್ಲಾ ಕೇಂದ್ರಗಳಿಗೂ ಅನ್ವಯಿಸುತ್ತದೆ ಎಂದರು. ಸಮಾಜದ ಮುಖಂಡರಾದ ಡಾ.ವೈ.ಎಸ್. ಪಠಾಣ, ಆರ್.ಡಿ. ಬಾಬು, ಸಲಿಂ ಮೋಮಿನ್, ಅಮರ ಪುಣೆಕರ, ಡಿವೈಎಸ್​ಪಿ ಗಿರೀಶ, ಸಿಪಿಐ ಶ್ರೀಕಾಂತ ಗಾಬಿ, ಪಿಎಸ್​ಐ ಸಂತೋಷ ಹಳ್ಳೂರ, ಶಿವಾನಂದ ಮುಖರಿ ಸೇರಿದಂತೆ ಮತ್ತಿತರರಿದ್ದರು.