ವಿರೋಧದ ನಡುವೆಯೇ ಟಿಪ್ಪು ಜಯಂತಿ

– ವಿಜಯವಾಣಿ ಸುದ್ದಿಜಾಲ ಮಂಗಳೂರು
ಬಿಜೆಪಿ, ಹಿಂದು ಸಂಘಟನೆಗಳ ತೀವ್ರ ವಿರೋಧ ಹಿನ್ನೆಲೆಯಲ್ಲಿ ಈ ವರ್ಷವೂ ಟಿಪ್ಪು ಜಯಂತಿ ಕಾರ್ಯಕ್ರಮ ಸಭಾಂಗಣಕ್ಕೆ ಸೀಮಿತವಾಯಿತು. ಕಾಂಗ್ರೆಸ್-ಜೆಡಿಎಸ್‌ನ ಪ್ರಮುಖ ಜನಪ್ರತಿನಿಧಿಗಳೇ ಗೈರಾಗುವುದರೊಂದಿಗೆ ಬಹುತೇಕ ಕಾರ್ಯಕ್ರಮ ಸಪ್ಪೆಯಾಗಿ ಮುಗಿಯಿತು.
ದ.ಕ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರೆ, ಇನ್ನೋರ್ವ ಸದಸ್ಯ ಹರೀಶ್ ಕುಮಾರ್ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಜೆಡಿಎಸ್ ನಾಯಕರಾದ ವಿಧಾನಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಎಸ್.ಎಲ್.ಭೋಜೇಗೌಡ ಗೈರಾಗಿದ್ದರು. ಸಂಸದರು, ಶಾಸಕರ ಸಹಿತ ಬಿಜೆಪಿಯ ಯಾವುದೇ ಜನಪ್ರತಿನಿಧಿಗಳು ಕಾರ್ಯಕ್ರಮದತ್ತ ಸುಳಿಯಲಿಲ್ಲ. ಅಧಿಕಾರಿಗಳು ಮತ್ತು ಬೆರಳೆಣಿಕೆಯ ಮುಸ್ಲಿಂ ನಾಯಕರು ಮಾತ್ರ ಭಾಗವಹಿಸಿದ್ದರು. ಸಾರ್ವಜನಿಕರಿಗೆ ಅವಕಾಶವಿರಲಿಲ್ಲ.
ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಎ.ಉದಯ ಕುಮಾರ್ ಜಯಂತಿ ಸಂದೇಶ ನೀಡಿದರು. ಮನಪಾ ಮೇಯರ್ ಭಾಸ್ಕರ್ ಕೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಬಿ.ಆರ್.ರವಿಕಾಂತೇ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಸೆಲ್ವಮಣಿ ಆರ್. ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಟನಾಕಾರರ ಬಂಧನ
ಟಿಪ್ಪು ಜಯಂತಿ ಕಾರ್ಯಕ್ರಮ ವಿರೋಧಿಸಿ ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ಮಾಡಿದ ವಿಶ್ವ ಹಿಂದು ಪರಿಷತ್, ಬಜರಂಗದಳ (38 ಮಂದಿ) ಹಾಗೂ ಶ್ರೀರಾಮ ಸೇನೆ (22 ಮಂದಿ) ಸಂಘಟನೆಗಳ 60 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ, ಘೋಷಣೆ ಕೂಗುತ್ತಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದತ್ತ ಆಗಮಿಸುತ್ತಿದ್ದಂತೆ ಪೊಲೀಸರು ತಡೆದು ಕಾರ್ಯಕರ್ತರನ್ನು ಬಂಧಿಸಿದರು.
ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಸಾವಿರಾರು ಹಿಂದುಗಳನ್ನು ಹತ್ಯೆ ಮಾಡಿದ ಟಿಪ್ಪುವಿನ ಜಯಂತಿ ಆಚರಣೆ ಖಂಡನೀಯ. ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಸರ್ಕಾರ ಹೆದರಿ ಸೆಕ್ಷನ್ ಜಾರಿ ಮಾಡಿದೆ ಎಂದರು.
ಇದಕ್ಕೂ ಮೊದಲು ಜಯಂತಿ ವಿರೋಧಿಸಿ ರಾಷ್ಟ್ರೀಯವಾದಿ ಕ್ರೈಸ್ತ ಸಂಘಟನೆಯ ಫ್ರಾಂಕ್ಲಿನ್ ಮೊಂತೇರೋ ಏಕಾಂಗಿಯಾಗಿ ಮಂಗಳೂರಿನ ಜಿಪಂ ಆವರಣದಲ್ಲಿ ಕರಿಪತಾಕೆ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು. ಅರೆಬೆತ್ತಲೆಯಾಗಿ ಧಿಕ್ಕಾರ ಕೂಗಿ ಕರಿ ಪತಾಕೆ ಪ್ರದರ್ಶಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು.

ಬಿಗು ಬಂದೋಬಸ್ತ್
ಟಿಪ್ಪು ಜಯಂತಿಗೆ ಬಿಜೆಪಿ ಮತ್ತು ಹಿಂದು ಸಂಘಟನೆಗಳ ತೀವ್ರ ವಿರೋಧವಿದ್ದುದರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದ ದ.ಕ. ಜಿಲ್ಲಾ ಪಂಚಾಯಿತಿ ಕಚೇರಿ ಸುತ್ತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. 100ಕ್ಕೂ ಅಧಿಕ ಪೊಲೀಸರನ್ನು ಅಲ್ಲಲ್ಲಿ ನಿಯೋಜಿಸಲಾಗಿತ್ತು. ಜಿಪಂಗೆ ತೆರಳುವ ಮುಖ್ಯರಸ್ತೆಯಲ್ಲಿ ಮತ್ತು ಎಡಭಾಗದ ಅಡ್ಡ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪೊಲೀಸರು ಎಲ್ಲರನ್ನು ಪರಿಶೀಲಿಸಿ ಒಳಬಿಡುತ್ತಿದ್ದರು.

 

ವಿರೋಧಿಸುವವರಿಗೆ ಟಿಪ್ಪು ಸುಲ್ತಾನ್ ಚರಿತ್ರೆ ಗೊತ್ತಿಲ್ಲ. ದೇಶದ ಸಂವಿಧಾನವನ್ನು ಒಪ್ಪದವರು ಮಾತ್ರ ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ. ಟಿಪ್ಪು ಓರ್ವ ಮುಸ್ಲಿಂ ಎನ್ನುವ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಶಾಲಾ ಪಠ್ಯದಲ್ಲಿ ಚರಿತ್ರೆಯನ್ನು ಓದಿದಾಗ ಯಾರೂ ಟಿಪ್ಪುವನ್ನು ಟೀಕಿಸಲಿಲ್ಲ. ಈಗ ಸರ್ಕಾರದಿಂದ ಜಯಂತಿ ಆಚರಣೆ ಮಾಡುವಾಗ ಮಾತ್ರ ವಿರೋಧಗಳು ಬರುತ್ತಿವೆ.
– ಐವನ್ ಡಿಸೋಜ, ವಿಧಾನ ಪರಿಷತ್ ಸದಸ್ಯ

ಟಿಪ್ಪುವನ್ನು ಮರೆಯುವ ಕೆಲಸ ಆಗಬೇಕಿತ್ತೆಂದ ಡಿವಿ!
ಮಂಗಳೂರು: ಟಿಪ್ಪು ಜಯಂತಿ ಆಚರಿಸಬಾರದು ಎಂದು ನಾಡಿನ ಜನತೆ ಹೇಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಆಚರಿಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದಿದೆ. ಮುಖ್ಯಮಂತ್ರಿ ತನಗೆ ಹುಷಾರಿಲ್ಲ, ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಪ್ಪಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ನಾಲ್ವರು ನಾಯಕರಿಗಾಗಿ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ಬದಲು ಟಿಪ್ಪುವನ್ನು ಮರೆಯುವ ಕೆಲಸ ಆಗಬೇಕಿತ್ತು. ಸಾಕಷ್ಟು ವಿರೋಧ ಇದ್ದರೂ ರಾಜ್ಯ ಸರ್ಕಾರ ಕಾರ್ಯಕ್ರಮ ನಡೆಸಿದೆ. ಟಿಪ್ಪು ಜಯಂತಿಗೆ ಬಿಜೆಪಿ ಮಾತ್ರವಲ್ಲ ಕ್ರೈಸ್ತರು, ಮುಸ್ಲಿಮರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ ಎಂದರು.