ಟಿಪ್ಪು ಜಯಂತಿಗೆ ವಿರೋಧ: ಸಿಟಿ ರವಿ, ಬೋಪಯ್ಯ ಸೇರಿ ಹಲವೆಡೆ ಪ್ರತಿಭಟನಾಕಾರರು ವಶಕ್ಕೆ

ಮಡಿಕೇರಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಹಲವೆಡೆ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಇದುವರೆಗೂ ಪ್ರತಿಭಟನೆಗೆ ಮುಂದಾಗಿದ್ದ ಒಟ್ಟು 184 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

ಮಡಿಕೇರಿಯಲ್ಲಿ 80 ರಿಂದ 100 ಜನ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ವಿರಾಜಪೇಟೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ವಶಕ್ಕೆ ಪಡೆಯಲಾಗಿದೆ. 150ಕ್ಕೂ ಹೆಚ್ಚು ಜನ ಚೆಕ್‌ ಪೋಸ್ಟ್, ಸೂಕ್ಷ್ಮ ಜಾಗದಲ್ಲಿ ಬಂದೋಬಸ್ತ್ ಮುಂದುವರಿಸಿದ್ದೇವೆ ಎಂದು ದಿಗ್ವಿಜಯ ನ್ಯೂಸ್‌ಗೆ ಐಜಿಪಿ ಶತ್‌ ಚಂದ್ರ ಹೇಳಿದ್ದಾರೆ.

ವಿರಾಜಪೇಟೆಯ ಮಿನಿವಿಧಾನಸೌಧದಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಕೇವಲ ನಾಡಗೀತೆಗೆ ಸೀಮಿತವಾಯಿತು. ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್, ಸುನಿಲ್​ಸುಬ್ರಹ್ಮಣಿ ಮತ್ತು ಜಿಪಂ ಅಧ್ಯಕ್ಷ ಬಿ.ಎ.ಹರೀಶ್ ಸೇರಿ ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.

ಸಿ ಟಿ ರವಿಯಿಂದ ವಿನೂತನ ಪ್ರತಿಭಟನೆ

ಚಿಕ್ಕಮಗಳೂರಿನಲ್ಲಿಯೂ ಬಿಜೆಪಿಯಿಂದ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದು, ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಸಿ.ಟಿ.ರವಿ ಸೇರಿ ನಾಲ್ವರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು. ಜಯಂತಿ ವಿರೋಧಿಸಿ ಶಾಸಕ ಸಿ.ಟಿ.ರವಿ ಹನುಮಂತಪ್ಪ ವೃತ್ತದಿಂದ ಮುಖಕ್ಕೆ ಕಪ್ಪು ಪಟ್ಟಿ ಧರಿಸಿ ಮೌನ ಪಾದಯಾತ್ರೆ ನಡೆಸಿದರು.

ಮಂಡ್ಯದಲ್ಲೂ ಬಿಜೆಪಿ ಕಾರ್ಯಕರ್ತರು ವಶಕ್ಕೆ

ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡವಪುರ ಪಟ್ಟಣದ ರಾಜ್‍ಕುಮಾರ್ ವೃತ್ತದಲ್ಲಿ ನಡೆಯುತ್ತಿದ್ದ ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆಗೆ ಇಳಿಯುತ್ತಿದಂತೆ 12ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.

ಕಪ್ಪು ಬಾವುಟ ಪ್ರದರ್ಶಿಸಿದ ಪ್ರತಿಭಟನಾಕಾರರ ಬಂಧನ

ಸರ್ಕಾರ ಆಚರಿಸಿದ ಟಿಪ್ಪು ಜಯಂತಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಶಿರಸಿಯಲ್ಲಿ ಹಿಂದು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಕಪ್ಪು ಬಾವುಟ ಪ್ರದರ್ಶಿಸಿದ ವೇಳೆ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

ಇದಲ್ಲದೆ ಶಿರಸಿ ಹಾಗೂ ಯಲ್ಲಾಪುರದಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಬೈಕ್ ರ‍್ಯಾಲಿ ನಡೆಸಲು ಮುಂದಾದ ಟಿಪ್ಪು ಅಭಿಮಾನಿಗಳನ್ನು ಶಿರಸಿ ಅಂಬೇಡ್ಕರ್ ಭವನದ ಎದುರು ಪೊಲೀಸರು ಬಂಧಿಸಿದರು.

ವಿಎಚ್‌ಪಿ ಕಾರ್ಯಕರ್ತರಿಂದ ಅರೆಬೆತ್ತಲೆ ಪ್ರತಿಭಟನೆ

ಮಂಗಳೂರಿನಲ್ಲೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದು, ಟಿಪ್ಪು ಜಯಂತಿ ವಿರೋಧಿಸಿ ವಿಶ್ವ ಹಿಂದು ಪರಿಷತ್‌ನಿಂದ ಪ್ರತಿಭಟನೆ ನಡೆಸಲಾಯಿತು. ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಜಯಂತಿ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಟಿಪ್ಪು ವಿರುದ್ಧ ಧಿಕ್ಕಾರ ಕೂಗಿ ಕರಿ ಪತಾಕೆ ಪ್ರದರ್ಶಿಸಲಾಯಿತು. ರಾಷ್ಟ್ರೀಯವಾದಿ ಕ್ರೈಸ್ತ ಸಂಘಟನೆಯ ಫ್ರಾಂಕ್ಲಿನ್ ಮೊಂತೇರೋ ಏಕಾಂಗಿಯಾಗಿ ಮಂಗಳೂರಿನ ಜಿಪಂ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರಿಂದ ಬಂಧನಕ್ಕೊಳಗಾದರು. (ದಿಗ್ವಿಜಯ ನ್ಯೂಸ್)