ಬಸ್-ಟಿಪ್ಪರ್ ಅಪಘಾತಕ್ಕೆ ಯುವತಿ ಬಲಿ

ಕಾರ್ಕಳ: ಬೆಳ್ಮಣ್-ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಶನಿವಾರ ಸಾಯಂಕಾಲ ಖಾಸಗಿ ಬಸ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವತಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಮಂಗಳೂರು ನೀರುಮಾರ್ಗ ಬೊಡೆಂತಿಲ ಗ್ರಾಮ ನಿವಾಸಿ ಮೋಕ್ಷಿತಾ(18) ಮೃತಪಟ್ಟವರು. ಗಾಯಾಳುಗಳಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.
ಬೆಳ್ಮಣ್‌ನಿಂದ ಶಿರ್ವ ಕಡೆ ಸಾಗುತ್ತಿದ್ದ ಖಾಸಗಿ ಬಸ್ ಜಂತ್ರದ ಇಳಿಜಾರು ಹಾಗೂ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತ ತೀವ್ರತೆಗೆ ಬಸ್ ಪಲ್ಟಿಯಾಗಿದ್ದು ಅದರಡಿ ಸಿಲುಕಿ ಯುವತಿ ಮೋಕ್ಷಿತಾ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಗಾಯಾಳುಗಳಾದ ಮೊಹಮ್ಮದ್ ಉಸೇನ್ ಕಟಪಾಡಿ(40), ಯಶೋದಾ ಶಿರ್ವ(49), ಬೇಬಿ ಕುತ್ಯಾರು(66), ಫಿಲೋಮಿನಾ ಜಂತ್ರ(62), ಸುಂದರಿ ಜಂತ್ರ(50), ಪ್ರಶಾಂತ್ ಕುಲಾಲ್ ನಿಟ್ಟೆ(30), ಬಸವರಾಜ್(55), ಆರೋನ್(15), ಭಾರತಿ(50) ಗಂಭೀರ ಗಾಯಗೊಂಡವರು. ಗಾಯಾಳುಗಳನ್ನು ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರ, ಅದರ್ಶ ಆಸ್ಪತ್ರೆ, ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆ, ಮಣಿಪಾಲ ಹಾಗೂ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಾಗರಿಕರು ಗಾಯಾಳುಗಳನ್ನು ಪೊಲೀಸ್ ಜೀಪು, ಅಂಬುಲೆನ್ಸ್, ಖಾಸಗಿ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ನೆರವಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸಂಬಂಧಿ ಮನೆಗೆ ತೆರಳುತ್ತಿದ್ದ ಯುವತಿ: ಮೃತರ ಮೋಕ್ಷಿತಾ ತನ್ನ ತಾಯಿ ಸುಂದರಿ ಹಾಗೂ ಸಹೋದರಿ ಶ್ವೇತಾ ಜತೆ ಶಿರ್ವದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಮಂಗಳೂರಿನಿಂದ ಬೆಳ್ಮಣ್‌ಗೆ ಬಂದು ಅಲ್ಲಿಂದ ಶಿರ್ವಕ್ಕೆ ತೆರಳುವ ಬಸ್ ಹತ್ತಿದ್ದರು. ಬಸ್ ಅಪಘಾತಗೊಂಡು ಪಲ್ಟಿಯಾದಾಗ ಹೊರಕ್ಕೆಸೆಯಲ್ಪಟ್ಟು ಬಸ್‌ನಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಅವರ ತಾಯಿ ಹಾಗೂ ಸಹೋದರಿಗೂ ಗಾಯವಾಗಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.